Home ಅಪರಾಧ ಟಿಎಸ್‌ಎಸ್ ನಾಶಿಕ್ ಪ್ರಕರಣ: ಪ್ರಮುಖ ಆರೋಪಿ ನಿದಾ ಖಾನ್ ಅರೆಸ್ಟ್!

ಟಿಎಸ್‌ಎಸ್ ನಾಶಿಕ್ ಪ್ರಕರಣ: ಪ್ರಮುಖ ಆರೋಪಿ ನಿದಾ ಖಾನ್ ಅರೆಸ್ಟ್!

0

ನಾಶಿಕ್: ನಾಶಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಘಟಕದಲ್ಲಿ ನಡೆದ ಲೈಂಗಿಕ ಕಿರುಕುಳ ಮತ್ತು ಧಾರ್ಮಿಕ ಮತಾಂತರಕ್ಕೆ ಒತ್ತಡ ಹೇರಿದ ಆರೋಪಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ನಿದಾ ಖಾನ್ ಅವರನ್ನು ಪೊಲೀಸರು ಗುರುವಾರ ಛತ್ರಪತಿ ಸಂಭಾಜಿನಗರದಲ್ಲಿ ಬಂಧಿಸಿದ್ದಾರೆ.

ನಾಶಿಕ್ ಪೊಲೀಸ್ ಆಯುಕ್ತ ಸಂದೀಪ್ ಕರ್ಣಿಕ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಛತ್ರಪತಿ ಸಂಭಾಜಿನಗರ ಪೊಲೀಸರು ಮತ್ತು ಅಲ್ಲಿನ ಕ್ರೈಂ ಬ್ರಾಂಚ್ ನೆರವಿನೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ದಿಯೋಲಾಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಸಂಖ್ಯೆ 156/26ರಲ್ಲಿ ನಿದಾ ಖಾನ್ ಪ್ರಮುಖ ಆರೋಪಿಯಾಗಿದ್ದಾರೆ.

ನಾಶಿಕ್‌ನ ಟಿಎಸ್‌ಎಸ್ ಘಟಕದಲ್ಲಿ ಮಹಿಳಾ ಉದ್ಯೋಗಿಗಳಿಗೆ ಕಿರುಕುಳ, ಬಲವಂತದ ಮತಾಂತರ ಯತ್ನ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಒಂಬತ್ತು ಎಫ್‌ಐಆರ್‌ಗಳು ದಾಖಲಾಗಿವೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಈಗಾಗಲೇ ಮಹಿಳಾ ಆಪರೇಷನ್ ಮ್ಯಾನೇಜರ್ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದೆ.

ಆರೋಪಿ ನಿದಾ ಖಾನ್ ಅವರು ವಾಟ್ಸಾಪ್ ಗ್ರೂಪ್‌ಗಳ ಮೂಲಕ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಇಸ್ಲಾಮಿಕ್ ಸಂಪ್ರದಾಯದಂತೆ ಪ್ರಾರ್ಥನೆ ಮಾಡಲು, ಮಾಂಸಾಹಾರ ಸೇವಿಸಲು ಮತ್ತು ಇಸ್ಲಾಮಿಕ್ ಸಂಪ್ರದಾಯದಂತೆ ಉಡುಗೆ ತೊಡಲು ಒತ್ತಡ ಹೇರುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಧಾರ್ಮಿಕ ಚಿಹ್ನೆಗಳನ್ನು ಬಳಸುವಂತೆ ಹಾಗೂ ಆಹಾರ ಪದ್ಧತಿ ಬದಲಿಸುವಂತೆ ಅವರು ಮಹಿಳಾ ಉದ್ಯೋಗಿಗಳಿಗೆ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂಬ ಗಂಭೀರ ದೂರುಗಳಿವೆ.

ದೂರುದಾರ ಮಹಿಳೆ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಈ ವಿಷಯ ತಿಳಿದಿದ್ದರೂ ನಿದಾ ಖಾನ್ ಧಾರ್ಮಿಕ ಮತಾಂತರಕ್ಕೆ ಒತ್ತಡ ಹೇರಿದ್ದರಿಂದ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ.

ಬಂಧನ ಭೀತಿಯಲ್ಲಿದ್ದ ನಿದಾ ಖಾನ್ ತಾವು ಗರ್ಭಿಣಿ ಎಂಬ ಕಾರಣ ನೀಡಿ ನಿಬಂಧಿತ ಜಾಮೀನಿಗಾಗಿ ಏಪ್ರಿಲ್ 18ರಂದು ನಾಶಿಕ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಪ್ರಕರಣದ ತೀವ್ರತೆಯನ್ನು ಪರಿಗಣಿಸಿದ ನ್ಯಾಯಾಲಯವು ಮೇ 2ರಂದು ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದೀಗ ಎಸ್ಐಟಿ ಅಧಿಕಾರಿಗಳು ಅವರನ್ನ ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

You cannot copy content of this page

Exit mobile version