Home ಇಕಾಲಜಿ ನಮ್ಮ ಜಿಗಿತ ಮಳೆಗಾಲದಿಂದ ನೇರ ಬೇಸಗೆಯತ್ತ…!

ನಮ್ಮ ಜಿಗಿತ ಮಳೆಗಾಲದಿಂದ ನೇರ ಬೇಸಗೆಯತ್ತ…!

0

ಬಹುಶಃ ಜಗತ್ತಿನಲ್ಲಿ ಇನ್ನು ಮುಂದೆ ಉಳಿಯುವುದು ಎರಡೇ ಕಾಲವೇನೊ, ಒಂದು ಬೇಸಗೆ ಮತ್ತೊಂದು ಮಳೆಗಾಲ. ಇವೆರಡೂ ಬೇರೆಬೇರೆಯಾಗಿ ಬರುವುದಿಲ್ಲ. ಒಂದರೊಳಗೊಂದು ಬೆರೆತು ಬರುತ್ತವೆ. ರೈತರು ಹೇಗೆ ಈ ಅತಿರೇಕಗಳಿಗೆ ಹೊಂದಿಕೊಳ್ಳಬೇಕೊ ಗೊತ್ತಿಲ್ಲ. ಕೆ ಎಸ್‌ ರವಿಕುಮಾರ್‌ ಬರೆದಿರುವ ʼಬಿಸಿಬಿಸಿ ಫೆಬ್ರವರಿ – ಚಳಿಗಾಲ ಪರಾರಿʼ ಲೇಖನದ ಕೊನೆಯ ಸರಣಿ.

ಗೋಧಿಯಷ್ಟೆ ಅಲ್ಲ

ಗೋಧಿ ಮಾತ್ರವಲ್ಲ, ಬೇಸಗೆಯಲ್ಲಿ ಇಳುವರಿ ಕೊಡುವ ಯಾವುದೇ ಬಗೆಯ ಆಹಾರ, ವಾಣಿಜ್ಯ ಬೆಳೆಗಳು ಮತ್ತು ಹಣ್ಣು, ತರಕಾರಿ, ಬೇಳೆಕಾಳುಗಳು ಕೂಡಾ ಬಿಸಿಯಲೆಗಳಿಗೆ ತತ್ತರಿಸುತ್ತವೆ. ಅತಿತಾಪಕ್ಕೆ ಅವುಗಳ ಚಿಗುರು ಮುರುಟಿ ಹೋಗಬಹುದು. ಹೂವುಗಳು ಪರಾಗಸ್ಪರ್ಶದಿಂದ fertilize ಆಗುವ ಮುನ್ನವೆ ಒಣಗಿ ಉದುರಿ ಹೋಗಬಹುದು. ಮಿಡಿ, ಹೀಚು ಕಾಯಿಗಳು ಬಲಿಯದೆ ಸೊರಗಿ ಹೋಗಬಹುದು. ವಾರಗಟ್ಟಲೆ ತಾಪ ಮುಂದುವರಿದರೆ ಗಿಡಮರಗಳೇ ಗಾರೆದ್ದು ಹೋಗಬಹುದು. ಪರಾಗಸ್ಪರ್ಶ ನಡೆಸುವ ಕೀಟಗಳು ಅತಿತಾಪ ತಾಳದೆ ಅಳಿದು ಹೋಗಬಹುದು. ಅಥವಾ ಉಳಿದುಕೊಂಡರೂ ಬಿರುಬಿಸಿಲಿಗೆ ಬಾಡಿ ಬಗ್ಗಿದ ಹೂವುಗಳಲ್ಲಿ ಮಕರಂದ ಆವಿಯಾಗಿ ಹೋಗಿ ಹಸಿದು ಸಾಯಬಹುದು. ಈಗಾಗಲೆ ಈ ರೀತಿಯ ಬೇಕಿರದ ಬದಲಾವಣೆಗಳು ವರದಿಯಾಗುತ್ತಿವೆ.

