Home ರಾಜಕೀಯ ರಿಯಲ್ ಎಸ್ಟೇಟ್ ಆಡಳಿತದ ಗುಂಗು ಬಿಟ್ಟು ಜನರ ಪ್ರಶ್ನೆಗಳಿಗೆ ಉತ್ತರಿಸಿ: ಡಿ.ಕೆ. ಶಿವಕುಮಾರ್ ವಿರುದ್ಧ ನಿಖಿಲ್...

ರಿಯಲ್ ಎಸ್ಟೇಟ್ ಆಡಳಿತದ ಗುಂಗು ಬಿಟ್ಟು ಜನರ ಪ್ರಶ್ನೆಗಳಿಗೆ ಉತ್ತರಿಸಿ: ಡಿ.ಕೆ. ಶಿವಕುಮಾರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

0

ಬೆಂಗಳೂರು: ರಿಯಲ್ ಎಸ್ಟೇಟ್ ಆಡಳಿತದ ಗುಂಗಿನಿಂದ ಹೊರಬಂದು ಕೊನೆಗೂ ‘ಪ್ರಜಾಸೇವೆ’ಯನ್ನು ನೆನಪಿಸಿಕೊಂಡಿದ್ದಕ್ಕಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಜನಸಾಮಾನ್ಯರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಸರ್ಕಾರ, ಈಗ ಆಯೋಜಿಸುತ್ತಿರುವ ಕಾರ್ಯಕ್ರಮವು ‘ಬ್ರ್ಯಾಂಡ್ ಬೆಂಗಳೂರು’ ಮಾದರಿಯ ಮತ್ತೊಂದು ಪ್ರಚಾರದ ಗಿಮಿಕ್ ಅಷ್ಟೇ ಎಂದು ಅವರು ತೀವ್ರವಾಗಿ ಟೀಕಿಸಿದ್ದಾರೆ.

ಕ್ಯಾಮೆರಾಗಳಿಗೆ ಪೋಸ್ ಕೊಡುವ ಮುನ್ನ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಉತ್ತರಿಸಿ ಎಂದು ಸವಾಲು ಹಾಕಿರುವ ನಿಖಿಲ್, ಸರ್ಕಾರದ ವೈಫಲ್ಯಗಳ ಪಟ್ಟಿಯನ್ನು ಮುಂದಿಟ್ಟಿದ್ದಾರೆ. ಹೈಕೋರ್ಟ್ ಗಮನ ಸೆಳೆದಿದ್ದರೂ ಗೃಹಲಕ್ಷ್ಮಿ ಯೋಜನೆಯ 1.2 ಕೋಟಿ ಫಲಾನುಭವಿ ಮಹಿಳೆಯರಿಗೆ ತಲುಪಬೇಕಾದ ₹5,000 ಕೋಟಿ ಅನುದಾನ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಸಾರಿಗೆ ನಿಗಮಗಳಿಗೆ ಸರ್ಕಾರ ನೀಡಬೇಕಾದ ₹5,650 ಕೋಟಿ ಬಾಕಿ ಮೊತ್ತವನ್ನು ಬಿಡುಗಡೆ ಮಾಡದೆ ಸಾರಿಗೆ ಸಂಸ್ಥೆಗಳನ್ನು ಕತ್ತಲಿಗೆ ತಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧವೆಯರು, ವೃದ್ಧರು ಹಾಗೂ ಅಂಗವಿಕಲರ 8 ತಿಂಗಳ ಸಾಮಾಜಿಕ ಭದ್ರತಾ ಮಾಸಾಶನವನ್ನು ತಡೆಹಿಡಿದಿರುವುದೇ ಕಾಂಗ್ರೆಸ್ ಸರ್ಕಾರದ ‘ಸಾಮಾಜಿಕ ನ್ಯಾಯವೇ’ ಎಂದು ನಿಖಿಲ್ ಕಿಡಿಕಾರಿದ್ದಾರೆ. ಬರಪೀಡಿತ ರೈತರಿಗೆ ಸೂಕ್ತ ಪರಿಹಾರ ತಲುಪಿಲ್ಲ ಮತ್ತು ಬಿಡದಿಯಲ್ಲಿ ಭೂಸ್ವಾಧೀನ ವಿರೋಧಿಸಿ ರೈತರು 600ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿದ್ದಾರೆ. ರಾಜಧಾನಿ ಬೆಂಗಳೂರಿನ ಮಾರಣಾಂತಿಕ ರಸ್ತೆ ಗುಂಡಿಗಳನ್ನು ಮುಚ್ಚಲು ವಿಫಲವಾಗಿರುವ ಸರ್ಕಾರ, ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನವನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ ಎಂದು ದೂರಿದ್ದಾರೆ.

ಪ್ರಚಾರಕ್ಕಷ್ಟೇ ಸೀಮಿತವಾದ ಆಡಳಿತವನ್ನು ಬಿಟ್ಟು ಜನಪರ ಆಡಳಿತ ನೀಡುವಂತೆ ಸಲಹೆ ನೀಡಿರುವ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ‘ಸೂಪರ್ ಸಿಎಂ’ ಎಂದು ವ್ಯಂಗ್ಯವಾಡಿದ್ದಾರೆ. ರಾಜ್ಯ ಸರ್ಕಾರದ ಹಾದಿ ತಪ್ಪಿದ ಆಡಳಿತಕ್ಕೆ ಸುರ್ಜೇವಾಲಾ ತಕ್ಷಣವೇ ಸೂಕ್ತ ನಿರ್ದೇಶನ ನೀಡಿ, ರಾಜ್ಯದ ಜನರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಮಾಡಲಿ ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

You cannot copy content of this page

Exit mobile version