Friday, March 6, 2026

ಸತ್ಯ | ನ್ಯಾಯ |ಧರ್ಮ

ಬಿಹಾರ ರಾಜಕೀಯದ ಮಹಾ ತಿರುವು: ರಾಜ್ಯಸಭೆಗೆ ನಿತೀಶ್ ಕುಮಾರ್ ನಾಮಪತ್ರ, ಪುತ್ರ ನಿಶಾಂತ್‌ಗೆ ಉಪಮುಖ್ಯಮಂತ್ರಿ ಪಟ್ಟ?

ಬಿಹಾರ ರಾಜಕೀಯದಲ್ಲಿ ಭಾರಿ ಸಂಚಲನ ಉಂಟಾಗಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಜಪಿ ಮುಖ್ಯಸ್ಥ ನಿತಿನ್ ನವೀನ್ ಸೇರಿದಂತೆ ಐವರು ಅಭ್ಯರ್ಥಿಗಳು ಗುರುವಾರ ಎನ್‌ಡಿಎ ಪರವಾಗಿ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಯು ಮುಖ್ಯಸ್ಥರಾಗಿರುವ ನಿತೀಶ್ ಕುಮಾರ್ ಮತ್ತು ಜನವರಿಯಲ್ಲಿ ಬಿಜೆಪಿಯ ಜವಾಬ್ದಾರಿ ವಹಿಸಿಕೊಂಡ ನವೀನ್ ಅವರು ದೆಹಲಿಯಿಂದ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ವಿಧಾನಸಭೆ ಸಚಿವಾಲಯದ ಅಧಿಕಾರಿಗಳಿಗೆ ನಾಮಪತ್ರ ಹಸ್ತಾಂತರಿಸಿದರು. ಎನ್‌ಡಿಎ ಪರವಾಗಿ ಕಣಕ್ಕಿಳಿದಿರುವ ಇತರ ಅಭ್ಯರ್ಥಿಗಳಲ್ಲಿ ಕೇಂದ್ರ ಸಚಿವ ರಾಮನಾಥ್ ಠಾಕೂರ್ (ಜೆಡಿಯು), ಆರ್‌ಎಲ್‌ಎಂ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವೇಶ್ ಕುಮಾರ್ ಸೇರಿದ್ದಾರೆ. ಇವರ ಜೊತೆಗೆ ಆರ್‌ಜೆಡಿ ಬೆಂಬಲದೊಂದಿಗೆ ಉದ್ಯಮಿ ಅಮರೇಂದ್ರ ಧಾರಿ ಸಿಂಗ್ ಕೂಡ ನಾಮಪತ್ರ ಸಲ್ಲಿಸಿದ್ದು, ಅವರೊಂದಿಗೆ ತೇಜಸ್ವಿ ಯಾದವ್ ಉಪಸ್ಥಿತರಿದ್ದರು.

ಉಪಮುಖ್ಯಮಂತ್ರಿಯಾಗಿ ನಿಶಾಂತ್?

ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದ ಎರಡೇ ದಿನಗಳಲ್ಲಿ ನಿತೀಶ್ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿರುವುದು ಗಮನಾರ್ಹ. ನಿತೀಶ್ ಕುಮಾರ್ ರಾಜೀನಾಮೆಯಿಂದ ತೆರವಾಗಲಿರುವ ಸಿಎಂ ಸ್ಥಾನವನ್ನು ಬಿಜೆಪಿ ನಾಯಕರು ಅಲಂಕರಿಸುವ ಸಾಧ್ಯತೆಯಿದೆ. ಅದೇ ರೀತಿ, ಎಂಜಿನಿಯರಿಂಗ್ ಪದವೀಧರರಾದ 40 ವರ್ಷದ ನಿಶಾಂತ್ ಅವರು ಹೊಸ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಂ ರೇಸ್‌ನಲ್ಲಿ ಪ್ರಸ್ತುತ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

ನಿತೀಶ್ ನಿವಾಸದ ಮುಂದೆ ಪ್ರತಿಭಟನೆ

ಕಳೆದ ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಗೆಲುವಿನತ್ತ ಮುನ್ನಡೆಸಿದ್ದ ನಿತೀಶ್ ರಾಜೀನಾಮೆ ನೀಡುತ್ತಿರುವುದು ಜೆಡಿಯು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ. ರಾಜ್ಯ ರಾಜಕೀಯ ಬಿಟ್ಟು ದೆಹಲಿಗೆ ತೆರಳುವ ಅವರ ನಿರ್ಧಾರವನ್ನು ವಿರೋಧಿಸಿ ನೂರಾರು ಕಾರ್ಯಕರ್ತರು ನಿತೀಶ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. “ರಾಜ್ಯ ರಾಜಕೀಯ ಬಿಟ್ಟು ಹೋಗುವ ಅವರ ನಿರ್ಧಾರ ಆಶ್ಚರ್ಯ ತಂದಿದೆ, ಅವರು ಸಿಎಂ ಆಗಿಯೇ ಮುಂದುವರಿಯಬೇಕು” ಎಂದು ಸುನ್ನಿ ವಕ್ಫ್ ಬೋರ್ಡ್ ಅಧ್ಯಕ್ಷ ಅಲ್ಹಾಜ್ ಮೊಹಮ್ಮದ್ ಇರ್ಶಾದುಲ್ಲಾ ಆಗ್ರಹಿಸಿದ್ದಾರೆ. ಇತ್ತ ಆರ್‌ಜೆಡಿ ನಾಯಕ ಮನೋಜ್ ಝಾ ಅವರು ಪ್ರತಿಕ್ರಿಯಿಸಿ, “ನಿತೀಶ್ ಅವರ ಟ್ವೀಟ್ ನೋಡಿದರೆ ಅದು ದೆಹಲಿಯಿಂದ ಬಂದ ಆದೇಶ ಎಂಬುದು ಸ್ಪಷ್ಟವಾಗುತ್ತದೆ” ಎಂದು ವ್ಯಂಗ್ಯವಾಡಿದ್ದಾರೆ.

