Home ದೆಹಲಿ ಪೇಪರ್ ಲೀಕ್ ಹಾವಳಿ, ಶಿಕ್ಷಣ ಬಜೆಟ್ ಶೇ.50 ಕಡಿತ: ಸರ್ಕಾರದ ನೀತಿಗಳಿಗೆ ಬಲಿಯಾದ ವಿದ್ಯಾರ್ಥಿಗಳ ಡಾಕ್ಟರ್‌...

ಪೇಪರ್ ಲೀಕ್ ಹಾವಳಿ, ಶಿಕ್ಷಣ ಬಜೆಟ್ ಶೇ.50 ಕಡಿತ: ಸರ್ಕಾರದ ನೀತಿಗಳಿಗೆ ಬಲಿಯಾದ ವಿದ್ಯಾರ್ಥಿಗಳ ಡಾಕ್ಟರ್‌ ಪದವಿಯ ಕನಸು

0

ಕೇಂದ್ರದ ಎನ್‌ಡಿಎ ಸರ್ಕಾರವು ರಾಷ್ಟ್ರೀಯ ಮಟ್ಟದ ಪ್ರಮುಖ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸಲು ವಿಫಲವಾಗಿದ್ದು, ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿವೆ. ನೀಟ್-ಯುಜಿ, ಎಸ್‌ಎಸ್‌ಸಿ, ಸಿಯುಇಟಿ ಮತ್ತು ಜೆಇಇ ಅಡ್ವಾನ್ಸ್‌ಡ್‌ನಂತಹ ದೇಶದ ಅತ್ಯುನ್ನತ ಪರೀಕ್ಷೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮಗಳು, ಪೇಪರ್ ಸೋರಿಕೆ ಹಾಗೂ ಪರೀಕ್ಷೆಗಳ ರದ್ದತಿಯಿಂದ ಬೇಸತ್ತು ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ಘೋರ ನಿರ್ಧಾರಗಳಿಗೆ ಶರಣಾಗುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು, “ಈಗಿನ ಕಾಲದಲ್ಲಿ ಪರೀಕ್ಷೆಗಳನ್ನು ಚೆನ್ನಾಗಿ ಬರೆಯುವುದಷ್ಟೇ ಅಲ್ಲ, ಬರೆದ ಪರೀಕ್ಷೆಯ ಪೇಪರ್ ಲೀಕ್ ಆಗಬಾರದು ಮತ್ತು ಪರೀಕ್ಷೆ ರದ್ದಾಗಬಾರದು ಎಂದು ದೇವರಲ್ಲಿ ಪ್ರಾರ್ಥಿಸಬೇಕಾದ ದುಸ್ಥಿತಿ ಬಂದಿದೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪೇಪರ್ ಲೀಕೇಜ್‌ಗಳ ಕೇಂದ್ರಸ್ಥಾನವಾದ ಸರ್ಕಾರಗಳು: ಕಳೆದ 12 ವರ್ಷಗಳ ಬಿಜೆಪಿ ಆಡಳಿತದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಎಂಬುದು ನಿತ್ಯಕೃತ್ಯವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಪೇಪರ್ ಲೀಕ್ ಹಿನ್ನೆಲೆಯಲ್ಲಿ ನೀಟ್-ಯುಜಿ (NEET-UG 2026) ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಉತ್ತರ ಪ್ರದೇಶ ಮತ್ತು ಬಿಹಾರದ ಎಸ್‌ಎಸ್‌ಸಿ ಜಿಡಿ ಕಾನ್ಸ್ಟೆಬಲ್ ಪರೀಕ್ಷೆಗಳೂ ಸಹ ಸೋರಿಕೆಯಾಗಿ ರದ್ದಾಗಿದ್ದವು. ಇನ್ನು ಜೆಇಇ ಅಡ್ವಾನ್ಸ್‌ಡ್ ಪರೀಕ್ಷಾರ್ಥಿಗಳ ವೈಯಕ್ತಿಕ ಡೇಟಾ ಲೀಕ್ ಆಗಿರುವುದು ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದೆ. ಸಿಯುಇಟಿ-ಯುಜಿ ಪರೀಕ್ಷೆಯು ತಾಂತ್ರಿಕ ದೋಷದಿಂದ ತಡವಾಗಿ ಆರಂಭಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ಇಂತಹ ಹಗರಣಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ಗುಜರಾತ್‌ನಲ್ಲಿ ಕಳೆದ 9 ವರ್ಷಗಳಲ್ಲಿ 13 ಪರೀಕ್ಷಾ ಪೇಪರ್‌ಗಳು ಲೀಕ್ ಆಗಿದ್ದರೆ, ಹರಿಯಾಣದಲ್ಲಿ 28 ಪೇಪರ್‌ಗಳು ಸೋರಿಕೆಯಾಗಿವೆ. ಉತ್ತರ ಪ್ರದೇಶದಲ್ಲಿ ಕೇವಲ ಮೂರು ವರ್ಷಗಳಲ್ಲಿ 6 ಪ್ರಮುಖ ಪರೀಕ್ಷೆಗಳ ಪೇಪರ್ ಲೀಕ್ ಆಗಿವೆ. ಅಸ್ಸಾಂನಲ್ಲಿ ಕೇವಲ ₹100 ರೂಪಾಯಿಗೆ 10ನೇ ತರಗತಿಯ ಪ್ರಶ್ನೆಪತ್ರಿಕೆಯನ್ನು ಸಂತೆ ಸರಕಿನಂತೆ ಮಾರಾಟ ಮಾಡಲಾಗಿತ್ತು ಎಂದು ಅಲ್ಲಿನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೇ ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದು ದೇಶಾದ್ಯಂತ ಸಂಚಲನ ಮೂಡಿಸಿತ್ತು.

