ನಾನು 9 ನೇ ತರಗತಿ ಓದುತ್ತಿರಬೇಕಾದರೆ ನಮ್ಮ ಜೀವಶಾಸ್ತ್ರ ಶಿಕ್ಷಕಿ ನಮಗೆ ಇದ್ದ ಮಾನವ ಸಂತಾನೋತ್ಪತ್ತಿ ಪಾಠವನ್ನು ಮಾಡದೇ ಹಾಗೇ ಮುಂದಿನ ಪಾಠ ಮಾಡಿದ್ದರು. ನಾವು ತರಗತಿಯಲ್ಲಿ ಕೇಳಿದಾಗ ಅವರು ಆ ಪಾಠವನ್ನು ನೀವೇ ಓದಿಕೊಳ್ಳಿ ಎಂದು ಹೇಳಿದ್ದರು… ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಅಗತ್ಯವನ್ನು ಒತ್ತಿ ಹೇಳಿದ್ದಾರೆ ಪತ್ರಿಕೋದ್ಯಮ ವಿದ್ಯಾರ್ಥಿ ಚನ್ನಬಸವ ರಾಯಚೂರು.
ಇಂದಿನ ಜಗತ್ತಿನಲ್ಲಿ ಲೈಂಗಿಕ ಶಿಕ್ಷಣದ ಕೊರತೆಯಿಂದ ದಿನನಿತ್ಯ ಸ್ತ್ರೀಯರ ಮೇಲಿನ ದೌರ್ಜನ್ಯಗಳು, ಅತ್ಯಾಚಾರಗಳು, ಬಾಲ್ಯವಿವಾಹ, ಪುರುಷ ಪ್ರಧಾನತೆ ಹೆಚ್ಚಾಗುತ್ತಿವೆ. ಇದರ ಕಡೆ ಸರ್ಕಾರವಾಗಲಿ ಅಥವಾ ಸ್ಥಳೀಯ ಸಂಸ್ಥೆಗಳಾಗಲಿ ಗಮನ ಹರಿಸದೇ ಇರುವುದು ಶೋಚನಿಯ ಸಂಗತಿ.
ಹದಿಹರೆಯದವರಿಗೆ ಲೈಂಗಿಕ ಶಿಕ್ಷಣ ಏಕೆ?
ಶಾಲಾ ಮಟ್ಟದ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವ ಸಂತಾನೋತ್ಪತ್ತಿ ಸಂಬಂಧಿತ ಪಾಠಗಳನ್ನು ಮಾಡಲು ಸ್ವತಃ ಶಿಕ್ಷಕರೇ ಹಿಂದೇಟು ಹಾಕುತ್ತಾರೆ. ಮಕ್ಕಳಿಗೆ ಲೈಂಗಿಕ ಸಂಬಂಧಿತ ವಿಷಯಗಳನ್ನು ತಿಳಿಸದಿದ್ದಾಗ ತಮ್ಮ ಗೆಳೆಯರ ಮೂಲಕ ತಿಳಿದುಕೊಂಡು ಅದರ ಬಗ್ಗೆ ಜ್ಞಾನವಿಲ್ಲದೇ ಪ್ರಯೋಗಕ್ಕೆ ಸಿದ್ಧರಾಗುತ್ತಾರೆ. ಆಗಾಗಿ ಇದರ ತಿಳುವಳಿಗೆ ಅವರಿಗೆ ಅವಶ್ಯಕವಾಗಿದೆ. ಮುಚ್ಚಿಟ್ಟ ವಿಷಯದ ಬಗ್ಗೆ ಅವರಿಗೆ ಅಸಕ್ತಿ ಹೆಚ್ಚಾಗುತ್ತದೆ. ಇದರಿಂದ ಮಕ್ಕಳ ಮುಂದೆ ಇದರ ಕುರಿತು ಎಲ್ಲ ವಿಚಾರ ತಿಳಿಸುವುದು ಅವಶ್ಯಕವಾಗಿದೆ.
