ಕಾಂಗ್ರೆಸ್ ಕಾರ್ಯಕರ್ತರಿಗೆ ಖರ್ಗೆ ಖಡಕ್ ಎಚ್ಚರಿಕೆ: ವ್ಯಕ್ತಿಪೂಜೆ ಬೇಡ, ಶಿಸ್ತು ಮೀರಿದರೆ ಕ್ರಮ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಅತ್ಯಂತ ಮುಖ್ಯವಾಗಿದ್ದು, ವ್ಯಕ್ತಿಗತ ವರ್ಚಸ್ಸಿಗಾಗಿ ಘೋಷಣೆ ಕೂಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ತಮ್ಮ ಭಾಷಣದ ವೇಳೆ ಕೆಲ ಕಾರ್ಯಕರ್ತರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರ ಘೋಷಣೆಗಳನ್ನು ಕೂಗಿದ ಘಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಘೋಷಣೆಗಳು ಮುಂದುವರಿದಾಗ ಗರಂ ಆದ ಖರ್ಗೆ, “ಇದು ಒಬ್ಬ ವ್ಯಕ್ತಿಯನ್ನು ಹೊಗಳುವ ಸಭೆಯಲ್ಲ” ಎಂದು ತರಾಟೆಗೆ ತೆಗೆದುಕೊಂಡರು. ಕೇವಲ ಒಬ್ಬರ ಹೆಸರನ್ನೇ ಕೂಗುವುದಾದರೆ ವೇದಿಕೆಯ ಮೇಲಿರುವ ಉಳಿದ ನಾಯಕರು ಕಸ ಗುಡಿಸಲು ಬಂದಿದ್ದಾರಾ? ಎಂದು ಪ್ರಶ್ನಿಸಿದ ಅವರು, ಪಕ್ಷದಲ್ಲಿ ವ್ಯಕ್ತಿಪೂಜೆಗೆ ಅವಕಾಶ ಇಲ್ಲ ಎಂಬ ಸಂದೇಶ ರವಾನಿಸಿದರು.

ತಮ್ಮ 58 ವರ್ಷಗಳ ರಾಜಕೀಯ ಅನುಭವವನ್ನು ಉಲ್ಲೇಖಿಸಿದ ಖರ್ಗೆ, ಕಾಂಗ್ರೆಸ್ ಪಕ್ಷ ಅನೇಕ ನಾಯಕರನ್ನು ಬೆಳೆಸಿದೆ. ಆದ್ದರಿಂದ ವ್ಯಕ್ತಿಗಿಂತ ಪಕ್ಷದ ಸಂಘಟನೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು. ಸಭೆಗಳಲ್ಲಿ ಶಿಸ್ತು ಉಲ್ಲಂಘಿಸುವವರನ್ನು ವಿಡಿಯೊ ದೃಶ್ಯಾವಳಿಗಳ ಮೂಲಕ ಗುರುತಿಸಿ, ಅಗತ್ಯವಿದ್ದರೆ ಪಕ್ಷದ ವತಿಯಿಂದ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಖಡಕ್ ಎಚ್ಚರಿಕೆ ನೀಡಿದರು.

ಇದೇ ವೇಳೆ ಕಾರ್ಯಕ್ರಮದ ವಾತಾವರಣವನ್ನು ಹಗುರಗೊಳಿಸುವ ಪ್ರಯತ್ನ ಮಾಡಿದ ಖರ್ಗೆ, ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಹಾಸ್ಯ ಚಟಾಕಿ ಹಾರಿಸಿದರು. ಅವರನ್ನು ಯುವಕ ಎಂದು ಕರೆದ ಅವರು, ತಕ್ಷಣವೇ “ಈಗ ಅವರಿಗೆ ಮೊಮ್ಮಗಳು ಬಂದಿದ್ದಾಳೆ, ಹೀಗಾಗಿ ಯುವಕನಲ್ಲ” ಎಂದು ನಗೆಯ ಚಟಾಕಿ ಸಿಡಿಸಿದರು. ಆದರೆ ಕೆಲಸ ಮಾಡುವ ಉತ್ಸಾಹ ಮತ್ತು ಚೈತನ್ಯದಲ್ಲಿ ಅವರು ಇನ್ನೂ ಯುವಕರಂತೆಯೇ ಇದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ಲೋಕಸಭಾ ಚುನಾವಣೆಯನ್ನು ಉಲ್ಲೇಖಿಸಿದ ಖರ್ಗೆ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಮತ್ತು ಡಿ.ಕೆ. ಶಿವಕುಮಾರ್ ಅವರ ಜೋಡಿ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನಾಯಕರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಪಕ್ಷಕ್ಕೆ ಯಶಸ್ಸು ಸಾಧ್ಯ ಎಂದು ಅವರು ಕರೆ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು