Saturday, November 23, 2024

ಸತ್ಯ | ನ್ಯಾಯ |ಧರ್ಮ

ಚನ್ನಪಟ್ಟಣ ಚಕ್ರವ್ಯೂಹದಲ್ಲಿ “ಅಭಿಮನ್ಯು” ಆಗಿಯೇ ಉಳಿದ ನಿಖಿಲ್

ನಿಖಿಲ್‌ ಕುಮಾರಸ್ವಾಮಿ ಮತ್ತು ಸಿ.ಪಿಯೋಗೇಶ್ವರ್‌ ನಡುವೆ ನೇರ ಹಣಾಹಣಿಯೊಂದಿಗೆ ತೀವ್ರ ಪೈಪೋಟಿಯಿಂದಲೇ ಶುರುವಾದ ಚನ್ನಪಟ್ಟಣ ಕ್ಷೇತ್ರದ ಮತ ಎಣಿಕೆ ಈಗ ಅಂತಿಮ ಹಂತಕ್ಕೆ ಬಂದಿದ್ದು ನಿಖಿಲ್ ಸೋಲು ಪಕ್ಕಾ ಆದಂತಾಗಿದೆ. ಶುರುವಿನ 8 ಸುತ್ತಿನ ವರೆಗೂ ಅಲ್ಪ ಮತಗಳ ಹಾವು ಏಣಿ ಆಟ ನಡೆದರೂ ನಂತರದ ಬೆಳವಣಿಗೆಯಲ್ಲಿ ಯೋಗೇಶ್ವರ್ ಗೆಲುವಿನ ಅಂತರ ಹೆಚ್ಚಾಗುತ್ತಲೇ ಸಾಗಿದೆ.

ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದರು. ಈ ಹಿಂದೆ ಒಮ್ಮೆ ಮಂಡ್ಯ ಲೋಕಸಭೆ ಚುನಾವಣೆ ಹಾಗೂ ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದ ನಿಖಿಲ್ ಗೆ ಇದು ಮೂರನೆಯ ಸೋಲಾಗಿದೆ.

ಕರ್ನಾಟಕ ರಾಜಕೀಯದ “ಅಭಿಮನ್ಯು” ಎಂದೇ ಹೆಸರಾಗಿದ್ದ ನಿಖಿಲ್ ಕುಮಾರಸ್ವಾಮಿ ಈಗ ಚನ್ನಪಟ್ಟಣದ ಚಕ್ರವ್ಯೂಹ ಬೇದಿಸಲು ಸೋತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಕೊನೆಯ ಹಂತಕ್ಕೆ 25 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ನಿಖಿಲ್ ಗೆ ಇದು ಭಾರೀ ಹಿನ್ನಡೆ ಅನುಭವಿಸಿದಂತಾಗಿದೆ. ಆರಂಭಿಕ ಸುತ್ತಿನ ಮತ ಎಣಿಕೆ ವೇಳೆ ನಿಖಿಲ್ ಮುನ್ನಡೆ ಕಾಯ್ದುಕೊಂಡಿದ್ದರೂ, 10 ಗಂಟೆ ವೇಳೆಗೆ 8ನೇ ಸುತ್ತಿನ ಮತ ಎಣಿಕೆ ಬಳಿಕ ಪೂರ್ತಿ ಸ್ಥಿತಿಗತಿ ಉಲ್ಟಾ ಆಗಿದೆ.

ಸಿಪಿ ಯೋಗೇಶ್ವರ್ ಮುನ್ನಡೆ ಸಾಧಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಕೈ ಕಾರ್ಯಕರ್ತರು ಪಟಾಕಿ ಸಿಡಿಸಿ, ಜೈಕಾರ ಹಾಕಿ ಸಂಭ್ರಮಿಸುತ್ತಿದ್ದಾರೆ.

ನೇರವಾಗಿ ಡಿಕೆ ಬ್ರದರ್ಸ್ ಮತ್ತು ದೇವೇಗೌಡರ ಕುಟುಂಬದ ಜಿದ್ದಾಜಿದ್ದಿನ ಕಣ ಚನ್ನಪಟ್ಟಣ. ಸ್ವತಃ ಮಾಜಿ ಪ್ರಧಾನಿ ದೇವೇಗೌಡರೇ ಬಂದು ಚನ್ನಪಟ್ಟಣದಲ್ಲಿ ವಾರಗಳ ಕಾಲ ಪ್ರಚಾರಕ್ಕೆ ಇಳಿದಿದ್ದರು. ಆದರೂ ಚನ್ನಪಟ್ಟಣ ಈಗ ಸಿಪಿ ಯೋಗೇಶ್ವರ್ ಕೈ ಹಿಡಿದಿದೆ. ಚನ್ನಪಟ್ಟಣದ ಗೊಂಬೆ ಆಡ್ಸೋನು ಯೋಗೇಶ್ವರ್ ಎಂಬ ತೀರ್ಪನ್ನು ಚನ್ನಪಟ್ಟಣ ಜನತೆ ಕೊಟ್ಟಿದೆ.

ಅಂತಿಮವಾಗಿ ಸಿ ಪಿ ಯೋಗೇಶ್ವರ್ ಮತ್ತು ನಿಖಿಲ್ ಕುಮಾರಸ್ವಾಮಿ ನಡುವೆ ಟಫ್ ಫೈಟ್ ಏರ್ಪಟ್ಟಿತ್ತು. ಇಬ್ಬರು ಅಭ್ಯರ್ಥಿಗಳ ನಡುವಿನ ತೀವ್ರ ಪೈಪೋಟಿ ನಡೆದಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಸಿ ಪಿ ಯೋಗೇಶ್ವರ್‌ ಗೆಲುವು ಸಾಧಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page