ಚೆನ್ನೈ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಮತ್ತೊಂದು ದೊಡ್ಡ ಯುದ್ಧಕ್ಕೆ ತಮಿಳುನಾಡು (Tamil Nadu) ಸರ್ಕಾರ ಸಜ್ಜಾಗುತ್ತಿದೆ. ತಮಿಳುನಾಡಿನಲ್ಲಿ ಇನ್ನು ಮುಂದೆ ಹಿಂದಿ (Hindi) ಭಾಷೆಯ ಮಾತು ಕೇಳಬಾರದು, ಕಾಣಿಸಬಾರದು ಎಂಬ ಉದ್ದೇಶದಿಂದ ಹಿಂದಿ ಭಾಷೆಯ ಬಳಕೆಯ ಮೇಲೆ ನಿಷೇಧ ಹೇರಲು ಡಿಎಂಕೆ ಸರ್ಕಾರ ಸಿದ್ಧತೆ ನಡೆಸುತ್ತಿದೆ.
ರಾಜ್ಯಾದ್ಯಂತ ಇರುವ ಹಿಂದಿ ಜಾಹೀರಾತು ಫಲಕಗಳು, ಹಿಂದಿ ಚಲನಚಿತ್ರಗಳು ಮತ್ತು ಹಿಂದಿ ಹಾಡುಗಳ ಪ್ರಸಾರದ ಮೇಲೆ ನಿಷೇಧ ಹೇರಲು ಸರ್ಕಾರ ಚಿಂತನೆ ನಡೆಸಿದೆ. ಈ ನಿಷೇಧಕ್ಕೆ ಸಂಬಂಧಿಸಿದ ಮಸೂದೆಯನ್ನು ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿತ್ತು ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ.
ಆದರೆ, ಈ ಮಸೂದೆಯನ್ನು ಮಂಡಿಸಿದರೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆ ಇರುವುದರಿಂದ, ಸರ್ಕಾರವು ಸದ್ಯಕ್ಕೆ ಮಸೂದೆಯನ್ನು ಮಂಡಿಸುವ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ, ಹಿಂದಿ ಭಾಷೆಯ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಮೂಲಕ ಕೇಂದ್ರ ಸರ್ಕಾರದೊಂದಿಗೆ ಮತ್ತೊಮ್ಮೆ ಸಂಘರ್ಷಕ್ಕೆ ಇಳಿಯಲು ಎಂ. ಕೆ. ಸ್ಟಾಲಿನ್ ಸರ್ಕಾರ ಉತ್ಸುಕವಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.