Home ಬ್ರೇಕಿಂಗ್ ಸುದ್ದಿ ‘ಆಕೆಯ ಶವವನ್ನು ಬೇಯಿಸಿ ವಿಲೇವಾರಿ ಮಾಡಲಾಯ್ತು!’ ; ಮುಂಬೈನಲ್ಲೊಂದು ಭೀಕರ ಕೊಲೆ ಪ್ರಕರಣ

‘ಆಕೆಯ ಶವವನ್ನು ಬೇಯಿಸಿ ವಿಲೇವಾರಿ ಮಾಡಲಾಯ್ತು!’ ; ಮುಂಬೈನಲ್ಲೊಂದು ಭೀಕರ ಕೊಲೆ ಪ್ರಕರಣ

0

ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣ ಇನ್ನೂ ಜನರ ಮನಸ್ಸಿನಲ್ಲಿ ಮಾಸುವ ಮುನ್ನವೇ ಅದೇ ಮಾದರಿಯ ಹಾಗೂ ಅದಕ್ಕಿಂತ ಭೀಕರ ಎನ್ನಿಸುವ ಕೊಲೆ ಪ್ರಕರಣವೊಂದು ಮಹಾರಾಷ್ಟ್ರದ ಥಾಣೆ ಭಾಗದಿಂದ ದಾಖಲಾಗಿದೆ.

3 ವರ್ಷಗಳ ತನ್ನ ಲಿವ್ ಇನ್ ಸಂಗಾತಿಯನ್ನು ಕೊಂದ ಆರೋಪಿಯ ಹೆಸರು ಮನೋಜ್ ಸಾನೆ. ತನ್ನ ಸಂಗಾತಿ ಸರಸ್ವತಿ ವೈದ್ಯ ಎಂಬುವವರನ್ನು ಮರ ಕಡಿಯುವ ಯಂತ್ರದಿಂದ ತುಂಡು ತುಂಡಾಗಿ ಕತ್ತರಿಸಿ, ನಂತರ ಶವ ವಾಸನೆ ಬಾರದಂತೆ ಕುಕ್ಕರಿನಲ್ಲಿ ಬೇಯಿಸಿ ನಂತರ ಅದನ್ನು ವಿಲೇವಾರಿ ಮಾಡುವ ಸಮಯದಲ್ಲಿ ಸಿಕ್ಕಿ ಬಿದ್ದಿದ್ದಾನೆ.

ಘಟನೆಯ ವಿವರ ; ಹಿಂದು ಮುಂದು ಗೊತ್ತಿಲ್ಲದ 32 ವರ್ಷದ ಸರಸ್ವತಿ ವೈದ್ಯ ಹಾಗೂ 56 ವರ್ಷದ ಮನೋಜ್ ಸಾನೆ ಕಳೆದ ಮೂರು ವರ್ಷಗಳಿಂದ ಮುಂಬೈನ ಮೀರಾ ರೋಡ್ ಭಾಗದ ಆಕಾಶಗಂಗಾ ವಸತಿ ಸಮುಚ್ಚಯದಲ್ಲಿ ವಾಸವಿದ್ದರು. ಕಳೆದ ಹತ್ತು ವರ್ಷಗಳಿಂದ ಇವರಿಬ್ಬರ ನಡುವೆ ಸಂಪರ್ಕವಿದ್ದು ಈ ಹಿಂದೆ ಮುಂಬೈನ ಬೋರಿವಳ್ಳಿಯಲ್ಲಿ ವಾಸವಿದ್ದರು. ಕಳೆದ ಮೂರು ವರ್ಷಗಳ ಈಚೆಗೆ ಆಕಾಶಗಂಗಾ ಅಪಾರ್ಟ್ಮೆಂಟ್ ಗೆ ತಮ್ಮ ವಾಸ್ತವ್ಯವನ್ನು ಸ್ಥಳಾಂತರಿಸಿದ್ದರು.

ಮನೋಜ್ ಸಾನೆ ಅನುಮಾನದ ವ್ಯಕ್ತಿಯಾಗಿದ್ದು, ತನ್ನ ಸಂಗಾತಿ ಸರಸ್ವತಿ ವೈದ್ಯ ಯಾರ ಬಳಿಯೇ ಮಾತನಾಡಲಿ, ವ್ಯವಹರಿಸಲಿ ಅವರನ್ನು ಅನುಮಾನಾಸ್ಪದವಾಗಿ ನೋಡುತ್ತಿದ್ದ. ಹಾಗೂ ಪದೇ ಪದೆ ಆಕೆಯನ್ನು ಪ್ರಶ್ನಿಸುತ್ತಿದ್ದ. ಇದೇ ಕಾರಣಕ್ಕೆ ಹಲವು ದಿನಗಳಿಂದ ಅವರ ನಡುವೆ ಮನಸ್ತಾಪ ಉಂಟಾಗಿತ್ತು.

