Friday, September 20, 2024

ಸತ್ಯ | ನ್ಯಾಯ |ಧರ್ಮ

ತಿರುಪತಿ ಲಡ್ಡು ತಿಂದು ಅಪವಿತ್ರ ಆದ್ರಾ?

ತಿರುಪತಿ ದೇವಸ್ಥಾನದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಹಾಕಲಾಗಿದೆ ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಹೇಳಿಕೆಯು ದೇಶದಲ್ಲಿ ಕೋಲಾಹಲವನ್ನು ಹುಟ್ಟುಹಾಕಿದೆ, ಇದು ಆಡಳಿತಾರೂಢ ತೆಲುಗು ದೇಶಂ ಪಕ್ಷ ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ನಡುವೆ ಘರ್ಷಣೆಗೆ ಕಾರಣವಾಗಿದೆ.

ಸಾಮಜಿಕ ಜಾಲತಾಣಗಳಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಊಂಟಾಗಿದೆ ಎಂಬ ವಾದ ಒಂದು ಕಡೆಯಾದರೆ, ಈ ಪ್ರಕರಣವನ್ನು ಮುಂದಿಟ್ಟುಕೊಂಡು ಮಾಂಸಾಹಾರ ಸೇವನೆ ಮಾಡುವವರ ಬಗ್ಗೆ ಇರುವ ಸಾಂಪ್ರದಾಯಿಕ ಅಸಹಿಷ್ಣುತೆಯ ಬಗ್ಗೆ ಚರ್ಚೆಗಳಾಗುತ್ತಿವೆ.

ಈಗ ಈ ವಿವಾದ ಆಂದ್ರವನ್ನು ದಾಟಿ ದೇಶದಾದ್ಯಂತ ವ್ಯಾಪಿಸಿದೆ. ತಮ್ಮ ವಿರೋಧಿ ಪಾಲಯವನ್ನು ಹತ್ತಿಕ್ಕಲು ರಾಜಕೀಯ ಪಕ್ಷಗಳು ಇದನ್ನು ದಾಳವಾಗಿ ಮಾಡಿಕೊಂಡಿವೆ. 

ನಾಯ್ಡು ಮಾಡಿರುವ ಈ ಆರೋಪವು ದೇಶದ ಧಾರ್ಮಿಕ ಸೂಕ್ಷ್ಮತೆಗಳನ್ನು ಕುಟುಕಿದಂತಾಗಿದೆ. ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಎರಡೂ ಸಂಪೂರ್ಣ ತನಿಖೆಗೆ ಕರೆ ನೀಡುವಂತೆ ಆಗ್ರಹಿಸಿವೆ. ರಾಜಕೀಯ ಲಾಭಕ್ಕಾಗಿ ನಾಯ್ಡು ಈ ವಿವಾದ ಎಬ್ಬಿಸಿದ್ದಾರೆ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ.

ಇದರ ನಡುವೆ, ಈ ಪ್ರಕರಣದ ಬಗ್ಗೆ ಟ್ರೋಲ್‌, ವ್ಯಂಗಗಳು ಬರುತ್ತಿರುವುದರಿಂದ ನಾನು ಈ ಪ್ರಕರಣವನ್ನು ಆಹಾರ ಸಂಸ್ಕೃತಿಯ ದೃಷ್ಟಿಯಿಂದ ನೋಡುತ್ತೇನೆ.

ದೇವಸ್ಥಾನದ ಪ್ರಸಾದದಲ್ಲಿ ಪ್ರಾಣಿಜನ್ಯ ಕೊಬ್ಬು ಬಳಸಿದ್ದರೆ ಅದು ತಪ್ಪು. ಇದು ಇಷ್ಟು ವರ್ಷಗಳ ಕಾಲ ಸೇವಿಸುತ್ತಿದ್ದ ಭಕ್ತರಿಗೆ ಮಾಡಿದ ದ್ರೋಹ. ಇದರಲ್ಲಿ ಯಾವುದೇ ಸಂಶಯ ಇಲ್ಲ. ಮುಖ್ಯವಾಗಿ ಕಳಬೆರಕೆ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ಆದರೆ ಈ ಪ್ರಕರಣದ ನಂತರ “ಸಸ್ಯಹಾರ ಮಾತ್ರ ಸೇವನೆ ಮಾಡುವ ಶುದ್ಧ ಸಾತ್ವಿಕರು” ತಮ್ಮ ಒಳಗಿರುವ ಮಾಂಸಾಹಾರದ ಬಗೆಗಿನ ಅಸಹನೆಯನ್ನು ಇಲ್ಲವಾಗಿಸುತ್ತಾರೆಯೇ?

