(ಈ ವರೆಗೆ…)
ಲಕ್ಷ್ಮಿಯನ್ನು ನೋಡಿಕೊಳ್ಳಲು ನಂಜಪ್ಪನಿಗೆ ಹೇಳಿ ಅಪ್ಪ ಹೊರಹೋದ. ಲಕ್ಷ್ಮಿಯನ್ನು ಮದುವೆಯಾಗಲು ಆಸೆ ಹೊತ್ತಿದ್ದ ನಂಜಪ್ಪ ಅದು ಸಾಧ್ಯವಾಗದೆ ಬೇರೆ ಮದುವೆಯಾದರೂ ಒಳಗೊಳಗೆ ಆಸೆ ಇಟ್ಟುಕೊಂಡೇ ಇದ್ದ. ಈಗ ಲಕ್ಷ್ಮಿಗೆ ಮೆಣಸಿನ ಹೊಗೆ ಹಾಕುವ ನೆಪದಲ್ಲಿ ಅವಳ ಮೈ ಕೈ ಸವರಿ, ಸೀರೆ ಸರಿಸಿ ತನ್ನ ಆಸೆಯನ್ನು ತುಸು ನೆರವೇರಿಸಿಕೊಂಡ. ಲಕ್ಷ್ಮಿ ಆ ಪರಿಸ್ಥಿತಿಯಲ್ಲೂ ಪ್ರತಿಭಟಿಸಿದಾಗ ಮತ್ತಷ್ಟೂ ಹೊಗೆ ಹಾಕಿಸಿ ಅವಳನ್ನು ಅರೆ ಜೀವವಾಗಿಸುತ್ತಾನೆ. ಲಕ್ಷ್ಮಿ ಚೇತರಿಸಿಕೊಂಡಳೇ? ಓದಿ ವಾಣಿ ಸತೀಶ್ ಅವರ ತಂತಿ ಮೇಲಣ ಹೆಜ್ಜೆಯ ಇಪ್ಪತ್ತೊಂದನೆಯ ಕಂತು.
ಇಡೀ ಮೈಗೆ ಬೆಂಕಿ ಇಟ್ಟಂತೆ ಅಸಾಧ್ಯವಾದ ಉರಿಯಿಂದ ಬಳಲುತ್ತಿದ್ದ ಲಕ್ಷ್ಮಿ, ಒದ್ದಾಡುತ್ತಾ “ನಾನೇನ್ ತೆಪ್ಪ್ ಮಾಡಿದ್ನವ್ವ ನನಗ್ಯಾಕ್ ಹಂಗೆ ಮೆಣಸಿನ್ಕಾಯ್ ಹೊಗೆ ಕೊಟ್ರಿ” ಎಂದು ತೊದಲಿ, ಒರಗಿಕೊಂಡಿದ್ದ ಅವ್ವನ ಭುಜದಿಂದ ಜಾರಿ ದೊಪ್ಪನೆ ನೆಲಕ್ಕೆ ಬಿದ್ದಳು. ನಂಜಪ್ಪ ದಾಪುಗಾಲಿಡುತ್ತಾ ಒಳ ಬಂದು “ಏನತ್ತೆ ನೀನು ಇನ್ನೊಂದ್ ಸ್ವಲ್ಪ ಹೊತ್ತು ಸುಮ್ನಿದ್ದಿದ್ರೆ ಆ ದರಿದ್ರ ಪೀಡೆ ಕಂಬಿ ಕೀಳೋಹಂಗ್ ಮಾಡ್ತಿದ್ನಲ್ಲ. ಒಳ್ಳೆ ಸುಂಟ್ರು ಗಾಳಿ ಹಂಗ್ ಬಂದು ಎಲ್ಲಾನು ಹಾಳ್ ಮಾಡ್ದೆ” ಎಂದು ಗೊಣಗಿದ. ಅವ್ವ ಕುದಿಯುತ್ತಿದ್ದ ಕೋಪವನ್ನು ತಡೆದು “ನೀನು ಒಳ್ಳೆದ್ ಮಾಡಿದ್ದ್ ಸಾಕು ಕನಪ್ಪ ದೊರೆ. ಅದ್ನೆ ಸುಧಾರುಸ್ಕೊತಿವಿ ಮೊದ್ಲು ಇಲ್ಲಿಂದ ಆಚಿಗೋಗ್ಬುಡು” ಎಂದು ಹೇಳಿ ಕೈ ಮುಗಿದು ಲಕ್ಷ್ಮಿಯ ತಲೆ ಎತ್ತಿ ತನ್ನ ಮಡಿಲಲ್ಲಿ ಹಾಕಿ ಕೊಂಡಳು. ನಂಜಪ್ಪನಿಗೆ ಮುಖಕ್ಕೆ ಹೊಡೆದಂತಾಯಿತು. ಪೆಚ್ಚಾಗಿ ತಲೆ ತಗ್ಗಿಸಿ ಹೊರ ಹೋಗಲು ಬೆನ್ನು ತಿರುಗಿಸಿದ.
