ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸೋಮವಾರ ಕೇವಲ ಮೂರು ಗಂಟೆಗಳ ಭಾರತ ಪ್ರವಾಸ ಕೈಗೊಂಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರ ರಾಜಧಾನಿ ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.
ಈ ಕುರಿತು ಪ್ರಧಾನಿ ಮೋದಿ ಅವರು ತಮ್ಮ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿದ್ದು, “ನನ್ನ ಸಹೋದರ, ಯುಎಇ ಅಧ್ಯಕ್ಷ ಹಿಸ್ ಹೈನೆಸ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದೆ. ಅವರ ಭೇಟಿಯು ಬಲವಾದ ಭಾರತ–ಯುಎಇ ಸ್ನೇಹಕ್ಕೆ ಅವರು ನೀಡುವ ಮಹತ್ವವನ್ನು ತೋರಿಸುತ್ತದೆ. ನಮ್ಮ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಯುಎಇ ಅಧ್ಯಕ್ಷರನ್ನು ಆತ್ಮೀಯ ಅಪ್ಪುಗೆಯೊಂದಿಗೆ ಬರಮಾಡಿಕೊಂಡ ದೃಶ್ಯಗಳನ್ನೂ, ಇಬ್ಬರೂ ಒಂದೇ ಕಾರಿನಲ್ಲಿ ಒಟ್ಟಿಗೆ ಪ್ರಯಾಣಿಸಿದ ಕ್ಷಣಗಳ ಫೋಟೋಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಭೇಟಿ ಪ್ರಧಾನಿ ಮೋದಿ ಅವರ ಆಹ್ವಾನದ ಮೇರೆಗೆ ನಡೆದಿದ್ದು, ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಕೇವಲ ಮೂರು ಗಂಟೆಗಳ ಕಾಲ ಭಾರತದಲ್ಲಿ ತಂಗಿದ್ದರು.
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ—ಇರಾನ್–ಅಮೆರಿಕಾ ನಡುವಿನ ಹದಗೆಟ್ಟ ಸಂಬಂಧಗಳು, ಗಾಜಾದಲ್ಲಿನ ಮುಂದುವರಿದ ಅಸ್ಥಿರತೆ ಹಾಗೂ ಸೌದಿ ಅರೇಬಿಯಾ ಮತ್ತು ಯುಎಇ ಒಳಗೊಂಡ ಯೆಮೆನ್ ಸಂಘರ್ಷ ಬಗೆಹರಿಯದ ಸ್ಥಿತಿಯಲ್ಲಿ ಇರುವ ಹಿನ್ನೆಲೆಯಲ್ಲಿಈ ಭೇಟಿ ಮಹತ್ವ ಪಡೆದುಕೊಂಡಿದೆ.
ಇತ್ತೀಚಿನ ಉನ್ನತ ಮಟ್ಟದ ದ್ವೈಪಕ್ಷಿಕ ಸಂಪರ್ಕಗಳಿಂದ ರೂಪುಗೊಂಡ ಬಲವಾದ ಪ್ರಚೋದನೆಯ ಮುಂದುವರಿದ ಭಾಗವಾಗಿ ಈ ಭೇಟಿ ನಡೆದಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಸೆಪ್ಟೆಂಬರ್ 2024ರಲ್ಲಿ ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಭಾರತ ಭೇಟಿ ಹಾಗೂ ಏಪ್ರಿಲ್ 2025ರಲ್ಲಿ ಯುಎಇ ಉಪ ಪ್ರಧಾನಮಂತ್ರಿ ಮತ್ತು ರಕ್ಷಣಾ ಸಚಿವ ಹಾಗೂ ದುಬೈ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಭೇಟಿ ಈ ಸಂಬಂಧಗಳಲ್ಲಿವೆ.