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿದ್ದಾರೆ ಎಂದು ಟಿವಿ ಚಾನೆಲ್‌ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿಯುಂಡೆಯುಗುಳುವ ಚರ್ಚೆಗಳು ನಡೆದವು. ಅವರನ್ನು ಹಿಂದೂ ವಿರೋಧಿ, ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದೆಲ್ಲಾ ಬಿಂಬಿಸಿದರು. 

ಕರ್ನಾಟಕದ ಶಾಲೆಗಳಲ್ಲಿ ಬಿಸಿಯೂಟದ ಜೊತೆಗೆ ಮಕ್ಕಳಿಗೆ ಮೊಟ್ಟೆ ಹಾಗೂ ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಕೊಡುವ ಪ್ರಸ್ತಾಪ ಬಂದಾಗ ದೊಡ್ಡ ವಿರೋಧ ವ್ಯಕ್ತವಾಯಿತು. ಉತ್ತರ ಪ್ರದೇಶದಲ್ಲಿ ಟಿಫಿನ್‌ ಬಾಕ್ಸ್‌ನಲ್ಲಿ ಮಾಂಸದ ಊಟ ತಂದ ಉತ್ತರ ಪ್ರದೇಶದ ಅಮ್ರೋಹದ ಮೂರನೇ ತರಗತಿಯ ಮಗುವನ್ನು ಶಾಲೆಯಿಂದ ಡಿಬಾರ್‌ ಮಾಡಲಾಯಿತು. ನೋಯ್ಡಾದ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಮಾಂಸಾಹಾರ ಇರುವ ಟಿಫಿನ್‌ ಬಾಕ್ಸ್‌ ನೀಡಬಾರದು ಎಂದು ಮಕ್ಕಳ ಮನೆಯವರಿಗೆ ಸರ್ಕ್ಯುಲರ್‌ ನೀಡಲಾಯಿತು.

ಕೇರಳದ ತಿರುವನಂತಪುರಂನ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಮಥಿಲಕಂ ಕಚೇರಿ ಆವರಣದಲ್ಲಿ ಮಾಂಸ ಸೇವಿಸಿದ ದೂರಿನ ಮೇರೆಗೆ ನೌಕರನೊಬ್ಬನನ್ನು ಅಮಾನತು ಮಾಡಲಾಯಿತು.

200 ಜೈನ ಸನ್ಯಾಸಿಗಳ ಪ್ರತಿಭಟನೆಯ ನಂತರ, ಈಗ ಗುಜರಾತ್‌ನ ಪಾಲಿಟಾನಾ ನಗರದಲ್ಲಿ ಮಾಂಸ ಮಾರಾಟ ಮಾಡುವುದು ಅಥವಾ ತಿನ್ನುವುದನ್ನು ಕಾನೂನುಬಾಹಿರ ಮಾಡಲಾಗಿದೆ. ಈ ನಿರ್ಧಾರದಿಂದಾಗಿ ಸುಮಾರು 250 ಮಾಂಸದ ಅಂಗಡಿಗಳಿಗೆ ಬೀಗ ಜಡಿಯಲಾಯಿತು. ರಾಜ್ಯದ ಇತರ ಭಾಗಗಳಲ್ಲೂ ಈ ರೀತಿಯ ನಿಯಮಗಳನ್ನು ತರಲು ಪ್ರೇರಣೆ ನೀಡಲಾಯಿತು. 

ಕರ್ನಾಟಕದಲ್ಲಿ ಆರ್‌ಜೆ ರ್ಯಾಪಿಡ್‌ ರಶ್ಮಿ ಎಂಬಾಕೆ ನಡೆಸಿದ ಪಾಡ್‌ಕಾಸ್ಟ್‌ನಲ್ಲಿ ರಾಜೇಂದ್ರ ಭಟ್ ಎಂಬಾತ ಮಾಂಸಾಹಾರದಿಂದ ತಾಮಸ ಗುಣ ಬರುತ್ತದೆ ಎಂದು ನಿರ್ಲಜ್ಜೆಯಿಂದ ಹೇಳಿಕೆ ನೀಡಿದ್ದಾನೆ. ಇದು ಕೇವಲ ರಾಜೇಂದ್ರ ಭಟ್‌ ಎಂಬಾತನ ಮನಸ್ಥಿತಿ ಮಾತ್ರವಲ್ಲ, ಮಾಂಸ ಸೇವನೆಯ ಬಗ್ಗೆ ʼಶುದ್ಧ ಸಾತ್ವಿಕರುʼ ಎಂದು ಘೋಷಿಸಿಕೊಂಡವರು ನೀಡುವ ಅವೈಜ್ಞಾನಿಕ ಕಾರಣ.