ನೆಲದ ಮೇಲೆ ಬಿದ್ದಿದ್ದ ಲಕ್ಷ್ಮಿ, ಕಣ್ಣು ಮುಚ್ಚಿ ಬಿಡುವುದರೊಳಗೆ ನಂಜಪ್ಪನನ್ನು ಕೆಡವಿ ಅವನ ಎದೆಯ ಮೇಲೆ ಕುಳಿತು. “ನನ್ಗೇ ಹೊಗೆ ಹಾಕೋ ಧೈರ್ಯ ಮಾಡ್ತಿಯೆನೋ ಬಿಕ್ನಾಸಿ” ಎಂದು ಅವನ ಮುಖಕ್ಕೆ ಬಾರಿಸಿದಳು. “ನೀನ್ ಕೊಟ್ ಹೊಗೆ ಕುಡ್ದಿದ್ದು ನಾನಲ್ಲ ಕಣ್ಲಾ ಮುಟ್ಟಾಳ ಈ ಪಾಪುದ್ ಹುಡ್ಗಿ. ನೀನು ಹೆಂಗೆಂಗೆಲ್ಲಾ ಹೊಗೆ ಕೊಟ್ಟೆ ಅಂತ ಆ ಜಗ್ಲಿ ಮೇಲೆ ಕೂತ್ಕೊಂಡು ನೋಡ್ತಿದ್ದೆ. ಎನ್ಲಾ ಮಾಡ್ದೆ ಹಲ್ಕಾ ನನ್ಮಗನೆ ಎಂದು ಹೇಳಿ ಮತ್ತೆ ಅವನ ಮುಖಕ್ಕೆ ರಪ್ ಎಂದು ಜೋರಾಗಿ ಹೊಡೆದಳು. ಅವಳು ಹೊಡೆದ ಬಿರುಸಿಗೆ ನಂಜಪ್ಪನ ಮೂಗಿನಿಂದ ಚಿಳ್ಳನೆ ರಕ್ತ ಚಿಮ್ಮಿತು. ಅವ್ವನ ಸೆರಗ ಹಿಂದೆ ನಿಂತಿದ್ದ ಗಂಗೆ ದುಮುಗುಡುತ್ತಾ ” ಅವ್ನಗೆ ಹಂಗೆ ಮಾಡ್ಬೇಕು ಹಾಕು ಇನ್ನೊಂದ” ಎಂದು ಗೊಣಗಿದಳು. ಗಂಗೆಯ ಮಾತು ಕೇಳಿ ಕೋಪಗೊಂಡ ಅವ್ವ, ಅವಳ ಬಾಯಿ ಮೇಲೆ ಹೊಡೆದು ಬಾಯ್ ಮುಚ್ಚ್ಕೊಂಡು ನಡಿಯೇ ಆಚೆಗೆ ಎಂದು ಕಳುಹಿಸಿ, ಲಕ್ಷ್ಮಿಯ ಬಳಿ ಓಡಿ ಬಂದು “ನಿನ್ ದಮ್ಮಯ್ಯ ಬುಟ್ಬುಡಪ್ಪ ಅವನ್ನ” ಎಂದು ಗೋಗರೆದಳು.