ಕಾಶ್ಮೀರ ತಂಪಿಗೆ ಹೆಸರಾದ ತಾಣ. ಬೇಸಗೆ ಅಲ್ಲಿ ಬಿರುಸಾಗಿರುವುದಿಲ್ಲ. ಆದರೆ ಕಳೆದ ಕೆಲವು ವರುಷಗಳಿಂದ ಹವಾಮಾನ ಅಲ್ಲಿಯೂ ಬದಲಾಗಿದೆ. ಬಿಸಿಲಿನ ಹದನ ಅಲ್ಲಿ ಕಂಗೆಡಿಸುವ ಮಟ್ಟಕ್ಕೇರಿದೆ. ಜಗತ್ತಿನ ಅತಿ ದುಬಾರಿ ಸಂಬಾರ ಪದಾರ್ಥ ಎನಿಸಿರುವ ಕೇಸರಿ ಬೆಳೆಯುವ ಕಾಶ್ಮೀರಿಗಳು ಬಿಸಿಲಿನ ಬೇಗೆಗೆ ಬೆಬ್ಬರಬಿದ್ದು ಹೋಗಿದ್ದಾರೆ. ಹೊರಾಂಗಣದಲ್ಲಿ ಕೇಸರಿ ಬೆಳೆಯುವುದು ತ್ರಾಸವಾಗಿದೆ. ಸುಡುಬಿಸಿಲಿನ ಹೊಡೆತಕ್ಕೆ ಕೇಸರಿ ಗಿಡಗಳು ಬಾಡಿ ಒರಗುತ್ತಿವೆ. ಕೇಸರಿ ಸಾಗುವಳಿ ವರುಷದಿಂದ ವರುಷಕ್ಕೆ ಕುಗ್ಗುತ್ತಿದೆ. 1996ರಲ್ಲಿ 5,707 ಹೆಕ್ಟೇರ್ ಹರಹಿನಲ್ಲಿ ಸಾಗುವಳಿಯಾಗುತ್ತಿದ್ದ ಕೇಸರಿ 2020ರಲ್ಲಿ 1,116 ಹೆಕ್ಟೇರಿಗೆ ಕುಸಿಯಿತು. ಕಳೆದ ಇಪ್ಪತ್ತು ವರುಷಗಳಲ್ಲಿ ಇಳುವರಿ ವರುಷಕ್ಕೆ 16 ಮೆಟ್ರಿಕ್ ಟನ್ನಿನಿಂದ 5.6 ಮೆಟ್ರಿಕ್ ಟನ್ನಿಗೆ ಇಳಿದಿದೆ. ಕಾಶ್ಮೀರಿಗಳ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ)ಕ್ಕೆ ಕೇಸರಿಯ ಕೊಡುಗೆ ಮುಖ್ಯವಾದದ್ದು. ಹವಾಮಾನ ಬದಲಾವಣೆಯ ಹೊಡೆತದಿಂದ ಕೇಸರಿ ಸಾಗುವಳಿ ನೆಲ ಕಚ್ಚದಂತೆ ತಡೆಯಲು Sher-e-Kashmir University of Agricultural Sciences and Technology (SKUAST) ಒಳಾಂಗಣದಲ್ಲಿ ಕೇಸರಿ ಬೆಳೆಯುವ ಹೊಸ ವಿಧಾನವನ್ನು ರೈತರಿಗೆ ಪರಿಚಯಿಸಿದೆ. ಸಧ್ಯಕ್ಕೆ ಇದು ಪ್ರಯೋಗದ ಹಂತದಲ್ಲಿದ್ದರೂ ಬೆಳೆಗಾರರಲ್ಲಿ ಹತಾಶೆಯನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಮುಕ್ತ ಪರಿಸರದಲ್ಲಿ ಹೆಚ್ಚು ಇಳುವರಿ ತೆಗೆದಂತೆ ಒಳಾಂಗಣದಲ್ಲಿ ತೆಗೆಯಲು ಜಾಗದ ಮಿತಿ ಅಡ್ಡಬರುತ್ತದೆ. ಒಳಾಂಗಣದಲ್ಲಿ ತಾಪವನ್ನು ಒಂದು ಗೊತ್ತಾದ ಮಟ್ಟದಲ್ಲಿರಿಸಲು ಪೂರಕ ವ್ಯವಸ್ಥೆ ಮಾಡಿಕೊಳ್ಳ ಬೇಕಾಗುತ್ತದೆ. ಇದಕ್ಕೆಲ್ಲ ಹೆಚ್ಚುವರಿ ಖರ್ಚು ಬರುತ್ತದೆ. ಒಟ್ಟಾರೆ ಯಾವುದೇ ಬಗೆಯ ಬೇಸಾಯ ಈವರೆಗೆ ನಡೆದ ಹಾಗೆ ಮುಂದಿರುವುದಿಲ್ಲ.

