Home ದೆಹಲಿ ‘ನಾನು ಮುಸ್ಲಿಂ ಆದರೂ ಹೆಮ್ಮೆಯಿಂದ ವಂದೇ ಮಾತರಂಹಾಡುತ್ತೇನೆ’: ಮನುಸ್ಮೃತಿ ವಿವಾದದ ಕುರಿತು ರಾಹುಲ್ ಗಾಂಧಿ ವಿರುದ್ಧ...

‘ನಾನು ಮುಸ್ಲಿಂ ಆದರೂ ಹೆಮ್ಮೆಯಿಂದ ವಂದೇ ಮಾತರಂಹಾಡುತ್ತೇನೆ’: ಮನುಸ್ಮೃತಿ ವಿವಾದದ ಕುರಿತು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕಿ ನಾಜಿಯಾ ಖಾನ್ ವಾಗ್ದಾಳಿ

0

ದೆಹಲಿ: “ನಾನು ಕಲ್ಮಾ ಮತ್ತು ಶಹಾದಾವನ್ನೂ ಪಠಿಸುತ್ತೇನೆ, ಹಾಗೆಯೇ ‘ವಂದೇ ಮಾತರಂ’ ಹಾಡುವಾಗಲೂ ನನಗೆ ಅತೀವ ಹೆಮ್ಮೆ ಎನಿಸುತ್ತದೆ. ನಾನು ಖಾನ್ ಆಗಿದ್ದರೂ ನನ್ನ ಸಂಸ್ಕೃತಿ ಮತ್ತು ಸಂಸ್ಕಾರದಿಂದ ಶುದ್ಧ ಹಿಂದೂ” ಎಂದು ಸುಪ್ರೀಂ ಕೋರ್ಟ್ ವಕೀಲೆ ಹಾಗೂ ಬಿಜೆಪಿ ನಾಯಕಿ ನಾಜಿಯಾ ಖಾನ್ ಹೇಳಿದ್ದಾರೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಮನುಸ್ಮೃತಿಯನ್ನು ತಪ್ಪಾಗಿ ವ್ಯಾಖ್ಯಾನಿಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, “ಮನುಸ್ಮೃತಿಯ ಒಂದು ಅಧ್ಯಾಯವನ್ನು ಮಾತ್ರ ಆಯ್ದುಕೊಂಡು, ಪದಗಳನ್ನು ತಿರುಚಿ ತಪ್ಪು ಕಲ್ಪನೆ ಮೂಡಿಸಲು ಯತ್ನಿಸಲಾಗುತ್ತಿದೆ. ಕುಟುಂಬದ ಮಹಿಳೆಯರ ರಕ್ಷಣೆ ಮತ್ತು ಜವಾಬ್ದಾರಿಯ ಬಗ್ಗೆ ಹೇಳಿರುವ ವಿಚಾರವನ್ನು ಮಹಿಳೆಯರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಎಂದು ಬಿಂಬಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ, ಆದರೆ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುವಾಗ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿದ್ದು ಏಕೆ?” ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರಧಾನಿ ಮೋದಿಯಾಗಲಿ, ಸಿಎಂ ಯೋಗಿಯಾಗಲಿ ಅಥವಾ ಮೋಹನ್ ಭಾಗವತ್ ಅವರಾಗಲಿ ಎಲ್ಲರೂ ಮನುಸ್ಮೃತಿಯನ್ನು ಓದಬೇಕು ಅಥವಾ ಅನುಸರಿಸಬೇಕು ಎಂದು ಎಲ್ಲಾದರೂ ಹೇಳಿದ್ದಾರೆಯೇ ಎಂದು ನಾಜಿಯಾ ಖಾನ್ ಪ್ರಶ್ನಿಸಿದರು. ಅಗ್ಗದ ಪ್ರಚಾರ ಮತ್ತು ಟಿಆರ್‌ಪಿಗಾಗಿ ಪ್ರಧಾನಿ ಮತ್ತು ಸಿಎಂ ಅವರ ಭಾವಚಿತ್ರಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು, “ಹಿನ್ನೆಲೆಯಲ್ಲಿ ಫೋಟೋ ಹಾಕಬೇಕಿದ್ದರೆ ನೆಹರೂ, ಇಂದಿರಾ ಗಾಂಧಿ ಅಥವಾ ರಾಜೀವ್ ಗಾಂಧಿ ಅವರ ಫೋಟೋಗಳನ್ನು ಹಾಕಬೇಕಿತ್ತು. ಈ ಕೃತ್ಯಕ್ಕೆ ರಾಹುಲ್ ಗಾಂಧಿ ಅವರು ಉತ್ತರ ನೀಡಲೇಬೇಕು, ಇಲ್ಲದಿದ್ದರೆ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್‌ವರೆಗೆ ಕೊಂಡೊಯ್ಯಲಾಗುವುದು” ಎಂದು ಎಚ್ಚರಿಸಿದರು.

You cannot copy content of this page

Exit mobile version