ಬೀದಿ ನಾಯಿಗಳಿಗೆ ಆಹಾರ ನೀಡುವವರಿಗೆ ತೊಂದರೆ ಕೊಡಂಗಿಲ್ಲ – ಜಿಬಿಎ ಖಡಕ್‌ ಸೂಚನೆ

ಬೆಂಗಳೂರು : ನಾಯಿಗಳಿಗೆ (Stray dogs) ನಿರಂತರವಾಗಿ ಆಹಾರ ನೀಡುವ ಪ್ರಾಣಿ ಪಾಲಕರಿಗೆ ಸಾರ್ವಜನಿಕರು ಯಾವುದೇ ರೀತಿಯ ಕಿರುಕುಳ ಅಥವಾ ಅನಗತ್ಯ ತೊಂದರೆ ನೀಡಬಾರದು ಎಂದು ಜಿಬಿಎ (GBA) ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಹೇಳಿದ್ದಾರೆ. ಬೀದಿನಾಯಿಗಳಿಗೆ ಆಹಾರ ನೀಡುವುದು ಅಪರಾಧವಲ್ಲ ಮತ್ತು ಅದು ಕಾನೂನುಬಾಹಿರವಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರಗಳ ಗುರುತಿಸುವಿಕೆ, ಸಾರ್ವಜನಿಕರ ಸಹಭಾಗಿತ್ವ ಹಾಗೂ ಪ್ರಾಣಿ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿಯ ಕುರಿತು ಮುಖ್ಯ ಪಶುವೈದ್ಯಾಧಿಕಾರಿ ಡಾ. ಶ್ರೀನಾಥ್ ಅವರ ನೇತೃತ್ವದಲ್ಲಿ ಮಹತ್ವದ ಪರಿಶೀಲನಾ ಸಭೆಯನ್ನು ಪಾಲಿಕೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈ ಯೋಜನೆಗಳ ಅನುಷ್ಠಾನ ಹಾಗೂ ಸಮುದಾಯದ ಪಾಲ್ಗೊಳ್ಳುವಿಕೆ ಕುರಿತು ಚರ್ಚಿಸಲು ಪಾಲಿಕೆಯ 50ಕ್ಕೂ ಹೆಚ್ಚು ಸ್ವಯಂಸೇವಕರು, ಬೀದಿ ನಾಯಿ ಆಹಾರ ಪೂರೈಕೆದಾರರು (ಫೀಡರ್ಸ್) ಹಾಗೂ ಪ್ರಾಣಿ ಹಿತೈಷಿಗಳು ಭಾಗವಹಿಸಿ ಸಲಹೆಗಳನ್ನು ಹಂಚಿಕೊಂಡರು.

ಸುಪ್ರೀಂ ಕೋರ್ಟ್ ಆದೇಶಗಳ ಪಾಲನೆ
ಬೀದಿ ನಾಯಿಗಳಿಗೆ ಆಹಾರ ನೀಡುವುದು ಕಾನೂನುಬದ್ಧವಾಗಿದ್ದು, ನಾಯಿಗಳ ಸ್ಥಳಾಂತರ ಮಾಡಬಾರದು ಹಾಗೂ ಆಹಾರ ಪೂರೈಕೆದಾರರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು ಎಂದು ಜಿಬಿಎ ಮುಖ್ಯ ಆಯುಕ್ತರು ನೀಡಿರುವ ನಿರ್ದೇಶನಗಳು ಮತ್ತು ಮಾನ್ಯ ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಪ್ರತಿಯೊಬ್ಬ ನಾಗರೀಕರು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ ಎಂದು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಆಹಾರ ಪೂರೈಕೆ ಸ್ಥಳಗಳ ಗುರುತಿಸಿ
ಬೀದಿನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ನೀಡುವ ಬದಲು ಸುರಕ್ಷಿತವಾಗಿ ಆಹಾರ ನೀಡಲು ಅನುಕೂಲವಾಗುವಂತೆ ಸೂಕ್ತವಾದ ಆಹಾರ ಕೇಂದ್ರಗಳನ್ನು (ಫೀಡಿಂಗ್ ಸ್ಪಾಟ್ಸ್) ವ್ಯವಸ್ಥಿತವಾಗಿ ಗುರುತಿಸಲು ಮತ್ತು ಈ ಕಾರ್ಯದಲ್ಲಿ ಸ್ಥಳೀಯ ನಾಗರಿಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಲು ಅಧಿಕಾರಿಗಳಿಗೆ ಹಾಗೂ ಸ್ವಯಂಸೇವಕರಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು.

ಸ್ಥಳೀಯರಿಗೆ ಅನಾನುಕೂಲವಾಗದಂತೆ ಸಮನ್ವಯತೆಯ ನಿರ್ವಹಣೆ
ಬೀದಿ ನಾಯಿಗಳ ಯೋಗಕ್ಷೇಮಕ್ಕೆ ಯಾವುದೇ ತೊಂದರೆಯಾಗದಂತೆ ಮತ್ತು ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾನುಕೂಲ ಅಥವಾ ಮುಖಾಮುಖಿ ಸಂಘರ್ಷಗಳು ಎದುರಾಗದಂತೆ ಅತ್ಯಂತ ಸಮನ್ವಯತೆಯಿಂದ ನಿಯಮಗಳನ್ನು ತಳಮಟ್ಟದಲ್ಲಿ ಅನುಷ್ಠಾನಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸ್ವಯಂಸೇವಕರಿಗೆ ನಿರ್ದೇಶನ ನೀಡಲಾಯಿತು.

ಆಶ್ರಯ ಕೇಂದ್ರಗಳು ಹಾಗೂ ಎಬಿಸಿ ಕೇಂದ್ರಗಳ ಪ್ರಗತಿ ಪರಿಶೀಲನೆ
ಪಾಲಿಕೆಯಿಂದ ಕೈಗೊಳ್ಳಲಾಗುತ್ತಿರುವ ವಿವಿಧ ಪ್ರಾಣಿ ಕಲ್ಯಾಣ ಕಾರ್ಯಕ್ರಮಗಳು, ಲಸಿಕಾ ಅಭಿಯಾನಗಳು, ರಕ್ಷಣಾ ಕಾರ್ಯಾಚರಣೆಗಳು, ದತ್ತು ಸ್ವೀಕಾರ ಕಾರ್ಯಕ್ರಮಗಳು ಹಾಗೂ ಪ್ರಾಣಿ ಜನನ ನಿಯಂತ್ರಣ ಯೋಜನೆಗಳ ಕುರಿತು ಮುಖ್ಯ ಪಶು ವೈದ್ಯಾಧಿಕಾರಿ ಪ್ರಾಣಿ ಪ್ರಿಯರಿಗೆ ಮಾಹಿತಿ ನೀಡಿದರು.

ಈ ವೇಳೆ ಪ್ರಾಣಿ ಕಲ್ಯಾಣ ಸಂಘಟನೆಗಳ ಪ್ರತಿನಿಧಿಗಳು, ಪ್ರಾಣಿ ರಕ್ಷಣಾ ಕಾರ್ಯಕರ್ತರು, ಸ್ವಯಂಸೇವಕರು, ಬೀದಿ ನಾಯಿಗಳ ಆಹಾರ ಪೂರೈಕೆದಾರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು