Home ದೇಶ ಷೇರು ಮಾರುಕಟ್ಟೆಯಲ್ಲಿ ದಾಖಲೆಯ 1,500 ಅಂಕ ಕುಸಿತ; ಬರೋಬ್ಬರಿ 10 ಲಕ್ಷ ಕೋಟಿ ಗುಳುಂ

ಷೇರು ಮಾರುಕಟ್ಟೆಯಲ್ಲಿ ದಾಖಲೆಯ 1,500 ಅಂಕ ಕುಸಿತ; ಬರೋಬ್ಬರಿ 10 ಲಕ್ಷ ಕೋಟಿ ಗುಳುಂ

0

ದೇಶದ ಷೇರು ಮಾರುಕಟ್ಟೆಯ ಇತಿಹಾಸದಲ್ಲಿ ಮಂಗಳವಾರ ಮತ್ತೊಂದು ಕಪ್ಪು ದಿನ ದಾಖಲಾಗಿದೆ. ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕೀಯ ಸಂಘರ್ಷ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯ ದಿಢೀರ್ ಏರಿಕೆ ಮತ್ತು ರೂಪಾಯಿ ಮೌಲ್ಯದ ಕುಸಿತ.. ಈ ಮೂರು ಅಂಶಗಳ ಮಾರಕ ಸಂಯೋಜನೆ ಹೂಡಿಕೆದಾರರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಪರಿಣಾಮವಾಗಿ, ಬಾಂಬೆ ಷೇರು ವಿನಿಮಯ ಕೇಂದ್ರದ (BSE) ಸೆನ್ಸೆಕ್ಸ್ ಸೂಚ್ಯಂಕ ಸುಮಾರು 1,500 ಅಂಕಗಳಷ್ಟು ದಾಖಲೆಯ ಕುಸಿತ ಕಂಡಿದೆ.

ಇದು ಕೆಲವೇ ಗಂಟೆಗಳ ಅವಧಿಯ ವಹಿವಾಟಿನಲ್ಲಿ ₹೧೦ ಲಕ್ಷ ಕೋಟಿಗೂ ಅಧಿಕ ಸಂಪತ್ತು ಹೂಡಿಕೆದಾರರ ಕೈ ತಪ್ಪಿ ಹೋಗಿದೆ. ಹೀಗಾಗಿ ಮಾರುಕಟ್ಟೆ ತಜ್ಞರು ಈ ದಿನವನ್ನು ಕಪ್ಪು ಮಂಗಳವಾರ (Black Tuesday) ಎಂದು ಕರೆದಿದ್ದಾರೆ.

ಮಾರುಕಟ್ಟೆ ಆರಂಭದಿಂದಲೇ ನಕಾರಾತ್ಮಕ ಪ್ರವೃತ್ತಿ ಕಂಡುಬಂದಿತ್ತು. ಮಧ್ಯಾಹ್ನದ ವೇಳೆಗೆ ಈ ಕುಸಿತ ಮತ್ತಷ್ಟು ತೀವ್ರಗೊಂಡಿತು. ಹೂಡಿಕೆದಾರರು ಭಾರಿ ಪ್ರಮಾಣದ ಷೇರು ಮಾರಾಟಕ್ಕೆ ಮುಂದಾದ ಫಲವಾಗಿ ಬಿಎಸ್‌ಇ ಒಟ್ಟು ಮಾರುಕಟ್ಟೆ ಮೌಲ್ಯ (Market Capitalisation) ಸುಮಾರು ₹467 ಲಕ್ಷ ಕೋಟಿ ರೂಪಾಯಿಗಳಿಂದ ₹456.9 ಲಕ್ಷ ಕೋಟಿ ರೂಪಾಯಿಗಳಿಗೆ ಕುಸಿದಿದೆ.

ಐಟಿ, ಬ್ಯಾಂಕಿಂಗ್ ಮತ್ತು ಶಕ್ತಿ (Energy) ವಲಯದ ಷೇರುಗಳು ಅತ್ಯಧಿಕ ನಷ್ಟ ಅನುಭವಿಸಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ದೇಶದ ಪ್ರಮುಖ ಕಂಪನಿಗಳ ಷೇರು ಬೆಲೆಗಳು ಭಾರಿ ಕುಸಿತ ಕಂಡವು. ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಷೇರುಗಳಂತೂ ಮತ್ತಷ್ಟು ತೀವ್ರ ಒತ್ತಡಕ್ಕೆ ಒಳಗಾದವು. ಷೇರು ಮಾರುಕಟ್ಟೆಯ ಈ ದಿಢೀರ್ ಕುಸಿತ ಸಣ್ಣ ಹೂಡಿಕೆದಾರರಲ್ಲಿ ವ್ಯಾಪಕ ತಲ್ಲಣ ಮೂಡಿಸಿದ್ದು, ಅನೇಕರು ನಷ್ಟ ತಗ್ಗಿಸಿಕೊಳ್ಳಲು ಷೇರು ಮಾರಾಟಕ್ಕೆ ಮುಂದಾದರು.

ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿರುವುದು ಮಾರುಕಟ್ಟೆಯ ಮೇಲೆ ಹೆಚ್ಚಿನ ಒತ್ತಡ ಹಾಕಿತು. ರೂಪಾಯಿ ದುರ್ಬಲಗೊಂಡಷ್ಟೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರತೀಯ ಮಾರುಕಟ್ಟೆಯಿಂದ ಹಣ ಹಿಂಪಡೆಯಲು ಪ್ರಾರಂಭಿಸಿದರು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

You cannot copy content of this page

Exit mobile version