ಸ್ಥಳೀಯ ಸಮುದಾಯಗಳು ಮತ್ತು ಪರಿಸರವಾದಿಗಳ ವಿರೋಧದ ನಂತರ ಗುಜರಾತ್‌ನಲ್ಲಿರುವ ನಾಲ್ಕು ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಸ್ಥಾವರಗಳಲ್ಲಿ ಹೂಡಿಕೆ ಮಾಡದೇ ಇರಲು ವಿಶ್ವ ಬ್ಯಾಂಕ್ ನಿರ್ಧರಿಸಿದೆ ಎಂದು ನಾಗರಿಕ ಸಮಾಜ ಗುಂಪು ಅಲೈಯನ್ಸ್ ಫಾರ್ ಇನ್ಸಿನೇಟರ್ ಫ್ರೀ ಗುಜರಾತ್ ಗುರುವಾರ ತಿಳಿಸಿದೆ.
ವಿಶ್ವ ಬ್ಯಾಂಕಿನ ಖಾಸಗಿ ಸಾಲ ನೀಡುವ ಅಂಗವಾಗಿರುವ ಅಂತರರಾಷ್ಟ್ರೀಯ ಹಣಕಾಸು ನಿಗಮವು, ರಾಜ್‌ಕೋಟ್, ವಡೋದರಾ, ಅಹಮದಾಬಾದ್ ಮತ್ತು ಜಾಮ್‌ನಗರದಲ್ಲಿ ಅಂತಹ ನಾಲ್ಕು ಸ್ಥಾವರಗಳನ್ನು ನಿರ್ಮಿಸಲು ಅಬೆಲ್ಲನ್ ಕ್ಲೀನ್ ಎನರ್ಜಿ ಲಿಮಿಟೆಡ್‌ಗೆ ಸಹಾಯ ಮಾಡಲು 40 ಮಿಲಿಯನ್ ಡಾಲರ್ ಸಾಲವನ್ನು ನೀಡುವ ಬಗ್ಗೆ ಪರಿಗಣಿಸುತ್ತಿದೆ ಎಂದು ಗುಂಪು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.
ಅಬೆಲ್ಲಾನ್ ಕ್ಲೀನ್ ಎನರ್ಜಿ ಲಿಮಿಟೆಡ್ ಭಾರತೀಯ ಕಂಪನಿಯಾಗಿದ್ದು, ನಗರ ಮತ್ತು ಕೃಷಿ ತ್ಯಾಜ್ಯವನ್ನು ಸುಟ್ಟು ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದ್ದು. ಪ್ರಸ್ತುತ, ಜಾಮ್‌ನಗರದಲ್ಲಿರುವ ತ್ಯಾಜ್ಯದಿಂದ ಇಂಧನ ದಹನ ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದೆ.
ಈ ನಾಲ್ಕು ಸ್ಥಾವರಗಳು ಪ್ರತಿದಿನ ಒಟ್ಟು 3,750 ಟನ್ ವಿಂಗಡಿಸದ ಪುರಸಭೆಯ ಘನತ್ಯಾಜ್ಯವನ್ನು ಸುಡಲು ಉದ್ದೇಶಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಅಬೆಲ್ಲನ್ ಕ್ಲೀನ್ ಎನರ್ಜಿ ಲಿಮಿಟೆಡ್‌ನಲ್ಲಿನ ಪ್ರಸ್ತಾವಿತ ಹೂಡಿಕೆಯ ಕುರಿತು ಅಂತರರಾಷ್ಟ್ರೀಯ ಹಣಕಾಸು ನಿಗಮ ಬಿಡುಗಡೆ ಮಾಡಿದ ಹೇಳಿಕೆಯು ನಾಲ್ಕು ಜಿಲ್ಲೆಗಳಲ್ಲಿ ಯೋಜನೆಯ ಬಳಿ ವಾಸಿಸುವ ಸಮುದಾಯಗಳು ಮತ್ತು ಪರಿಸರವಾದಿಗಳನ್ನು ಗಾಬರಿಗೊಳಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಜೂನ್ 26, 2024 ರಂದು, ಯೋಜನೆಯಿಂದ ಪರಿಣಾಮಕ್ಕೆ ಒಳಗಾಗುವ ಸಮುದಾಯಗಳು ಪ್ರಸ್ತಾವಿತ ನಿಧಿಯನ್ನು ಪ್ರಶ್ನಿಸಿ ವಿಶ್ವಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದವು.