ಸ್ವಯಂಪ್ರೇರಿತ ನಿರ್ಧಾರ ಎಂದ ಗಿರಿರಾಜ್ ಕಿಶೋರ್

ಬಿಹಾರದ ಈ ಆಕಸ್ಮಿಕ ಬೆಳವಣಿಗೆಯ ಬಗ್ಗೆ ಕೇಂದ್ರ ಸಚಿವ ಗಿರಿರಾಜ್ ಕಿಶೋರ್ ಪ್ರತಿಕ್ರಿಯಿಸಿ, “ನಿತೀಶ್ ಅವರು ರಾಜ್ಯಸಭೆಗೆ ಹೋಗುವ ಆಸೆಯನ್ನು ಮೂರು ವರ್ಷಗಳ ಹಿಂದೆಯೇ ವ್ಯಕ್ತಪಡಿಸಿದ್ದರು. ಇದು ಅವರ ಸ್ವಯಂಪ್ರೇರಿತ ನಿರ್ಧಾರ. ಭವಿಷ್ಯದಲ್ಲಿ ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಅದು ಅವರ ಮಾರ್ಗದರ್ಶನದಲ್ಲೇ ನಡೆಯಲಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.

ಐದನೇ ಸೀಟು ಆರ್‌ಜೆಡಿಗೆ ಸಿಗಲಿದೆಯೇ?

ಪ್ರಸ್ತುತ ಚುನಾವಣೆ ನಡೆಯುತ್ತಿರುವ ಐದು ರಾಜ್ಯಸಭೆ ಸ್ಥಾನಗಳ ಪೈಕಿ ಎರಡು ಸ್ಥಾನಗಳು ಈ ಹಿಂದೆ ಆರ್‌ಜೆಡಿ ವಶದಲ್ಲಿದ್ದವು. ಆದರೆ 2025ರ ಚುನಾವಣೆಯಲ್ಲಿ ಆ ಪಕ್ಷ ಕೇವಲ 25 ಸೀಟುಗಳನ್ನು ಪಡೆದಿದ್ದರಿಂದ ಈಗ ಒಂದು ಸ್ಥಾನಕ್ಕೆ ಮಾತ್ರ ಸ್ಪರ್ಧಿಸುತ್ತಿದೆ. ಎಂಐಎಂ ಮತ್ತು ಬಿಎಸ್‌ಪಿಯ ಆರು ಶಾಸಕರು ಬೆಂಬಲ ನೀಡಿದರೆ ಆರ್‌ಜೆಡಿಗೆ ಈ ಸ್ಥಾನ ಖಚಿತವಾಗಲಿದೆ. ಆದರೆ ಎನ್‌ಡಿಎ ಮೈತ್ರಿಕೂಟಕ್ಕೆ 243 ಸದಸ್ಯರ ಬಲವಿರುವ ವಿಧಾನಸಭೆಯಲ್ಲಿ 202 ಕೋಟಿ ಸದಸ್ಯರ ಬೆಂಬಲವಿದ್ದು, ಐದನೇ ಸ್ಥಾನವನ್ನು ಗೆಲ್ಲಲು ಕೇವಲ ಮೂವರು ಶಾಸಕರ ಬೆಂಬಲ ಬೇಕಾಗಿದೆ. ಇದು ಎನ್‌ಡಿಎಗೆ ಸುಲಭದ ಹಾದಿಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯಸಭೆಗೆ ನನ್ನ ಪ್ರಯಾಣ ಆರಂಭ: ನಿತೀಶ್ ಟ್ವೀಟ್

ನಾಮಪತ್ರ ಸಲ್ಲಿಸುವ ಮುನ್ನ ನಿತೀಶ್ ಕುಮಾರ್ ಅವರು ‘ಎಕ್ಸ್’ (ಟ್ವಿಟರ್) ಮೂಲಕ ಅಧಿಕೃತವಾಗಿ ಈ ಸುದ್ದಿಯನ್ನು ಖಚಿತಪಡಿಸಿದರು. ಇದರೊಂದಿಗೆ ಬಿಹಾರದ ಮುಖ್ಯಮಂತ್ರಿಯಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರ ಸುದೀರ್ಘ ಪಯಣಕ್ಕೆ ತೆರೆ ಬಿದ್ದಂತಾಗಿದೆ. “ಎರಡು ದಶಕಗಳಿಗೂ ಹೆಚ್ಚು ಕಾಲ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು. ರಾಜ್ಯದ ಉಭಯ ಸದನಗಳು ಮತ್ತು ಸಂಸತ್ತಿನ ಉಭಯ ಸದನಗಳ ಸದಸ್ಯನಾಗಬೇಕೆಂಬುದು ನನ್ನ ಆಸೆಯಾಗಿತ್ತು. ಅದರಂತೆ ಈ ಬಾರಿ ರಾಜ್ಯಸಭಾ ಸದಸ್ಯನಾಗಿ ನನ್ನ ಹೊಸ ಪ್ರಯಾಣವನ್ನು ಆರಂಭಿಸುತ್ತಿದ್ದೇನೆ. ಹೊಸ ಸರ್ಕಾರಕ್ಕೆ ನನ್ನ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ಇರುತ್ತದೆ” ಎಂದು ಅವರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page