 ಬಿಸಿಯಲೆಗಳ ಪರಿಣಾಮಗಳು ಬೇಸಾಯದ ಮೇಲಷ್ಟೆ ಅಲ್ಲ, ಹೈನುಗಾರಿಕೆ ಮತ್ತು ಕೋಳಿಸಾಕಣೆಗಳ ಮೇಲೂ ಆಗುತ್ತವೆ. ಬಿಸಿಯಲೆಗಳಿಂದ ಕರಾವಿನ ಜಾನುವಾರುಗಳ ದೇಹದ ತಾಪ 0.5 ರಿಂದ 3.5 ಡಿಗ್ರಿ ಸೆಲ್ಸಿಯಸ್‍ಗಳಷ್ಟು ಹೆಚ್ಚಿದರೆ ಹಾಲಿನ ಉತ್ಪತ್ತಿ ಶೇಕಡಾ 15ರಷ್ಟು ಕಡಿಮೆಯಾಗಬಹುದು. ಬಡಪಾಯಿ ಮೊಟ್ಟೆಕೋಳಿಗಳ ಕತೆ ಬೇರೆ ಅಲ್ಲ. ಬರಿಯ ಎರಡು ದಿನಗಳ ಕಾಲ ಬಿಸಿಯಲೆಗಳಿಗೆ ಅವು ಸಿಲುಕಿದರೆ ಅವುಗಳ ದೇಹದಲ್ಲೂ ತಾಪವೇರಿ ಮೊಟ್ಟೆ ಉತ್ಪತ್ತಿ ಶೇಕಡಾ 10ರಷ್ಟು ಕುಗ್ಗಬಹುದು. ಬಿಸಿಯಲೆಗಳಿಂದ ಬಿಸಿಯಾದ ದೇಹ ತನ್ನ ತಾಪವನ್ನು ಬೆವರಿನ ಮೂಲಕ ಸಮತೋಲನದಲ್ಲಿರಿಸಲು ತನ್ನೊಳಗಿನ ನೀರಿನ ತೇವಾಂಶವನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳುತ್ತದೆ. ಸಹಜವಾಗಿ ಹಾಲು, ಮೊಟ್ಟೆಗಳಿಗೆ ಸಾಕಷ್ಟು ನೀರು ದಕ್ಕದೆ ಅವುಗಳ ಉತ್ಪಾದನೆ ತಗ್ಗುತ್ತದೆ. ಮನುಷ್ಯರಷ್ಟೆ ಅಲ್ಲದೆ ಎಲ್ಲ ಜೀವಸಂಕುಲಗಳು ವಿಪರೀತ ತಾಪದಲ್ಲಿ ಡಿಹೈಡ್ರೇಷನ್(ದೇಹದಲ್ಲಿ ನೀರಿಲ್ಲವಾಗುವುದು)ನಿಂದ ನರಳುತ್ತವೆ. ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳೆರಡೂ ಒಮ್ಮೆಲೆ ಎದುರಾಗುವ ಸಂದರ್ಭವಿದ್ದರೆ ಅದು  ಬಿಸಿಯಲೆಗಳು ಕವಿದಾಗ.

ಬರುವ ದಿನಗಳಲ್ಲಿ ಉತ್ತರದ ಜಮ್ಮುವಿನಿಂದ ಹಿಡಿದು ದಕ್ಷಿಣದ ಕೇರಳದವರೆಗೆ ಮತ್ತು ಪಶ್ಚಿಮದ ಗುಜರಾತಿನಿಂದ ಹಿಡಿದು ಪೂರ್ವದ ಬಂಗಾಳವರೆಗಿನ ಪ್ರದೇಶಗಳೆಲ್ಲ ಬಿಸಿಯಲೆಗಳ ಹೊಡೆತಕ್ಕೆ ಮೇಲಿಂದ ಮೇಲೆ ತುತ್ತಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಈಗಾಗಲೆ ದಿನದ ಸಾಮಾನ್ಯ ತಾಪಕ್ಕಿಂತ 8-11 ಡಿಗ್ರಿ ಸೆಲ್ಸಿಯಸ್ ಹೆಚ್ಚಳದ ತಾಪವು ದೇಶದ ಹಲವೆಡೆ ದಾಖಲಾಗಿದೆ. ಇದು ಕಳೆದ ವರುಷದ ಹೆಚ್ಚಳಕ್ಕಿಂತಲೂ ಹೆಚ್ಚು. ಮುಂದಿನ ವರುಷಗಳಲ್ಲಿ ಹೀಗೆ ಬೇಸಗೆ ಫೆಬ್ರವರಿಗಿಂತ ಮುನ್ನವೇ ಅಂದರೆ ಡಿಸೆಂಬರ್, ಜನವರಿಯಿಂದಲೇ ಶುರುವಾಗುವ ಪರಿಪಾಟವನ್ನು ನಾವು ಊಹಿಸಬಹುದಾಗಿದೆ. ಚಳಿಗಾಲ ಬರಬರುತ್ತ ಮೊಟಕಾಗುತ್ತದೆ. ಕಡೆಗೆ ಮಾನ್ಸೂನ್ ಮಳೆಗಳ ನಂತರ ನೇರ ಬೇಸಗೆಗೆ ನಾವು ಜಿಗಿಯುತ್ತೇವೆ.

ಸಾಮಾನ್ಯವಾಗಿ ಬಿಸಿಯಲೆಗಳನ್ನು ಹಿಂಬಾಲಿಸಿ ಬರಗಾಲ ಬರುತ್ತದೆ. ಆಮೇಲೆ ಒಮ್ಮೆಲೆ ಹುಚ್ಚು ನೆರೆಗಳನ್ನು ತರುವ ಮಳೆ ಸುರಿಯುತ್ತದೆ. ಇವು ಯಾವುವೂ ನಮ್ಮ ಬೇಸಾಯದ ಲೆಕ್ಕಾಚಾರಕ್ಕೆ ಪೂರಕವಾಗಿರುವುದಿಲ್ಲ. ಬಹುಶಃ ಜಗತ್ತಿನಲ್ಲಿ ಇನ್ನು ಮುಂದೆ ಉಳಿಯುವುದು ಎರಡೇ ಕಾಲವೇನೊ, ಒಂದು ಬೇಸಗೆ ಮತ್ತೊಂದು ಮಳೆಗಾಲ. ಇವೆರಡೂ ಬೇರೆಬೇರೆಯಾಗಿ ಬರುವುದಿಲ್ಲ. ಒಂದರೊಳಗೊಂದು ಬೆರೆತು ಬರುತ್ತವೆ. ರೈತರು ಹೇಗೆ ಈ ಅತಿರೇಕಗಳಿಗೆ ಹೊಂದಿಕೊಳ್ಳಬೇಕೊ ಗೊತ್ತಿಲ್ಲ. ಕಾಲದ ಪ್ರತೀ ಹಂತವೂ ನಿಡುಗಾಲ ಒಂದು ಸ್ಥಿರತೆಯನ್ನು ಕಾಪಾಡಿಕೊಂಡಿದ್ದರೆ ಅದನ್ನು ನೆಚ್ಚಿಕೊಂಡು ಮತ್ತು ಅದಕ್ಕೆ ಹೊಂದಿಕೊಂಡು ಬೇಸಾಯ ಮಾಡುವುದು ಸುಲಭ ಮತ್ತು ಸಹಜ. ಆದರೆ ಇನ್ನು ಮುಂದೆ ಹೇಗೋ……

