ಕಲಬುರಗಿ: ಸರ್ಕಾರಿ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಬೆನ್ನಲ್ಲೇ, ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ವಾಕ್ಸಮರ ಆರಂಭಗೊಂಡಿದೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯಾದ ಕಲಬುರಗಿಯಲ್ಲೇ ‘ಐ ಲವ್ ಆರ್‌ಎಸ್‌ಎಸ್’ ಎಂಬ ಪೋಸ್ಟರ್ ಅಭಿಯಾನವನ್ನು ಪ್ರಾರಂಭಿಸುವ ಮೂಲಕ ನೇರ ಸವಾಲನ್ನು ಒಡ್ಡಿದ್ದಾರೆ.
ಮಂಗಳವಾರ ಕಲಬುರಗಿ ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಬೀದಿಗಿಳಿದು, ‘ಯಾರು ಭಾರತವನ್ನು ಪ್ರೀತಿಸುತ್ತಾರೋ, ಅವರು ಆರ್‌ಎಸ್‌ಎಸ್ ಅನ್ನೂ ಪ್ರೀತಿಸುತ್ತಾರೆ’ ಎಂಬ ಘೋಷವಾಕ್ಯವಿರುವ ಪೋಸ್ಟರ್‌ಗಳನ್ನು ಅಂಟಿಸಿದರು. ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಸೇರಿದಂತೆ ಅನೇಕ ಮುಖಂಡರು ಮತ್ತು ಯುವ ಕಾರ್ಯಕರ್ತರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಚಿವ ಪ್ರಿಯಾಂಕ್ ಖರ್ಗೆ ಅವರ ನಿಲುವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರ ಆಕ್ರೋಶ
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಾಯಕರು, ‘ಸಂಘ ಪರಿವಾರವು ದೇಶಾದ್ಯಂತ ದೇಶಭಕ್ತಿಯನ್ನು ಪಸರಿಸುವ ಮತ್ತು ಯುವಕರಿಗೆ ರಾಷ್ಟ್ರಪ್ರೇಮದ ಪಾಠ ಹೇಳುವ ಸಂಸ್ಥೆಯಾಗಿದೆ. ಇದನ್ನು ಸಚಿವರಿಗೆ ಅರಿಯುವ ಶಕ್ತಿಯಿಲ್ಲವೇ? ಸಂಘದ ಜನ್ಮ ಶತಾಬ್ದಿ ವರ್ಷಾಚರಣೆಯ ಹೊಸ್ತಿಲಲ್ಲಿ ಇಡೀ ದೇಶವೇ ಸಂಭ್ರಮಿಸುತ್ತಿರುವಾಗ, ಪ್ರಿಯಾಂಕ್ ಖರ್ಗೆ ಅವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ’ ಎಂದು ಆಕ್ರೋಶ ಹೊರಹಾಕಿದರು.
ಪ್ರಿಯಾಂಕ್ ಖರ್ಗೆ ಅವರ ಪತ್ರಕ್ಕೆ ರಾಜ್ಯದ ಇತರೆಡೆಯಿಂದಲೂ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಜಗದೀಶ ಶೆಟ್ಟರ್ ವಾಗ್ದಾಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ ಶೆಟ್ಟರ್ ಅವರು, ‘ಪ್ರಿಯಾಂಕ್ ಖರ್ಗೆ ಅವರಿಗೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡದಿದ್ದರೆ ತಿಂದ ಅನ್ನವೇ ಜೀರ್ಣವಾಗುವುದಿಲ್ಲ. ಅವರು ತಮ್ಮ ತಂದೆಯ ವರ್ಚಸ್ಸಿನಿಂದ ಮತ್ತು ವಶೀಲಿಯಿಂದ ಮಂತ್ರಿಯಾದವರು. ಇಲ್ಲದಿದ್ದರೆ ಮೊದಲ ಬಾರಿಗೆ ಶಾಸಕರಾದವರಿಗೆ ಮಂತ್ರಿ ಸ್ಥಾನ ಸಿಗಲು ಹೇಗೆ ಸಾಧ್ಯ? ಇವರು ಏನೇ ಮಾಡಿದರೂ ಆರ್‌ಎಸ್‌ಎಸ್ ಅನ್ನು ಒಂದು ಕೂದಲನ್ನೂ ಅಲ್ಲಾಡಿಸಲು ಸಾಧ್ಯವಿಲ್ಲ,’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಪ್ರತಾಪ್ ಸಿಂಹ ಸವಾಲು: ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ‘ಆರ್‌ಎಸ್‌ಎಸ್ ಅನ್ನು ನಿಷೇಧಿಸುವ ಭ್ರಮೆಯಿಂದ ಹೊರಬನ್ನಿ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಕುಟುಂಬದಿಂದಲೇ ಅದು ಸಾಧ್ಯವಾಗಿಲ್ಲ. ಇನ್ನು ನೆಹರು ಅವರ ಮರಿ ಮೊಮ್ಮಗಳ ಹೆಸರಿಟ್ಟುಕೊಂಡಿರುವ ನಿಮ್ಮಿಂದ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಇದು ಸಾಧ್ಯವಾಗುವುದೇ?’ ಎಂದು ನೇರವಾಗಿ ಪ್ರಶ್ನಿಸುವ ಮೂಲಕ ಕಾಂಗ್ರೆಸ್‌ಗೆ ಇತಿಹಾಸವನ್ನು ನೆನಪಿಸಿದರು.