ಭಾರತದಲ್ಲಿ ಬೀಫ್‌ ಸೇವನೆ ಮಾಡಿದ ಕಾರಣಕ್ಕೆ ಸಾಯಲ್ಪಟ್ಟ ಸಾಲು ಸಾಲು ಜನರಿದ್ದಾರೆ. ಬೀಫ್‌ ಜೊತೆಗೆ ಇಸ್ಲಾಮನ್ನು ಜೋಡಿಸಿ ನೋಡುವವರು, ಬೀಫ್‌ ಅಲ್ಲದ ಮಾಂಸಾಹಾರದಲ್ಲಿ ತಾಮಸಿಕತೆಯನ್ನು ನೋಡುವುದು ವ್ಯಂಗ್ಯವಾದರೂ ಸತ್ಯ.

ಮಾಂಸಾಹಾರವನ್ನು ಅಸಹ್ಯ, ತಾಮಸಿಕ ಗುಣ ಹುಟ್ಟುತ್ತದೆ, ಕೊಳಕು ಎಂದೆಲ್ಲಾ ʼಶುದ್ಧ ಸಸ್ಯಹಾರಿಗಳುʼ ಪ್ರಚಾರ ಮಾಡಿದ್ದಾರೆ. ಇದರ ಸುತ್ತ ʼಅಸಹ್ಯತೆʼಯನ್ನು ಬೆಳೆಸಿದ್ದಾರೆ. ಈ ಕಾರಣದಿಂದಾಗಿ ಮಾಂಸಹಾರ ಸೇವಿಸಿ ಮಾಡಬಾರದ ಅನೇಕ ಕರ್ಮಗಳನ್ನು ಪಟ್ಟಿ ಮಾಡುತ್ತಾರೆ.

ಮಧ್ಯಪ್ರದೇಶ ಸರ್ಕಾರವು ನರ್ಮದಾ ನದಿಯ ಉದ್ದಕ್ಕೂ ಇರುವ ದೇವಾಲಯಗಳ ಪಟ್ಟಣಗಳಲ್ಲಿ ಮದ್ಯ, ಮಾಂಸದ ಅಂಗಡಿಗಳು ಮತ್ತು ಸೇವನೆಯನ್ನು ನಿಷೇಧಿಸಿದೆ. ನದಿಯ ಪಾವಿತ್ರ್ಯತೆ ಕಾಪಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ. ಆದರೆ ನರ್ಮದೆ ಮಾತ್ರ ಕೈಗಾರಿಕೆಗಳು, ಮಿತಿಮೀರಿದ ಧಾರ್ಮಿಕ ಚಟುವಟಿಕೆಗಳ ಕಾರಣದಿಂದಾಗಿ ಮಲಿನವಾಗಿ ಕೊನೆಯುಸಿರು ಎಳೆಯುತ್ತಿದೆ. 

