ಸುಪ್ರೀಂ ತಪರಾಕಿಗೆ ಮಣಿದ ಎನ್‌ಸಿಇಆರ್‌ಟಿ: ಸಮಾಜದಲ್ಲಿ ನ್ಯಾಯಾಂಗದ ಪಾತ್ರ ಶೀರ್ಷಿಕೆಯ ಪಾಠವನ್ನು ತೆಗೆದುಹಾಕಿದ ಮಂಡಳಿ

ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವಿದೆ ಎಂದು ಬಿಂಬಿಸುವ ಮೂಲಕ ಸಾಂವಿಧಾನಿಕ ಸಂಸ್ಥೆಯ ಘನತೆಗೆ ಧಕ್ಕೆ ತರುವಂತಿದ್ದ ಪಠ್ಯಭಾಗಗಳನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಕೊನೆಗೂ ತೆಗೆದುಹಾಕಿದೆ. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಎನ್‌ಸಿಇಆರ್‌ಟಿ, ಸರ್ವೋಚ್ಚ ನ್ಯಾಯಾಲಯದ ಆದೇಶದ ಬೆನ್ನಲ್ಲೇ ಮಣಿದಿದ್ದು, 8ನೇ ತರಗತಿಯ ಸಾಮಾಜಿಕ ವಿಜ್ಞಾನ ಪಠ್ಯಪುಸ್ತಕದಲ್ಲಿದ್ದ ವಿವಾದಿತ ಅಂಶಗಳನ್ನು ಕೈಬಿಟ್ಟು ಹೊಸ ಅಧ್ಯಾಯವನ್ನು ಬಿಡುಗಡೆ ಮಾಡಿದೆ.

ನ್ಯಾಯಾಂಗದಲ್ಲಿನ ಭ್ರಷ್ಟಾಚಾರ, ನ್ಯಾಯಾಲಯಗಳಲ್ಲಿನ ಕೋಟ್ಯಂತರ ಪ್ರಕರಣಗಳ ಬಾಕಿ ಮತ್ತು ಪ್ರಮುಖ ತೀರ್ಪುಗಳಿಗೆ ಸಂಬಂಧಿಸಿದ ವಿವಾದಾತ್ಮಕ ಅಂಶಗಳನ್ನು ತೆಗೆದುಹಾಕಲಾಗಿದ್ದು, ಅವುಗಳ ಜಾಗದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL), ಟ್ರಿಬ್ಯುನಲ್‌ಗಳು ಮತ್ತು ಪರ್ಯಾಯ ವಿವಾದ ಪರಿಹಾರ (ADR) ವಿಧಾನಗಳ ಕುರಿತು ಹೊಸ ಮಾಹಿತಿಯನ್ನು ಸೇರಿಸಲಾಗಿದೆ.

ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ 8ನೇ ತರಗತಿಯ ಸಾಮಾಜಿಕ ವಿಜ್ಞಾನ ಪಠ್ಯಪುಸ್ತಕದ 4ನೇ ಅಧ್ಯಾಯವಾದ ‘ಸಮಾಜದಲ್ಲಿ ನ್ಯಾಯಾಂಗದ ಪಾತ್ರ’ (The Role of the Judiciary in Society) ಎಂಬ ಪಾಠದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ, ಪ್ರಕರಣಗಳ ಬಾಕಿ ಇರುವುದು, ಮೂಲಸೌಕರ್ಯಗಳ ಕೊರತೆ ಮತ್ತು ನ್ಯಾಯಾಧೀಶರ ಕೊರತೆಯಂತಹ ವಿಷಯಗಳನ್ನು ಪ್ರಸ್ತಾಪಿಸಲಾಗಿದ್ದು, ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

ಈ ಅಧ್ಯಾಯವು ನ್ಯಾಯಾಂಗದ ಘನತೆಯನ್ನು ಕುಗ್ಗಿಸುವಂತಿದೆ ಎಂಬ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ (Suo Motu) ವಿಚಾರಣೆ ಕೈಗೆತ್ತಿಕೊಂಡಿತ್ತು. ತಕ್ಷಣವೇ ಈ ಪಠ್ಯಪುಸ್ತಕದ ಮುದ್ರಿತ ಮತ್ತು ಡಿಜಿಟಲ್ ಪ್ರತಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಆದೇಶಿಸಿದ್ದಲ್ಲದೆ, ಈ ಪುಸ್ತಕದ ಮರುಮುದ್ರಣ ಹಾಗೂ ವಿತರಣೆಯ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು. ಈ ಹಿನ್ನೆಲೆಯಲ್ಲಿ ಎನ್‌ಸಿಇಆರ್‌ಟಿ ನ್ಯಾಯಾಲಯದ ಕ್ಷಮೆಯನ್ನೂ ಯಾಚಿಸಿತ್ತು.

