Saturday, November 30, 2024

ಸತ್ಯ | ನ್ಯಾಯ |ಧರ್ಮ

ಕ್ಯಾನ್ಸರ್‌ ಕುರಿತಾದ ಸಿಧು ಹೇಳಿಕೆ; ಪತ್ನಿ ನವಜೋತ್ ಕೌರ್‌ ಅವರಿಗೆ 850 ಕೋಟಿ ಲೀಗಲ್ ನೋಟಿಸ್

ಚಂಡೀಗಢ: ಕೊನೆಯ ಹಂತದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮ್ಮ ಪತ್ನಿ ಆಯುರ್ವೇದ ವಿಧಾನಗಳು ಮತ್ತು ಆಹಾರದ ಮೂಲಕ ಅದರಿಂದ ಚೇತರಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಇತ್ತೀಚೆಗೆ ಹೇಳಿಕೊಂಡಿದ್ದರು.

ನವೆಂಬರ್ 21ರಂದು ಬಹಿರಂಗ ಮಾಧ್ಯಮಗೋಷ್ಠಿಯ ಮೂಲಕ ಅವರು ಇದನ್ನು ಬಹಿರಂಗಪಡಿಸಿದರು. ಈ ಹಿನ್ನೆಲೆಯಲ್ಲಿ ಸಿಧು ಪತ್ನಿ ನವಜೋತ್ ಕೌರ್ ಅವರಿಗೆ 850 ಕೋಟಿ ಮೊತ್ತದ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ಛತ್ತೀಸ್‌ಗಢ ಸಿವಿಲ್ ಸೊಸೈಟಿ (ಸಿಸಿಎಸ್) ಈ ನೋಟಿಸ್ ನೀಡಿದೆ. ಕ್ಯಾನ್ಸರ್ ಚೇತರಿಕೆಗೆ ಸಂಬಂಧಿಸಿದಂತೆ ಆಹಾರದ ಬಗ್ಗೆ ಸಿಧು ಅವರ ಹೇಳಿಕೆಗಳ ಬಗ್ಗೆ ನೋಟಿಸಿನಲ್ಲಿ ಸ್ಪಷ್ಟೀಕರಣವನ್ನು ಕೋರಲಾಗಿದೆ.

ಈ ಸಂದರ್ಭದಲ್ಲಿ ಸಿಸಿಎಸ್ ನವಜೋತ್ ಕೌರ್ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದೆ. ನಿಮ್ಮ ಆರೋಗ್ಯ ಮತ್ತು ಕ್ಯಾನ್ಸರ್ ಕಾಯಿಲೆಯಿಂದ ಚೇತರಿಸಿಕೊಳ್ಳುವ ಬಗ್ಗೆ ನಿಮ್ಮ ಗಂಡನ (ಸಿಧು) ಹೇಳಿಕೆಗಳನ್ನು ನೀವು ಬೆಂಬಲಿಸುತ್ತೀರಾ? ನಿಮ್ಮ ಚಿಕಿತ್ಸೆಗೆ ತೆಗೆದುಕೊಂಡ ಅಲೋಪತಿ ಔಷಧಿಗಳು ಕೆಲಸ ಮಾಡಲಿಲ್ಲ ಎಂದರೆ ನೀವು ನಂಬುತ್ತೀರಾ? ನೀವು ಕೇವಲ ಬೇವಿನ ಎಲೆ, ನಿಂಬೆ ರಸ, ತುಳಸಿ ಮತ್ತು ಅರಿಶಿನವನ್ನು ಮಾತ್ರ ತೆಗೆದುಕೊಂಡಿದ್ದೀರಾ? ಅಥವಾ ನೀವು ಅಲೋಪತಿ ಔಷಧಗಳನ್ನೂ ಬಳಸಿದ್ದೀರಾ? ಎಂದು ನೋಟಿಸಿನಲ್ಲಿ ಕೇಳಲಾಗಿದೆ.

ಮತ್ತೊಂದೆಡೆ, ಛತ್ತೀಸ್‌ಗಢ ಸಿವಿಲ್ ಸೊಸೈಟಿ (ಸಿಸಿಎಸ್) ಸಿಧು ಅವರ ವಾದಗಳು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯನ್ನು ತ್ಯಜಿಸಲು ಮತ್ತು ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಲು ಪ್ರಭಾವ ಬೀರುತ್ತಿವೆ ಎಂದು ಆರೋಪಿಸಿದೆ. ಇದು ಕ್ಯಾನ್ಸರ್ ರೋಗಿಗಳ ಜೀವಕ್ಕೆ ಅಪಾಯವನ್ನು ತರುತ್ತದೆ ಎಂದು ಟೀಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದು ಅವರ ಹೇಳಿಕೆಗೆ ಪೂರಕವಾದ ಸಾಕ್ಷ್ಯಗಳನ್ನು ಏಳು ದಿನಗಳೊಳಗೆ ಸಲ್ಲಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಇಲ್ಲದಿದ್ದರೆ, ತಪ್ಪುದಾರಿಗೆಳೆಯುವ ಹೇಳಿಕೆಗಳಿಗಾಗಿ 850 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಸಿಧು ಅವರ ಪತ್ನಿ ಕೌರ್ ಅವರಿಗೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page