ಭಾರತದಲ್ಲಿ ಕೆಲ ವರ್ಷಗಳ ಹಿಂದೆ ಕುಲಾಂತರಿ ಬದನೆ (ಬಿಟಿ ಬದನೆ)ಯಿಂದಾಗಿ ಚರ್ಚೆಗೆ ಗ್ರಾಸವಾಗಿದ್ದ ಕುಲಾಂತರಿ ತಂತ್ರಜ್ಞಾನವು ಕಳೆನಾಶಕ ಸಹಿಷ್ಣು ಕುಲಾಂತರಿ ಸಾಸಿವೆ ಬಿಡುಗಡೆಗೆ ಸಿದ್ಧವಾಗಿರುವುದರ ಮೂಲಕ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಕುಲಾಂತರಿ ಸಾಸಿವೆಯ ದೂರಗಾಮಿ ಪರಿಣಾಮಗಳನ್ನು ಸೂಕ್ತ ಅಧ್ಯಯನ ಮಾಡದೆಯೇ ತರಾತುರಿಯಿಂದ ಅದನ್ನು ಅನುಷ್ಠಾನ ಮಾಡಲು ರಾಷ್ಟ್ರ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಹೊತ್ತಿನಲ್ಲಿ ಮಂಜುನಾಥ ಹೊಳಲು ಅವರು ಕುಲಾಂತರಿ ಸಾಸಿವೆಯ ಅಪಾಯಗಳ ಕುರಿತು ಬರೆದಿದ್ದಾರೆ.
ಜೀವನ ಮರ್ಮವನ್ನು ಅರ್ಥೈಸಲು ಗೌತಮ ಬುದ್ಧ ಸಾವಿಲ್ಲದ ಮನೆಯಲ್ಲಿ ಸಾಸಿವೆ ತನ್ನಿ ಎಂದು ಹೇಳಿದ್ದು ಎಲ್ಲರಿಗೂ ಗೊತ್ತಿದೆ. ಅಂದು ಸಾವಿಲ್ಲದ ಮನೆಯಲ್ಲಿ ಸಾಸಿವೆ ಸಿಗಲಿಲ್ಲ. ಈಗ ಅದೇ ಸಾಸಿವೆಗೆ ಕಂಟಕ ಬಂದಿರುವುದು ವಿಪರ್ಯಾಸವೇ ಸರಿ. ಕೃಷಿ ವ್ಯವಸ್ಥೆಯಲ್ಲಿ ಕುಲಾಂತರಿ ತಂತ್ರಜ್ಞಾನ ಅಷ್ಟೇನೂ ಸುರಕ್ಷಿತವಾಗಿಲ್ಲದಿರುವಾಗ ಅದರ ಅನುಷ್ಠಾನಕ್ಕೆ ತರಾತುರಿ ಮಾಡುತ್ತಿರುವುದು ನೋಡಿದರೆ ʼಅಲ್ಲೇನೋ ಇದೆʼ ಎಂಬ ಅನುಮಾನ ಬರುವುದು ಗ್ಯಾರಂಟಿ,
ಬುದ್ದನು ಬದುಕಿನ ಅರ್ಥವನ್ನು ಸಾಸಿವೆ ಮೂಲಕ ತಿಳಿಸಿದ್ದಾನೆ. ಸಾಸಿವೆಯಿಲ್ಲದ ಅಡುಗೆ ಇಲ್ಲ ಎನ್ನುವಂತೆ, ಸಾಸಿವೆಯನ್ನು ದಿನನಿತ್ಯವೂ ಅಡುಗೆಯಲ್ಲಿ ಬಳಸುತ್ತಿದ್ದೇವೆ. ನಮ್ಮ ಸಾಸಿವೆಗೆ 5,000 ವರ್ಷದ ಇತಿಹಾಸವಿದೆ. ಆದರೆ ಈಗ ಸಾಸಿವೆಯನ್ನು ಜೈವಿಕ ತಂತ್ರಜ್ಞಾನದಿಂದ ಕುಲಾಂತರಿ ಸಾಸಿವೆ ಮಾಡಿದ್ದಾರೆ. ಈಗ ಸರ್ಕಾರವು ಕುಲಾಂತರಿ ಸಾಸಿವೆಯನ್ನು ಬೆಳೆಯಲು ಅನುಮತಿ ನೀಡುವ ಪ್ರಯತ್ನದಲ್ಲಿದೆ. ಈಗಾಗಲೇ ನಮ್ಮ ರೈತರು ಬೆಳೆಯುತ್ತಿರುವ ಬಿಟಿ ಹತ್ತಿ ಹಲವಾರು ಸಮಸ್ಯೆಗಳನ್ನು ಸೃಷ್ಟಿಸಿದೆ. ಹಾಗಾಗಿ ಕುಲಾಂತರಿಯ ಅವಾಂತರಗಳು ವರ್ಷದಿಂದ ವರ್ಷಕ್ಕೆ ಭಿನ್ನವಾಗಿ ರೈತರನ್ನು ಕಾಡುತ್ತಿರುವ ಸಮಯದಲ್ಲಿ, ಮತ್ತೆ ಕುಲಾಂತರಿ ಸಾಸಿವೆ ಪೆಡಂಭೂತವಾಗಿ ಕಾಡುತ್ತಿದೆ.
ನಮ್ಮಲ್ಲಿ ಎರಡು ರೀತಿಯ ಸಾಸಿವೆಗಳಿವೆ. ಮೊದಲನೆಯದು ಕರಿ ಸಾಸಿವೆ, ಇದನ್ನು ವೈಜ್ಞಾನಿಕವಾಗಿ ಬ್ರೆಸಿಕಾ ನೈಗ್ರಾ ಎಂದು ಕರೆಯುತ್ತಾರೆ. ಇದು ಒಳ್ಳೆಯ ಸುವಾಸನೆ ಹೊಂದಿದ್ದು ಹೆಚ್ಚಾಗಿ ಬಿಸಿಲು ಹೆಚ್ಚು ಇರುವ ಪ್ರದೇಶದಲ್ಲಿ ಬೆಳೆಯುವ ಬೆಳೆ. ಗಾತ್ರದಲ್ಲಿ ಚಿಕ್ಕದಿದ್ದು, ದರದಲ್ಲಿ ಸ್ವಲ್ಪ ದುಬಾರಿ. ಎರಡನೆಯದು ಕಂದು ಸಾಸಿವೆ, ಇದನ್ನು ವೈಜ್ಞಾನಿಕವಾಗಿ ಬ್ರೆಸಿಕ ಜುಕ್ವಿಯಾ ಎಂದು ಕರೆಯುತ್ತಾರೆ. ಇದು ಅಷ್ಟು ರುಚಿಯಾಗಿರುವುದಿಲ್ಲ. ಈ ಸಾಸಿವೆ ಸಮಶೀತೋಷ್ಣ ಪ್ರದೇಶದಲ್ಲಿ ಬೆಳೆಯುವ ಬೆಳೆಯಾಗಿದೆ. ಗಾತ್ರದಲ್ಲಿ ದೊಡ್ಡದಾಗಿರುವ ಇದರ ದರ ಸ್ವಲ್ಪ ಕಡಿಮೆ ಇರುತ್ತದೆ. ಉತ್ತರ ಭಾರತದಲ್ಲಿ ಇದನ್ನು ಏಕ ಬೆಳೆಯಾಗಿ ಬೆಳೆಯುವುದುಂಟು, ಆದರೆ ದಕ್ಷಿಣ ಭಾರತದಲ್ಲಿ ಸಾಸಿವೆಯನ್ನು ಅಕ್ಕಡಿ ಬೆಳೆ ಪದ್ಧತಿಯಲ್ಲಿ ಬೆಳೆಯುತ್ತಾರೆ. ಮುಖ್ಯವಾಗಿ ಶೇಂಗಾ, ರಾಗಿ, ಹೆಸರು ಹಾಗು ಅಲಸಂದೆ ಬೆಳೆಯಲ್ಲಿ ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ.
