ಭಾರತೀಯ ಹಾಕಿಯಲ್ಲಿ ಹೊಸ ವಿವಾದ; ಭಾರತದ ತಂಡಕ್ಕೆ ನೀಲಿ ಜೆರ್ಸಿ ತೆಗೆಸಿ ಕೇಸರಿ ಜೆರ್ಸಿ ಹಾಕಿಸಿದ “ಹಾಕಿ ಇಂಡಿಯಾ”

ಮುಂದಿನ ತಿಂಗಳು ನೆದರ್‌ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ನಡೆಯಲಿರುವ FIH ಹಾಕಿ ವಿಶ್ವಕಪ್‌ಗೆ ಮುನ್ನ ಭಾರತೀಯ ಹಾಕಿ ತಂಡದ ಹೊಸ ಜರ್ಸಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವು ದಶಕಗಳಿಂದ ಭಾರತೀಯ ಹಾಕಿಯ ಗುರುತಾಗಿದ್ದ ನೀಲಿ ಜರ್ಸಿಯ ಬದಲಿಗೆ ಈ ಬಾರಿ ಪುರುಷರ ಹಾಗೂ ಮಹಿಳೆಯರ ತಂಡಗಳು ಕೇಸರಿ ಬಣ್ಣದ ಜರ್ಸಿಯಲ್ಲಿ ಕಣಕ್ಕಿಳಿಯಲಿವೆ. ಈ ನಿರ್ಧಾರ ಕ್ರೀಡಾಭಿಮಾನಿಗಳು ಹಾಗೂ ಮಾಜಿ ಆಟಗಾರರ ನಡುವೆ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

ಹಾಕಿ ಇಂಡಿಯಾ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಜರ್ಸಿಯನ್ನು ಅನಾವರಣಗೊಳಿಸಿದ್ದು, ಭಾರತದ ಹೆಮ್ಮೆ, ಧೈರ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಈ ವಿನ್ಯಾಸ ರೂಪಿಸಲಾಗಿದೆ ಎಂದು ತಿಳಿಸಿದೆ. ಆಟಗಾರರು ಮತ್ತು ತರಬೇತುದಾರರ ಸಲಹೆಯ ಮೇರೆಗೆ ಈ ಬದಲಾವಣೆ ಮಾಡಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ತಾಂತ್ರಿಕವಾಗಿ ಕೇಸರಿಯ ಅಗತ್ಯವೇ ಯಾಕೆ?
ಜರ್ಸಿಯ ಬಣ್ಣ ಬದಲಾವಣೆಗೆ ಸಂಬಂಧಿಸಿದಂತೆ ಹಾಕಿ ಇಂಡಿಯಾ ತಾಂತ್ರಿಕ ಕಾರಣವನ್ನು ಮುಂದಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳು ನೀಲಿ ಬಣ್ಣದ ಟರ್ಫ್‌ನಲ್ಲಿ ನಡೆಯುತ್ತಿವೆ. ಈ ವೇಳೆ ನೀಲಿ ಜರ್ಸಿ ಧರಿಸಿದ ಆಟಗಾರರು ಮೈದಾನದ ಬಣ್ಣದೊಂದಿಗೆ ಒಂದಾಗಿ ಕಾಣುವುದರಿಂದ ದೃಶ್ಯಗೋಚರತೆ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಆಟಗಾರರು ಮತ್ತು ತರಬೇತುದಾರರು ಹಳದಿ ಅಥವಾ ಕೇಸರಿ ಬಣ್ಣದ ಜರ್ಸಿಯನ್ನು ಬಳಸುವಂತೆ ಸಲಹೆ ನೀಡಿದ್ದು, ಅಂತಿಮವಾಗಿ ರಾಷ್ಟ್ರಧ್ವಜದಲ್ಲಿರುವ ಕೇಸರಿ ಬಣ್ಣವನ್ನು ಆಯ್ಕೆ ಮಾಡಲಾಗಿದೆ ಎಂದು ಹಾಕಿ ಇಂಡಿಯಾ ತಿಳಿಸಿದೆ.

ಆದರೆ ಕೇಂದ್ರ ಬಿಜೆಪಿ ಸರ್ಕಾರ ಅನಗತ್ಯವಾಗಿ ಇದ್ದಬದ್ದಲ್ಲಿ ಕೇಸರೀಕರಣ ಮಾಡುತ್ತಿರುವಾಗ ಈಗ ಕ್ರೀಡೆಯಲ್ಲೂ ಅನಗತ್ಯ ಸಿದ್ಧಾಂತ ತುರುಕಲು ಮುಂದಾಗಿದೆ ಎಂಬ ಮಾತುಗಳು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ತಾಂತ್ರಿಕ ಕಾರಣ ಕೊಟ್ಟ ಹಾಕಿ ಇಂಡಿಯಾ ಕೇಸರಿ ಹೊರತಾಗಿ ಬೇರೆ ಯಾವುದಾದರೂ ಬಣ್ಣವನ್ನು ಮುಖ್ಯ ಜೆರ್ಸಿಯ ಭಾಗವಾಗಿಸಬಹುದಿತ್ತು. ಉದ್ದೇಶಪೂರ್ವಕವಾಗಿ ಕೇಸರಿ ತರುವ ಮೂಲಕ ವಿವಾದ ಹುಟ್ಟು ಹಾಕಿದೆ.