“ಅಲ್ಲ ಕನಮ್ಮೋ ನಾನ್ ಮೆಚ್ಚಿರೋ ಜೀವ್ದು ಮ್ಯಾಲೆ ಕೈಹಾಕ್ತನಲ್ಲ ಎಷ್ಟಮ್ಮ ಧೈರ್ಯ ಇವ್ನಗೆ. ನೀನಾದ್ರೂ ಹೆಂಗಮ್ಮ ಬುಟ್ಟೆ. ಹಿಂಗೆಲ್ಲಾ ಮಾಡುದ್ರೆ ನಾನು ಇವಳನ್ನ ಬುಟ್ಟು ಹೋಗ್ಬುಡ್ತೀನಿ ಅಂತ ಅಂದ್ಕೊಂಡಿದ್ದೀಯ. ನಾನು ಬುಟ್ಟ್ ಹೋಗಕ್ಕಲ್ಲ ಬಂದಿರದು ತಿಳ್ಕೋ” ಎಂದು ಖಡಾಕಂಡಿತವಾದ ದನಿಯಲ್ಲಿ ಹೇಳಿದಳು. ಆ ಮಾತು ಕೇಳಿ ಅವ್ವನಿಗೆ ಜೀವವೇ ಬಾಯಿಗೆ ಬಂದಂತಾಯಿತು. ಲಕ್ಷ್ಮಿಯ ಕಾಲಿಡಿದು “ನಿನ್ನ ದಮ್ಮಯ್ಯ ಕನಪ್ಪ ನನ್ನ ಮಗಳು ಜೀವುಕ್ಕೆ ಏನು ತೊಂದ್ರೆ ಮಾಡ್ಬ್ಯಾಡ. ನೋಡು ಅವಳ್ ಆಯಸ್ ಇರೋಗಂಟ ಅವಳ್ ಮೈಮೇಲೆ ಇರು. ಅವಳಿಗೆ ಮದುವೆ ಮಾಡಕಿಲ್ಲ. ನಿನ್ನ ದೇವ್ರ್ ನೋಡ್ಕೊಂಡಂಗ್ ನೋಡ್ಕೋತೀವಿ ನಾವು ಯಾವ ತೊಂದ್ರೆನೂ ಕೊಡದಿಲ್ಲ” ಎಂದು ಹೇಳಿ ಲಕ್ಷ್ಮಿ ಯ ಉತ್ತರಕ್ಕಾಗಿ ಕಾತರಿಸಿದಳು…..
ಅಷ್ಟರಲ್ಲೇ ಹೊರಗಿನಿಂದ ಓಡಿ ಬಂದ ಗಂಗೆ “ಅವ್ವಾ… ಅಪ್ಪ ಆ ಮಂತ್ರವಾದಿಗೊಳ್ನ ಕರ್ಕೊಂಡ್ ಬಂತು” ಎಂದಳು. ಗಂಗೆಯ ಆ ಮಾತು ಕೇಳುತ್ತಿದ್ದಂತೆ ಲಕ್ಷ್ಮಿಯ ಗ್ಯಾನ ತಪ್ಪಿತು. ನಂಜಪ್ಪ ತಿರುಗಿ ಜೀವ ಬಂದವನಂತೆ ತನ್ನ ಬಟ್ಟೆ ಸರಿಪಡಿಸಿಕೊಳ್ಳುತ್ತಾ “ಇರು ಮುಂಡೆದೆ ನಿನ್ಗೊಂದು ಗತಿ ಕಾಣ್ತದೆ ಈಗ” ಎಂದು ಹೇಳಿ ರಕ್ತ ಹರಿಯುತ್ತಿದ್ದ ಮೂಗು ತೊಳೆದು ಕೊಳ್ಳಲು ಬಚ್ಚಲ ಕಡೆಗೆ ನಡೆದ. ಕೇರಳದ ಮೂಲದವನಾಗಿದ್ದ ಮಂತ್ರವಾದಿ ಜಾಗ್ರಯ್ಯ ತನ್ನ ಅಪ್ಪನ ಕಾಲದಲ್ಲಿಯೇ ಬಂದು ಮಾದಲಪುರದಲ್ಲಿ ನೆಲೆನಿಂತಿದ್ದ. ಒಳ್ಳೆಯ ವಿದ್ಯಾವಂತನಾಗಿದ್ದ ಈತ ಆ ಕಾಲದಲ್ಲಿಯೇ ಜ್ಯೋತಿಷ್ಯಾಸ್ತ್ರದ ಆಳವಾದ ಅಧ್ಯಯನ ಮಾಡಿಕೊಂಡು ಅದನ್ನೇ ತನ್ನ ವೃತ್ತಿಯಾಗಿಸಿ ಸುತ್ತಮುತ್ತಲ ಹತ್ತು ಹಳ್ಳಿಯವರಿಗೂ ಮಾಂತ್ರಿಕ ವೈದ್ಯನಾಗಿ ಹೆಸರಾಗಿದ್ದ.