ನಾನು 9 ನೇ ತರಗತಿ ಓದುತ್ತಿರಬೇಕಾದರೆ ನಮ್ಮ ಜೀವಶಾಸ್ತ್ರ ಶಿಕ್ಷಕಿ ನಮಗೆ ಇದ್ದ ಮಾನವ ಸಂತಾನೋತ್ಪತ್ತಿ ಪಾಠವನ್ನು ಮಾಡದೇ ಹಾಗೇ ಮುಂದಿನ ಪಾಠ ಮಾಡಿದ್ದರು. ನಾವು ತರಗತಿಯಲ್ಲಿ ಕೇಳಿದಾಗ ಅವರು ಆ ಪಾಠವನ್ನು ನೀವೇ ಓದಿಕೊಳ್ಳಿ ಎಂದು ಹೇಳಿದ್ದರು. ಲೈಂಗಿಕತೆಗೆ ಸಂಬಂಧಿಸಿದ ಇಂತಹ ವಿಷಯಗಳು ಪಠ್ಯದಲ್ಲಿರುವುದೇ ಕಡಿಮೆ. ಅದರಲ್ಲಿ ಇದ್ದದ್ದನ್ನೇ ಮಾಡಲು ಶಿಕ್ಷಕರು ಮುಜುಗರ ಪಟ್ಟು ಹಿಂಜರಿಯುತ್ತಿದ್ದಾರೆ. ಇದು ಮಕ್ಕಳ ಮೇಲೆ ತುಂಬ ಪ್ರಭಾವ ಬೀರುತ್ತಿದೆ.
ಇನ್ನು, ಹೆಣ್ಣು ಮಕ್ಕಳ ವಿಚಾರದಲ್ಲಿ ಅವರಿಗೆ ಪ್ರಕೃತಿ ದತ್ತವಾಗಿ ಆಗುವ ಮುಟ್ಟಿನ ಬಗ್ಗೆಯು ಸರಿಯಾದ ಮಾಹಿತಿಯನ್ನು ಶಿಕ್ಷಣ ಸಂಸ್ಥೆಗಳು ನೀಡುತ್ತಿಲ್ಲ. ಅವರಿಗೆ “ಶುಚಿ ಯೋಜನೆ”ಯಡಿ ನೀಡುವ ಶುಚಿ ಪ್ಯಾಡ್ ಗಳನ್ನೂ ಸರಿಯಾದ ರೀತಿಯಲ್ಲಿ ನೀಡುತ್ತಿಲ್ಲ. ನಾ ಕಂಡಂತೆ ಶಾಲೆಯಲ್ಲಿ ಪ್ಯಾಡ್‌ಗಳನ್ನು ನೀಡುವಾಗ ಎಲ್ಲ ಗಂಡು ಮಕ್ಕಳನ್ನೂ ತರಗತಿಯಿಂದ ಹೊರಗೆ ಕಳುಹಿಸಿ ಹುಡುಗಿಯರಿಗೆ ಕದ್ದುಮುಚ್ಚಿ ನೀಡುತ್ತಾರೆ. ಇದರಿಂದ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ಮೇಲೆ ಕೆಟ್ಟ ಕುತೂಹಲ ಮೂಡುತ್ತದೆ ಮತ್ತು ಈ ಸಂಬಂಧಿತ ಜ್ಞಾನವು ಗಂಡು ಮಕ್ಕಳಿಗೆ ಸಿಗುವುದಿಲ್ಲ. ಅದ್ದರಿಂದ ಇದು ಸರಿಯಾದ ಕ್ರಮವಲ್ಲ.
