ಪ್ರಸ್ತುತ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ್ ಕುಮಾರ್ ಅವರನ್ನು ಭಾರತದ 26 ನೇ ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ನೇಮಿಸಲಾಗಿದೆ.
ಪ್ರಸ್ತುತ ಸಿಇಸಿ ರಾಜೀವ್ ಕುಮಾರ್ ಅವರ ಅವಧಿ ಇಂದು (ಫೆಬ್ರವರಿ 18) ಕೊನೆಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಮುಂದಿನ ಸಿಇಸಿಯನ್ನು ಆಯ್ಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಸೋಮವಾರ ಸಭೆ ಸೇರಿತು. ಪ್ರಧಾನಿ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದರು.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ನೇತೃತ್ವದ ಶೋಧನಾ ಸಮಿತಿಯು ಪ್ರಸ್ತಾಪಿಸಿದ ಐದು ಅಭ್ಯರ್ಥಿಗಳ ಪಟ್ಟಿಯಿಂದ ಮೋದಿ ನೇತೃತ್ವದ ಸಮಿತಿಯು ಜ್ಞಾನೇಶ್ ಕುಮಾರ್ ಅವರನ್ನು ಸಿಇಸಿ ಆಗಿ ಆಯ್ಕೆ ಮಾಡಿತು ಮತ್ತು ತನ್ನ ನಿರ್ಧಾರವನ್ನು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಿತು, ಅವರು ಅದನ್ನು ಅನುಮೋದಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ನಿಕಟ ಸಂಬಂಧದಿಂದಾಗಿ, ಅವರನ್ನು ಚುನಾವಣಾ ಆಯುಕ್ತರನ್ನಾಗಿ ಆಯ್ಕೆ ಮಾಡಲಾಯಿತು ಎನ್ನಲಾಗುತ್ತಿದೆ. ಜ್ಞಾನೇಶ್ ಜನವರಿ 26, 202 ರವರೆಗೆ ಸಿಇಸಿ ಆಗಿ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಅವರ ಮೇಲ್ವಿಚಾರಣೆಯಲ್ಲಿ, ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ಮತ್ತು ಮುಂದಿನ ವರ್ಷ ತಮಿಳುನಾಡು ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.