ಹೊಸ ಜರ್ಸಿಯ ವಿಶೇಷತೆ
ಹೊಸ ಜರ್ಸಿಯಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಂಡಲ ವಿನ್ಯಾಸ, ಶಕ್ತಿ ಮತ್ತು ಏಕತೆಯ ಸಂಕೇತವಾಗಿ ಸುದರ್ಶನ ಚಕ್ರದ ಆಧುನಿಕ ರೂಪ, ಅಶೋಕ ಚಕ್ರದಿಂದ ಪ್ರೇರಿತವಾದ ಕಡು ನೀಲಿ ಬಣ್ಣದ ಗೆರೆಗಳು ಹಾಗೂ ಮುಂಭಾಗದಲ್ಲಿ ದೇವನಾಗರಿ ಶೈಲಿಯಲ್ಲಿ “INDIA” ಎಂಬ ಬರಹವನ್ನು ಅಳವಡಿಸಲಾಗಿದೆ. ಕೇಸರಿ ಜರ್ಸಿಯ ಜೊತೆಗೆ ಪರ್ಯಾಯವಾಗಿ ಬಳಸಲು ಬಿಳಿ ಬಣ್ಣದ ಜರ್ಸಿಯನ್ನೂ ಸಿದ್ಧಪಡಿಸಲಾಗಿದೆ.

ಮಾಜಿ ನಾಯಕ ವಿರೇನ್ ರಸ್ಕಿನ್ಹಾ ಅಸಮಾಧಾನ
ಭಾರತ ಹಾಕಿ ತಂಡದ ಮಾಜಿ ನಾಯಕ Viren Rasquinha ಈ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ಭಾರತೀಯ ಹಾಕಿಯ ಪರಂಪರೆ ಮತ್ತು ಗುರುತು ಎಂದರೆ ನೀಲಿ ಜರ್ಸಿಯೇ. ವರ್ಷಗಳ ಕಾಲ ಅದೇ ಜರ್ಸಿಯನ್ನು ಹೆಮ್ಮೆಯಿಂದ ಧರಿಸಿದ್ದೇನೆ. ಅಭಿಮಾನಿಗಳ ಮನಸ್ಸಿನಲ್ಲೂ ಭಾರತೀಯ ತಂಡದ ಗುರುತು ನೀಲಿ ಬಣ್ಣವೇ ಆಗಿದೆ. ಇದ್ದಕ್ಕಿದ್ದಂತೆ ಕೇಸರಿ ಬಣ್ಣಕ್ಕೆ ಬದಲಾಗಲು ಯಾವ ತಾರ್ಕಿಕ ಕಾರಣವಿದೆ ಎಂದು ಪ್ರಶ್ನಿಸಿದ್ದಾರೆ.

ವಿಶ್ವಕಪ್‌ಗೆ ಮುನ್ನವೇ ಬಿಸಿ ಚರ್ಚೆ
ಆಗಸ್ಟ್ 15ರಿಂದ 30ರವರೆಗೆ ನಡೆಯಲಿರುವ FIH ಹಾಕಿ ವಿಶ್ವಕಪ್ ಆರಂಭಕ್ಕೂ ಮುನ್ನವೇ ಜರ್ಸಿ ಬಣ್ಣದ ಬದಲಾವಣೆ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದೆ. ಒಂದು ಕಡೆ ಹಾಕಿ ಇಂಡಿಯಾ ಇದನ್ನು ತಾಂತ್ರಿಕ ಅಗತ್ಯ ಎಂದು ಸಮರ್ಥಿಸಿಕೊಂಡರೆ, ಮತ್ತೊಂದು ಕಡೆ ಹಲವು ಮಾಜಿ ಆಟಗಾರರು ಮತ್ತು ಅಭಿಮಾನಿಗಳು ಭಾರತೀಯ ಹಾಕಿಯ ಸಾಂಪ್ರದಾಯಿಕ ಗುರುತನ್ನು ಉಳಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವಕಪ್‌ನಲ್ಲಿ ಈ ಹೊಸ ಜರ್ಸಿಯಲ್ಲಿ ಭಾರತ ಹೇಗೆ ಪ್ರದರ್ಶನ ನೀಡಲಿದೆ ಎಂಬ ಕುತೂಹಲದ ಜೊತೆಗೆ, ಜರ್ಸಿ ಬಣ್ಣದ ವಿವಾದವೂ ಮುಂದುವರಿಯುವ ಸಾಧ್ಯತೆ ಇದೆ.

Related Articles

ಇತ್ತೀಚಿನ ಸುದ್ದಿಗಳು