ಸೀದ ಒಳಗೆ ಬಂದ ಜಾಗ್ರಯ್ಯ ನೆಲದಲ್ಲಿ ಬಿದ್ದಿದ್ದ ಲಕ್ಷ್ಮಿಯನ್ನು ತದೇಕ ಚಿತ್ತದಿಂದ ಗಮನಿಸಿದ. ಅವಳ ಕೈ ಹಿಡಿದು ನಾಡಿ ಪರೀಕ್ಷಿಸಿ ಅಪ್ಪನನ್ನು ಹೊರ ಕರೆದುಕೊಂಡು ಹೋಗಿ “ನೋಡಿ ಬೋಪಣ್ಣನವರೆ ಒಂದಿಷ್ಟು ಎದೆ ಗಟ್ಟಿ ಮಾಡಿಕೊಳ್ಳಿ. ಆಗಲೇ ಕಾಲ ಮೀರಿ ಬಿಟ್ಟಿದೆ. ನನ್ನ ಕೈಲಾದ ಪ್ರಯತ್ನವನ್ನ ನಾನು ಮಾಡ್ತೇನೆ ಇನ್ನು ಉಳಿದದ್ದು ಆ ದೈವೆಚ್ಚೆ. ತುರ್ತಾಗಿ ಒಂದು ಕಪ್ಪು ಕೋಳಿ ತರಿಸಿ ಬಿಡಿ ಆಯ್ತಾ” ಎಂದು ಹೇಳಿ ಮಂಡಲ ಹಾಕಲು ಪ್ರಶಸ್ತ ಜಾಗಕ್ಕಾಗಿ ಕಣ್ಣಾಡಿಸ ತೊಡಗಿದ. ಅಪ್ಪ ಉಮ್ಮಳಿಸುತ್ತಿದ್ದ ದುಃಖವನ್ನು ತಡೆಹಿಡಿದು “ನಿಮ್ಮ ದಮ್ಮಯ್ಯ ಹೆಂಗಾದ್ರೂ ಮಾಡಿ ನನ್ನ ಮಗ್ಳುನ್ನ ಉಳ್ಸುಕೊಡಿ ಜಾಗ್ರಯ್ಯನೊರೆ ದುಡ್ಡು ಎಷ್ಟಾರ ಆಗ್ಲಿ” ಎಂದು ಬೇಡಿಕೊಂಡ. ಅಪ್ಪನನ್ನು ಅನುಕಂಪದಿಂದ ನೋಡಿದ ಜಾಗ್ರಯ್ಯ. “ಕೊನೇ ಘಳಿಗೆ ವರೆಗೆ ಯಾಕೆ ಬಿಟ್ಕೊಂಡು ಬಂದದ್ದು ಬೋಪಣ್ಣ” ಎಂದು ಕೇಳಿದ. ಕೈ ಕೈ ಹಿಸುಕಿ ಕೊಂಡ ಅಪ್ಪ “ಅವೊತ್ತು ಶರೀಫ್ ಕಾಕಾ ಇದ್ರು ಸೂಕ್ಷ್ಮೆ ಕೊಟ್ರು ಜಾಗ್ರಯ್ಯನೊರೆ. ಆದ್ರೆ ನನಗೀ ಪೀಡೆ ಪಿಶಾಚಿ ಅಂದ್ರೆ ಅಷ್ಟಾಗಿ ನಂಬ್ಕೆಯಿರ್ಲಿಲ್ಲ. ಅದು ಅಲ್ದೆ ನಾನೊಬ್ಬ ನಾಟಿ ವೈದ್ಯ ಮಾಡೋನಾಗಿ ಈ ದಯ್ಯ ದೇವ್ರು ಅಂತ ತಿರುಗಿದ್ರೆ ನನ್ನ ಹತ್ರ ಔಸ್ತಿಗೆ ಬರೋ ಜನುಕ್ಕೆ ಏನ್ ಹೇಳ್ದಂಗೆ ಆಯ್ತದೆ ಅನ್ನದೂ ನನ್ನ ಚಿಂತೆ ಆಗ್ಬುಟ್ಟಿತ್ತು. ಹಂಗಾಗೆ ನನ್ ಹೆಂಡ್ತಿ ಮಂತ್ರವಾದಿಗೊಳ್ತಕೆ ಕರ್ಕೊಂಡೋಗನ ಅಂದಾಗೆಲ್ಲಾ ಅವಳ ಮಾತ್ನಾ ಕಿವಿ ಮ್ಯಾಲೆ ಹಾಕ್ಕೊಳ್ಲಿಲ್ಲ. ಆಸ್ಪತ್ರೆ, ಡಾಕುಟ್ರು ಅಂತ ಸುತ್ತೊದ್ರೊಳಗೆ, ವಾರ ಕಳ್ದೇ ಹೋಗ್ ಬುಡ್ತು”ಎಂದು ಪೇಚಾಡಿದ.
