ಆಗಸ್ಟ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ವಿಚಾರಣೆಗೆ ಒಳಪಡಲು, ಕೀನ್ಯಾದ ರಾಜತಾಂತ್ರಿಕರ ಮಗನ ಕಾನೂನು ರಕ್ಷಣೆಯನ್ನು ಮನ್ನಾ ಮಾಡುವಂತೆ ವಿದೇಶಾಂಗ ಸಚಿವಾಲಯ ಶುಕ್ರವಾರ ಕೀನ್ಯಾವನ್ನು ಒತ್ತಾಯಿಸಿದೆ.
“ಈ ವಿಚಾರದಲ್ಲಿ ತನಿಖೆ ಮುಂದುವರಿಯಲು, ಸಂಬಂಧಪಟ್ಟ ವ್ಯಕ್ತಿಯ ರಾಜತಾಂತ್ರಿಕ ವಿನಾಯಿತಿಯನ್ನು ಮನ್ನಾ ಮಾಡುವಂತೆ ನಾವು ಕೀನ್ಯಾ ಸರ್ಕಾರವನ್ನು ವಿನಂತಿಸಿದ್ದೇವೆ ಮತ್ತು ನಾವು ಈ ವಿಷಯದ ಬಗ್ಗೆ ಕೀನ್ಯಾ ಸರ್ಕಾರದೊಂದಿಗೆ ಮಾತುಕತೆ ಮುಂದುವರಿಸುತ್ತಿದ್ದೇವೆ,” ಎಂದು ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ದಕ್ಷಿಣ ದೆಹಲಿಯ ಶಾಲೆಯೊಂದರಲ್ಲಿ ಓದುತ್ತಿರುವ 12 ನೇ ತರಗತಿಯ ವಿದ್ಯಾರ್ಥಿಯು ಆಗಸ್ಟ್‌ನಲ್ಲಿ ಶಾಲಾ ಬಸ್‌ನಲ್ಲಿ ಐದು ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು . ಸೆಪ್ಟೆಂಬರ್‌ನಲ್ಲಿ ತಮ್ಮ ಮಗಳು ಆಗಾಗ್ಗೆ ಮೂತ್ರ ವಿಸರ್ಜಿಸುತ್ತಿದ್ದಾಗಿ ದೂರು ನೀಡಿದ ನಂತರ ಬಾಲಕಿಯ ಪೋಷಕರು ಈ ಘಟನೆಯನ್ನು ಬಹಿರಂಗಪಡಿಸಿದರು. ವೈದ್ಯಕೀಯ ತಪಾಸಣೆಯ ನಂತರ ಲೈಂಗಿಕ ದೌರ್ಜನ್ಯ ದೃಢಪಟ್ಟಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು.
ಸೆಪ್ಟೆಂಬರ್ 19 ರಂದು ಎಫ್‌ಐಆರ್ ಸಲ್ಲಿಸಿದಾಗ ಮಗುವಿಗೆ ಆರಂಭದಲ್ಲಿ ಅಪರಾಧಿಯ ಹೆಸರನ್ನು ಹೇಳಲು ಸಾಧ್ಯವಾಗಲಿಲ್ಲ ಎಂದು ದಿ ಪ್ರಿಂಟ್ ವರದಿ ಮಾಡಿದೆ. ನವೆಂಬರ್‌ನಲ್ಲಿ ಮಗು ತನ್ನ ಮೇಲೆ ದೌರ್ಜನ್ಯ ಎಸಗಿದ ಕೀನ್ಯಾದ ರಾಜತಾಂತ್ರಿಕರ ಮಗನನ್ನು ಗುರುತಿಸಿದಳು.
ವಯಸ್ಕ ಎಂದು ನಂಬಲಾದ 12 ನೇ ತರಗತಿಯ ವಿದ್ಯಾರ್ಥಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ಮತ್ತು ಭಾರತೀಯ ನ್ಯಾಯ ಸಂಹಿತಾದ ಲೈಂಗಿಕ ದೌರ್ಜನ್ಯದ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೂರುದಾರರ ಕುಟುಂಬ ಮತ್ತು ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಇತರ ಪೋಷಕರ ಪ್ರತಿಭಟನೆಯ ನಂತರ ಫೆಬ್ರವರಿಯಲ್ಲಿ ಅತನನ್ನು ಶಾಲೆಯಿಂದ ಅಮಾನತುಗೊಳಿಸಲಾಯಿತು. ಆದಾಗ್ಯೂ, ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ವಿದೇಶಗಳಲ್ಲಿರುವ ರಾಜತಾಂತ್ರಿಕರು ಮತ್ತು ಅವರ ಕುಟುಂಬಗಳನ್ನು ರಕ್ಷಿಸುವ ಕಾನೂನು ವಿನಾಯಿತಿ ಇರುವುದರಿಂದ ತನಿಖೆ ಮುಂದುವರಿಯಲಿಲ್ಲ.
1961 ರ ರಾಜತಾಂತ್ರಿಕ ಸಂಬಂಧಗಳ ಕುರಿತಾದ ವಿಯೆನ್ನಾ ಸಮಾವೇಶವು “ರಾಜತಾಂತ್ರಿಕ ಏಜೆಂಟ್‌ಗಳು ಮತ್ತು ವಿನಾಯಿತಿ ಅನುಭವಿಸುತ್ತಿರುವ ವ್ಯಕ್ತಿಗಳ ಅಧಿಕಾರ ವ್ಯಾಪ್ತಿಯಿಂದ ವಿನಾಯಿತಿಯನ್ನು… ಸರ್ಕಾರ ಮನ್ನಾ ಮಾಡಬಹುದು,” ಎಂದು ಹೇಳುತ್ತದೆ.