Thursday, September 25, 2025

ಸತ್ಯ | ನ್ಯಾಯ |ಧರ್ಮ

ಬಿಹಾರದಿಂದಲೇ ಎನ್‌ಡಿಎ ಸೋಲಿಗೆ ಕಾಂಗ್ರೆಸ್ ನಾಂದಿ ಹಾಡಲಿದೆ: ಮಲ್ಲಿಕಾರ್ಜುನ ಖರ್ಗೆ

ಪಟ್ನಾ: ಬಿಹಾರದಿಂದಲೇ ಎನ್‌ಡಿಎ ಸೋಲಿಗೆ ನಾಂದಿ ಹಾಡುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಮಹಾತ್ಮ ಗಾಂಧಿಯವರು ಸತ್ಯಾಗ್ರಹಕ್ಕೆ ನಾಂದಿ ಹಾಡಿದ ಈ ರಾಜ್ಯವು, ಪ್ರಸ್ತುತ ನಡೆಯುತ್ತಿರುವ ಮತಗಳ್ಳತನದ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು. ಬುಧವಾರ ಪಟ್ನಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹಲವು ಪಕ್ಷದ ನಾಯಕರು ಪಾಲ್ಗೊಂಡಿದ್ದು, ಎರಡು ನಿರ್ಣಯಗಳನ್ನು ಅಂಗೀಕರಿಸಲಾಯಿತು.

ರಾಹುಲ್ ಗಾಂಧಿ ಅತ್ಯಂತ ಹಿಂದುಳಿದ ವರ್ಗಗಳಿಗಾಗಿ (EBC) ಮುಖ್ಯಮಂತ್ರಿ ನೀತೀಶ್ ಕುಮಾರ್ ಏನನ್ನೂ ಮಾಡಿಲ್ಲ. ಕಳೆದ 20 ವರ್ಷಗಳಿಂದ ಅವರು ಈ ವರ್ಗವನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ, ಮೀಸಲಾತಿ ಮೇಲಿನ 50% ಮಿತಿಯನ್ನು ತೆಗೆದುಹಾಕುತ್ತೇವೆ. ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಇಬಿಸಿ ವರ್ಗಗಳಿಗೆ 10 ಅಂಶಗಳ ಫಾರ್ಮುಲಾವನ್ನು ಜಾರಿಗೆ ತರುತ್ತೇವೆ.

ಖಾಸಗಿ ಸಂಸ್ಥೆಗಳಲ್ಲೂ ಇಬಿಸಿ ಮೀಸಲಾತಿಯನ್ನು ಜಾರಿಗೊಳಿಸುತ್ತೇವೆ. ಅಧಿಕಾರಕ್ಕೆ ಬಂದ ತಕ್ಷಣ ಎಸ್ಸಿ, ಎಸ್ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಮಾದರಿಯಲ್ಲಿಯೇ ಇಬಿಸಿಗಳಿಗಾಗಿ ಪ್ರತ್ಯೇಕ ಕಾಯ್ದೆ ತರುತ್ತೇವೆ. ವಿದೇಶಾಂಗ ನೀತಿ ವೈಯಕ್ತಿಕ ಸ್ನೇಹದ ಆಧಾರದ ಮೇಲೆ ರೂಪಿತವಾಗುವುದಿಲ್ಲ. ಆದರೆ, ಪ್ರಧಾನಿ ಮೋದಿ ಭಾರತದ ವಿದೇಶಾಂಗ ನೀತಿಯನ್ನು ದುರ್ಬಲಗೊಳಿಸಿದ್ದಾರೆ.

‘ನಿತೀಶ್ ಮಾನಸಿಕವಾಗಿ ನಿವೃತ್ತರಾಗಿದ್ದಾರೆ’ – ಮಲ್ಲಿಕಾರ್ಜುನ ಖರ್ಗೆ

ನಮ್ಮ ಮತದಾರರ ಪಟ್ಟಿಗಳು ತಿರುಚಲ್ಪಡುತ್ತಿರುವ ಕಾರಣ, ಬಿಹಾರದಲ್ಲಿ ಸಿಡಬ್ಲ್ಯುಸಿ ಸಭೆ ಆಯೋಜಿಸಬೇಕಾಯಿತು. ನಾವು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ಪ್ರತಿಜ್ಞೆ ಮಾಡುತ್ತಿದ್ದೇವೆ. ಪ್ರಸ್ತುತ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಬಿಹಾರದಲ್ಲಿ ನಡೆದ ಈ ಸಂಚನ್ನು ದೇಶಾದ್ಯಂತ ಜಾರಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಲಕ್ಷಾಂತರ ಜನರ ಮತಗಳನ್ನು ಅಳಿಸಿಹಾಕಲು ಪಿತೂರಿ ನಡೆಯುತ್ತಿದೆ.

ನಿತೀಶ್ ಕುಮಾರ್ ಮಾನಸಿಕವಾಗಿ ನಿವೃತ್ತರಾಗಿದ್ದಾರೆ. ಈಗ ಬಿಜೆಪಿ ಅವರಿಗೆ ಹೊರೆಯಾಗಿ ಪರಿಗಣಿಸುತ್ತಿದೆ. ಪ್ರಧಾನಿ ತಮ್ಮ ಅತ್ಯಂತ ಆಪ್ತ ಮಿತ್ರರೆಂದು ಹೇಳಿಕೊಳ್ಳುವವರೇ ಈಗ ದೇಶಕ್ಕೆ ಅನೇಕ ತೊಂದರೆಗಳನ್ನು ತಂದಿದ್ದಾರೆ. ರಾಜತಾಂತ್ರಿಕವಾಗಿ ವಿಫಲವಾಗಿರುವ ಕಾರಣ ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page