Home ದೇಶ ಅತ್ಯಾಚಾರ ಮತ್ತು ಪೋಕ್ಸೊ ಅಪರಾಧಿಗಳಿಗೆ ಪೆರೋಲ್ ನಿಷೇಧಿಸಿ: ಕೇಂದ್ರಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದಿಂದ ಶಿಫಾರಸು

ಅತ್ಯಾಚಾರ ಮತ್ತು ಪೋಕ್ಸೊ ಅಪರಾಧಿಗಳಿಗೆ ಪೆರೋಲ್ ನಿಷೇಧಿಸಿ: ಕೇಂದ್ರಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದಿಂದ ಶಿಫಾರಸು

0

ಪುಣೆ ಜಿಲ್ಲೆಯ ಭೋರ್ ತಾಲೂಕಿನ ನಸ್ರಾಪುರ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ನಡೆದ ಬರ್ಬರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗವು (NCW), ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯಡಿ ಶಿಕ್ಷೆಗೊಳಗಾದ ಅಪರಾಧಿಗಳಿಗೆ ಪೆರೋಲ್ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಈ ಘಟನೆಯನ್ನು ಮಾನವಕುಲಕ್ಕೆ ಕಳಂಕ ಎಂದು ಬಣ್ಣಿಸಿರುವ ಆಯೋಗದ ಅಧ್ಯಕ್ಷೆ ವಿಜಯಾ ರಹಾಟ್ಕರ್, ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಹಾಗೂ ಘನತೆಯನ್ನು ಕಾಪಾಡುವುದು ಸರ್ಕಾರದ ಆದ್ಯತೆಯಾಗಬೇಕು ಎಂದು ಹೇಳಿದ್ದಾರೆ. ಪ್ರಕರಣದ ಆರೋಪಿ 65 ವರ್ಷದ ಭೀಮರಾವ್ ಕಾಂಬ್ಳೆ ಈ ಹಿಂದೆಯೂ ಇಂತಹ ಲೈಂಗಿಕ ಅಪರಾಧಗಳಲ್ಲಿ ಭಾಗಿಯಾಗಿದ್ದು, ಇಂತಹ ಹಳೆಯ ಅಪರಾಧಿಗಳ ಮೇಲೆ ನಿಗಾ ಇಡುವಲ್ಲಿ ಸ್ಥಳೀಯ ಅಧಿಕಾರಿಗಳ ವೈಫಲ್ಯದ ಬಗ್ಗೆ ಆಯೋಗವು ಕಳವಳ ವ್ಯಕ್ತಪಡಿಸಿದೆ.

ಮಹಿಳಾ ಆಯೋಗವು ತನ್ನ ಶಿಫಾರಸುಗಳಲ್ಲಿ ಜೈಲು ಮತ್ತು ಪೆರೋಲ್ ನಿಯಮಗಳಿಗೆ ತಿದ್ದುಪಡಿ ತರುವಂತೆ ಸೂಚಿಸಿದ್ದು, ಗಂಭೀರ ಲೈಂಗಿಕ ಅಪರಾಧ ಎಸಗಿದವರಿಗೆ ಯಾವುದೇ ಕಾರಣಕ್ಕೂ ತಾತ್ಕಾಲಿಕ ಬಿಡುಗಡೆ ನೀಡಬಾರದು ಎಂದು ಒತ್ತಾಯಿಸಿದೆ.

ಒಂದು ವೇಳೆ ಅನಿವಾರ್ಯ ಪರಿಸ್ಥಿತಿಯಲ್ಲಿ ಬಿಡುಗಡೆ ಮಾಡಬೇಕಾದ ಸಂದರ್ಭ ಬಂದರೆ, ಅಪರಾಧಿಗಳ ಮೇಲೆ ಎಲೆಕ್ಟ್ರಾನಿಕ್ ಮಾನಿಟರಿಂಗ್ ಮೂಲಕ ನಿರಂತರ ನಿಗಾ ಇಡುವುದು ಮತ್ತು ಸಂತ್ರಸ್ತ ಕುಟುಂಬದೊಂದಿಗೆ ಸಮಾಲೋಚನೆ ನಡೆಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಆಯೋಗ ತಿಳಿಸಿದೆ.

ಅಲ್ಲದೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ವೇಗದೂತ ನ್ಯಾಯಾಲಯಗಳ ಸ್ಥಾಪನೆ ಮತ್ತು ತನಿಖಾ ಪ್ರಕ್ರಿಯೆಯಲ್ಲಿ ತಜ್ಞರ ನೇಮಕಕ್ಕೆ ಆಯೋಗವು ಒತ್ತು ನೀಡಿದೆ.

ಸ್ಥಳೀಯ ಮಟ್ಟದಲ್ಲಿ ಪೊಲೀಸರು ಇಂತಹ ಹಳೆಯ ಅಪರಾಧಿಗಳ ಪಟ್ಟಿಯನ್ನು ನಿರ್ವಹಿಸಬೇಕು ಮತ್ತು ಅವರ ನಡವಳಿಕೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ನಿಯಮಿತವಾಗಿ ವರದಿ ಸಲ್ಲಿಸಬೇಕು ಎಂದು ಆಯೋಗವು ಸೂಚನೆ ನೀಡಿದೆ. ನಸ್ರಾಪುರ ಪ್ರಕರಣವು ಪುಣೆ ಜಿಲ್ಲೆಯಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಕೂಡ ಈ ಬರ್ಬರ ಕೃತ್ಯ ಎಸಗಿದ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ನಡುವೆ ಪುಣೆ ನ್ಯಾಯಾಲಯವು ಆರೋಪಿಯ ಪೊಲೀಸ್ ಕಸ್ಟಡಿಯನ್ನು ಮೇ 12 ರವರೆಗೆ ವಿಸ್ತರಿಸಿದೆ.

You cannot copy content of this page

Exit mobile version