ವಯಸ್ಕರಲ್ಲೂ ಸಹ ಲೈಂಗಿಕತೆ ಎಂದರೆ ತುಂಬ ಕೆಟ್ಟದ್ದು, ಗುಪ್ತವಾದದ್ದು ಎಂಬ ಭಾವನೆಗಳಿವೆ. ಇನ್ನು ಮದುವೆಯಾದ ಹೆಣ್ಣು ಮಕ್ಕಳಿಗೆ ಅತ್ತೆ, ಮಾವ, ಗಂಡನಿಂದ ಗಂಡು ಸಂತಾನವೇ ಬೇಕು. ಆಕಸ್ಮಾತ್ ಗಂಡು ಸಂತಾನವಾಗಲಿಲ್ಲವೆಂದರೆ ಅವಳಲ್ಲಿ ಏನೋ ದೋಷವಿದೆ ಎಂದು ಬೇರೆ ಮದುವೆ ಆಗುವುದು ಇತ್ತೀಚೆಗೆ ಸರ್ವೇಸಾಮಾನ್ಯವಾಗಿದೆ. ಆದರೆ ಇಲ್ಲಿ ವೈಜ್ಞಾನಿಕವಾಗಿ ನೋಡಿದರೆ ಗಂಡು, ಅಥವಾ ಹೆಣ್ಣು ಮಗುವಿನ ಲಿಂಗವನ್ನು ನಿರ್ಧರಿಸುವುದು ಗಂಡೇ. ಇದನ್ನು ತಿಳಿಯದ ಜನರು ಇದಕ್ಕೆ ನೇರವಾಗಿ ಹೆಣ್ಣನ್ನೇ ಹೊಣೆ ಮಾಡುತ್ತಿದ್ದಾರೆ. ಹಾಗಾಗಿ ಇಂತಹ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವುದು ಅವಶ್ಯಕವಾಗಿದೆ.
HIV ಮತ್ತು ಇತರ ಲೈಂಗಿಕವಾಗಿ ಹರಡುವ ರೋಗಗಳು ಮತ್ತು ಸೋಂಕುಗಳು
15 ವರ್ಷಗಳಲ್ಲಿ 2.3 ಮಿಲಿಯನ್ ಜನರು ಎಚ್ಐವಿ ಸೋಂಕಿನೊಂದಿಗೆ ಇದ್ದಾರೆ. ಇದು ಭಾರತದಲ್ಲಿ AIDS/HIV ಸೋಂಕಿತ ಒಟ್ಟು ಜನಸಂಖ್ಯೆಯ ಸುಮಾರು 31% ಆಗಿದೆ. ಸುರಕ್ಷಿತ ಲೈಂಗಿಕ ಎನ್‌ಕೌಂಟರ್‌ಗಳು ಮತ್ತು ಬಹು ಪಾಲುದಾರರೊಂದಿಗೆ ಅಸುರಕ್ಷಿತ ಸಂಬಂಧವನ್ನು ಹೊಂದುವುದರ ಪರಿಣಾಮಗಳ ಬಗ್ಗೆ ಜನರಲ್ಲಿ ಬಹಳ ಕಡಿಮೆ ಅರಿವು ಇದೆ. ಕೇವಲ 45% ಯುವಕರು ಮತ್ತು 28% ಯುವತಿಯರು HIV/AIDS ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ಸಮಗ್ರ ಜ್ಞಾನವನ್ನು ಹೊಂದಿದ್ದಾರೆಂದು ತೋರುತ್ತದೆ. ಇದು ಗ್ರಾಮೀಣ ಪ್ರದೇಶಗಳಿಗಿಂತ ನಗರಗಳಲ್ಲಿ ಹೆಚ್ಚು. 15-19 ವರ್ಷ ವಯಸ್ಸಿನವರಲ್ಲಿ ಕೇವಲ 42% ಯುವಕರು ಮತ್ತು 30% ಯುವತಿಯರು HIV/AIDS ಪರೀಕ್ಷಾ ಸೌಲಭ್ಯಗಳ ಬಗ್ಗೆ ತಿಳಿದಿರುತ್ತಾರೆ ಎಂಬ ಮಾಹಿತಿಯು ಆಘಾತಕಾರಿ.