ಭಾರತ ಮತ್ತು ಬಿಸಿಯಲೆಗಳು

ವಿಶ್ವಬ್ಯಾಂಕ್ ದೇಶದೇಶಗಳಿಗೆ ಸಾಲ ಕೊಡುತ್ತದೆ. ಈಗೀಗ ಸಲಹೆ ರೂಪದಲ್ಲಿ ಎಚ್ಚರಿಕೆಯನ್ನೂ ಕೊಡುತ್ತಿದೆ. ಅದರ Climate Investment Opportunities in India’s Cooling Sector  ವರದಿ ಕಳೆದ ಡಿಸೆಂಬರ್‌ ನಲ್ಲಿ ಬಿಡುಗಡೆಯಾಗಿದೆ. ವರದಿಯಲ್ಲಿ ಜಗತ್ತಿನಲ್ಲೆ ಭಾರತ ಅತಿಹೆಚ್ಚು ಕಾಲ ಬಿಸಿಯಲೆಗಳಿಗೆ ತುತ್ತಾಗಬಲ್ಲ ಮೊದಲ ದೇಶವಾಗಲಿದೆ ಎಂಬ ದಿಗಿಲನ್ನು ವ್ಯಕ್ತಪಡಿಸಲಾಗಿದೆ. ಆರ್ಥಿಕ ಬೆಳವಣಿಗೆಗೆ ಗಂಭೀರ ಕುತ್ತನ್ನು ತರಬಲ್ಲ ಈ ಬಿಸಿಯಲೆಗಳನ್ನು ಎದುರಿಸಲು ದೇಶ ಅಣಿಯಾಗಿದೆಯೆ ಎಂಬ ಪ್ರಶ್ನೆಯೂ ಇಲ್ಲಿ ಎದ್ದಿದೆ. ಭಾರತದ ಬಹುಸಂಖ್ಯಾತ ಬಡವರು ಮತ್ತು ಸಮಾಜದ ಅಂಚಿಗೆ ತಳ್ಳಲ್ಪಟ್ಟವರು ಬಿಸಿಯಲೆಗಳಿಂದ ಹೆಚ್ಚು ಹಾನಿಗೊಳಗಾಗುತ್ತಾರೆ. ಈ ಮಂದಿ ತಮ್ಮನ್ನು ಬಿಸಿಯಲೆಗಳ ತಾಪದಿಂದ ಕಾಪಾಡಿಕೊಳ್ಳಲು ಅಗತ್ಯವಿರುವ ವಿದ್ಯುತ್ ಪಂಖ, ಏರ್ ಕೂಲರ್, ಏರ್ ಕಂಡಿಷನ್ ಇತ್ಯಾದಿ ವ್ಯವಸ್ಥೆಗಳನ್ನು ಕಲ್ಪಿಸಿಕೊಳ್ಳುವಷ್ಟು ಆರ್ಥಿಕ ಕಸುವಿಲ್ಲದವರಾಗಿದ್ದಾರೆ (2019ರ India Cooling Action Plan (ICAP) ಪ್ರಕಾರ ಭಾರತದಲ್ಲಿ ಶೇಕಡಾ 8ರಷ್ಟು ಕುಟುಂಬಗಳು ಮಾತ್ರ ಏರ್ ಕಂಡಿಷನ್ ಹೊಂದಿವೆ). ಜನಸಂಖ್ಯೆಯ ಬಲುದೊಡ್ಡ ಭಾಗದ ಬದುಕುಳಿಯುವ ಅವಕಾಶವನ್ನೆ ಬಿಸಿಯಲೆಗಳು ಮುಂಬರುವ ದಿನಗಳಲ್ಲಿ ಕಿತ್ತುಕೊಳ್ಳಬಹುದಾಗಿದೆ. ಹೊರಗೆ ಬಿಸಿಲಲ್ಲೆ ಕೆಲಸ ಮಾಡುವಂತಹ ದುಡಿಮೆಗಾರರ ದೊಡ್ಡ ವರ್ಗವೇ ಭಾರತದಲ್ಲಿ ಇದೆ. ಇವರ ಸಂಖ್ಯೆ 38 ಕೋಟಿಗೂ ಹೆಚ್ಚು. ಇವರಲ್ಲಿ ಶೇಕಡಾ 75ರಷ್ಟು ದುಡಿಮೆಗಾರರು ಬಿಸಿಯಲೆಗಳು ತರುವ ಬವಣೆಗಳಿಗೆ ನೇರ ಗುರಿಯಾಗಲಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿ ಕಳವಳ ತೋರಿದೆ. ದೇಶದ ಬಗೆಬಗೆಯ ಆರ್ಥಿಕ ಉತ್ಪಾದನೆಗಳಲ್ಲಿ ಈ ‘ಬಿಸಿಲು ದುಡಿಮೆ’ಯ ಜನರ ಕೊಡುಗೆ ಬಹಳ ದೊಡ್ಡದು.

