ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಡಿಯಲ್ಲಿ ಮುಂದಿನ ವರ್ಷದಿಂದ ಅಂತಿಮ ವರ್ಷದ ಎಂಬಿಬಿಎಸ್ ವಿಧ್ಯಾರ್ಥಿಗಳಿಗೆ ‘ನೆಕ್ಸ್ಟ್’ ಪರೀಕ್ಷೆ ಕಡ್ಡಾಯ ಎಂದು ಮೂಲಗಳು ತಿಳಿಸಿವೆ. ದೆಹಲಿಯ ಏಮ್ಸ್ ಸಂಸ್ಥೆ ಕಡೆಯಿಂದ ಈ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯ ನಂತರವಷ್ಟೇ ವಿಧ್ಯಾರ್ಥಿಗಳು ತಮ್ಮ ವೈದ್ಯಕೀಯ ವೃತ್ತಿ ಆರಂಭಿಸಲು ಮತ್ತು ಶೈಕ್ಷಣಿಕ ಜೀವನ ಮುಂದುವರೆಸಲು ಅವಕಾಶವಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ನಿರ್ಗಮನ ಪರೀಕ್ಷೆ (ನೆಕ್ಸ್ಟ್) ನಡೆಯಲಿದ್ದು, ಭಾರತದಲ್ಲಿ ವೃತ್ತಿ ಜೀವನ ನಡೆಸಲು ಇಚ್ಛಿಸುವವರು ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದೆ. ಪರೀಕ್ಷೆಗೆ ಸಿದ್ಧತೆ ನಡೆಸಲು ವಿದ್ಯಾರ್ಥಿಗಳಿಗೆ ಸಮಯಾವಕಾಶ ನೀಡಲಾಗುತ್ತದೆ. ಪರೀಕ್ಷೆಗೂ ಮೊದಲು ಅಣಕು ಪರೀಕ್ಷೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಯಾ ಕಾಲೇಜುಗಳಲ್ಲೇ ಎಂಬಿಬಿಎಸ್ ಪರೀಕ್ಷೆ ನಡೆಯಲಿದ್ದು, ರಾಷ್ಟ್ರೀಯ ಪರೀಕ್ಷಾ ಮಂಡಳಿಯು ನೀಟ್, ಪಿಜಿ ಹಾಗೂ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಸ್ಕ್ರೀನಿಂಗ್ ಪರೀಕ್ಷೆ ನಡೆಸುತ್ತದೆ.
2020 ರಲ್ಲಿ ಈ ಕಾಯ್ದೆ ಜಾರಿಗೆ ಬಂದಿದೆ. ಇದರ ಅನ್ವಯ 3 ವರ್ಷಗಳಲ್ಲಿ ಈ ‘ನೆಕ್ಸ್ಟ್’ ಪರೀಕ್ಷೆ ನಡೆಸಬೇಕಿದೆ. ಆದರೆ ಕಳೆದ ವರ್ಷ ಕೇಂದ್ರ ಸರ್ಕಾರ ಒಂದು ವರ್ಷಗಳ ಕಾಲ ಈ ಪರೀಕ್ಷೆ ಮುಂದೂಡಿತ್ತು. ಆ ಹಿನ್ನೆಲೆಯಲ್ಲಿ 2024 ರ ವರ್ಷದಲ್ಲಿ ಈ ಪರೀಕ್ಷೆ ನಡೆಯುವ ಎಲ್ಲಾ ಸಾಧ್ಯತೆಗಳು ಇದೆ ಎನ್ನಲಾಗಿದೆ.