ಅವರು ಅಂತರರಾಷ್ಟ್ರೀಯ ಹಣಕಾಸು ನಿಗಮದ ಪಾಲುದಾರರ ಕುಂದುಕೊರತೆ ಪ್ರತಿಕ್ರಿಯೆ ತಂಡಕ್ಕೂ ದೂರುಗಳನ್ನು ಸಲ್ಲಿಸಿದರು ಮತ್ತು ಜುಲೈ 2024 ರಲ್ಲಿ ಯುನೈಟೆಡ್ ಸ್ಟೇಟ್ಸ್ ಖಜಾನೆಗೆ ಸ್ಥಾವರಗಳ ಪರಿಣಾಮವನ್ನು ಪ್ರಸ್ತುತಪಡಿಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ಇದಲ್ಲದೆ, ಸಮುದಾಯವು ಅಂತರರಾಷ್ಟ್ರೀಯ ಅಭಿಯಾನವೊಂದನ್ನು ಮುನ್ನಡೆಸಿತು , ಇದರಲ್ಲಿ ಪ್ರಪಂಚದಾದ್ಯಂತದ 174 ನೆಟ್‌ವರ್ಕ್‌ಗಳು, ನಾಗರಿಕ ಸಮಾಜ ಸಂಸ್ಥೆಗಳು, ಕಾರ್ಯಕರ್ತರು ಮತ್ತು ಸಮುದಾಯಗಳು ಅಬೆಲ್ಲನ್‌ಗೆ ಸಾಲವನ್ನು ತಿರಸ್ಕರಿಸುವಂತೆ ವಿಶ್ವಬ್ಯಾಂಕ್‌ನ ನಿರ್ದೇಶಕರ ಮಂಡಳಿಯನ್ನು ಬಲವಾಗಿ ಒತ್ತಾಯಿಸಿದವು. ಇವರು ಕೊಟ್ಟ ಕಾರಣ: ಈ ಯೋಜನೆಯು ಸಮುದಾಯಗಳ ಮೇಲೆ ವಾಯು ಮತ್ತು ಜಲ ಮಾಲಿನ್ಯ, ಆರೋಗ್ಯ ಸಮಸ್ಯೆಗಳು, ಹವಾಮಾನ ಪರಿಣಾಮಗಳು ಮತ್ತು ಸುಸ್ಥಿರ ತ್ಯಾಜ್ಯ ನಿರ್ವಹಣಾ ಪದ್ಧತಿಗಳನ್ನು ದುರ್ಬಲಗೊಳಿಸುವುದು ಮುಂತಾದ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ.
ಅಂತರರಾಷ್ಟ್ರೀಯ ಹಣಕಾಸು ನಿಗಮದ ಕಾರ್ಯಕ್ಷಮತೆಯ ಮಾನದಂಡಗಳು ಮತ್ತು ಭಾರತದಲ್ಲಿನ ಹಲವಾರು ಕಾನೂನುಗಳನ್ನು ಉಲ್ಲಂಘಿಸಿರುವುದರಿಂದ ಈ ಯೋಜನೆಯನ್ನು ರದ್ದುಗೊಳಿಸುವಂತೆ ಸಮುದಾಯಗಳು ಒತ್ತಾಯಿಸಿವೆ ಎಂದು ಪ್ರಕಟಣೆ ತಿಳಿಸಿದೆ.
ಸ್ಥಾವರಗಳಿಗೆ ವಿರೋಧ ವ್ಯಕ್ತವಾದ ಕಾರಣ, ಯೋಜನೆಯ ಕುರಿತು ಅಂತರರಾಷ್ಟ್ರೀಯ ಹಣಕಾಸು ನಿಗಮದ ನಿರ್ಧಾರವು ಎರಡು ಬಾರಿ ವಿಳಂಬವಾಯಿತು, ಮೊದಲು ಜುಲೈ 2024 ರಲ್ಲಿ ಮತ್ತು ಮತ್ತೊಮ್ಮೆ ಸೆಪ್ಟೆಂಬರ್ 2024 ರಲ್ಲಿ.
“ಯೋಜನೆಯ ಸ್ಥಿತಿಯ ಕುರಿತು ಐಎಫ್‌ಸಿ [ಇಂಟರ್ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್] ಜೊತೆ ವಿಚಾರಿಸಿದಾಗ, ಮಾಹಿತಿಗಾಗಿ ವಿನಂತಿ ಮಾಡಿದಾಗ, ಯೋಜನೆಯಲ್ಲಿ ಹೂಡಿಕೆ ಮಾಡುತ್ತಿಲ್ಲ ಎಂದು ಐಎಫ್‌ಸಿಯಿಂದ ನಮಗೆ ದೃಢೀಕರಣ ಸಿಕ್ಕಿದೆ” ಎಂದು ಅಲೈಯನ್ಸ್ ಫಾರ್ ಇನ್ಸಿನರೇಟರ್ ಫ್ರೀ ಗುಜರಾತ್ ಸ್ಪಷ್ಟಪಡಿಸಿದೆ.
