ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆಯಿಂದ ಪರದಾಡುತ್ತಿರುವ ಜನಸಾಮಾನ್ಯರ ಪಾಲಿಗೆ ದುಬಾರಿ ಪೆಟ್ರೋಲ್, ಡೀಸೆಲ್ ಬೆಲೆಗಳು ಮತ್ತಷ್ಟು ಸಮಸ್ಯೆಗೆ ಕಾರಣವಾಗುತ್ತಿದೆ. ಸದ್ಯದಲ್ಲೇ ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಬರಲಿರುವುದರಿಂದ ಕೇಂದ್ರವು ಅವುಗಳ ಬೆಲೆಯನ್ನು ಕಡಿಮೆ ಮಾಡುತ್ತದೆ ಎಂದು ಜನರು ನಿರೀಕ್ಷಿಸುತ್ತಿದ್ದಾರೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ ಕಚ್ಚಾ ತೈಲ ಬೆಲೆ 9 ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದ್ದರೂ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ದೇಶೀಯವಾಗಿ ಇಂಧನ ಬೆಲೆಯನ್ನು ಇನ್ನೂ ಇಳಿಸಿಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 70 ಡಾಲರ್‌ಗಿಂತ ಕೆಳಕ್ಕೆ ತಲುಪಿದೆ. ಆದರೆ, ದೇಶೀಯವಾಗಿ ಲೀಟರ್ ಪೆಟ್ರೋಲ್ ಬೆಲೆ ರೂ. 109, ಡೀಸೆಲ್ ಬೆಲೆ ರೂ. 97 ಇದೆ. ಈ ನಡುವೆ, 2014ರಲ್ಲಿ ಮೊಟ್ಟಮೊದಲ ಬಾರಿಗೆ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಲೀಟರ್ ಪೆಟ್ರೋಲ್ ಬೆಲೆ ರೂ.71 ಇತ್ತು, ಈಗ ಅದು ರೂ.109ಕ್ಕೆ ಏರಿಕೆಯಾಗಿದೆ. ಆಗ ಡೀಸೆಲ್ ಬೆಲೆ ಲೀಟರಿಗೆ 55 ರೂಪಾಯಿಗಳಷ್ಟಿತ್ತು ಅದು ಈಗ 97 ರೂ. ತಲುಪಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಾದಾಗ ಪೆಟ್ರೋಲ್ ದರ ಏರಿಸಿದ ಎನ್‌ಡಿಎ ಸರ್ಕಾರ ಬೆಲೆ ಕಡಿಮೆಯಾದಾಗ ಬೆಲೆ ಇಳಿಸಲಿಲ್ಲ. ಇದರಿಂದ ಜನಸಾಮಾನ್ಯರಿಗೆ ಸಿಗಬೇಕಾದ ಪ್ರಯೋಜನಗಳು ಸಿಗುತ್ತಿಲ್ಲ. ವಿವರವಾಗಿ ಹೇಳುವುದಾದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾದರೆ, ದೇಶದಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗಬೇಕು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕೇಂದ್ರ ಇಂಧನ ಬೆಲೆ ಏರಿಕೆ ಮಾಡುತ್ತಿದೆ. ಇದಕ್ಕಾಗಿ ಅಬಕಾರಿ ಸುಂಕದ ಹೆಸರಿನಲ್ಲಿ ಹೆಚ್ಚುವರಿ ಸುಂಕ ವಿಧಿಸಲಾಗುತ್ತದೆ.
ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಶೇ.109.91ರಷ್ಟು ಹೆಚ್ಚಿಸಿದ್ದರೆ, ಡೀಸೆಲ್ ಮೇಲಿನ ತೆರಿಗೆಯನ್ನು ಶೇ.343.82ರಷ್ಟು ಹೆಚ್ಚಿಸಲಾಗಿದೆ ಎಂದು ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶದ ಅಂಕಿಅಂಶಗಳು ಹೇಳುತ್ತವೆ. ಶೀಘ್ರದಲ್ಲೇ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.