ಅಪ್ಪನ ತೊಳಲಾಟವನ್ನು ಅರ್ಥ ಮಾಡಿಕೊಂಡ ಜಾಗ್ರಯ್ಯ ನಾನು ಅಲ್ಪ ಸ್ವಲ್ಪ ವಿಜ್ಞಾನ ಓದಿಕೊಂಡಿರುವವನೇ ಬೋಪಣ್ಣ. “ಈ ಪ್ರಕೃತಿ ಅನ್ನೋದು ಇದೆ ನೋಡಿ ಅದು ಬಹಳ ನಿಗೂಢ ಮಾರಾಯರೇ. ಒಳ್ಳೆಯದಿದೆ ಅಂದ ಮೇಲೆ ಅದರ ಜೊತೆ ಜೊತೆಗೆ ಕೆಟ್ಟದ್ದು ಇದ್ದೇ ಇರುತ್ತದೆ ಅಲ್ಲವೋ. ಯಾರು ದೈಹಿಕವಾಗಿ, ಮಾನಸಿಕವಾಗಿ ದುರ್ಬಲರಾಗಿರುತ್ತಾರೋ ಅಂತವರನ್ನ ಈ ಮನುಷ್ಯರೇ ಬಿಡುವುದಿಲ್ಲ ಅಂತಲ್ಲಿ ಕಣ್ಣಿಗೆ ಕಾಣದ ಈ ದುಷ್ಟ ಶಕ್ತಿಗಳು ಬಿಡುವುದುಂಟೋ, ಹೋಗಲಿ ಬಿಡಿ. ಈಗ ಮಾತನಾಡುವ ಸಮಯವಲ್ಲ. ಈಗ ಆಗಿದ್ದೆಲ್ಲವೂ ಆಗಿ ಹೋಗಿದೆ.. ಮುಂದಿನದನ್ನು ನೋಡುವ. ಇಷ್ಟು ಮಾತ್ರ ಹೇಳಬಲ್ಲೆ ಬೋಪಣ್ಣನವರೆ, ನಾನೀಗ ಪೂಜೆ ಮಾಡಿ ಮಂತ್ರ ಪಠಿಸುವುದಕ್ಕೆ ಆರಂಭಿಸುತ್ತೇನೆ. ನನ್ನ ಮಂತ್ರ ಪಠನ ಮುಗಿಯುವುದರ ಒಳಗೆ ಕೋಳಿ ಜೀವ ಏನಾದರೂ ಹೋಯಿತೋ ನಿಮ್ಮ ಮಗಳನ್ನು ಖಂಡಿತಾ ಬದುಕಿಸಿ ಕೊಡುತ್ತೇನೆ, ನೋಡುವ ಆ ದೈವೆಚ್ಚೆ ಏನಿದಿಯೋ” ಎಂದು ಹೇಳಿ ಮಂಡಲ ಅಣಿಗೊಳಿಸಲು ಮುಂದಾದ.