ಕುಲಾಂತರಿ ಸಾಸಿವೆಯನ್ನು ಅಭಿವೃದ್ಧಿ ಪಡಿಸಿದ ದೆಹಲಿ ವಿಶ್ವವಿದ್ಯಾಲಯದ ಪ್ರಕಾರ, ಸಾಸಿವೆಗೆ ಮೂರು ಬಗೆಯ ವಂಶವಾಹಿಗಳನ್ನು ಸೇರಿಸಲಾಗಿದೆ. ಬಾರ್ (ಗ್ಲುಪೊಸಿನೇಟ್ ಕಳೆನಾಶಕ ಪ್ರತಿರೋಧಕಕ್ಕೆ), ಬಾರ್‍ನೆಸ್ (ಗಂಡು ಗಿಡದ ಬಂಜೆತನಕ್ಕೆ) ಹಾಗು ಬಾರ್‍ಸ್ಟಾರ್ (ಮತ್ತೆ ಫಲೀಕರಣಕ್ಕೆ) ಜೀನ್‍ಗಳನ್ನು ಸೇರಿಸಲಾಗಿದೆ. ಈ ಎಲ್ಲಾ ವಂಶವಾಹಿಗಳನ್ನು ಮಣ್ಣಿನಲ್ಲಿರುವ ಬ್ಯಾಕ್ಟೀರಿಯಾ ಎಂಬ ಅಣುಜೀವಿಗಳಿಂದ ಪಡೆಯಲಾಗಿದೆ ಎಂದು ಹೇಳಿಕೊಂಡಿದೆ (refer box item). ಕುಲಾಂತರಿ ಸಾಸಿವೆಯು ಗ್ಲುಪೊಸಿನೇಟ್ ಎನ್ನುವ ಕಳೆನಾಶಕಕ್ಕೆ ಸಹಿಷ್ಣು ಗುಣ ಹೊಂದಿರುತ್ತದೆ. ಹೊಲಕ್ಕೆ ಕುಲಾಂತರಿ ಬೀಜ ಬಿತ್ತಿದ ಬಳಿಕ ಕಂಪನಿಯು ಶಿಫಾರಸು ಮಾಡಿದ ಕಳೆನಾಶಕ ಸಿಂಪರಣೆ ಮಾಡಲೇಬೇಕು. ಇಲ್ಲವಾದರೆ ಕಳೆಯಿಂದ ಮುಕ್ತಿ ಹೊಂದಲು ಸಾಧ್ಯವಿಲ್ಲ. ಇದರಿಂದಾಗಿ ಕಂಪನಿಯ ಎರಡು ಪದಾರ್ಥಗಳನ್ನು ರೈತರು ಖರೀದಿ ಮಾಡುವುದರಿಂದ ಕಂಪನಿಗೆ ಡಬಲ್ ಲಾಭ!
