ದೆಹಲಿ: ಈ ವರ್ಷ ಜಾರಿಗೆ ತಂದಿರುವ ಹೊಸ ಆನ್‌ಸ್ಕ್ರೀನ್ ಮಾರ್ಕಿಂಗ್ (OSM) ವಿಧಾನದಿಂದಾಗಿ ಈಗಾಗಲೇ ತೀವ್ರ ಟೀಕೆಗೆ ಒಳಗಾಗಿರುವ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE), ಈಗ ಮತ್ತೊಂದು ದೊಡ್ಡ ಎಡವಟ್ಟು ಮಾಡಿಕೊಳ್ಳುವ ಮೂಲಕ ವಿವಾದಕ್ಕೆ ಸಿಲುಕಿದೆ. 12ನೇ ತರಗತಿಯ ಉತ್ತರ ಪತ್ರಿಕೆಗಳನ್ನು ಅರ್ಹ ಶಿಕ್ಷಕರಿಂದ ಮೌಲ್ಯಮಾಪನ ಮಾಡಿಸುವ ಬದಲು, 10ನೇ ತರಗತಿಗೆ ಬೋಧಿಸುವ ಶಿಕ್ಷಕರಿಂದ ಮೌಲ್ಯಮಾಪನ ಮಾಡಿಸಿರುವುದು ಬೆಳಕಿಗೆ ಬಂದಿದೆ. ಢೆಹಲಿ ಪೇರೆಂಟ್ಸ್ ಅಸೋಸಿಯೇಷನ್‌ನ ಅಪರಾಜಿತಾ ಗೌತಮ್ ಅವರು ಈ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ನಿಯಮಗಳ ಪ್ರಕಾರ, 12ನೇ ತರಗತಿಯ ಉತ್ತರ ಪತ್ರಿಕೆಗಳನ್ನು ಸ್ನಾತಕೋತ್ತರ ಶಿಕ್ಷಕರಿಂದ (PGTs) ಮೌಲ್ಯಮಾಪನ ಮಾಡಿಸಬೇಕಾಗುತ್ತದೆ. ಆದರೆ, ಪಿಜಿಟಿ ಶಿಕ್ಷಕರ ಕೊರತೆಯ ನೆಪ ಒಡ್ಡಿ, ಕೇವಲ 10ನೇ ತರಗತಿಯವರೆಗೆ ಮಾತ್ರ ಬೋಧಿಸುವ ಅರ್ಹತೆ ಮತ್ತು ಸಾಮರ್ಥ್ಯ ಹೊಂದಿರುವ ತರಬೇತಿ ಪಡೆದ ಪದವೀಧರ ಶಿಕ್ಷಕರಿಂದ (TGTs) 12ನೇ ತರಗತಿಯ ಪ್ರಮುಖ ಪೇಪರ್‌ಗಳನ್ನು ಮೌಲ್ಯಮಾಪನ ಮಾಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಅಲ್ಲದೆ, ಈ ಶಿಕ್ಷಕರಿಗೆ ನೀಡಲಾದ ಆನ್‌ಸ್ಕ್ರೀನ್ ಡಿಜಿಟಲ್ ಮೌಲ್ಯಮಾಪನದ ತರಬೇತಿಯೂ ಅತ್ಯಂತ ಕಳಪೆಯಾಗಿತ್ತು. ಕೇವಲ ಕೆಲವು ಮಾದರಿ ಪೇಪರ್‌ಗಳನ್ನು ಮಾತ್ರ ತರಾತುರಿಯಲ್ಲಿ ತಿದ್ದಿಸಿ ತರಬೇತಿ ಮುಗಿಸಲಾಗಿದೆ. ಇಂತಹ ಅನರ್ಹ ಶಿಕ್ಷಕರಿಂದ ಜವಾಬು ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿಸುವ ಮೂಲಕ ಸಿಬಿಎಸ್‌ಇ ಮಂಡಳಿಯು ಲಕ್ಷಾಂತರ 12ನೇ ತರಗತಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದೆ ಎಂದು ಪೋಷಕರ ಸಂಘಟನೆ ತೀವ್ರ ಆಕ್ರೋಶ ಹೊರಹಾಕಿದೆ.