ಅಪ್ಪ ಮೂರನೆ ಮಗ ಸೋಮನನ್ನು ಕರೆದು ಕೆಳಗಿನ ಬೀದಿಯ ಕಾಳಪ್ಪನ ಮನೆಯಿಂದ ಕೋಳಿ ತರಲು ಕಳುಹಿಸಿದ. ಜಾಗ್ರಯ್ಯ ಮನೆಯ ಒಳಗೆ ಮಂಡಲ ಬರೆಯುವುದು ಬೇಡವೆಂದುದರಿಂದ ಜಗಲಿ ಕಟ್ಟೆಯ ಮುಂದಿದ್ದ ಖಾಲಿ ಜಾಗದಲ್ಲಿ ರಂಗೋಲಿಯ ಚಿತ್ತಾರ ಬಿಡಿಸಲಾಯಿತು. ಅದಕ್ಕೆ ಅಕ್ಕಿ, ಅರಿಶಿಣ, ಕುಂಕುಮ, ಕೆಲವು ಧಾನ್ಯಗಳನ್ನು ತುಂಬಿ ನಾಲ್ಕು ಮೂಲೆಗೂ ಬಾಳೆಕಂದು ನಿಲ್ಲಿಸಿ ಅವುಗಳಿಗೆ ಹಸಿದಾರ ಕಟ್ಟಿ ಒಂದು ಚೌಕ ನಿರ್ಮಿಸಲಾಯಿತು. ಜಾಗ್ರಯ್ಯ ತನ್ನ ಜೋಳಿಗೆಯಲ್ಲಿ ಕಟ್ಟಿಕೊಂಡು ಬಂದಿದ್ದ ಕೆಲವು ವಿಶೇಷ ಪೂಜಾ ಸಾಮಗ್ರಿಗಳನ್ನು ಹೊರತೆಗೆದು ಆ ಮಂಡಲದ ಒಳಗಿಟ್ಟು ಜೋಡಿಸಿದ. ಅದರ ಮುಂದೆ ಲಕ್ಷ್ಮಿಯನ್ನು ಕೂರಿಸಿಕೊಳ್ಳುವಂತೆ ಹೇಳಿ, ಸೋಮ ತಂದು ಕೊಟ್ಟ ಕೋಳಿಯನ್ನು ಅದುರಾಡದಂತೆ ಗಟ್ಟಿಯಾಗಿ ತನ್ನ ಕೈಯಲ್ಲಿ ಹಿಡಿದು ಅದರ ನೆತ್ತಿ ಉರುಬುತ್ತಾ ಮಂತ್ರ ಪಠಿಸಲು ಆರಂಭಿಸಿದ.
ಊರ ಜನ ಒಬ್ಬೊಬ್ಬರೆ ಬಂದು ಪ್ರಜ್ಞೆ ತಪ್ಪಿ ಮಲಗಿದ್ದ ಲಕ್ಷ್ಮಿಯ ಅವಸ್ಥೆ ಕಂಡು ಮರುಗಿದರು. ಅಲ್ಲಿದ್ದವರೆಲ್ಲಾ ಜಾಗ್ರಯ್ಯ ಹಿಡಿದಿದ್ದ ಕೋಳಿಯನ್ನೇ ತದೇಕ ಚಿತ್ತದಿಂದ ನೋಡುತ್ತಾ, ಲಕ್ಷ್ಮಿಯ ಜೀವ ಉಳಿಯಲೆಂದು ದೇವರಲ್ಲಿ ಪ್ರಾರ್ಥಿಸ ತೊಡಗಿದರು. ಇನ್ನು ಕೆಲವರು ಲಕ್ಷ್ಮಿಯನ್ನು ಪೀಡಿಸುತ್ತಿದ್ದ ಪೀಡೆಯನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದರು. ಇತ್ತ ಗ್ಯಾನ ತಪ್ಪಿದ್ದ ಲಕ್ಷ್ಮಿ ಎಚ್ಚರವಾದಳು ಕಣ್ಣು ಬಿಡಲು ಯತ್ನಿಸಿ ಸೋತು “ಅವ್ವಾ..”. ಎಂದು ಕರೆದಳು. ಮಗಳು ಎಚ್ಚರಗೊಂಡದ್ದನ್ನು ಕಂಡು ಅವ್ವನಾದಿಯಾಗಿ ಅಲ್ಲಿದ್ದವರೆಲ್ಲರಿಗೂ ತುಸು ಧೈರ್ಯ ತುಂಬಿ ಕೊಂಡಿತು. ಅವ್ವ ಅರಳು ಗಣ್ಣು ಬಿಟ್ಟು “ಏನವ್ವ ಲಕ್ಷ್ಮು ಹೇಳ್ ಮಗ” ಎಂದು ಕೇಳಿದಳು. ” ಒಂಥರ ಸಂಕ್ಟ ಆಯ್ತೈತೆ ಗಂಟ್ಲೆಲ್ಲ ವಣುಗ್ತೈತೆ ತಡಿಯಾಕೆ ಆಯ್ತಿಲ್ಲ ಕನವ್ವ” ಎಂದು ತೊದಲಿದಳು ಲಕ್ಷ್ಮಿ. “ಒಂದೀಟ್ ನೀರ್ ಕುಡಿಯವ್ವ ಸರಿಯಾಯ್ತದೆ” ಎಂದು ಹೇಳಿದ ಅವ್ವ, ಗಂಗೆಯನ್ನು ಕೂಗಿ “ಬಿರ್ನೋಗಿ ನೀರ್ ತಗಬವ್ವ ಗಂಗೂ” ಎಂದು ಕಳುಹಿಸಿದಳು.