ಕೇವಲ ಕಳೆ ನಿರ್ಮೂಲನೆ ಮಾಡಲು ಇಷ್ಟೊಂದು ಘನಘೋರ ವಿಷಕಾರಿ ತಂತ್ರಜ್ಞಾನ ಬಳಕೆ ಎಷ್ಟು ಪ್ರಸ್ತುತ? ಕಳೆನಾಶಕ ಸಹಿಷ್ಣು ಕುಲಾಂತರಿ (Herbicide tolerant) ಸಾಸಿವೆ ನಮಗೆ ಬೇಕೆ? ಈ ಹಿಂದೆ ಅಮೆರಿಕಾ, ಕೆನಡಾ ಹಾಗು ಬ್ರೆಜಿಲ್ ದೇಶಗಳಲ್ಲಿ ದೊಡ್ಡ ಪ್ರಮಾಣದ ಕಳೆನಾಶಕ ನಿರೋಧಕ ಮೆಕ್ಕೆಜೋಳ ಹಾಗು ಸೋಯಾ ಅವರೆ ಬೆಳೆಸಿದ್ದರಿಂದ ಆರೋಗ್ಯದ ಮೇಲೆ ಹಾಗೂ ಪರಿಸರದ ಮೇಲೆ ಅಡ್ಡ ಪರಿಣಾಮ ಬೀರಿದೆ. ಆ ದೇಶಗಳ ಕಲಿಕೆ ನಮಗೆ ಪಾಠವಾಗ ಬೇಕಾಗಿತ್ತು, ಆದರೆ ಕೇವಲ ವಾಣಿಜ್ಯ ದೃಷ್ಟಿಕೋನದಿಂದ ಮಾತ್ರವೇ ನಮ್ಮಲ್ಲಿ ಕುಲಾಂತರಿ ಸಾಸಿವೆ ಬಿಡುಗಡೆಗೆ ಸಿದ್ಧವಾಗಿರುವುದು ದುರಂತವೇ ಸರಿ.
ಕುಲಾಂತರಿ ಸಾಸಿವೆ ಯಾಕೆ ಬೇಡ?
ಕಳೆನಾಶಕ ನಿರೋಧಕ ಕುಲಾಂತರಿ ಸಾಸಿವೆಯನ್ನು ಗರ್ಟ (Gene Use Restriction Technology) ತಂತ್ರಜ್ಞಾನ ಮೂಲಕ ಅಭಿವೃದ್ಧಿ ಪಡಿಸಲಾಗಿದೆ. ಗರ್ಟ ತಂತ್ರಜ್ಞಾನ ಮೂಲಕ ಅಭಿವೃದ್ಧಿ ಪಡಿಸಿದ ತಳಿಗಳು ಜೀವಕ್ಕೆ ಮಾರಕವಾಗಿವೆ ಅಥವಾ ಮಾನವ, ಪ್ರಾಣಿಗಳು ಹಾಗು ಗಿಡ-ಮರಗಳ ಆರೋಗ್ಯಕ್ಕೆ ಹಾನಿಕರವಾಗಿವೆ ಎಂದು 2001ರಲ್ಲಿ ಭಾರತ ಸರ್ಕಾರವು ಹೊರಡಿಸಿದ ಸಸ್ಯ ತಳಿಗಳ ರಕ್ಷಣೆ ಮತ್ತು ರೈತರ ಹಕ್ಕುಗಳು (Protection of plant varieties and Farmers Rights-2001) ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಕುಲಾಂತರಿ ಸಾಸಿವೆಯನ್ನು ಅಭಿವೃದ್ಧಿ ಪಡಿಸಿದ್ದು ಸಂವಿಧಾನ ವಿರೋಧಿ ಕ್ರಮವಾಗಿದೆ.
ನಮ್ಮ ಕೃಷಿ ಪ್ರಧಾನ ದೇಶದಲ್ಲಿ ಕಳೆ ತೆಗೆಯಲು ಕೋಟಿ-ಕೋಟಿ ಮಹಿಳಾ ಕೃಷಿ ಕಾರ್ಮಿಕರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದು ಅವರ ಪ್ರಮುಖ ಜೀವನೋಪಾಯವಾಗಿದೆ. ಕಳೆನಾಶಕ ನೀರೋಧಕ ಕುಲಾಂತರಿ ಸಾಸಿವೆಯನ್ನು ಬೆಳೆಯಲು ಅನುಮತಿ ನೀಡಿದಲ್ಲಿ ಹತ್ತಾರು ಕೋಟಿ ಮಹಿಳಾ ಕೃಷಿ ಕಾರ್ಮಿಕರು ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುವ ಪರಿಸ್ಥಿತಿ ಉದ್ಭವವಾಗಬಹುದು. ಇಷ್ಟು ಪ್ರಮಾಣದ ಮಹಿಳಾ ಕೃಷಿ ನಿರಾಶ್ರಿತರಿಗೆ ಬದಲಿ ಜೀವನೋಪಾಯ ಒದಗಿಸುವುದು ಸರ್ಕಾರದ ಪ್ರಮುಖ ಕೆಲಸವಾಗುತ್ತೆ. ಇಲ್ಲವಾದರೆ ಇದು ದೇಶದ ದೊಡ್ಡ ದುರಂತವಾಗಿ ಕಾಡುತ್ತೆ. ಇದನ್ನು ಗಂಭೀರವಾಗಿ ಯೋಚಿಸ ಬೇಡವೇ?