ಮಾಂಸಾಹಾರ ಮಾಡಿ ʼಇವರʼ ಹತ್ತಿರ ಕೂರಬಾರದು, ಮಾಂಸದ ಅಡುಗೆ ಮಾಡುವ ಪಾತ್ರಗಳನ್ನು ಪ್ರತ್ಯೇಕವಾಗಿ ಇಡಬೇಕು, ʼಶುದ್ದ ಸಾತ್ವಿಕರುʼ ಊಟಕ್ಕೆ ಬರುತ್ತಾರೆ ಎಂದು ಮಾಂಸಹಾರ ಮಾಡದೆ ಸಸ್ಯಾಹಾರದ ಅಡುಗೆ ಮಾತ್ರ ಮಾಡಬೇಕು, ಸ್ನೇಹಿತ ಮಾಂಸ ತಿನ್ನದ ಕಾರಣ ನಾಲ್ಕೈದು ಮಾಂಸ ತಿನ್ನುವ ಸ್ನೇಹಿತರು ವೆಜ್‌ ರೆಸ್ಟೋರೆಂಟ್‌ ಹುಡುಕಬೇಕು….ಸಾಲು ಸಾಲು ಘಟನೆಗಳು ನಮ್ಮ ಮುಂದೆ ನಡೆಯುತ್ತವೆ. ಮಾಂಸಹಾರಿಗಳು ಕೂಡ ತಮ್ಮ ಆಹಾರ ಮೈಲಿಗೆ ಉಂಟು ಮಾಡುತ್ತದೆ, ಕೊಳಕು ಎಂಬ ನಂಬಿಕೆಯನ್ನು ಕಾಲಾಂತರದಲ್ಲಿ ತಲೆಗೆ ತುಂಬಿಸಿಕೊಂಡಿದ್ದಾರೆ.  ಬ್ರಾಹ್ಮಣರು ಮದುವೆಗೆ ಬರುತ್ತಾರೆ ಎಂಬ ಕಾರಣಕ್ಕೆ ತಮ್ಮದೇ ಜಾತಿಯ ಅಡುಗೆಯವರ ಬದಲಾಗಿ ಬ್ರಾಹ್ಮಣರ ಅಡುಗೆಯವರಿಂದಲೇ ಅಡುಗೆ ಮಾಡಿಸುತ್ತಾರೆ.

ಒಂದರ್ಥದಲ್ಲಿ, ಮಾಂಸಾಹಾರ ಮಾಡುವ ಜನರು ಶುದ್ಧ ಮನಸ್ಸಿನವರು, ಪರರ ಬಗ್ಗೆ ಕಾಳಜಿ ಇರುವವರು. ತಾವು ಮಾಡುತ್ತಿರುವುದು ಗುಲಾಮಗಿರಿಯ ಒಂದು ಅಂಶವೇ ಎಂಬುದು ತಿಳಿಯದೇ, ಶುದ್ಧ ಸಸ್ಯಹಾರಿಗಳಿಗೆ ಯಾವುದೇ ಮುಜುಗರ ಆಗಬಾರದು ಎಂದು ನಡೆದುಕೊಳ್ಳುತ್ತಾರೆ. 

ಭಾರತದಲ್ಲಿ ಒಂದು ವರ್ಗದ ಜನರಿಗಾಗಿ ಇಡೀ ನಗರದಲ್ಲೇ ಬಹುಸಂಖ್ಯಾತರ ಆಹಾರ ಸಂಸ್ಕೃತಿಯಾದ ಮಾಂಸಾಹಾರವನ್ನು ನಿಷೇಧ ಮಾಡುತ್ತಾರೆ ಎಂಬುದು ಮನುಷ್ಯಕುಲದಲ್ಲಿ ಅತ್ಯಂತ ಹೇಯವಾದ ಕೃತ್ಯ. ಒಬ್ಬ ಮುನುಷ್ಯನಿಗೆ ತಾನು ತಿನ್ನುವ ಆಹಾರ ಕೊಳಕು, ಮೈಲಿಗೆ ಎಂದು ತಲೆಗೆ ತುಂಬಿಸುವುದು ಹೀನ ಕೃತ್ಯ.

ಮಾಂಸ ತಿನ್ನದಿದ್ದರೆ ತಿನ್ನಬೇಡಿ, ನಾವು ನಿಮಗೆ ತಿನ್ನಿ ಎಂದೂ ಹೇಳುವುದಿಲ್ಲ. ನಾನು ವೈಯಕ್ತಿಕವಾಗಿ ಒಂದು ಹೆಜ್ಜೆ ಮುಂದೆ ಹೋಗಿ ರೆಸ್ಟೋರೆಂಟ್‌ಗಳಲ್ಲಿ ʼನೀವು ತಿನ್ನುತ್ತೀರಾ?ʼ ಎಂದು ಕೇಳುತ್ತೇನೆ. ತಿನ್ನುತ್ತೇನೆ ಅಥವಾ ಇಲ್ಲ ಎಂಬುದಷ್ಟೇ ಉತ್ತರ. ಕೇಳಿದ್ದಕ್ಕೆ ಸ್ವಾಭಿಮಾನ ಕೆರಳುತ್ತದೆ ಎಂದರೆ ಇವರ ಒಳಗಿರುವುದು ಆಹಾರದ ಬಗೆಗಿನ ಹೀನ ಭಾವ.

