ದೆಹಲಿಯ ಜಂತರ್ ಮಂತರ್ನಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಶನಿವಾರ ಬೃಹತ್ ಪ್ರತಿಭಟನೆಗೆ ಕರೆ ನೀಡಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಹಾಗೂ ಸಹ-ಸಂಚಾಲಕ ಆಶುತೋಷ್ ರಾಂಕಾ ಮುಂಬೈನಿಂದ ರಾಷ್ಟ್ರರಾಜಧಾನಿ ದೆಹಲಿಗೆ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಡುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅಭಿಜೀತ್ ದೀಪ್ಕೆ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದು, “ನರೇಂದ್ರ ಮೋದಿ ಒಬ್ಬ ಸರ್ವಾಧಿಕಾರಿ” ಎಂದು ಆಕ್ರೋಶ ಹೊರಹಾಕಿದ್ದಾರೆ.
ದೆಹಲಿಯಾದ್ಯಂತ ಪೊಲೀಸರು ಅಘೋಷಿತ ಲಾಕ್ಡೌನ್ ವಿಧಿಸಿ, ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಿ ಹಾಗೂ ರೈಲುಗಳನ್ನು ರದ್ದುಗೊಳಿಸಿ ಪ್ರತಿಭಟನಾಕಾರರನ್ನು ಕಟ್ಟಿಹಾಕಲು ಯತ್ನಿಸುತ್ತಿದ್ದರೂ, ತಾವು ಯಾವುದೇ ಬೆದರಿಕೆಗೆ ಮಣಿಯದೆ ಪೂರ್ವಯೋಜನೆಯಂತೆ ದೆಹಲಿಗೆ ತಲುಪಿ ಜಂತರ್ ಮಂತರ್ ಕಡೆಗೆ ಹೆಜ್ಜೆ ಹಾಕುವುದಾಗಿ ನಾಯಕರು ಸ್ಪಷ್ಟಪಡಿಸಿದ್ದಾರೆ.