ನಮ್ಮ ದೇಶದಲ್ಲಿ ಅನೇಕ ಕಳೆಗಳು ಆಹಾರ ಬೆಳೆಗಳಾಗಿವೆ. ಅವುಗಳಲ್ಲಿ ಮುಖ್ಯವಾಗಿ ಅನೇಕ ಬಗೆಯ ಸೊಪ್ಪಿನ ತರಕಾರಿಗಳು ಇವೆ. ಇಂದಿಗೂ ಪೋಷಕಾಂಶ ಭರಿತ ಸೊಪ್ಪುಗಳು ಕಳೆ ರೂಪದಲ್ಲಿ ಬೆಳೆಗಳ ಜೊತೆ ಬೆಳೆದರೂ ಅವುಗಳನ್ನು ಕಿತ್ತು ಅಡುಗೆಯಲ್ಲಿ ಬಳಸುತ್ತಾರೆ. ಅವುಗಳಲ್ಲಿ ಮುಖ್ಯವಾಗಿ ಹಕ್ಕರಕಿ ಸೊಪ್ಪು, ಅಣ್ಣೆಸೊಪ್ಪು, ದಾಗಡಿಸೊಪ್ಪು ಇತ್ಯಾದಿಗಳು. ಕೆಲವು ಕಳೆಗಳನ್ನು ದನ-ಕರುಗಳ ಮೇವಾಗಿ ಬಳಸುವುದುಂಟು. ಅನೇಕ ಭೂ-ರಹಿತ ಕೃಷಿ ಕಾರ್ಮಿಕರು ಈ ರೀತಿಯ ಕಳೆಗಳನ್ನು ಅವಲಂಬಿಸಿ ತಮ್ಮ ರಾಸುಗಳನ್ನು ಸಾಕುತ್ತಾರೆ. ಹಾಗಾಗಿ ಕಳೆ ದೇಶದ ಆರ್ಥಿಕ ಹಾಗು ಆರೋಗ್ಯ ಬಲವರ್ಧನಗೆ ಸಹಕಾರಿ ಆಗಬಲ್ಲದು.
ಕುಲಾಂತರಿ ಸಾಸಿವೆ ಕಳೆನಾಶಕ ನಿರೋಧಕ ಗುಣ ಹೊಂದಿದೆ, ಕುಲಾಂತರಿ ಸಾಸಿವೆ ಬೆಳೆಯುವ ಸಂದರ್ಭದಲ್ಲಿ ಮಾರಣಾಂತಿಕ ಕಳೆನಾಶಕಗಳನ್ನು ವಿವೇಚನೆ ಇಲ್ಲದೆ ಬಳಸಲಾಗುತ್ತಿದೆ. ಈ ವಿಷಕಾರಿ ಕಳೆನಾಶಕದ ಸಿಂಪಡಣೆಯಿಂದ ರೈತರಷ್ಟೇ ಅಲ್ಲದೆ ವಿಶೇಷವಾಗಿ ಗ್ರಾಹಕರ ಆರೋಗ್ಯದ ಮೇಲೂ ಅಡ್ಡ ಪರಿಣಾಮವಾಗಲಿದೆ. ಅಷ್ಟೇ ಏಕೆ ಇದರ ಸಾಧಕ ಬಾಧಕಗಳ ಕುರಿತು ತನಿಖೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರೂಪಗೊಂಡ ತಜ್ಞರ ಸಮಿತಿ ಹಲವಾರು ಕಾರಣಗಳನ್ನು ನೀಡಿ ಕಳೆನಾಶಕ ಗುಣವಿರುವ ಇಂಥ ಬೆಳೆಗಳನ್ನು ನಮ್ಮ ದೇಶದಲ್ಲಿ ಬೆಳೆಸಲು ಅವಕಾಶ ಕೊಡಬಾರದು ಎಂದು ಅವಿರೋಧವಾಗಿ ಶಿಫಾರಸ್ಸು ಮಾಡಿದ್ದರು. ಹೀಗಿದ್ದೂ ಸಹ ಕುಲಾಂತರಿ ಸಾಸಿವೆಗೆ ಅನುಮೋದನೆ ಸಿಕ್ಕಿರುವುದು ವಿಚಿತ್ರವೇ ಸರಿ. ಕುಲಾಂತರಿ ಸಾಸಿವೆಯಲ್ಲಿ ಪರಿಚಯಿಸಲಾಗಿರುವ ಬ್ಯಾಕ್ಟೀರಿಯಾ ಒಂದು ನಿರ್ವೀರ್ಯಗೊಳಿಸುವ ಗುಣವನ್ನು ಹೊಂದಿದೆ. ಹೀಗಾಗಿ ಕುಲಾಂತರಿ ಸಾಸಿವೆ ಬೆಳೆಸಲು ಅಗತ್ಯವಾಗಿರುವ ಬಿತ್ತನೆ ಬೀಜಗಳನ್ನು ಕಂಪನಿಗಳಿಂದಲೇ ಪ್ರತಿಸಾರಿ ಕೊಳ್ಳಬೇಕಾಗುತ್ತದೆ.
ಸಾಸಿವೆ ಬೆಳೆಯುವುದೆಂದರೆ ಅದೊಂದು ಬರೇ ಬೆಳೆಯಷ್ಟೇ ಅಲ್ಲ. ಸಾಸಿವೆ ಬೆಳೆದರೆ ಅದು ಜೇನುದುಂಬಿಗಳನ್ನು ಸಂರಕ್ಷಿಸಿದಂತೆ. ಜೇನುದುಂಬಿಗಳು ಸಾಸಿವೆಯನ್ನು ಅವಲಂಬಿಸಿವೆ. ಜೇನು ಸಾಕಾಣಿಕೆ ಇಂದು ಲಕ್ಷಾಂತರ ಗ್ರಾಮೀಣ ಕುಟುಂಬಗಳ ಜೀವನಾಧಾರ ಮೂಲವಾಗಿದೆ,
ಸಾಸಿವೆಯ ಉಪಯೋಗಗಳು
ಒಂದು ಚಮಚ ಸಾಸಿವೆಯಲ್ಲಿ ಎರಡು ಗ್ರಾಂ ರಂಜಕ, 2.5% ಮ್ಯಾಂಗನೀಸ್, 2.5% ಮ್ಯಾಗ್ನೇಶಿಯಂ, 2% ಸೆಲಿನಿಯಂ, 7.5% ಓಮೇಗಾ, 1.5% ಕೊಬ್ಬು, 3% ಬಿ1 ವಿಟಮಿನ್ ಹಾಗು 1.5% ತಾಮ್ರದ ಪೌಷ್ಟಿಕಾಂಶಗಳನ್ನು ಹೊಂದಿದೆ. ಸಾಸಿವೆಯನ್ನು ಔಷಧಿ ರೂಪದಲ್ಲಿ ಕೂಡಾ ಬಳಸುತ್ತಾರೆ. ಸಾಸಿವೆ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಗಾಯವಾಗಿದ್ದಲ್ಲಿ ಸಾಸಿವೆಯನ್ನು ಪುಡಿಮಾಡಿ ಪೇಸ್ಟ್ ತಯಾರಿಸಿ ಹಚ್ಚಿದರೆ ಗಾಯ ವಾಸಿಯಾಗುತ್ತದೆ. ಇದನ್ನು ಉಪ್ಪಿನಕಾಯಿಗೆ ಬಳಸುತ್ತಾರೆ. ಸಾಸಿವೆಯಿಂದ ಅನೇಕ ವ್ಯಂಜನಗಳನ್ನು ತಯಾರಿಸಬಹುದು. ಅದು ಹೆಚ್ಚಿನ ಕೊಬ್ಬಿನಾಂಶವನ್ನು ನಾಶಮಾಡುತ್ತದೆ. ಉತ್ತರ ಭಾರತದಲ್ಲಿ ಸಾಸಿವೆ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತಾರೆ. ಅದು ಜೀರ್ಣಶಕ್ತಿಗೆ ಸಹಕಾರಿಯಾಗಿದೆ. ಸಂಧಿವಾತಕ್ಕೆ ಮೈ-ಕೈ ನೋವಿಗೂ ಬಳಸುತ್ತಾರೆ. ನಿದ್ರೆ ಬರದೆ ಇರುವವರು ಚಿಟಿಕೆ ಸಾಸಿವೆ ಎಣ್ಣೆ ರಾತ್ರಿ ಸೇವನೆ ಮಾಡಿದರೆ ಒಳ್ಳೆಯ ನಿದ್ರೆ ಹೊಂದುವರು. ನಮ್ಮ ರಕ್ತನಾಳಗಳನ್ನು ಆರೋಗ್ಯದಿಂದಿರಿಸಲು ಇದು ಸಹಾಯಕಾರಿಯಾಗಿದೆ. ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಕಾಯಿಲೆ, ಕ್ಯಾನ್ಸರ್, ಅಸ್ತಮಾ, ಮೈಗ್ರೇನ್ ತಲೆನೋವು ಕೂಡಾ ವಾಸಿಮಾಡುವ ಗುಣವನ್ನು ಇದು ಹೊಂದಿದೆ. ಹೀಗೆ ಬಹು ವಿಧದಲ್ಲಿ ಉಪಯೋಗಕ್ಕೆ ಬರುವ ಸಾವಯವ ಸಾಸಿವೆಯ ಜಾಗಕ್ಕೆ ಕುಲಾಂತರಿ ಸಾಸಿವೆಯನ್ನು ತರುವ ಮೊದಲು ಸರ್ಕಾರವು ಪರಿಸರ, ಆರೋಗ್ಯ ಹಾಗು ಜೀವವೈವಿಧ್ಯತೆ ಮೇಲೆ ಅದು ಬೀರುವ ದೂರಗಾಮಿ ಪರಿಣಾಮಗಳನ್ನು ಸೂಕ್ತ ಅಧ್ಯಯನ ಮಾಡಿಸಬೇಕು. ಅಧ್ಯಯನದ ಸವಿವರವನ್ನು ಜನತೆ ಮುಂದೆ ಪ್ರಸ್ತಾಪಿಸಿ ಆನಂತರ ಅದರ ಅನುಮತಿ ಬಗ್ಗೆ ಯೋಚನೆ ಮಾಡಬೇಕು. ಅದರೆ ದೇಶದಲ್ಲಿ ಹಾಗಾಗದಿರುವುದು ವಿಪರ್ಯಾಸ
ಸಾಸಿವೆ ಕೇವಲ ಸಂಬಾರ ಪದಾರ್ಥವಾಗಿರದೆ ಅದು ಔಷಧಿ, ಜೇನುತುಪ್ಪ ಹಾಗೂ ಊಟದ ರೂಪದಲ್ಲಿ ನಮ್ಮ ದೇಹ ಸೇರಿಕೊಳ್ಳುತ್ತಿದೆ, ಎಲ್ಲಾ ಅಂಶಗಳನ್ನು ಗಮನಿಸಿದಾಗ ಬಹು ಸಂಸ್ಕೃತಿ ಹೊಂದಿದ ಭಾರತ ದೇಶದಲ್ಲಿ ಈ ರೀತಿಯ ಪರಿಸರ-ಜನ-ಸಂವಿಧಾನ ವಿರೋಧಿ ತಂತ್ರಜ್ಞಾನಗಳನ್ನು ಬಳಸುವಾಗ ತುಂಬಾ ಎಚ್ಚರವಹಿಸಬೇಕು. ನಮ್ಮ ದೇಶದ ಕೃಷಿ ತುಂಬಾ ಸಂಕೀರ್ಣತೆಯಿಂದ ಕೂಡಿದೆ. ಭತ್ತದಲ್ಲಿ ಶ್ರೀ ಪದ್ಧತಿಯಿಂದ ಅಧಿಕ ಇಳುವರಿ ಪಡೆದು ಕೊಂಡಾಗಿದೆ. ಅದರಂತೆ ಸಾಸಿವೆಯಲ್ಲೂ ಕೂಡ ಆ ರೀತಿಯ ಪದ್ಧತಿಯಿಂದ ಅಧಿಕ ಇಳುವರಿಯನ್ನು ಪಡೆಯಬಹುದು.
