Thursday, September 25, 2025

ಸತ್ಯ | ನ್ಯಾಯ |ಧರ್ಮ

ಅಯೋಧ್ಯೆ ರಾಮನದು, ಯಾವ ಕಾರಣಕ್ಕೂ ಅಲ್ಲಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ: ಬಿಜೆಪಿ ನಾಯಕ ವಿನಯ್ ಕಟಿಯಾರ್ ವಿವಾದಾತ್ಮಕ ಹೇಳಿಕೆ

ಲಕ್ನೋ: ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಲೋಕಸಭಾ ಸದಸ್ಯ ವಿನಯ್ ಕಟಿಯಾರ್ ಅಯೋಧ್ಯೆಯಲ್ಲಿ ಧನ್ನಿಪುರ ಮಸೀದಿಗೆ ಅವಕಾಶ ನೀಡುವುದಿಲ್ಲ ಮತ್ತು ಮುಸ್ಲಿಮರು ಸರಯೂ ನದಿಯ ಆಚೆಗಿನ ಬೇರೆ ಜಿಲ್ಲೆಯಲ್ಲಿ ಮಸೀದಿ ನಿರ್ಮಿಸಬೇಕು ಎಂದು ಹೇಳಿದ್ದಾರೆ.

ಬಜರಂಗ ದಳದ ಮಾಜಿ ಅಧ್ಯಕ್ಷರಾದ ಕಟಿಯಾರ್ ಅವರು ಅಯೋಧ್ಯೆಯಲ್ಲಿ ವರದಿಗಾರರೊಂದಿಗೆ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ. ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರವು ಧನ್ನಿಪುರ ಮಸೀದಿಯ ನಕ್ಷೆಯನ್ನು ತಿರಸ್ಕರಿಸಿದ ಬೆನ್ನಲ್ಲೇ ಅವರ ಈ ಹೇಳಿಕೆ ಬಂದಿದೆ.

ರಾಮಮಂದಿರ ಆಂದೋಲನದ ಪ್ರಮುಖ ಮುಖಂಡರಾಗಿದ್ದ ಕಟಿಯಾರ್, ಧನ್ನಿಪುರದಲ್ಲಿ ಮಸೀದಿ ನಿರ್ಮಿಸಲಾಗುವುದು ಎಂಬ ಕೆಲವು ನಾಯಕರ ಹೇಳಿಕೆಗಳಿಗೆ ತಾನು ಯಾವುದೇ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ಹೇಳಿದರು. “ಅಯೋಧ್ಯೆ ಕೇವಲ ಶ್ರೀರಾಮನಿಗೆ ಮಾತ್ರ ಸೇರಿದೆ… ಇಲ್ಲಿ ಮಸೀದಿ ಅನಗತ್ಯ” ಎಂದು ಅವರು ಹೇಳಿದ್ದಾರೆ.

ಮಸೀದಿ ನಿರ್ಮಾಣ ಯೋಜನೆಗೆ ನಿರಾಕ್ಷೇಪಣಾ ಪ್ರಮಾಣಪತ್ರ (NOC) ದೊರಕದಿರುವುದು ಇದಕ್ಕೆ ಕಾರಣ.

ಉಗ್ರ ಹಿಂದುತ್ವವಾದಿ ನಾಯಕರಾದ ಕಟಿಯಾರ್, ಮುಸ್ಲಿಮರು ಅಯೋಧ್ಯೆಯನ್ನು ತೊರೆದು ಬೇರೆಡೆಗೆ ಹೋಗಿ ನೆಲೆಸಬೇಕು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಯೋಧ್ಯೆಯ ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್, ಕಟಿಯಾರ್ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ. “ಕಟಿಯಾರ್ ಹಳೆಯ ನಾಯಕ, ಅವರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ” ಎಂದು ಅವರು ಹೇಳಿದ್ದಾರೆ.

ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಅಯೋಧ್ಯೆ ನಗರದ ಹೊರಗೆ ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ಗೆ ಐದು ಎಕರೆ ಭೂಮಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ನಂತರ, ರಾಜ್ಯ ಸರ್ಕಾರವು ಧನ್ನಿಪುರ ಗ್ರಾಮದ ಬಳಿ ಐದು ಎಕರೆ ಭೂಮಿಯನ್ನು ಹಂಚಿಕೆ ಮಾಡಿತು.

ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್ ಈ ಮಸೀದಿಯ ನಿರ್ಮಾಣ ಕಾರ್ಯವನ್ನು ನೋಡಿಕೊಳ್ಳುತ್ತಿದೆ. ಆದರೆ, ಕಾನೂನು ಉಲ್ಲಂಘನೆಗಳನ್ನು ಉಲ್ಲೇಖಿಸಿ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಮಸೀದಿಯ ನಕ್ಷೆಯನ್ನು ತಿರಸ್ಕರಿಸಿದ ಕಾರಣ, ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ.

ಕೆಲ ರಾಜಕೀಯ ವಿಶ್ಲೇಷಕರು ಕಟಿಯಾರ್ ಅವರ ಹೇಳಿಕೆಗಳು ಚುನಾವಣಾ ರಾಜಕೀಯಕ್ಕೆ ಮರುಪ್ರವೇಶಿಸುವ ಪ್ರಯತ್ನದ ಭಾಗವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page