ಹೊಸದಿಲ್ಲಿ: ಮಹಿಳೆಯರಲ್ಲಿನ ತಿಂಗಳ ಮುಟ್ಟು ಅಂಗವೈಕಲ್ಯವಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಮುಟ್ಟಾಗುವ ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ವೇತನ ಸಹಿತ ರಜೆ ನೀಡುವ ಕುರಿತು ರಾಜ್ಯಸಭೆಯಲ್ಲಿ ಆರ್ ಜೆಡಿ ನಾಯಕ ಮನೋಜ್ ಕುಮಾರ್ ಝಾ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.
ವೇತನ ಸಹಿತ ರಜೆಯನ್ನು ವಿರೋಧಿಸುವುದಾಗಿ ಅವರು ಹೇಳಿದ್ದಾರೆ. ಮಹಿಳೆಯರಿಗೆ ಮುಟ್ಟು ಎನ್ನುವುದು ಸಮಸ್ಯೆಯಲ್ಲ, ಮುಟ್ಟು ಅಂಗವೈಕಲ್ಯವಲ್ಲ ಎಂದು ಅವರು ಹೇಳಿದರು. ಮಹಿಳೆಯರ ಜೀವನದಲ್ಲಿ ಇದೊಂದು ಸಹಜ ಪ್ರಕ್ರಿಯೆ ಎಂದು ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಮಹಿಳಾ ಉದ್ಯೋಗಿಗಳಿಗೆ ರಜೆ ನೀಡುವ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರ್‌ಜೆಡಿ ನಾಯಕ ಝಾ ಪ್ರಶ್ನಿಸಿದರು. ಮುಟ್ಟಿನ ಹೆಸರಿನಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಸಿಗದಂತೆ ಕಸಿಯುವುದು ಸರಿಯಲ್ಲ ಎಂದು ಅವರು ಹೇಳಿದರು. ಮಹಿಳೆಯರ ಆರೋಗ್ಯದ ಬಗ್ಗೆ ತಮ್ಮ ಸರ್ಕಾರ ಕರಡು ಸಿದ್ಧಪಡಿಸಿದೆ ಎಂದು ಸಚಿವರು ಹೇಳಿದರು. 10ರಿಂದ 19 ವರ್ಷದೊಳಗಿನ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರಕಾರ ವಿಶೇಷ ಯೋಜನೆ ಜಾರಿಗೊಳಿಸುತ್ತಿದೆ ಎಂದು ಅವರು ಸದನಕ್ಕೆ ತಿಳಿಸಿದರು.