ಕಳೆದ 2 ವರ್ಷಗಳಿಂದ ತೀವ್ರ ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರಕ್ಕೆ ಇಂದು (ಸೆ.13, ಶನಿವಾರ) ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಹಿಂಸಾಚಾರದ ಬಳಿಕ ಮೋದಿ ಅವರು ಮಣಿಪುರಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
ಇಂದಿನ ಮಣಿಪುರ ಭೇಟಿಯಲ್ಲಿ ನರೇಂದ್ರ ಮೋದಿ ಅವರು ಸುಮಾರು 8,500 ಕೋಟಿ ರು. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಸತತ ಎರಡು ವರ್ಷಗಳಿಂದ ಗಲಭೆ ಪೀಡಿತ ಪ್ರದೇಶಕ್ಕೆ ಪ್ರಧಾನಿ ಆಗಮಿಸಬೇಕು ಎಂಬ ತೀವ್ರ ಬೇಡಿಕೆ ಸಂದರ್ಭದಲ್ಲೂ ಸಹ ಮೋದಿ ಆಗಮಿಸದೇ ಈಗ ಭೇಟಿ ಮಾಡುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.
2023ರ ಮೇ ತಿಂಗಳಲ್ಲಿ ಮೈತೇಯಿ ಮತ್ತು ಕುಕಿ ಜನಾಂಗದ ನಡುವೆ ಆರಂಭವಾದ ಹಿಂಸಾಚಾರದಲ್ಲಿ ಸುಮಾರು 260 ಮಂದಿ ಮೃತಪಟ್ಟು, 50 ಸಾವಿರಕ್ಕೂ ಹೆಚ್ಚು ಮಂದಿ ನಿರ್ವಸಿತರಾಗಿದ್ದಾರೆ. ಸುದೀರ್ಘ ಹಿಂಸಾಚಾರದ ಹಿನ್ನೆಲೆಯಲ್ಲಿ ಮಣಿಪುರ ಮುಖ್ಯಮಂತ್ರಿಯಾಗಿದ್ದ ಎನ್.ಬಿರೇನ್ ಸಿಂಗ್ ಅವರು ರಾಜೀನಾಮೆ ನೀಡಿದ ಬಳಿಕ, ಕಳೆದ ಫೆಬ್ರವರಿಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಸದ್ಯ ಹಿಂಸಾಚಾರ ನಿಯಂತ್ರಣದಲ್ಲಿದ್ದರೂ ಶಾಂತಿ ಸ್ಥಾಪನೆ ಇನ್ನೂ ಸಾಧ್ಯವಾಗಿಲ್ಲ.
ಮೋದಿ ಭೇಟಿಗೆ ಸಂಬಂಧಿಸಿ ಅಗತ್ಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಎಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮೋದಿ ಅವರ ಭೇಟಿಯನ್ನು ಕುಕಿ-ಝೋ ಗುಂಪುಗಳು ಸ್ವಾಗತಿಸಿವೆ.
ಮೋದಿ ಭೇಟಿ ‘ಶಾಂತಿ ಮತ್ತು ಸೌಹಾರ್ದತೆಗೆ ಬಲ ನೀಡುವ ಬದಲು ಒಂದು ಪ್ರಹಸನವಾಗಲಿದೆ’ ಎಂದು ವಿಪಕ್ಷ ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಅಂತೂ ಇದು ಅಧಿಕೃತವಾಗಿದೆ. ಪ್ರಧಾನಿಗಳು 3 ಗಂಟೆಗಿಂತ ಕಡಿಮೆ ಸಮಯವನ್ನು ಮಣಿಪುರದಲ್ಲಿ ಕಳೆಯಲಿದ್ದಾರೆ. ಅವರ ಈ ಭೇಟಿಯು ಶಾಂತಿ ಮತ್ತು ಸೌಹಾರ್ದತೆಗೆ ಬಲ ನೀಡುವ ಬದಲು ಒಂದು ಪ್ರಹಸನವಾಗಿ ಮಾರ್ಪಡಲಿದೆ’ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಈ ಹಿಂದೆ ಹಲವು ಬಾರಿ ಮೋದಿ ಮಣಿಪುರ ಭೇಟಿಗೆ ಒತ್ತಾಯಿಸಿತ್ತು. ಕಾಂಗ್ರೆಸ್ ಮಾತ್ರವಲ್ಲದೆ ಮಣಿಪುರ ಜನತೆ ಮತ್ತು ದೇಶದ ಹಲವು ವಿಪಕ್ಷಗಳು ನರೇಂದ್ರ ಮೋದಿ ಮಣಿಪುರ ಭೇಟಿಗೆ ಒತ್ತಾಯಿಸಿದರೂ ಪ್ರಧಾನಿ ನರೇಂದ್ರ ಮೋದಿ ಭೇಟಿ ಇರಲಿ ಈವರೆಗೆ ಬಹಿರಂಗವಾಗಿ ಮಣಿಪುರದ ಬಗ್ಗೆ ಮಾತೂ ಆಡಿರಲಿಲ್ಲ. ಹೀಗಾಗಿ ಈ ದಿನದ ಮೋದಿ ಮಣಿಪುರ ಭೇಟಿ ಐತಿಹಾಸಿಕ ಭೇಟಿ ಎಂದು ಕುಕಿ ಝೋ ಸಮುದಾಯ ಹೇಳಿದೆ.