ಮಾಂಸಾಹಾರ ತಿನ್ನುವವರು ಪದೇ ಪದೇ ಅಸ್ಪೃಶ್ಯತೆಗೆ ಒಳಗಾಗುತ್ತಾರೆ. ಮಾಂಸಹಾರಿ ಶೂದ್ರರೂ ದಲಿತರು ತಿನ್ನುವ ಮಾಂಸದ ಬಗ್ಗೆ ತೀವ್ರವಾದ ಅಸೈರಣೆಯನ್ನು ಹೊಂದಿರುತ್ತಾರೆ. ತುಳುವಿನಲ್ಲಿ ʼಕಾಂಪರಿʼ ಎಂಬ ಸವರ್ಣರಿಂದ ಬರುವ ಬೈಗುಳ ದಲಿತರನ್ನೇ ಗುರಿಯಾಗಿಸಿ ಬಳಸ್ಪಡುತ್ತದೆ. ಆಹಾರಕ್ಕೂ ಅಸ್ಪೃಶ್ಯತೆಗೂ ಸಂಬಂಧವಿದೆ. ಮಾಂಸಾಹಾರದ ಬಗ್ಗೆ ಅವಹೇಳನವಾಗಿ ಮಾತನಾಡುವುದು ಬಹುಸಂಖ್ಯಾತರ ಭಾವನೆಗೆ ಧಕ್ಕೆ ತಂದಂತೆ.

ಸದ್ಯ ತಿರುಪತಿ ಲಡ್ಡಿನಲ್ಲಿ ಪ್ರಾಣಿಜನ್ಯ ಕೊಬ್ಬು ಇದೆ. ಗುಜರಾತ್‌ನ ಆನಂದ್‌ನಲ್ಲಿರುವ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಸಿಎಎಲ್‌ಎಫ್) ಪ್ರಯೋಗಾಲಯದ ವರದಿಯು ಈ ವಿವಾದದ ಕೇಂದ್ರಬಿಂದುವಾಗಿದೆ. ಹಿಂದುತ್ವದವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದು ವರದಿಯ ಅನುಬಂಧದ ಪುಟಗಳನ್ನು. 

ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಕಲಬೆರಕೆ ಆಗಿರುವ ಸಾಧ್ಯತೆಯನ್ನು ಎಂಟು ಪುಟಗಳ ಈ ವರದಿ ಸೂಚಿಸುತ್ತದೆ. NDDB ವರದಿಯ ಪ್ರಕಾರ, ಸ್ಯಾಂಪಲ್‌ನ S-ವ್ಯಾಲ್ಯೂ ಪರೀಕ್ಷೆ ಮಾಡುವಾಗ ಅದು ಪ್ರಮಾಣಿತ ಮಿತಿಗಳನ್ನು ಮೀರಿತ್ತು. ಇದು ಸೋಯಾ ಬೀನ್, ಸೂರ್ಯಕಾಂತಿ, ಹಂದಿ ಕೊಬ್ಬು ಮತ್ತು ಬೀಫ್ ಟ್ಯಾಲೋಗಳಂತಹ ಕೊಬ್ಬುಗಳ ಇರುವಿಕೆಯ ಸಾಧ್ಯತೆಯನ್ನು ಸೂಚಿಸುತ್ತದೆ. ಶುದ್ಧ ಹಾಲಿನ ಕೊಬ್ಬಿನ S-ವ್ಯಾಲ್ಯೂ 98.05 ಮತ್ತು 104.32 ರ ನಡುವೆ ಇರುತ್ತದೆ, ಆದರೆ ಪರೀಕ್ಷಿಸಿದ ಮಾದರಿಯಲ್ಲಿ ಇದು 19.72 ರಿಂದ 117.42 ರವರೆಗೆ ಇರುವುದು ಕಂಡುಬಂದಿದೆ. 

ಇಲ್ಲಿ ಕಲಬೆರಕೆ ಆಗಿರುವುದು ದನದ ಕೊಬ್ಬು ಅಥವಾ ಮೀನಿನ ಕೊಬ್ಬೇ ಆಗಿರಬೇಕಿಲ್ಲ, ಹಂದಿ ಕೊಬ್ಬು, ಸೂರ್ಯಕಾಂತಿ ಎಣ್ಣೆ, ಸೋಯಾ ಎಣ್ಣೆಯೂ ಆಗಿರಬಹುದು. ಆದರೆ ಕಳಬೆರಕೆ ಆಗಿದೆ ಎಂಬುದನ್ನು ವರದಿ ಹೇಳುತ್ತದೆ.

ಹೆಚ್ಚಿನ ಪ್ರಮಾಣದ ಸಸ್ಯಜನ್ಯ ಎಣ್ಣೆಯ ಅಂಶ ಇರುವ ಮೇವನ್ನು ದನಗಳಿಗೆ ಕೊಟ್ಟರೆ, ಕೊಲೆಸ್ಟ್ರಾಲ್ ತೆಗೆದು ಹಾಕುವ ಚಿಕಿತ್ಸೆ ನೀಡಿದರೆ ಮತ್ತು ಗರ್ಬರ್ ಅಥವಾ ಸ್ಮಿಡ್-ಬಾಂಡ್ಜಿನ್ಸ್ಕಿ-ರಟಾಲಾಫ್‌ನಂತಹ ವಿಧಾನಗಳನ್ನು ಬಳಸಿಕೊಂಡು ತೆಗೆದ ತುಪ್ಪವು ತಪ್ಪುಗಳಿಗೆ ಕಾರಣವಾಗಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

NDDB ವರದಿಯು ISO 17678 ರಲ್ಲಿ ನಿರ್ದಿಷ್ಟಪಡಿಸಿದ ವಿಧಾನವನ್ನು ಹಸು ಅಲ್ಲದ Bovin Milk ನ ಕೊಬ್ಬಿನ ಶುದ್ಧತೆಯನ್ನು ನಿರ್ಧರಿಸಲು ಹೆಚ್ಚಿನ ಮೌಲ್ಯೀಕರಣ ಅಧ್ಯಯನಗಳು ಪೂರ್ಣಗೊಳ್ಳುವವರೆಗೆ ಬಳಸಬಹುದು ಎಂದು ಹೇಳಿದೆ. 

ಆದರೂ ಈ ವರದಿ ಸ್ಪಷ್ಟವಾಗಿ ಇಲ್ಲ, ಏಕೆಂದರೆ ಬೀಫ್ ಟ್ಯಾಲೋನಂತಹ ನಿರ್ದಿಷ್ಟ ಕೊಬ್ಬುಗಳನ್ನು ಗುರುತಿಸಲು ಹೆಚ್ಚಿನ ಪರೀಕ್ಷೆಯ ಅಗತ್ಯವಿರುತ್ತದೆ. ಪ್ರಯೋಗಾಲಯದ ಫಲಿತಾಂಶಗಳು ಕಲಬೆರಕೆಯನ್ನು ಸೂಚಿಸುತ್ತವೆಯಾದರೂ, ಅವು ಪ್ರಾಣಿಗಳ ಕೊಬ್ಬಿನ ಉಪಸ್ಥಿತಿಯನ್ನು ಖಚಿತವಾಗಿ ಸಾಬೀತುಪಡಿಸುವುದಿಲ್ಲ.

ಲಡ್ಡಿನಲ್ಲಿ ದನದ ಮಾಂಸದ ಕೊಬ್ಬೂ ಇರಬಹುದು, ಹಂದಿ ಕೊಬ್ಬೂ ಇರಬಹುದು, ಸೋಯಾ ಎಣ್ಣೆಯೂ ಇರಬಹುದು, ಇಲ್ಲವೇ ಹಾಲು ಕೊಟ್ಟ ದನ ಹೆಚ್ಚಿನ ಕೊಬ್ಬಿನ ಅಂಶ ಇರುವ ಮೇವನ್ನೂ ತಿಂದಿರಬಹುದು. ಇಡೀ ವರದಿ ಒಂದು ಸಾಧ್ಯತೆಯನ್ನು ಹೇಳಿದೆ.

ಹೀಗಿರುವಾಗ, ತಿರುಪತಿ ಲಡ್ಡು ತಿಂದು ʼಅಪವಿತ್ರʼಗೊಂಡ ಭಕ್ತ ವೃಂದ ಯಾವ ಅಹಾರವೂ ಕೆಟ್ಟದಲ್ಲ, ಮಾಂಸಾಹಾರವೂ ಇತರರಿಗೆ ಶ್ರೇಷ್ಟ ಎಂಬುದನ್ನು ಒಪ್ಪಿಕೊಳ್ಳಬೇಕು. ಮಾಂಸಾಹಾರದ ಬಗ್ಗೆ ಪವಿತ್ರ – ಅಪವಿತ್ರಗಳ ಮೂರ್ಖ ಚರ್ಚೆಯನ್ನು ನಿಲ್ಲಿಸಬೇಕು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page