ಮುಂಬೈ: ಮೊನ್ನೆಯಷ್ಟೇ ಸಂಸತ್ತಿನಲ್ಲಿ ಮೂರು ಕಾಯಿದೆಗಳನ್ನು ಮಂಡಿಸಿ ಎದೆಯುಬ್ಬಿಸಿದ್ದ ಅಮಿತ್ ಶಾ ಅವರಿಗೆ ಅವರದ್ದೇ ಪಕ್ಷದ ಒಂದು ಕಾಲದ ಮಿತ್ರ ಮತ್ತು ಇಂದಿನ ವೈರಿ ಉದ್ಧವ್ ಠಾಕ್ರೆ ಬಣದ ಶಿವಸೇನೆಯ ಸಂಜಯ್ ರಾವುತ್ ತಮ್ಮ ಎಂದಿನ ಮೊನಚಾದ ಶೈಲಿಯಲ್ಲಿ ಕುಟುಕಿದ್ದಾರೆ.
ದೇಶ ದ್ರೋಹದ ವಿರುದ್ಧದ ಕಾನೂನನ್ನು ತೆಗೆದುಹಾಕಿರುವುದರ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆಯ ನಾಯಕ ಬಿಜೆಪಿ ತನ್ನ ಮಾತೃ ಸಂಸ್ಥೆ RSS ಹಾಗೂ ಪಾಕಿಸ್ಥಾನಕ್ಕೆ DRDO ಮಾಹಿತಿಗಳನ್ನು ಹನಿಟ್ರಾಪ್‌ಗೆ ಬಿದ್ದು ಬಹಿರಂಗಪಡಿಸಿದ್ದ RSS ನಿಕಟವರ್ತಿ ಪ್ರದೀಪ್ ಕುರುಲ್ಕರ್ ಅವರನ್ನು ಕಾಪಾಡಿಕೊಳ್ಳಲು ಈ ಕಾನೂನನ್ನು ರಚಿಸಿದೆ ಎಂದು ಲೇವಡಿ ಮಾಡಿದ್ದಾರೆ.
ಕುರುಲ್ಕರ್ ಅವರು ಪಾಕಿಸ್ಥಾನದ ಮಹಿಳೆಯೊಬ್ಬಳು ಬೀಸಿದ ಜಾಲದಲ್ಲಿ ಬಿದ್ದು DRDO ಸಂಸ್ಥೆಗೆ ಸೇರಿದ ರಹಸ್ಯಗಳನ್ನು ಬಹಿರಂಗ ಪಡಿಸಿದ್ದಕ್ಕಾಗಿ ಪ್ರಸ್ತುತ ಬಂಧನದಲ್ಲಿದ್ದಾರೆ.
ವಿವರಗಳಿಗೆ ಈ ವರದಿಯನ್ನು ಓದಿ: DRDO ವಿಜ್ಞಾನಿ, ಆರ್‌ಎಸ್‌ಎಸ್ ನಿಕಟವರ್ತಿ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ ಎಟಿಎಸ್
ದಾಳಿ ಮುಂದುವರೆಸಿ ಮಾತನಾಡಿರುವ ಸಂಜಯ್ ರಾವುತ್, ʼಬಿಜೆಪಿ ಬಿಜೆಪಿ ತಾನು ದೇಶದ್ರೋಹದ ಕಾನೂನು ತೆಗೆದುಹಾಕಿರುವುದಾಗಿ ಎದೆ ತಟ್ಟಿಕೊಳ್ಳಬಾರದು. ಏಕೆಂದರೆ ಅದು ಈಗ ಅದರ ಬದಲಿಗೆ ತಂದಿರುವ ಕಾನೂನು ಬ್ರಿಟಿಷ್ ಕಾಲದ ಕಾನೂನಿಗಿಂತಲೂ ಕರಾಳವಾಗಿದೆ” ಎಂದು ಅವರು ಟೀಕಿಸಿದ್ದಾರೆ.
ಪೊಲೀಸ್ ದರ್ಬಾರಿಗೆ ದಾರಿಯಾಗಲಿದೆ ಹೊಸ ಕಾನೂನು: ಕಪಿಲ್ ಸಿಬಲ್
‘ಬ್ರಿಟಿಷರ ಕಾಲದ ಅಪರಾಧ ಕಾನೂನುಗಳಿಗೆ ಬದಲಾಗಿ ತರಲಾಗುತ್ತಿರುವ ಭಾರತೀಯ ನ್ಯಾಯ ಸಂಹಿತೆ ಮಸೂದೆಯು ದೇಶದಲ್ಲಿ ರಾಜಕೀಯ ಉದ್ದೇಶಕ್ಕಾಗಿ ನಿರ್ದಯಿ ಪೋಲೀಸ್ ಬಲ ಪ್ರಯೋಗಕ್ಕೆ ದಾರಿ ಮಾಡಿಕೊಡಲಿದೆ’ ಎಂದು ಕೇಂದ್ರದ ಮಾಜಿ ಕಾನೂನು ಸಚಿವ ಕಪಿಲ್ ಸಿಬಲ್ ಶನಿವಾರ ಅಭಿಪ್ರಾಯಪಟ್ಟಿದ್ದಾರೆ.
ಇಂತಹ ಕಾನೂನುಗಳ ಜಾರಿಯ ಮೂಲಕ ವಿರೋಧಿಗಳ ಸದ್ದಡಗಿಸುವುದು ಕೇಂದ್ರ ಸರ್ಕಾರದ ಗುಪ್ತ ಕಾರ್ಯಸೂಚಿಯಾಗಿದೆ ಎಂದು ಅವರು ಆರೋಪಿಸಿದರು.
ಭಾರತೀಯ ನ್ಯಾಯ ಸಂಹಿತೆಯಲ್ಲಿ ಪೊಲೀಸ್ ಕಸ್ಟಡಿ ಅವಧಿಯನ್ನು 15ರಿಂದ 60 ಅಥವಾ 90 ದಿನಕ್ಕೆ ಅನುಮತಿಸಲಾಗಿದೆ. ದೇಶದ ಭದ್ರತೆಗೆ ಧಕ್ಕೆ ತರುವ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲು ಹೊಸ ಸೆಕ್ಷನ್‌ಗಳನ್ನು (ಮರುವ್ಯಾಖ್ಯಾನ) ರೂಪಿಸಲಾಗಿದೆ. ಇವೆಲ್ಲವೂ ವಿರೋಧಿಗಳ ಧ್ವನಿ ನಿಗ್ರಹಿಸುವ ಕಾರ್ಯಸೂಚಿಯನ್ನು ಹೊಂದಿವೆ ಎಂದು ಅವರು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಒಂದರಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.