ಹೊಸ ಪಠ್ಯಪುಸ್ತಕದಲ್ಲಿ ಬದಲಾದ ಪ್ರಮುಖ ಅಂಶಗಳು

ಪರಿಷ್ಕೃತ ಪಠ್ಯಪುಸ್ತಕದಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ‘ಸ್ವತಂತ್ರ ನ್ಯಾಯಾಂಗ ಏಕೆ ಅಗತ್ಯ?’ ಎಂಬ ಆರಂಭಿಕ ಪ್ರಶ್ನೆಯನ್ನು ತೆಗೆದುಹಾಕಿ, ‘ನ್ಯಾಯಬದ್ಧ ಮತ್ತು ಸಾಮರಸ್ಯದ ಸಮಾಜಕ್ಕಾಗಿ ನ್ಯಾಯದ ಅಗತ್ಯವೇಕೆ?’ ಎಂಬ ದೃಷ್ಟಿಕೋನದ ಹೊಸ ವಿಷಯವನ್ನು ಸೇರಿಸಲಾಗಿದೆ. ಇದರೊಂದಿಗೆ ‘ನ್ಯಾಯಾಂಗ ಎದುರಿಸುತ್ತಿರುವ ಸವಾಲುಗಳು’ ಎಂಬ ವಿಭಾಗವನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ನ್ಯಾಯಾಲಯಗಳಲ್ಲಿ ಪ್ರಕರಣಗಳು ದೀರ್ಘಕಾಲ ಬಾಕಿ ಉಳಿಯಲು ನ್ಯಾಯಾಧೀಶರ ಕೊರತೆ, ಸಂಕೀರ್ಣ ಕಾನೂನು ಪ್ರಕ್ರಿಯೆ ಮತ್ತು ಕಳಪೆ ಮೂಲಸೌಕರ್ಯಗಳೇ ಕಾರಣ ಎಂದು ಈ ಹಿಂದೆ ವಿವರಿಸಲಾಗಿದ್ದ ಅಂಶಗಳು ಈಗ ಪಠ್ಯದಲ್ಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಈ ಇಡೀ ವಿವಾದದ ಕೇಂದ್ರಬಿಂದುವಾಗಿದ್ದ ‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರ’ ಎಂಬ ಭಾಗವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಈ ಭಾಗದಲ್ಲಿ ಅಂದಿನ ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ, ‘ನ್ಯಾಯಾಂಗದಲ್ಲಿಯೂ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಸಂದರ್ಭಗಳಿವೆ’ ಎಂದು ಬರೆಯಲಾಗಿತ್ತು.

ಹೊಸದಾಗಿ ಸೇರ್ಪಡೆಯಾದ ವಿಷಯಗಳು

ಸತಾಜಾ ಆವೃತ್ತಿಯಲ್ಲಿ ವಿದ್ಯಾರ್ಥಿಗಳಿಗೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಧನಾತ್ಮಕ ಮತ್ತು ಸಮಗ್ರ ಜ್ಞಾನವನ್ನು ನೀಡುವ ಉದ್ದೇಶದಿಂದ ಹಲವು ಹೊಸ ವಿಷಯಗಳನ್ನು ಸೇರಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು (PIL), ಜನಸಾಮಾನ್ಯರಿಗೆ ನ್ಯಾಯವನ್ನು ತಲುಪಿಸುವಲ್ಲಿ ನ್ಯಾಯಾಂಗದ ಪಾತ್ರ, ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಗಳು (ADR) ಮತ್ತು ಟ್ರಿಬ್ಯುನಲ್‌ಗಳ ಕಾರ್ಯವೈಖರಿಯನ್ನು ವಿವರವಾಗಿ ಅಳವಡಿಸಲಾಗಿದೆ. ಸುಪ್ರೀಂ ಕೋರ್ಟ್‌ನ ಸ್ವಯಂಪ್ರೇರಿತ ರಿಟ್ ಅರ್ಜಿ (ಸಿವಿಲ್) ಸಂಖ್ಯೆ 1/2026 ರ ಆದೇಶದ ಪ್ರಕಾರ ಪಠ್ಯವನ್ನು ಮರುಪರಿಶೀಲಿಸಿ ಈ ಹೊಸ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ ಎಂದು ಎನ್‌ಸಿಇಆರ್‌ಟಿ ತನ್ನ ಪ್ರಕಾಶಕರ ಟಿಪ್ಪಣಿಯಲ್ಲಿ ತಿಳಿಸಿದೆ. ಕೇಂದ್ರ ಶಿಕ್ಷಣ ಸಚಿವಾಲಯ ನೇಮಿಸಿದ್ದ ತಜ್ಞರ ಸಮಿತಿಯು ಮಾರ್ಚ್ 16 ರ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಈ ಅಧ್ಯಾಯವನ್ನು ಸಂಪೂರ್ಣವಾಗಿ ಹೊಸದಾಗಿ ಬರೆದಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಹಿಂದಿನ ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಒಟ್ಟು 51 ಸದಸ್ಯರಿದ್ದರಾಗಿದ್ದು, ಪ್ರಸ್ತುತ ಪರಿಷ್ಕೃತ ಆವೃತ್ತಿಯಲ್ಲಿ ಆ ಸಂಖ್ಯೆ 48 ಕ್ಕೆ ಇಳಿದಿದೆ. ವಿವಾದಾತ್ಮಕ ಅಧ್ಯಾಯದ ರಚನೆಗೆ ಜವಾಬ್ದಾರರಾಗಿದ್ದರು ಎನ್ನಲಾದ ಮೈಕೆಲ್ ಡ್ಯಾನಿನೋ, ಸುಪರ್ಣಾ ದಿವಾಕರ್ ಮತ್ತು ಅಲೋಕ್ ಪ್ರಸನ್ನ ಕುಮಾರ್ ಅವರ ಹೆಸರುಗಳನ್ನು ಎನ್‌ಸಿಇಆರ್‌ಟಿ ಹೊಸ ಸಮಿತಿಯ ಪಟ್ಟಿಯಿಂದ ತೆಗೆದುಹಾಕಿದೆ.

Related Articles

ಇತ್ತೀಚಿನ ಸುದ್ದಿಗಳು