ನ್ಯೂಯಾರ್ಕ್: ಗಾಜಾದಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿದೆ ಎಂಬ ಆರೋಪಗಳನ್ನು ಕಟುವಾಗಿ ತಳ್ಳಿಹಾಕಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಈ ಆರೋಪಗಳು “ಶತಮಾನದ ಅತಿದೊಡ್ಡ ಸುಳ್ಳು” ಎಂದು ಬಣ್ಣಿಸಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಗುರುವಾರ ಮಾತನಾಡಿದ ಅವರು ತಮ್ಮ ದೇಶದ ಮಿಲಿಟರಿ ಕಾರ್ಯಾಚರಣೆಯನ್ನು ಬಲವಾಗಿ ಸಮರ್ಥಿಸಿಕೊಂಡರು.
ನೆತನ್ಯಾಹು ತಮ್ಮ ಭಾಷಣಕ್ಕಾಗಿ ಪೋಡಿಯಂ ಏರುತ್ತಿದ್ದಂತೆಯೇ, ಇಸ್ರೇಲ್ನ ಕ್ರಮವನ್ನು ವಿರೋಧಿಸಿ ವಿಶ್ವದ ಹಲವು ರಾಷ್ಟ್ರಗಳ ರಾಜತಾಂತ್ರಿಕ ಪ್ರತಿನಿಧಿಗಳು ಸಭಾತ್ಯಾಗ (ವಾಕ್ಔಟ್) ಮಾಡಿದರು. ಈ ವೇಳೆ ಸಭಾಂಗಣದಲ್ಲಿ ಕೂಗಾಟ, ಗದ್ದಲ ಉಂಟಾಗಿದ್ದು, ಸಭೆಯಲ್ಲಿ ಶಾಂತಿ ಕಾಪಾಡುವಂತೆ ಯುಎನ್ಜಿಎ ಅಧ್ಯಕ್ಷ ಖಲೀಲುರ್ ರೆಹಮಾನ್ ಪದೇಪದೇ ಮನವಿ ಮಾಡಿದರು. ಸಭಾತ್ಯಾಗ ಮಾಡಿದ ಪ್ರತಿನಿಧಿಗಳನ್ನು “ನೈತಿಕ ಹೇಡಿಗಳು” ಎಂದು ಜರೆದ ನೆತನ್ಯಾಹು, ಸಭಾಂಗಣದಲ್ಲಿ ಇನ್ನೂ ಅಂತಹ ಹೇಡಿಗಳು ಯಾರಾದರೂ ಉಳಿದಿದ್ದರೆ ತಕ್ಷಣ ಹೊರಹೋಗಬಹುದು ಎಂದು ಗುಡುಗಿದರು.
ಇರಾನ್ ವಿರುದ್ಧದ ಮಿಲಿಟರಿ ಕ್ರಮವನ್ನು ಸಮರ್ಥಿಸಿಕೊಂಡ ಅವರು, “ಇರಾನ್ ಮೇಲೆ ದಾಳಿ ನಡೆಸುವುದು ನನ್ನ ಇಡೀ ಜೀವನದಲ್ಲೇ ನಾನು ತೆಗೆದುಕೊಂಡ ಅತ್ಯಂತ ಸುಲಭವಾದ ನಿರ್ಧಾರಗಳಲ್ಲಿ ಒಂದಾಗಿತ್ತು” ಎಂದರು. ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಮೂಲಕ, ಇದೀಗ ಸಭಾಂಗಣದಿಂದ ಹೊರನಡೆದ ಅನೇಕ ರಾಷ್ಟ್ರಗಳ ಭದ್ರತೆಯನ್ನೂ ಕಾಪಾಡಿದೆ ಎಂದು ಅವರು ಪ್ರತಿಪಾದಿಸಿದರು. ಇರಾನ್ ವಿರುದ್ಧ ದೃಢ ಕ್ರಮ ಕೈಗೊಂಡಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಅರ್ಪಿಸಿದ ಅವರು, ನಮಗೆ ಗೆಲ್ಲುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿದರು.
ಪ್ಯಾಲೆಸ್ಟೈನ್ ಮಿಷನ್ನ ಕರೆಯ ಮೇರೆಗೆ ಹಲವು ರಾಷ್ಟ್ರಗಳ ಸದಸ್ಯರು ಈ ಸಭಾತ್ಯಾಗದಲ್ಲಿ ಭಾಗಿಯಾಗಿದ್ದರು. ಇದಕ್ಕೂ ಮುನ್ನ, ಅಮೆರಿಕವು ವೀಸಾ ನಿರಾಕರಿಸಿದ ಕಾರಣ ಪ್ಯಾಲೆಸ್ಟೈನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರ ಮುದ್ರಿತ ಭಾಷಣವನ್ನು ಸಭೆಯಲ್ಲಿ ಪ್ರಸಾರ ಮಾಡಲಾಯಿತು. “ನಾವು ನಮ್ಮ ಮಾತೃಭೂಮಿಯನ್ನು ಬಿಟ್ಟು ಹೋಗುವುದಿಲ್ಲ, ನಮ್ಮನ್ನು ಒಕ್ಕಲೆಬ್ಬಿಸುವುದನ್ನು ನಾವು ಎಂದಿಗೂ ಒಪ್ಪುವುದಿಲ್ಲ ಹಾಗೂ ನಮ್ಮ ಭವಿಷ್ಯವನ್ನು ಇತರರು ನಿರ್ಧರಿಸಲು ನಾವು ಬಿಡುವುದಿಲ್ಲ,” ಎಂದು ಅಬ್ಬಾಸ್ ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದ್ದರು. ವೆಸ್ಟ್ ಬ್ಯಾಂಕ್ನಲ್ಲಿ ಇಸ್ರೇಲಿ ವಸಾಹತುಗಾರರು ನಡೆಸುತ್ತಿರುವ ಹಿಂಸಾಚಾರವನ್ನು ಬಾಲಾಪರಾಧಿಗಳ ಪುಂಡಾಟಿಕೆ ಎಂದು ತಳ್ಳಿಹಾಕಿದ ನೆತನ್ಯಾಹು, ತಮ್ಮ ದೇಶದ ರಕ್ಷಣೆಗಾಗಿ ಸೈನಿಕ ಕಾರ್ಯಾಚರಣೆ ಅನಿವಾರ್ಯವಾಗಿತ್ತು ಎಂದು ಸಮರ್ಥಿಸಿಕೊಂಡರು.