“ಯೋಜನೆಯಿಂದ ಐಎಫ್‌ಸಿ ಹಿಂದೆ ಸರಿದಿರುವುದು ಸ್ಥಾವರದಿಂದ ಹಾನಿಗೊಳಗಾದ ಸ್ಥಳೀಯರಿಗೆ ಸಿಕ್ಕ ಪ್ರಮುಖ ವಿಜಯವಾಗಿದೆ. ಆದರೂ, ಸ್ಥಾವರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು ಪೀಡಿತ ಸಮುದಾಯಗಳಿಗೆ ಪರಿಹಾರವನ್ನು ನೀಡಿದಂತೆ,” ಎಂದು ಒಕ್ಕೂಟದ ಸದಸ್ಯ ಕೆರ್ ಜಯೇಂದ್ರಸಿನ್ಹ್ ಹೇಳಿದರು.
ಮತ್ತೊಬ್ಬ ಸದಸ್ಯೆ ಅಸ್ಮಿತಾ ಚಾವ್ಡಾ, ಅಂತರರಾಷ್ಟ್ರೀಯ ಹಣಕಾಸು ನಿಗಮದ ಘೋಷಣೆಯಿಂದ ತುಂಬಾ ಸಂತೋಷವಾಗಿದೆ, “ಕಳೆದ 10-12 ವರ್ಷಗಳಲ್ಲಿ ನಾವು ಕಂಡ ಮೊದಲ ಯಶಸ್ಸು ಇದು,” ಎಂದು ಹೇಳಿದರು.
ಅಬೆಲ್ಲನ್ ಇನ್ನೂ ಕೆಲವು ನಿರ್ಮಾಣ ಕಾರ್ಯಗಳನ್ನು ಮಾಡುತ್ತಿದೆ. ಇತರ ಹಣಕಾಸು ಸಂಸ್ಥೆಗಳು ಐಎಫ್‌ಸಿಯಿಂದ ಸೂಚನೆಯನ್ನು ಪಡೆದು ದೇಶದಲ್ಲಿರುವ ಎಲ್ಲಾ ಡಬ್ಲ್ಯೂಟಿಇಗಳು [ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಸ್ಥಾವರಗಳು] ಹೆಚ್ಚು ಮಾಲಿನ್ಯಕಾರಕವಾಗಿರುವುದರಿಂದ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿಯಾಗಿರುವುದರಿಂದ ಅವುಗಳಿಗೆ ಹಣಕಾಸು ಒದಗಿಸುವುದನ್ನು ನಿಲ್ಲಿಸಬೇಕೆಂದು ನಾವು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ
ಅಬೆಲ್ಲನ್ ಕ್ಲೀನ್ ಎನರ್ಜಿ ಲಿಮಿಟೆಡ್‌ನ ಆರ್ಥಿಕ ವಿಶ್ಲೇಷಣೆಯು “ಗುಜರಾತ್‌ನ ಜಾಮ್‌ನಗರದಲ್ಲಿರುವ ಕೇವಲ ಒಂದು ಕಾರ್ಯನಿರ್ವಹಿಸುತ್ತಿರುವ WTE ದಹನ ಘಟಕದೊಂದಿಗೆ ರಾಶಿಯಾದ ನಷ್ಟ ಮತ್ತು ಸಾಲಗಳನ್ನು ಬಹಿರಂಗಪಡಿಸಿದೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
“ಕಂಪನಿಯ ನಿವ್ವಳ ಲಾಭವು 2021 ರಲ್ಲಿ ಸರಿಸುಮಾರು 11.1 ಕೋಟಿ ರೂ.ಗಳಿಂದ 2023 ರಲ್ಲಿ 19 ಕೋಟಿ ರೂ.ಗಳ ನಷ್ಟಕ್ಕೆ ಇಳಿದಿದೆ… ಕಂಪನಿಯು ತನ್ನ ಸಾಲದ ಬಡ್ಡಿ ಪಾವತಿಗಳನ್ನು ಮರುಪಾವತಿಸಲು ಸಹ ಸಾಧ್ಯವಾಗುತ್ತಿಲ್ಲ” ಎಂದು ಅದು ಹೇಳಿದೆ.
ಹಣಕಾಸಿನ ನಷ್ಟದಲ್ಲಿರುವ ಮತ್ತು ಸಿಲುಕಿಕೊಂಡಿರುವ ಆಸ್ತಿಯಾಗುವ ಅಪಾಯದಲ್ಲಿರುವ ಕಂಪನಿಗೆ ಸಾರ್ವಜನಿಕ ನಿಧಿಯನ್ನು ಖರ್ಚು ಮಾಡಬಾರದು ಎಂದು ಬಿಡುಗಡೆಯಲ್ಲಿ ವಿನಂತಿಸಲಾಗಿದೆ.