Home ರಾಜ್ಯ ದಾವಣಗೆರೆ ದಾವಣಗೆರೆಯಲ್ಲಿ ವರ್ಕೌಟ್ ಆಗದ ಅಹಿಂದ ಸೂತ್ರ: ಕಾಂಗ್ರೆಸ್ ಹಿನ್ನಡೆಗೆ ಸ್ಥಳೀಯ ನಾಯಕರ ಅಸಹಕಾರವೇ ಕಾರಣ ಎಂದ...

ದಾವಣಗೆರೆಯಲ್ಲಿ ವರ್ಕೌಟ್ ಆಗದ ಅಹಿಂದ ಸೂತ್ರ: ಕಾಂಗ್ರೆಸ್ ಹಿನ್ನಡೆಗೆ ಸ್ಥಳೀಯ ನಾಯಕರ ಅಸಹಕಾರವೇ ಕಾರಣ ಎಂದ ಸಚಿವ ಸತೀಶ್ ಜಾರಕಿಹೊಳಿ

0

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಥಳೀಯ ನಾಯಕರ ನಡುವಿನ ಭಿನ್ನಮತದಿಂದಾಗಿ ಕಾಂಗ್ರೆಸ್ ಪಕ್ಷದ ಗೆಲುವಿನ ಅಂತರ ಕಡಿಮೆಯಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಾಗಲಕೋಟೆ ಉಪಚುನಾವಣೆಯಲ್ಲಿ ಅಹಿಂದ ಸೂತ್ರ ಯಶಸ್ಸು ತಂದುಕೊಟ್ಟಿತು. ಆದರೆ ದಾವಣಗೆರೆ ದಕ್ಷಿಣದಲ್ಲಿ ಇದೇ ಸೂತ್ರ ಸಂಪೂರ್ಣವಾಗಿ ಕೈಹಿಡಿಯಲಿಲ್ಲ. ಪಕ್ಷದ ಒಳಗಿನ ಭಿನ್ನಮತವೇ ಇದಕ್ಕೆ ಪ್ರಮುಖ ಕಾರಣ. ಒಂದು ವೇಳೆ ಅತೃಪ್ತಿ ಇಲ್ಲದಿದ್ದರೆ ಕಾಂಗ್ರೆಸ್ 20,000ಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸುತ್ತಿತ್ತು” ಎಂದರು.

ಉಪಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟು ಬೆಂಬಲಿಸಿದ್ದಾರೆ ಎಂದು ಪ್ರತಿಪಾದಿಸಿದ ಅವರು, “ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಎರಡು ಕ್ಷೇತ್ರಗಳ ಜಯವು ಕಾಂಗ್ರೆಸ್ ಪರವಾದ ಅಲೆ ಇರುವುದನ್ನು ಸಾಬೀತುಪಡಿಸಿದೆ. ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‌ನ ಕೆಲವು ಮತಗಳು ಬಿಜೆಪಿಗೆ ಹಾಗೂ ಬಿಜೆಪಿಯ ಕೆಲವು ಮತಗಳು ಕಾಂಗ್ರೆಸ್‌ಗೆ ವರ್ಗಾವಣೆಯಾಗಿವೆ” ಎಂದು ವಿಶ್ಲೇಷಿಸಿದರು.

ತಮಿಳುನಾಡು ರಾಜಕೀಯ ಬೆಳವಣಿಗೆಯ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “ಸಾರ್ವತ್ರಿಕ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡುವುದು ಸಂಪ್ರದಾಯ. ಸದನದಲ್ಲಿ ಬಹುಮತ ಸಾಬೀತುಪಡಿಸುವ ಜವಾಬ್ದಾರಿ ಆ ಪಕ್ಷದ ಮೇಲಿರುತ್ತದೆ. ಆದರೆ ತಮಿಳುನಾಡು ರಾಜ್ಯಪಾಲರ ನಡೆ ಅತೃಪ್ತಿ ತಂದಿದೆ. ಟಿವಿಕೆ (TVK) ಮುಖ್ಯಸ್ಥ ವಿಜಯ್ ಅವರಿಗೆ ಅನುಮತಿ ನಿರಾಕರಿಸುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಕಾಂಗ್ರೆಸ್ ಇದನ್ನು ತೀವ್ರವಾಗಿ ಖಂಡಿಸುತ್ತದೆ” ಎಂದು ಹೇಳಿದರು.

You cannot copy content of this page

Exit mobile version