Friday, August 16, 2024

ಸತ್ಯ | ನ್ಯಾಯ |ಧರ್ಮ

ಹಸಿವೆ, ಅಪೌಷ್ಟಿಕತೆಯಿಂದ ಜನ ಸಾಯಲು ಈ ಬಜೆಟ್‌ ಮಾಡಿದ್ದಾರೋ?

ಬೆಂಗಳೂರು: ಬೆಂಗಳೂರಿನಂತ ಮಹಾನಗರಗಳಲ್ಲಿ ರಸ್ತೆ ಬದಿಗಳಲ್ಲಿ, ಕಟ್ಟಡ ನಿರ್ಮಾಣಗಳಲ್ಲಿ ಕೆಲಸ ಮಾಡುವ ಪುರುಷ ಮತ್ತು ಮಹಿಳಾ ಕಾರ್ಮಿಕರನ್ನು ದಿನನಿತ್ಯ ನೋಡುತ್ತೀರಿ. ಅವರು ಬೇರೆ ಯಾವುದೋ ರಾಜ್ಯ, ಜಿಲ್ಲೆಗಳಿಂದ ತಮ್ಮ ಮಕ್ಕಳೊಂದಿಗೆ ಬಂದು ಕೆಲಸ ಮಾಡುತ್ತಾರೆ. ಈ ನಗರದಲ್ಲಿ ಕೆಲಸ ಮುಗಿಸಿ ಇನ್ನೊಂದು ನಗರಕ್ಕೆ ಅವರ ಪ್ರಯಾಣ. ಈ ಮಕ್ಕಳ ಶಿಕ್ಷಣದ ಕತೆ ಏನು? ಈ ಕಾರ್ಮಿಕರಿಗೆ ಸರ್ಕಾರಗಳ ಕಡೆಯಿಂದ ಸಿಗಬೇಕಾದ ಪಡಿತರ ಆಹಾರದ ಕತೆ ಏನು? ಈ ಯೋಚನೆ ನಮಗೆ ಬಂದೇ ಬರುತ್ತದೆ.

ಪಡಿತರ ವ್ಯವಸ್ಥೆಯ ಅಡಿಯಲ್ಲಿ ಇವರಿಗೆ ಆಹಾರ ಸಿಗದಿರುವುದು ಸರ್ಕಾರಗಳ ಅತ್ಯಂತ ಹೇಯವಾದ ವಿಫಲತೆ. ದಿನೇ ದಿನೇ ದೇಶ ಹಸಿವೆಯಿಂದ ದಿನ ದೂಡುವ ಜನರಿಂದ ತುಂಬಿ ಹೋಗುತ್ತಿದೆ, ಮಕ್ಕಳು – ಮಹಿಳೆಯರಿಗೆ ಪೌಷ್ಟಿಕಾಂಶಯುಕ್ತ ಆಹಾರ ಸಿಗುತ್ತಿಲ್ಲ. ದೇಶ ಮುಂದುವರಿಯುತ್ತಿದೆ, ಮುಂದುವರಿದಿದೆ ಎಂದು ಭಾವಿಸುವ ಜನ ಇದನ್ನು ದೇಶ ಮತ್ತೆ ಹಿಂದಕ್ಕೆ ಹೋಗುವುದರ ಲಕ್ಷಣ ಎಂದು ಯಾಕೆ ಪರಿಗಣಿಸುತ್ತಿಲ್ಲ.

ಈ ಬಾರಿಯ ಬಜೆಟ್‌ನಲ್ಲಿ ಸಂಘಟಿತ ವಲಯದ ಕಾರ್ಮಿಕರಿಗೆ/ವಲಸೆ ಕಾರ್ಮಿಕರಿಗೆ ಊಟಕ್ಕೇನಾದರೂ ವ್ಯವಸ್ಥೆ ಮಾಡುತ್ತದೆ ಎಂದು ಭಾವಿಸಿದ್ದೆವು. ಆದರೆ ಸರ್ಕಾರ ಅವರನ್ನು ನಡುನೀರಿನಲ್ಲಿ ಬಿಟ್ಟಿದೆ. ಅವರಿನ್ನೂ ಪಡಿತರ ವ್ಯವಸ್ಥೆಯ ಒಳಗೆ ಬಂದಿಲ್ಲ. ಕೇಂದ್ರ ಸರ್ಕಾರ ತನ್ನ 2024-25 ರ ಬಜೆಟ್‌ನಲ್ಲಿ ಆಹಾರ ಸಬ್ಸಿಡಿಗಾಗಿ ನೀಡುವ ಬಜೆಟನ್ನು ಕಡಿಮೆ ಮಾಡಿದೆ. ಇದಕ್ಕಿಂತ ದೊಟ್ಟ ದುರಂತ ಈ ದೇಶದಲ್ಲಿ ಏನಿದೆ?