ಇತರ ಲೈಂಗಿಕ ಸೋಂಕುಗಳ ತಡೆಗಟ್ಟುವಿಕೆಯ ಸ್ಥಿತಿ ಇನ್ನೂ ಕೆಟ್ಟದಾಗಿದೆ, ಗಂಡು ಹೆಣ್ಣು ಇಬ್ಬರ ಸಂಖ್ಯೆಯು 20% ಕ್ಕಿಂತ ಕಡಿಮೆಯಾಗಿದೆ (ಐಐಪಿಎಸ್ ಮತ್ತು ಪಾಪ್ಯುಲೇಶನ್ ಕೌನ್ಸಿಲ್ 2010 ರ ಅಧ್ಯಯನಗಳು). ಸಮೀಕ್ಷೆಗೆ ಒಳಗಾದ ಎಲ್ಲಾ ಅವಿವಾಹಿತ ಯುವತಿಯರಲ್ಲಿ 8% ರಷ್ಟು ಮಂದಿಗೆ ಗರ್ಭನಿರೋಧಕ ಮತ್ತು ರಕ್ಷಣೆಯ ಒಂದೇ ಒಂದು ವಿಧಾನದ ಬಗ್ಗೆ ತಿಳಿದಿರುವುದಿಲ್ಲ.
ಶಾಲೆಗಳು ರಾಷ್ಟ್ರೀಯ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ನೀತಿ 2002 ಕ್ಕೆ ಬದ್ಧವಾಗಿದ್ದರೆ ಅಂತಹ ಹೆಚ್ಚಿನ ಅಪಾಯದ ಲೈಂಗಿಕ ಸಂಬಂಧದ ದುರ್ಬಲತೆಯನ್ನು ತಪ್ಪಿಸಲು ಪ್ರಯತ್ನಿಸಬಹುದು. ಇದು ಜಾಗೃತಿ ಮತ್ತು ಶಿಕ್ಷಣದ ಮೂಲಕ ಸೋಂಕಿತ ವ್ಯಕ್ತಿಗಳ ಹಕ್ಕುಗಳ ರಕ್ಷಣೆ ಮತ್ತು ಏಡ್ಸ್ ತಡೆಗಟ್ಟುವಿಕೆಯ ಅಗತ್ಯವನ್ನು ಹೇಳುತ್ತದೆ.
ಹಾಗಾಗಿ ಸರ್ಕಾರವು ಈ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಹಾಗೂ ಶಾಲಾ, ಕಾಲೇಜು ಮಕ್ಕಳಿಗೆ ಲೈಂಗಿಕ ಶಿಕ್ಷಣದ ಕುರಿತು ಮಾಹಿತಿ ನೀಡಲು ಉತ್ತಮವಾದ ಯೋಜನೆಗಳನ್ನು ಮತ್ತು ಪಠ್ಯಕ್ರಮಗಳನ್ನು ಹಾಗೂ ಇದಕ್ಕಾಗಿ ಪ್ರತ್ಯೇಕ ಶಿಕ್ಷಕಿ/ಶಿಕ್ಷಕರನ್ನು ನೇಮಿಸಬೇಕು. ಇದರ ಕುರಿತು ಜಾಗೃತಿ ಶಿಬಿರಗಳನ್ನು ಮಾಡಬೇಕು. HIV/AIDS ಸಂಬಂಧಿತ ಆನಾರೋಗ್ಯದ ಕುರಿತು ಮಾಹಿತಿ ನೀಡುವುದು ಹಾಗೂ ಗರ್ಭನಿರೋಧಕ (ಕಾಂಡೋಮ್) ಬಳಕೆಯ ಉಪಯೋಗಗಳನ್ನು ಅವರಿಗೆ ಮನದಟ್ಟು ಮಾಡಬೇಕು.
ಚನ್ನಬಸವ ರಾಯಚೂರು
ಪತ್ರಿಕೋದ್ಯಮ ವಿದ್ಯಾರ್ಥಿ