Home ಬ್ರೇಕಿಂಗ್ ಸುದ್ದಿ ಹಾಸನ ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳಿಗೆ ಹೊಸ ಪೌಷ್ಟಿಕಾಂಶ ಪುನರ್ವಸತಿ ಕೇಂದ್ರಗಳು – ಶ್ರೇಯಸ್ ಪಟೇಲ್

ಹಾಸನ ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳಿಗೆ ಹೊಸ ಪೌಷ್ಟಿಕಾಂಶ ಪುನರ್ವಸತಿ ಕೇಂದ್ರಗಳು – ಶ್ರೇಯಸ್ ಪಟೇಲ್

ಹಾಸನ: ಜಿಲ್ಲೆಯ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆ ಸುಧಾರಣೆಗೆ ಮಹತ್ವದ ಹೆಜ್ಜೆಯಾಗಿ ಹಾಸನ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಹೊಸ ಪೌಷ್ಟಿಕಾಂಶ ಪುನರ್ವಸತಿ ಕೇಂದ್ರಗಳ (NRC) ಸ್ಥಾಪನೆಗೆ ಅನುಮೋದನೆ ದೊರೆತಿದೆ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ತಿಳಿಸಿದ್ದಾರೆ. ಸಂಸತ್ತಿನಲ್ಲಿ ತಾವು ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ. 2026–27ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಅರಸೀಕೆರೆ, ಬೇಲೂರು, ಸಕಲೇಶಪುರ ಹಾಗೂ ಅರಕಲಗೂಡು ತಾಲೂಕುಗಳಲ್ಲಿ ಹೊಸ NRC ಕೇಂದ್ರಗಳನ್ನು ಸ್ಥಾಪಿಸಲು ಅನುಮೋದನೆ ದೊರೆತಿದೆ ಎಂದು ಅವರು ಹೇಳಿದ್ದಾರೆ. ಈಗಾಗಲೇ ಹಾಸನದ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (HIMS)ನಲ್ಲಿ 20 ಹಾಸಿಗೆಗಳ ಪೌಷ್ಟಿಕಾಂಶ ಪುನರ್ವಸತಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಇದೀಗ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮತ್ತಷ್ಟು ಕೇಂದ್ರಗಳು ಆರಂಭವಾಗುವುದರಿಂದ ಗ್ರಾಮೀಣ ಪ್ರದೇಶಗಳ ಅಪೌಷ್ಟಿಕ ಮಕ್ಕಳಿಗೆ ಸ್ಥಳೀಯವಾಗಿಯೇ ಅಗತ್ಯ ಚಿಕಿತ್ಸಾ ಹಾಗೂ ಪೌಷ್ಟಿಕ ಸೇವೆಗಳು ದೊರೆಯಲಿವೆ ಎಂದು ಅವರು ತಿಳಿಸಿದ್ದಾರೆ.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ, ವೈದ್ಯಕೀಯ ಆರೈಕೆ ಹಾಗೂ ನಿರಂತರ ಆರೋಗ್ಯ ಮೇಲ್ವಿಚಾರಣೆ ಒದಗಿಸುವಲ್ಲಿ NRC ಕೇಂದ್ರ ಗಳು ಪ್ರಮುಖ ಪಾತ್ರ ವಹಿಸಲಿವೆ. ಮಕ್ಕಳ ಆರೋಗ್ಯ ಬಲಪಡಿಸುವ ಮೂಲಕ ಅವರ ಉತ್ತಮ ಬೆಳವಣಿಗೆಗೆ ಈ ಕೇಂದ್ರಗಳು ನೆರವಾಗಲಿವೆ ಎಂದು ಸಂಸದರು ಹೇಳಿದ್ದಾರೆ. ನಮ್ಮ ಮಕ್ಕಳ ಆರೋಗ್ಯವೇ ನಮ್ಮ ಭವಿಷ್ಯ. ಹಾಸನದ ಪ್ರತಿಯೊಂದು ಮಗುವಿಗೂ ಉತ್ತಮ ಪೌಷ್ಟಿಕತೆ, ಆರೋಗ್ಯ ಮತ್ತು ಸುರಕ್ಷಿತ ಭವಿಷ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ನನ್ನ ಪ್ರಯತ್ನ ನಿರಂತರವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

You cannot copy content of this page

Exit mobile version