ಸುಪ್ರೀಂ ಕೋರ್ಟ್‌ ಅನೇಕ ಬಾರಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನವನ್ನು ನೀಡಿದ್ದರೂ 2024-25ರ ಕೇಂದ್ರ ಬಜೆಟ್‌ನಲ್ಲಿ ಆಹಾರ ಭದ್ರತಾ ವ್ಯವಸ್ಥೆಯಿಂದ ಹೊರಗುಳಿದಿರುವ ವಲಸೆ/ ಅಸಂಘಟಿತ ವಲಯದ ಕಾರ್ಮಿಕರಿಗೆ ಪಡಿತರ ನೀಡಲು ಯಾವುದೇ ಹೆಚ್ಚುವರಿ ಹಂಚಿಕೆಯನ್ನು ಮಾಡಲಾಗಿಲ್ಲ.

ಕೊರೋನಾ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಎದುರಿಸಿದ ಸಮಸ್ಯೆಗಳು ಮತ್ತು ಉದ್ಯೋಗ ಇಲ್ಲದೆ ಅವರು ಮರಳಿ ತಮ್ಮ ಊರುಗಳಿಗೆ ಹಿಂತಿರುಗಲು ಪರದಾಡಿದ ರೀತಿ ಹಾಗೂ ನಗರ ಪ್ರದೇಶಗಳಲ್ಲಿ ಉಳಿದಿದ್ದ ಕಾರ್ಮಿಕರು ಆಹಾರ ಇಲ್ಲದೆ ಪಟ್ಟ ಸಂಕಷ್ಟ ಅಷ್ಟಿಷ್ಟಲ್ಲ. 

ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಅವರನ್ನು ಸೇರಿಸಿ ಅದರ ವ್ಯಾಪ್ತಿಯನ್ನು ಹೆಚ್ಚಿಸಲು ಸುಪ್ರೀಂ ಕೋರ್ಟ್‌ ನೀಡಿದ ನಿರ್ದೇಶನದ ಹೊರತಾಗಿಯೂ ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಅಲ್ಲದೇ 2011 ರ ನಂತರ ಜನಗಣತಿ ನಡೆಸಲೂ ಕೇಂದ್ರ ಸರ್ಕಾರ ಮುಂದಾಗಿಲ್ಲ.

ಭಾರತದಲ್ಲಿ ಸದ್ಯಕ್ಕೆ ಸರಿಸುಮಾರು 81 ಕೋಟಿ ಮಂದಿ ಪಡಿತರ ಚೀಟಿಯನ್ನು ಹೊಂದಿದ್ದಾರೆ. ಇವರು ಪ್ರತೀ ತಿಂಗಳು ಇದರಡಿ 5 ಕೆಜಿ ಧಾನ್ಯವನ್ನು ಪಡೆಯುತ್ತಿದ್ದಾರೆ. ಇದನ್ನು 2011ಹಿಂದಿನ ಜನಗಣತಿಯ ಆಧಾರದಲ್ಲಿ ರೂಪಿಸಲಾಗಿದೆ. ಕಾನೂನು ಹೊಸ ಜನಗಣತಿಯ ಆಧಾರ ಮೇಲೆ ಗ್ರಾಮೀಣ ಜನಸಂಖ್ಯೆಯ 75% ಮತ್ತು ನಗರ ಜನಸಂಖ್ಯೆಯ 50% ವರೆಗೆ ಈ ವ್ಯಾಪ್ತಿಗೆ ಒಳಪಡಬೇಕು ಎಂದು ಹೇಳುತ್ತದೆ. 1881ರಿಂದ ಮೊದಲ ಬಾರಿಗೆ ಜನಗಣತಿ ಈ ದೇಶದಲ್ಲಿ ನಡೆದಿಲ್ಲ. ಒಂದು ವೇಳೆ ಜನಗಣತಿ ನಡೆದಿದ್ದರೆ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ 10 ಕೋಟಿ ಜನರು ಸೇರ್ಪಡೆಯಾಗುತ್ತಿದ್ದರು.

ಸದ್ಯ 81 ಕೋಟಿ ಜನ ಪಡಿತರ ಹೊಂದಿರುವುದು ದೊಡ್ಡ ಜಾಲವೆಂಬಂತೆ ಕಂಡು ಬಂದರೂ ಕೊರೋನಾ ಸಂದರ್ಭದಲ್ಲಿ ಕಂಡು ಬಂದ ಆಹಾರ ಸಂಕಷ್ಟ ಈ ವ್ಯವಸ್ಥೆಯನ್ನು ರೂಪಿಸುವಲ್ಲಿ ಆಗಿರುವ ವೈಫಲ್ಯವನ್ನು ತೋರಿಸಿತ್ತು.

ಆಹಾರ ಮತ್ತು ಕೃಷಿ ಸಂಸ್ಥೆ (FAO) ವರದಿಯ ಪ್ರಕಾರ 74.1% ಭಾರತೀಯರು ಕೊರೋನ ಸಂದರ್ಭದಲ್ಲಿ ಆರೋಗ್ಯಕರವಾದ ಆಹಾರವನ್ನು ಪಡೆಯಲು ವಿಫಲವಾಗಿದ್ದರು. ಲಾಕ್‌ಡೌನ್‌ ಜಾರಿ ಮಾಡಿದ ನಂತರ ಕೋಟಿ ಕೋಟಿ ವಲಸೆ ಕಾರ್ಮಿಕರು ತಮ್ಮ ಮಕ್ಕಳು, ಮನೆಯವರನ್ನು ಕರೆದುಕೊಂಡು ಕಿಲೋಮೀಟರ್‌ ಗಟ್ಟಲೆ ನಡೆದು ತಮ್ಮ ಊರುಗಳಿಗೆ ಹಿಂತಿರುಗಲು ಪಟ್ಟ ಪಾಡು ಇಂದಿಗೂ ನಮ್ಮ ಕಣ್ಣ ಮುಂದಿದೆ. ಈ ಭಯಾನಕರ ಪರಿಸ್ಥಿತಿಯನ್ನು ನೋಡಿಯೇ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಅಸಂಘಟಿತ ವಲಯದ ಕಾರ್ಮಿಕರನ್ನು ಆಹಾರ ಭದ್ರತಾ ವ್ಯವಸ್ಥೆಯ ಒಳಗೆ ತರುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದ್ದು, ಆದರೆ ಇದನ್ನು ಮಾಡಲು ಕೇಂದ್ರ ಸರ್ಕಾರದ ಕೈಯಲ್ಲಾಗಿಲ್ಲ!

2011 ರ ನಂತರ ಜನಗಣತಿ ಆಗಿಲ್ಲ. ಸದ್ಯ ಇರುವ ಆಹಾರ ಭದ್ರತಾ ಕಾಯ್ದೆಯ ವ್ಯವಸ್ಥೆ 2011 ರ ಜನಗಣತಿಯ ಆಧಾರದಲ್ಲಿ ರೂಪಿಸಲಾಗಿದೆ. ಹಾಗಾದರೆ ಕಳೆದ ಒಂದು ದಶಕದಿಂದ ಈ ವ್ಯವಸ್ಥೆಯಿಂದ ಹೊರಗುಳಿದವರ ಸಂಖ್ಯೆ ಎಷ್ಟು ದೊಡ್ಡದಿರಬಹುದು ಯೋಚಿಸಿ.