ಲಕ್ಷ್ಮಿಯನ್ನು ಕಂಡು ಜಾಗ್ರಯ್ಯನಿಗೂ ತುಸು ಧೈರ್ಯ ಬಂದಿತು. ತನ್ನ ಕೈಲಿಡಿದ ಕೋಳಿಯನ್ನು ಮತ್ತಷ್ಟು ತನ್ನ ಬಾಯಿಯ ಬಳಿ ತಂದು ಅದರ ನೆತ್ತಿಯ ಮೇಲೆ ಉರುಬಿ ಇನ್ನಷ್ಟು ತೀವ್ರವಾಗಿ ಮಂತ್ರ ಪಠಿಸಲು ಆರಂಭಿಸಿದ. ಇಡೀ ಊರಿನ ಜನರೆಲ್ಲ ಮಧ್ಯಾಹ್ನದ ಉರಿ ಬಿಸಿಲಿನ ತಾಪವನ್ನು ಲೆಕ್ಕಿಸದೇ ಉಸಿರು ಬಿಗಿಹಿಡಿದು ನೋಡುತ್ತಲೇ ಇದ್ದರು.
ಲಕ್ಷ್ಮಿ ಮತ್ತೊಮ್ಮೆ “ಅಪ್ಪಾ…ಅವ್ವಾ” ಎಂದು ತೊದಲಿ ದೀರ್ಘವಾಗಿ ಉಸಿರೆಳೆದುಕೊಂಡು, ಕಣ್ಣು ನೆಟ್ಟಗೆ ಬಿಟ್ಟಳು. ಅವ್ವ ಗಾಬರಿಯಾಗಿ ಗಂಗೆ ತಂದ ನೀರು ಕುಡಿಸಿದಳು. ಒಳ ಹೋಗದ ನೀರು ತುಟಿಯ ಬದಿಗಳಿಂದ ಹಾಗೆಯೇ ಹೊರಬಂದಿತು. ಅವ್ವ ಚಿಟ್ಟನೆ ಚೀರಿಕೊಂಡಳು. ತಟ್ಟನೆ ಜಾಗ್ರಯ್ಯನ ಮಂತ್ರ ನಿಂತಿತು. ಇಡೀ ವಾತಾವರಣವೇ ಚಲನೆ ಕಳೆದು ಕೊಂಡಂತೆ ಸ್ತಬ್ಧವಾಯಿತು. ಅವ್ವ ಎದೆ ಬಡಿದುಕೊಳ್ಳುತ್ತಾ “ನಿನ್ ದಮ್ಮಯ್ಯ ನನ್ನ ಬುಟ್ಟೋಗ್ ಬ್ಯಾಡ ಎದ್ದೇಳವ್ವ ಲಕ್ಷ್ಮಿ” ಎಂದು ಒಂದೇ ಸಮನೆ ಅಲುಗಾಡಿಸಿದಳು. ಮಗಳಿಂದ ಯಾವ ಪ್ರತಿಕ್ರಿಯೆಯು ಬಾರದೆ ಕನಲಿ ಹುಚ್ಚಿಯಂತಾದಳು. “ನಿಮ್ ಕಾಲಿಡಿತಿನಿ ಯಾರಾದ್ರು ನನ್ನ್ ಮಗುಳುನ್ನ ಏಳುಸ್ ಬಣ್ರಪ್ಪ” ಎಂದು ಜನರತ್ತಾ ತಿರುಗಿ ಕೂಗಿದಳು. ಚಿರನಿದ್ರೆಗೆ ಜಾರಿದ್ದ ಮಗಳ ತೆರೆದ ಕಣ್ಣನ್ನು ಮುಚ್ಚಿದ ಅಪ್ಪ ಅವ್ವನನ್ನು ಸಂತೈಸಲಾರದೆ ಸೋತು, ತಾನು ಮಗಳನ್ನು ತಬ್ಬಿ ಬಿಕ್ಕುತ್ತಾ ಕುಳಿತು ಬಿಟ್ಟ.
ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.