ಕಳೆದ ಜೂನ್ 6 ಕ್ಕೆ ಇವರಿಬ್ಬರು ತಂಗಿದ್ದ ಅಪಾರ್ಟ್ಮೆಂಟ್ ಒಳಗಿನಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಮೀರಾ ರೋಡ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣವೇ ಕಾರ್ಯೋನ್ಮುಕರಾದ ಪೊಲೀಸರು ಅಪಾರ್ಟ್ಮೆಂಟ್ ಗೆ ದಾಳಿ ಮಾಡಿ ಶಂಕಿತ ಆರೋಪಿ ಮನೋಜ್ ಸಾನೆಯನ್ನು ಬಂಧಿಸಿದ್ದಾರೆ.

ಪ್ರಾಥಮಿಕ ಹಂತದಲ್ಲಿ ಆಕೆ ವಿಷ ಸೇವಿಸಿ ಸತ್ತದ್ದು ಎಂದು ಮನೋಜ್ ಸಾನೆ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮನೋಜ್ ಸಾನೆ, ಆಕೆ ಸತ್ತ ನಂತರ ಮರ ಕತ್ತರಿಸುವ ಯಂತ್ರದಿಂದ ತುಂಡು ತುಂಡಾಗಿ ಕತ್ತರಿಸಿ, ಕತ್ತರಿಸಿದ ದೇಹವನ್ನು ಕುಕ್ಕರಿನಲ್ಲಿ ಬೇಯಿಸಿದ್ದಾನೆ. ನಂತರ ಮಿಕ್ಸಿಯಲ್ಲಿಯೂ ಆಕೆಯ ದೇಹವನ್ನು ಪುಡಿ ಮಾಡಿದ ಬಗ್ಗೆ ತನಿಖೆಯಲ್ಲಿ ಆತ ಬಾಯಿ ಬಿಟ್ಟ ಮಾಹಿತಿ ಭೀಕರವಾಗಿದೆ.

ಪೊಲೀಸರು ಆಕೆಯ ದೇಹವನ್ನು ವಶಪಡಿಸಿಕೊಳ್ಳುವ ಮುನ್ನವೇ ದೇಹದ ಒಂದಷ್ಟು ಭಾಗಗಳನ್ನು ಆರೋಪಿ ಒಂದಷ್ಟು ಕಡೆ ಎಸೆದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಅಡುಗೆ ಮನೆಯಲ್ಲಿ ವಶಪಡಿಸಿಕೊಂಡ ದೇಹದ ಭಾಗಗಳನ್ನು ಮುಂಬೈನ ಸರ್ ಜೆಜೆ ಆಸ್ಪತ್ರೆಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅನಾಥರಾಗಿದ್ದ ಸರಸ್ವತಿ ವೈದ್ಯ ಅವರನ್ನು ಕೊಲೆ ಮಾಡಿದರೆ ಕೇಳಲು ಯಾರೂ ಬರುವುದಿಲ್ಲ ಎಂದು ಭಾವಿಸಿ ಆರೋಪಿ ಮನೋಜ್ ಸಾನೆ ಆಕೆಯನ್ನು ಕೊಲೆಗೈದಿದ್ದಾನೆ. ಪೊಲೀಸ್ ಮೂಲಗಳ ಮಾಹಿತಿಯಂತೆ ಜೂನ್ 4 ರಂದೇ ಆಕೆಯನ್ನು ಸಾಯಿಸಿರಬಹುದು ಎಂದು ಶಂಕಿಸಲಾಗಿದೆ. ಬುಧವಾರ ರಾತ್ರಿ ಸಾನೆಯನ್ನು ನಯಾ ನಗರ ಪೊಲೀಸರು ಬಂಧಿಸಿದ್ದಾರೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯ ನಾಶ) ಅಡಿಯಲ್ಲಿ ಬಂಧಿಸಲಾಗಿದೆ.

ಪ್ರಕರಣದ ಇನ್ನುಳಿದ ತನಿಖೆ ಹೊರಬರುವ ವರೆಗೆ ಆರೋಪಿಯನ್ನು ಜೂನ್ 16 ರವರೆಗೆ ಪೊಲೀಸ್ ಕಸ್ಟಡಿಗೆ ಕಳಿಸಿದ್ದಾರೆ. ಜೂನ್ 16 ಕ್ಕೆ ಆರೋಪಿಗೆ ಶಿಕ್ಷೆ ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ.

You cannot copy content of this page

Exit mobile version