ಜನಗಣತಿ ಇಲ್ಲದಿದ್ದರೆ ಪೋಪ್ಯುಲೇಶನ್‌ ಪ್ರೊಜೆಕ್ಷನ್‌ ನಂಬರ್‌ನ (ಭವಿಷ್ಯದ ಜನಸಂಖ್ಯೆಯ ಅಂದಾಜು) ಮೇಲೆ ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಯನ್ನು ಪರಿಷ್ಕರಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಹೇಳಿತ್ತು. ಆದರೆ ಜನಗಣತಿಯ ನಂತರವೇ ಈ ವ್ಯಾಪ್ತಿಯನ್ನು ಹೆಚ್ಚಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹಠ ಹಿಡಿದು ಕುಳಿತಿದೆ. ಯಾವಾಗ ಈ ಜನಗಣತಿ ಆಗುತ್ತದೆಯೋ ಗೊತ್ತಿಲ್ಲ, ಇದಕ್ಕಾಗಿ ದಿನಾಂಕವನ್ನೂ ಘೋಷಿಸಿಲ್ಲ.

ಅಲ್ಲಿಯ ವರೆಗೆ ಜನ ಹಸಿವಿನಿಂದ ಬದುಕಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಸುಪ್ರೀಂ ಕೋರ್ಟ್‌ 2023 ರ ಎಪ್ರಿಲ್‌ ತಿಂಗಳಲ್ಲಿ, ಪಡಿತರ ಚೀಟಿ ಇಲ್ಲದಿದ್ದರೂ ಇ-ಶ್ರಮ್‌ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ ಎಂಟು ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ನೀಡುವಂತೆ ನಿರ್ದೇಶನ ನೀಡಿತು. ಕೇಂದ್ರ ಸರ್ಕಾರ ಇ-ಶ್ರಮ್‌ನಲ್ಲಿ ನೋಂದಾಯಿಸಿಕೊಂಡಿರುವವರ ಡೇಟಾಬೇಸ್‌ ಜೊತೆಗೆ ಆಹಾರ ಭದ್ರತಾ ಕಾಯ್ದೆಯ ಡೇಟಾಬೇಸನ್ನು ತುಲನೆ ಮಾಡಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.

2024 ರ ಮಾರ್ಚ್ ತಿಂಗಳಲ್ಲಿ ಇವರಿಗೆಲ್ಲಾ ಪಡಿತರ ನೀಡಲು ಕಾಯ್ದೆಯ ಅಡಿಯಲ್ಲಿ ಹಾಕಲಾಗಿರುವ ರಾಜ್ಯವಾರು ಕೋಟಾಗಳಿಂದ ಯಾವುದೇ ತೊಂದರೆ ಆಗಬಾರದು ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಕೆ ನೀಡಿತ್ತು. ಕೇಂದ್ರ ಬಜೆಟ್ ಮಂಡನೆಗೆ ಒಂದು ವಾರದ ಮೊದಲು ಕೋರ್ಟ್‌ ತನ್ನ ಆದೇಶಗಳನ್ನು ಪಾಲಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿತು. ಅರ್ಹರಿಗೆ 4 ವಾರಗಳಲ್ಲಿ ಪಡಿತರ ಚೀಟಿಗಳನ್ನು ವಿತರಿಸಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತು ಮತ್ತು ಹೆಚ್ಚುವರಿ ಪಡಿತರ ಕಾರ್ಡ್‌ಗಳಿಗಾಗಿ ರಾಜ್ಯಗಳು-ಕೇಂದ್ರಾಡಳಿತ ಪ್ರದೇಶಗಳಿಗೆ ಆಹಾರ ಧಾನ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಸುಪ್ರೀಂ ಕೋರ್ಟ್‌ ಆದೇಶ ನೀಡಿದ ನಂತರ ಇದನ್ನು ಪಾಲಿಸಲು ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಏನನ್ನಾದರೂ ಮಾಡಬಹುದಿತ್ತು. ಆದರೆ ಆಗಿದ್ದು ಬೇರೆ. ಹಿಂದಿನ ವರ್ಷದ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ ಆಹಾರ ಸಬ್ಸಿಡಿಗೆ ಬಜೆಟ್ ನಲ್ಲಿ  2.12 ರಿಂದ 2.05 ಲಕ್ಷ ಕೋಟಿ, ಅಂದರೆ 3.3% ರಷ್ಟು ಕಡಿತಗೊಳಿಸಲಾಗಿದೆ!

