Tuesday, May 13, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿ ತಿರಂಗಾ ಯಾತ್ರೆಗೆ ನೆಟ್ಟಿಗರ ಆಕ್ರೋಶ; ಆಪರೇಷನ್ ಸಿಂಧೂರ್ ದುರ್ಬಳಕೆ ಎಂದು ಆರೋಪ

ಇಂದಿನಿಂದ ಮೇ 23 ರ ವರೆಗೂ ದೇಶದಾದ್ಯಂತ ಬಿಜೆಪಿ ಪಕ್ಷ ತಿರಂಗಾ ಯಾತ್ರೆಗೆ ಚಾಲನೆ ನೀಡಲಿದೆ. ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ಮತ್ತು ನರೇಂದ್ರ ಮೋದಿಯ ನಿರ್ಣಾಯಕ ನಾಯಕತ್ವದ ಸಲುವಾಗಿ ಈ ಯಾತ್ರೆ ಉದ್ದೇಶ ಹೊಂದಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ ಭಾರತೀಯ ಸೇನೆಯ ಶೌರ್ಯದ ವಸ್ತುವನ್ನು ಬಿಜೆಪಿ ತನ್ನ ಅವಕಾಶಕ್ಕೆ ಬಳಸಿಕೊಳ್ಳುವ ಬಗ್ಗೆ ಜಾಲತಾಣ ಮತ್ತು ಅದರ ಹೊರಗಿನ ವೇದಿಕೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಜೆಪಿಯ ತಿರಂಗಾ ಯಾತ್ರೆ ಸಂಪೂರ್ಣ ರಾಜಕೀಯ ಉದ್ದೇಶ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ತೀವ್ರವಾಗಿ ಟೀಕಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಸೇನೆಯ ಸಾಧನೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಲ್ಲದೇ, ಕದನ ವಿರಾಮಕ್ಕೆ ಟ್ರಂಪ್ ಸಲಹೆ ಸೂಚನೆಗಳನ್ನು ಕೇಳುವಷ್ಟು ಭಾರತ ಬಡವಾಗಿದೆಯೇ ಎಂದು ಸ್ವತಃ ಬಿಜೆಪಿ ಕಾರ್ಯಕರ್ತರೇ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಪಹಲ್ಗಾಮ್ ಘಟನೆಯ ನಂತರ ಅದರ ಪ್ರತಿಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಹಿಂದು ಮುಂದು ನೋಡದೆ ಪಾಕಿಸ್ತಾನದ ಹೃದಯ ಭಾಗಕ್ಕೆ ಹೋಗಿ ಭಾರತೀಯ ಸೇನೆ ತನ್ನ ಶೌರ್ಯ ಪ್ರದರ್ಶನ ನಡೆಸಿತ್ತು. ಮೇಲಾಗಿ ಕೇಂದ್ರ ಸರ್ಕಾರವೂ ಸಹ ಯುದ್ಧದ ವಿಚಾರದಲ್ಲಿ ಸೇನೆಗೆ ಸರ್ವ ಅಧಿಕಾರವನ್ನೂ ನೀಡಿದ ಹಿನ್ನೆಲೆಯಲ್ಲಿ ಯುದ್ಧದ ಸಂಪೂರ್ಣ ಕ್ರೆಡಿಟ್ ಸಿಗಬೇಕಾದದ್ದು ಸೇನೆಗೇ ಹೊರತು ಕೇಂದ್ರ ಸರ್ಕಾರ ಅಥವಾ ಬಿಜೆಪಿ ಪಕ್ಷ ಅಥವಾ ಮೋದಿಗೆ ಅಲ್ಲ ಎಂಬುದು, ಬಿಜೆಪಿ ತಿರಂಗಾ ಯಾತ್ರೆಯ ವಿರುದ್ಧ ಆಕ್ರೋಶ ಹೊರಹಾಕಿದವರ ಅಭಿಪ್ರಾಯವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ನಡೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಒಬ್ಬ ಬಳಕೆದಾರರು,”ಪಹಲ್ಗಾಂ ದಾಳಿಯ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ಆ ಭಯೋತ್ಪಾದಕರು ಇನ್ನೂ ಸ್ವತಂತ್ರವಾಗಿ ಓಡಾಡುತ್ತಿದ್ದಾರೆ” ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, “ಒಂದು ದಿನ ‘ರಾಜಕೀಯ ಮಾಡಬೇಡಿ’ ಎನ್ನುತ್ತಾರೆ, ಮತ್ತೊಂದು ದಿನ ತಿರಂಗಾ ಯಾತ್ರೆ ಆರಂಭಿಸುತ್ತಾರೆ. ಇದು ಸೇನೆಯ ಸಾಧನೆಯನ್ನು ಚುನಾವಣೆಗಾಗಿ ಬಳಸುವ ಪ್ರಯತ್ನವಲ್ಲವೇ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವರು ಆಪರೇಷನ್ ಸಿಂದೂರ್ ಸಂಪೂರ್ಣ ಯಶಸ್ವಿಯಾಗಿಲ್ಲ ಎಂದು ಆರೋಪಿಸಿದ್ದಾರೆ. “ಐಎಂಎಫ್ ಪಾಕಿಸ್ತಾನಕ್ಕೆ ಸಾಲ ನೀಡುವುದನ್ನು ತಡೆಯಲಾಗಲಿಲ್ಲ, ಬಿಎಸ್‌ಎಫ್ ಯೋಧನೊಬ್ಬ ಪಾಕಿಸ್ತಾನದ ವಶದಲ್ಲಿದ್ದಾನೆ, ಪಹಲ್ಗಾಂ ದಾಳಿಯ ಆರೋಪಿಗಳು ಸಿಕ್ಕಿಲ್ಲ. ಆದರೂ ಬಿಜೆಪಿ ಇದನ್ನು ಮತಕ್ಕಾಗಿ ಬಳಸುತ್ತಿದೆ” ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಈ ಯಾತ್ರೆಯನ್ನು “ರಾಜಕೀಯ ಸಂತೆ” ಎಂದು ಕರೆದು, ಇದನ್ನು ಬಹಿಷ್ಕರಿಸಬೇಕು ಎಂದು ಸಲಹೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page