ಜಾಗತಿಕ ತಾಪ ಏರಿಕೆಗೆ ದೊಡ್ಡ ಕಾರಣವಾಗಿರುವ ಕಾರ್ಬನ್ ಬಿಡುಗಡೆಯನ್ನು ಹತೋಟಿಗೆ ತರಲು ಭಾರತ ಗಂಭೀರ ಮತ್ತು ತುರ್ತಿನ ಕ್ರಮಗಳನ್ನು ಜಾರಿಗೊಳಿಸದಿದ್ದರೆ ಇಸವಿ 2036ರಿಂದಾಚೆಗೆ ಬಿಸಿಯಲೆಗಳು ಈಗ್ಗಿಂತ 25 ಪಟ್ಟು ಹೆಚ್ಚು ಸಮಯ ಕವಿದು ಗುರುತರ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳನ್ನು ತರಬಹುದಾಗಿದೆ ಎಂದು ವರದಿ ಮೇಲಿಂದ ಮೇಲೆ ಉಲ್ಲೇಖಿಸಿದೆ.

ಅಂದಹಾಗೆ ನಮ್ಮ ಬಹುತೇಕ ಟಿವಿ ಮಾಧ್ಯಮಗಳು ವಿಶ್ವಬ್ಯಾಂಕಿನ ಎಚ್ಚರಿಕೆಯನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಈ ಬಗ್ಗೆ ಚರ್ಚಿಸಲು ಅವಿನ್ನೂ ಸಮಯ ನಿಗದಿಪಡಿಸಿಕೊಂಡಿಲ್ಲ. ದಿನಕ್ಕೆ 25 ಗಂಟೆ ಇದ್ದಿದ್ದರೆ ಆ ಹೆಚ್ಚುವರಿ ಒಂದು ತಾಸನ್ನು ಹವಾಮಾನ ಬದಲಾವಣೆಗೆ ಮೀಸಲಿಡಬಹುದಿತ್ತು. ‘ಓ ಬುಗುರಿ ಭೂಮಿಯೆ ಒಂದು ತಾಸು ತಡವಾಗಿ ಸುತ್ತು…’

ಕೆ.ಎಸ್.ರವಿಕುಮಾರ್, ಹಾಸನ

ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.

ಮೊ : 9964604297

You cannot copy content of this page

Exit mobile version