ಇತ್ತೀಚೆಗೆ ಹೊರಬಂದಿರುವ Household Consumption Expenditure Survey (HCES)ಯ ಪ್ರಕಾರ ಕೇವಲ 56% ಭಾರತೀಯರು ದಿನಕ್ಕೆ ಮೂರು ಹೊತ್ತು ಊಟ ಮಾಡುತ್ತಿದ್ದಾರೆ. ಜರ್ನಲ್ ಆಫ್ ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್‌ನಲ್ಲಿ ಪ್ರಕಟವಾದ ಅಧ್ಯಯನ ತಾನು ಸರ್ವೇ ಮಾಡಿದ 92 ದೇಶಗಳಲ್ಲಿ ಭಾರತದಲ್ಲಿಯೇ ಒಪ್ಪತ್ತಿನ ಊಟ ಮಾಡದ ಅತಿ ಹೆಚ್ಚು ಸಂಖ್ಯೆಯ ಮಕ್ಕಳು (zero-food children) (67 ಲಕ್ಷ) ಇದ್ದಾರೆ ಎಂದು ಹೇಳಿದೆ. 

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (National Family Health Survey-5) ಭಾರತದಲ್ಲಿ 35% ಬೆಳವಣಿಗೆ ಕುಂಠಿತ , ಮತ್ತು 19% ಕ್ಷೀಣತೆ ಇರುವ ಮಕ್ಕಳೂ ಹಾಗು ರಕ್ತ ಹೀನತೆ ಇರುವ 57% ಮಹಿಳೆಯರು ಮತ್ತು 67% ಮಕ್ಕಳು ಇರುವುದನ್ನು ತೋರಿಸಿದೆ.

ಭಾರತವು 19.5 ಕೋಟಿ ಅಪೌಷ್ಟಿಕ ಜನರಿಂದ ತುಂಬಿಹೋಗಿದೆ – ಇದು ವಿಶ್ವದಲ್ಲೇ ಅತಿ ಹೆಚ್ಚು- ಎಂದು ಜುಲೈ 24 ರಂದು ಬಿಡುಗಡೆಯಾದ ಈ ವರ್ಷದ ‘ಸ್ಟೇಟ್ ಆಫ್ ಫುಡ್ ಸೆಕ್ಯುರಿಟಿ ಅಂಡ್ ನ್ಯೂಟ್ರಿಷನ್ ಇನ್ ದಿ ವರ್ಲ್ಡ್‘ (SOFI)  ವರದಿ ಹೇಳಿದೆ.

ಇದನ್ನು ಓದಿ: ಭಾರತದಲ್ಲಿ 19.5 ಕೋಟಿ ಜನ ಅಪೌಷ್ಟಿಕರು- ವಿಶ್ವದಲ್ಲೇ ಅತೀ ಹೆಚ್ಚು: ವಿಶ್ವಸಂಸ್ಥೆ ವರದಿ

ಒಪ್ಪತ್ತಿನ ಊಟವಿಲ್ಲದೆ ದಿನದೂಡುತ್ತಿರುವ ವಲಸೆ ಕಾರ್ಮಿಕರು, ಅಪೌಷ್ಟಿಕತೆಯ ಸಮಸ್ಯೆ, ಆಹಾರ ಸಂಬಂಧಿ ಆರೋಗ್ಯ ಸಮಸ್ಯೆಗಳು ಕಾರ್ಮಿಕರು, ಮಕ್ಕಳು, ಮಹಿಳೆಯರ ಜೀವ ಹಿಂಡುತ್ತಿರುವಾಗ ಕೇಂದ್ರ ಸರ್ಕಾರ ನಡೆದುಕೊಂಡಿರುವ ರೀತಿ ಅಕ್ಷಮ್ಯ. ವಲಸೆ ಕಾರ್ಮಿಕರನ್ನು ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಗೆ ಸೇರಿಸಲು, ದೇಶದಲ್ಲಿ ಹಸಿವಿನ ಪ್ರಮಾಣವನ್ನು ತಗ್ಗಿಸಲು ಕ್ರಮ ವಹಿಸಬೇಕಾದ ಕೇಂದ್ರ ಸರ್ಕಾರ ಇದಕ್ಕಾಗಿ ಬಜೆಟನ್ನೇ ಕಡಿಮೆ ಮಾಡಿ ಭಾರತೀಯರಿಗೆ ವಂಚನೆ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page