ಮನೆ ಹೊಸ್ತಿಲ್ಲಿ ನಿಂತಿರುವ ಕುಲಾಂತರಿ ಸಾಸಿವೆ ಎಂಬ ಕುಲಾಂತರಿ ಭೂತ ಮನೆ ಒಳಗೆ ಇನ್ನೇನು ಕಾಲಿಡುತ್ತದೆ. ಅಭಿವೃದ್ಧಿ ಹೊಂದಿದ ೨೦ ದೇಶಗಳ ಪೈಕಿ ೧೭ ದೇಶಗಳು ಕುಲಾಂತರಿ ತಂತ್ರಜ್ಞಾನವನ್ನು ನಿರಾಕರಿಸಿರುವಾಗ ಕುಲಾಂತರಿ ಆಹಾರವನ್ನು ವಾಣಿಜ್ಯಿಕವಾಗಿ ಬೆಳೆಯಲು ಅನುಮತಿ ನೀಡಿದ ಮೊದಲ ದೇಶ ಭಾರತ ಎಂಬ ಕೆಟ್ಟ ಹಣೆಪಟ್ಟಿಯನ್ನು ಇದರಿಂದಾಗಿ ಕಟ್ಟಿಕೊಳ್ಳಲಿದೆ. ಸಾವಯವ ಕೃಷಿಯಲ್ಲಿ ಮುಂದಿರುವ ಕರ್ನಾಟಕ ಈಗ ಕುಲಾಂತರಿ ತಂತ್ರಜ್ಞಾನದ ಕುರಿತು ಇನ್ನೊಮ್ಮೆ ಚಿಂತನೆ ಮಾಡಬೇಕಿದೆ.
Box Items: 1
ಕುಲಾಂತರಿ ಸಾಸಿವೆಗೆ ಐದು ಬಗೆಯ ವಂಶವಾಹಿಗಳನ್ನು ಸೇರಿಸಲಾಗಿದೆ.
1. Bar (ಗ್ಲುಪೋಸಿನೇಟ್ ಕಳೆನಾಶಕ ಪ್ರತಿರೋಧಕಕ್ಕೆ)
2. Barnase (ಗಂಡು ಗಿಡದ ಬಂಜೆತನಕ್ಕೆ)
3. Barstar(ಮತ್ತೆ ಫಲೀಕರಣಕ್ಕೆ)
4. PssuAra (ಉತ್ತೇಜಕ ವಂಶವಾಹಿ)
5. PTA29 (ಮತ್ತೊಂದು ಉತ್ತೇಜಕ ವಂಶವಾಹಿ)
The above Genes taken from following species.
Streptomyces hygroscopicus
Bacillus amyloliquefaciens
Bacillus amyloliquefaciens
Arabidopsis thalianaNicotiana tabacum
Nicotiana tabacum
ಮಂಜುನಾಥ ಹೊಳಲು, ತುಮಕೂರು
ಕೃಷಿ ಬರಹಗಾರರು