ನವದೆಹಲಿ : ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಹಾಗೂ ತನ್ನ ಬೇಡಿಕೆಗಳ ಕುರಿತು ಸರ್ಕಾರ ಭರವಸೆ ನೀಡಿದ ನಡುವೆಯೂ ಕಾಕ್ರೋಚ್ ಜನತಾ ಪಾರ್ಟಿ (CJP) ಜುಲೈ 24ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲು ಕರೆ ನೀಡಿದೆ.
ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶದ ವಿವಿಧ ಭಾಗಗಳಲ್ಲಿ ಪೊಲೀಸರ ಕ್ರಮಗಳಿಂದ ತೊಂದರೆಗೊಳಗಾದವರೊಂದಿಗೆ ಒಗ್ಗಟ್ಟು ಪ್ರದರ್ಶಿಸುವ ಉದ್ದೇಶದಿಂದ ಪ್ರತಿಭಟನೆ ಆಯೋಜಿಸಲಾಗಿದೆ ಎಂದು CJP ಹೇಳಿದೆ. ವಿದ್ಯಾರ್ಥಿ ಸಂಘಟನೆಗಳು ಮತ್ತು ವಿವಿಧ ಗುಂಪುಗಳು ಪ್ರತಿಭಟನೆಗೆ ಸಂಬಂಧಿಸಿದ ಅನುಮತಿ ಹಾಗೂ ವ್ಯವಸ್ಥೆಗಳ ಕುರಿತು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದೆ.
ಪ್ರತಿಭಟನೆಯ ವೇಳೆ ಶಾಂತಿ ಮತ್ತು ಅಹಿಂಸೆಯನ್ನು ಕಾಪಾಡುವಂತೆ ಸಂಘಟನೆ ಮನವಿ ಮಾಡಿದೆ. ಜೈ ಹಿಂದ್, ಭಾರತ ಮಾತಾ ಕೀ ಜೈ, ಇಂಕ್ವಿಲಾಬ್ ಜಿಂದಾಬಾದ್, ಜೈ ಭೀಮ್‌ನಂತಹ ಸಕಾರಾತ್ಮಕ ಘೋಷಣೆಗಳನ್ನು ಮಾತ್ರ ಕೂಗಬೇಕು ಹಾಗೂ ಪ್ರತಿಭಟನೆಯ ಎಲ್ಲ ಚಟುವಟಿಕೆಗಳನ್ನು ದಾಖಲಿಸಿಕೊಳ್ಳಬೇಕು ಎಂದು ತಿಳಿಸಿದೆ.
ಪ್ರತಿಭಟನಾಕಾರರು:
- ಅನುಮತಿ ನೀಡಿರುವ ಸ್ಥಳಗಳಲ್ಲಿ ಮಾತ್ರ ಇರಬೇಕು.
- ನಿಗದಿತ ಮಾರ್ಗಗಳಲ್ಲೇ ಸಾಗಬೇಕು.
- ಪ್ರಚೋದನಕಾರಿ, ನಿಂದನಾತ್ಮಕ ಅಥವಾ ದ್ವೇಷ ಹರಡುವ ಹೇಳಿಕೆಗಳನ್ನು ನೀಡಬಾರದು.
- ಯಾವುದೇ ಆಯುಧಗಳು, ಕೋಲು ಅಥವಾ ಲಾಠಿಗಳನ್ನು ತರಬಾರದು.
- ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು.
- ಸುಳ್ಳು ಸುದ್ದಿಗಳನ್ನು ಹರಡಬಾರದು.
ತುರ್ತು ಸಂದರ್ಭಗಳಿಗಾಗಿ ವಕೀಲರು ಅಥವಾ ಆಪ್ತರ ಸಂಪರ್ಕ ಸಂಖ್ಯೆಯನ್ನು ಕೈಯಲ್ಲಿ ಹಾಗೂ ಪ್ರತ್ಯೇಕ ಕಾರ್ಡ್‌ನಲ್ಲಿ ಬರೆದುಕೊಂಡಿರಬೇಕು ಎಂದು ಸಂಘಟನೆ ಸಲಹೆ ನೀಡಿದೆ. ಪ್ರತಿಭಟನೆ ವೇಳೆ ಯಾವುದೇ ಕಿಡಿಗೇಡಿತನ ಕಂಡುಬಂದರೆ ಅದನ್ನು ದಾಖಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು ಹಾಗೂ ಅಗತ್ಯವಿದ್ದಲ್ಲಿ ಸುತ್ತಮುತ್ತಲಿನವರ ಸಹಾಯ ಪಡೆಯಬೇಕು ಎಂದು ತಿಳಿಸಿದೆ.ಯಾರಾದರೂ ಪ್ರಚೋದನೆ ನೀಡಿದರೆ ಪ್ರತಿಕ್ರಿಯಿಸದೆ ಸ್ಥಳದಿಂದ ದೂರ ಸರಿದು, ಪ್ರತಿಭಟನೆಯ ಮಾರ್ಷಲ್‌ಗಳಿಗೆ ಮಾಹಿತಿ ನೀಡುವಂತೆ CJP ಮನವಿ ಮಾಡಿದೆ.
