Home ಬ್ರೇಕಿಂಗ್ ಸುದ್ದಿ ಹಾಸನ ಡಿಸಿ ವಿರುದ್ಧ ರೇವಣ್ಣ ಗರಂ – ಪ್ರತಿಭಟನೆ ಎಚ್ಚರಿಕೆ

ಹಾಸನ ಡಿಸಿ ವಿರುದ್ಧ ರೇವಣ್ಣ ಗರಂ – ಪ್ರತಿಭಟನೆ ಎಚ್ಚರಿಕೆ

ಹಾಸನ: ಗ್ರಾಮ ಪಂಚಾಯಿತಿ ಚುನಾವಣೆಯ ಮೀಸಲಾತಿ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಹಾಸನದಲ್ಲಿ ಜೆಡಿಎಸ್ ಶಾಸಕರಾದ ಎ.ಮಂಜು ಹಾಗೂ ಹೆಚ್.ಪಿ.ಸ್ವರೂಪ್ ಪ್ರಕಾಶ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇವಣ್ಣ, ತಮ್ಮ 30 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಜಿಲ್ಲಾಧಿಕಾರಿಯನ್ನು ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.“ಯಾವ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಮೀಸಲಾತಿ ಬದಲಾಯಿಸಿದ್ದಾರೆ? ಕರಡು ಪ್ರತಿ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕಿತ್ತು. ಆದರೆ ಯಾವುದೇ ಆಕ್ಷೇಪಣೆ ಕೇಳದೆ ಮೀಸಲಾತಿ ಬದಲಾವಣೆ ಮಾಡಲಾಗಿದೆ,” ಎಂದು ರೇವಣ್ಣ ಆರೋಪಿಸಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಅಧಿಕಾರಿಗಳು ಅಧಿಕಾರದ ದರ್ಪ ತೋರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಹಾಸನದಲ್ಲಿ ಎಸಿ ಹಾಗೂ ತಹಶೀಲ್ದಾರ್ ಕಚೇರಿಗಳಲ್ಲಿ ಲೂಟಿ ನಡೆಯುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದರು.

ಮೀಸಲಾತಿ ಪಟ್ಟಿ ಸರಿಪಡಿಸದಿದ್ದರೆ ಮುಂದಿನ ಹಂತದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ ರೇವಣ್ಣ, ಸೋಮವಾರ ಮಾಜಿ ಸಚಿವ ಹೆಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು. ಬಳಿಕ ಒಂದು ವಾರ ಗಡುವು ನೀಡಲಾಗುವುದು. ಸಮಸ್ಯೆ ಬಗೆಹರಿಯದಿದ್ದರೆ ನಾಲ್ವರು ಜೆಡಿಎಸ್ ಶಾಸಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು. ಇದೇ ವೇಳೆ, ಮೀಸಲಾತಿ ಪ್ರಕ್ರಿಯೆಯಲ್ಲಿ ಕಾನೂನುಬದ್ಧ ಕ್ರಮಗಳನ್ನು ಪಾಲಿಸಿಲ್ಲ ಎಂದು ಮಾಜಿ ಸಚಿವ ಎ.ಮಂಜು ಆರೋಪಿಸಿದರು. ಮೀಸಲಾತಿ ಪ್ರಕಟಿಸುವ ಮೊದಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೋಟಿಸ್ ಬೋರ್ಡ್‌ನಲ್ಲಿ ಕರಡು ಪಟ್ಟಿ ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಬೇಕಿತ್ತು. ಆದರೆ ಯಾವುದೇ ಅವಕಾಶ ನೀಡದೆ ಏಕಾಏಕಿ ಗೆಜೆಟ್ ನೋಟಿಫಿಕೇಶನ್ ಮಾಡಲಾಗಿದೆ ಎಂದು ಹೇಳಿದರು.ಮೀಸಲಾತಿ ಪಟ್ಟಿಯಲ್ಲಿ ಲೋಪಗಳಿದ್ದು, ಈ ಕುರಿತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಇಲ್ಲವಾದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ನಾಯಕರು ಎಚ್ಚರಿಕೆ ನೀಡಿದರು.

ರೇವಣ್ಣ ಅವರು ಜಿಲ್ಲೆಯಲ್ಲಿ ಬರ ಪರಿಸ್ಥಿತಿ, ಬೆಳೆ ವಿಮೆ ವಿಳಂಬ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.

You cannot copy content of this page

Exit mobile version