ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಅವರು ಕೇಂದ್ರದ ವಕ್ಫ್ (ತಿದ್ದುಪಡಿ) ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಈ ಪ್ರಸ್ತಾವಿತ ಕಾನೂನು ಮುಸ್ಲಿಮರ ಮೇಲಿನ ಪ್ರತ್ಯಕ್ಷ ದಾಳಿಯಾಗಿದೆ ಎಂದು ಆರೋಪಿಸಿದ ಅವರು, ಇದು ಮುಸ್ಲಿಮರ ಆಸ್ತಿಗಳನ್ನು ಕಿತ್ತುಕೊಳ್ಳುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಮಸೂದೆಯ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಕಪ್ಪು ತೋಳುಪಟ್ಟಿ ಧರಿಸಿದ ಒವೈಸಿ, ಪ್ರಧಾನಿ ನರೇಂದ್ರ ಮೋದಿ ಈ ತಿದ್ದುಪಡಿ ಮೂಲಕ ಮಸೀದಿಗಳು ಮತ್ತು ದರ್ಗಾಗಳನ್ನು ಗುರಿಯಾಗಿಸಲು ಯೋಜಿಸಿದ್ದಾರೆ ಎಂದು ಆರೋಪಿಸಿದರು.
“ಪ್ರಧಾನಿ ನರೇಂದ್ರ ಮೋದಿ ಅವರು ವಕ್ಫ್ ಮಸೂದೆಯ ಮೂಲಕ ನಮ್ಮ ಮಸೀದಿಗಳು ಮತ್ತು ದರ್ಗಾಗಳನ್ನು ಟಾರ್ಗೆಟ್ ಮಾಡಿ, ನಮ್ಮ ಹೃದಯಕ್ಕೆ ಗುಂಡು ಹಾರಿಸುತ್ತಿದ್ದಾರೆ” ಎಂದು ಅವರು ಘೋಷಿಸಿದರು.
ಹಿಂದೂಗಳು ದೇವಾಲಯ ಮಂಡಳಿಗಳಲ್ಲಿ ಮತ್ತು ಸಿಖ್ಖರು ಗುರುದ್ವಾರ ಮಂಡಳಿಗಳಲ್ಲಿ ಆಯಾ ಧರ್ಮದವರು ಮಾತ್ರ ಸದಸ್ಯರಾಗಬಹುದಾದಾಗ, ಮುಸ್ಲಿಮೇತರರು ವಕ್ಫ್ ಮಂಡಳಿಯಲ್ಲಿ ಸದಸ್ಯರಾಗುವುದು ಹೇಗೆ ಸಾಧ್ಯ ಎಂದು ಒವೈಸಿ ಸರ್ಕಾರವನ್ನು ಪ್ರಶ್ನಿಸಿದರು.
“ನೀವು (ಕೇಂದ್ರ ಸರ್ಕಾರ) ಮುಸ್ಲಿಮರ ಆಸ್ತಿಗಳನ್ನು ದೋಚಿಕೊಳ್ಳಲು ಯತ್ನಿಸುತ್ತಿದ್ದೀರಿ. ಇದು ಹಿಂದುತ್ವದ ಕಾರ್ಯಸೂಚಿಯ ಒಂದು ಭಾಗವಾಗಿದ್ದು, ನಮ್ಮ ಶರಿಯತ್ ಮತ್ತು ಧರ್ಮವನ್ನು ಪಾಲಿಸದಂತೆ ತಡೆಯುತ್ತದೆ. ಈ ಕಾನೂನು ಅಸಂವಿಧಾನಿಕವಾಗಿದ್ದು, ಸಂವಿಧಾನದ ಅನುಚ್ಛೇದ 14, 15, 26 ಮತ್ತು 29 ಗಳನ್ನು ಉಲ್ಲಂಘಿಸುತ್ತದೆ ಎಂದು ನಾವು ಸರ್ಕಾರಕ್ಕೆ ಎಚ್ಚರಿಸುತ್ತಿದ್ದೇವೆ” ಎಂದು ಅವರು ಒತ್ತಿ ಹೇಳಿದರು.
ಒವೈಸಿ ಬಿಜೆಪಿಯ ಎನ್‌ಡಿಎ ಮಿತ್ರಪಕ್ಷಗಳಾದ ಎನ್. ಚಂದ್ರಬಾಬು ನಾಯ್ಡು (ಟಿಡಿಪಿ), ನಿತೀಶ್ ಕುಮಾರ್ (ಜೆಡಿಯು), ಚಿರಾಗ್ ಪಾಸ್ವಾನ್ (ಎಲ್‌ಜೆಪಿ-ರಾಮ್ ವಿಲಾಸ್) ಮತ್ತು ಜಯಂತ್ ಚೌಧರಿ ವಿರುದ್ಧವೂ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು.