ನವದೆಹಲಿ: ದೇಶದಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿರುವ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (CBI) ವಹಿಸಿದೆ. ಪರೀಕ್ಷಾ ಅಕ್ರಮದ ಆರೋಪಗಳು ದೃಢಪಟ್ಟ ಹಿನ್ನೆಲೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತೆ ಅನಿಶ್ಚಿತತೆಯೊಳಗೆ ಸಿಲುಕಿದೆ. ಮರುಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಎನ್‌ಟಿಎ ತಿಳಿಸಿದೆ.
ಮೇ 3ರಂದು ನಡೆದ ಪರೀಕ್ಷೆಯ ಬಳಿಕ ರಾಜಸ್ಥಾನ ಸೇರಿದಂತೆ ಕೆಲವು ರಾಜ್ಯಗಳಿಂದ ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಗಳು ಕೇಳಿಬಂದಿದ್ದವು. ಆರಂಭದಲ್ಲಿ ಇದನ್ನು ವದಂತಿ ಎಂದು ಪರಿಗಣಿಸಲಾಗಿದ್ದರೂ, ಬಳಿಕ ಗುಪ್ತಚರ ಇಲಾಖೆ ಹಾಗೂ ಕಾನೂನು ಜಾರಿ ಸಂಸ್ಥೆಗಳ ಪ್ರಾಥಮಿಕ ತನಿಖೆಯಲ್ಲಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳು ನಡೆದಿರುವುದು ಬೆಳಕಿಗೆ ಬಂದಿದೆ.
‘ಗೆಸ್ ಪೇಪರ್’ ಹೆಸರಿನಲ್ಲಿ ಪರೀಕ್ಷೆಗೆ ಮುನ್ನವೇ ಕೆಲವು ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು ಎಂಬ ಮಾಹಿತಿ ತನಿಖೆಯಲ್ಲಿ ಪತ್ತೆಯಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪರೀಕ್ಷೆಯ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಪರೀಕ್ಷೆಯನ್ನು ರದ್ದುಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣವನ್ನು ಸಿಬಿಐಗೆ ವಹಿಸಿರುವ ಕೇಂದ್ರ ಸರ್ಕಾರ, ಈ ಹಗರಣದ ಹಿಂದೆ ಸಂಘಟಿತ ಜಾಲ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಕುರಿತು ಸಮಗ್ರ ತನಿಖೆ ನಡೆಸಲು ಸೂಚಿಸಿದೆ. ಪರೀಕ್ಷಾ ಕೇಂದ್ರ ಸಿಬ್ಬಂದಿ, ಮಧ್ಯವರ್ತಿಗಳು ಮತ್ತು ಪ್ರಶ್ನೆ ಪತ್ರಿಕೆ ಮುದ್ರಣ ಹಾಗೂ ಸಾಗಣೆ ಪ್ರಕ್ರಿಯೆಯಲ್ಲಿ ಭಾಗಿಯಾದವರ ಪಾತ್ರವನ್ನೂ ತನಿಖೆ ಒಳಗೊಂಡಿರಲಿದೆ.
ಎನ್‌ಟಿಎ ತನ್ನ ಬಳಿ ಇರುವ ಸಿಸಿಟಿವಿ ದೃಶ್ಯಾವಳಿ, ಅಭ್ಯರ್ಥಿಗಳ ವಿವರಗಳು ಮತ್ತು ಇತರ ದತ್ತಾಂಶಗಳನ್ನು ತನಿಖಾ ಸಂಸ್ಥೆಗೆ ಹಸ್ತಾಂತರಿಸಲು ಸಮ್ಮತಿಸಿದೆ. ಪ್ರಶ್ನೆ ಪತ್ರಿಕೆಗಳು ಪರೀಕ್ಷಾ ಕೇಂದ್ರಗಳಿಗೆ ತಲುಪುವ ಮೊದಲು ಹೇಗೆ ಸೋರಿಕೆಯಾದವು ಎಂಬುದು ಈಗ ತನಿಖೆಯ ಪ್ರಮುಖ ಅಂಶವಾಗಿದೆ.
ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ವಿದ್ಯಾರ್ಥಿಗಳಿಗೆ ಎನ್‌ಟಿಎ ಕೆಲ ಸ್ಪಷ್ಟನೆಗಳನ್ನು ನೀಡಿದೆ. ಮರುಪರೀಕ್ಷೆಗೆ ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ತಿಳಿಸಿರುವ ಸಂಸ್ಥೆ, ಈಗಾಗಲೇ ನೋಂದಾಯಿತ ಅಭ್ಯರ್ಥಿಗಳ ಮಾಹಿತಿಯನ್ನೇ ಮುಂದಿನ ಪರೀಕ್ಷೆಗೆ ಬಳಸಿಕೊಳ್ಳಲಾಗುತ್ತದೆ ಎಂದಿದೆ. ವಿದ್ಯಾರ್ಥಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದಿಲ್ಲ ಎಂದು ಕೂಡ ಸ್ಪಷ್ಟಪಡಿಸಲಾಗಿದೆ.
ಹೊಸ ಪ್ರವೇಶ ಪತ್ರಗಳನ್ನು ಮರುಪರೀಕ್ಷೆಗೆ ಕೆಲವು ದಿನಗಳ ಮುನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಬಹುತೇಕ ಹಳೆಯ ಪರೀಕ್ಷಾ ಕೇಂದ್ರಗಳನ್ನೇ ಮುಂದುವರಿಸಲಾಗುವುದು ಎಂದು ತಿಳಿಸಲಾಗಿದೆ.
ಈ ಘಟನೆ ದೇಶದ ಪರೀಕ್ಷಾ ವ್ಯವಸ್ಥೆಯ ಮೇಲಿನ ಸಾರ್ವಜನಿಕ ನಂಬಿಕೆಗೆ ಧಕ್ಕೆಯುಂಟುಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ದೇಶದಾದ್ಯಂತ ಕೇಳಿಬರುತ್ತಿದೆ. ಶಿಕ್ಷಣ ತಜ್ಞರು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೆ, ಅಧಿಕೃತ ಮಾಹಿತಿಗಳನ್ನೇ ನಂಬಿ ತಮ್ಮ ಅಭ್ಯಾಸ ಮುಂದುವರಿಸಬೇಕು ಎಂದು ಸಲಹೆ ನೀಡಿದ್ದಾರೆ.