ಶಿಕ್ಷಣ ರಂಗದ ಬಜೆಟ್‌ನಲ್ಲಿ ಶೇ. 50 ರಷ್ಟು ಕಡಿತ: ಒಂದೆಡೆ ಪರೀಕ್ಷಾ ವ್ಯವಸ್ಥೆ ಹದಗೆಡುತ್ತಿದ್ದರೆ, ಮತ್ತೊಂದೆಡೆ ಎನ್‌ಡಿಎ ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ನೀಡುವ ಅನುದಾನವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ. 2014-15ರ ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶೇ. 4.61 ರಷ್ಟು ಹಣವನ್ನು ಮೀಸಲಿಡಲಾಗಿತ್ತು. ಆದರೆ, 2024-25ರ ವೇಳೆಗೆ ಈ ಪ್ರಮಾಣವನ್ನು ಶೇ. 2.5 ಕ್ಕೆ ಇಳಿಸಲಾಗಿದೆ. ಅಂದರೆ ಕಳೆದ ಹತ್ತು ವರ್ಷಗಳಲ್ಲಿ ಶಿಕ್ಷಣದ ಬಜೆಟ್ ಪಾಪನ್ನು ಅರ್ಧಕ್ಕರ್ಧ (ಶೇ. 50 ರಷ್ಟು) ಕಡಿತಗೊಳಿಸಿ ಇಡೀ ವ್ಯವಸ್ಥೆಯನ್ನು ನಿರ್ಲಕ್ಷಿಸಲಾಗಿದೆ.

“ಮತ್ತೆ ಪರೀಕ್ಷೆ ಬರೆಯುವ ಧೈರ್ಯ ನನಗಿಲ್ಲ” – ಕಣ್ಣೀರಿಟ್ಟ ನೀಟ್ ವಿದ್ಯಾರ್ಥಿನಿ: ನೀಟ್ ಪೇಪರ್ ಲೀಕ್ ವಿವಾದದಿಂದಾಗಿ ಮತ್ತೊಬ್ಬ ಹೆಣ್ಣುಮಗಳು ಬಲಿಯಾಗಿದ್ದಾಳೆ. ಮಧ್ಯಪ್ರದೇಶದ 18 ವರ್ಷದ ವಿದ್ಯಾರ್ಥಿನಿ ಆಕಾಂಕ್ಷಾ ಚತುರ್ವೇದಿ ಬರೆದಿರುವ ಡೆತ್‌ನೋಟ್ ಆನ್‌ಲೈನ್‌ನಲ್ಲಿ ಲಭ್ಯವಾಗಿದ್ದು, ಇಡೀ ದೇಶ ಕಣ್ಣೀರು ಇಡುವಂತೆ ಮಾಡಿದೆ. ನೀಟ್ ಪರೀಕ್ಷೆಯ ಅಕ್ರಮಗಳು ಮತ್ತು ಪೇಪರ್ ಲೀಕ್ ಸುದ್ದಿಯಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದ ಆಕಾಂಕ್ಷಾ, ಮೇ 20 ರಂದು ನಾಗ್ಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅವಳು ತನ್ನ ಪೋಷಕರಿಗೆ ಬರೆದ ಪತ್ರದಲ್ಲಿ, “ಅಮ್ಮಾ, ಅಪ್ಪಾ… ನಾನು ಚೆನ್ನಾಗಿ ಓದಿ ಡಾಕ್ಟರ್ ಆಗುತ್ತೇನೆ ಎಂದು ನೀವು ನನ್ನ ಮೇಲೆ ಅಪಾರ ನಂಬಿಕೆ ಇಟ್ಟಿದ್ದೀರಿ. ಆದರೆ ನನಗೆ ಮತ್ತೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ. ಮೊದಲ ಪರೀಕ್ಷೆಯಲ್ಲಿ ನನಗೆ ಒಳ್ಳೆಯ ಅಂಕಗಳೇ ಬಂದಿದ್ದವು. ಆದರೆ ಎರಡನೇ ಬಾರಿ ನಡೆಯುವ ಪರೀಕ್ಷೆಯಲ್ಲೂ ನಾನು ಅಷ್ಟೇ ಚೆನ್ನಾಗಿ ಬರೆಯುತ್ತೇನೆ ಎಂಬ ಭರವಸೆ ನನಗಿಲ್ಲ. ನನ್ನನ್ನು ಕ್ಷಮಿಸಿ, ನಾನು ಎಲ್ಲವನ್ನೂ ಹಾಳು ಮಾಡಿಕೊಂಡೆ” ಎಂದು ಬರೆದಿದ್ದಾಳೆ.

ಆಕಾಂಕ್ಷಾಳ ತಂದೆ ಕೃಷ್ಣಕುಮಾರ್ ಅವರು ಒಬ್ಬ ಬಡ ರೈತನಾಗಿದ್ದು, ಮಗಳನ್ನು ಡಾಕ್ಟರ್ ಮಾಡಲು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ₹3 ಲಕ್ಷ ಸಾಲ ಮಾಡಿದ್ದರು. ಅಲ್ಲದೆ ಮಗಳ ಕೋಚಿಂಗ್‌ಗಾಗಿ ನಾಗ್ಪುರದಲ್ಲಿ ಸ್ವತಃ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದರು ಎಂಬುದು ಇಡೀ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

You cannot copy content of this page

Exit mobile version