Home ರಾಜಕೀಯ ಪ್ರತಿಕ್ರಿಯೆ ಇಲ್ಲ

ಪ್ರತಿಕ್ರಿಯೆ ಇಲ್ಲ

0

ಭಾರತವು ನಿರಂಕುಶಾಧಿಕಾರದತ್ತ ಚಲಿಸುತ್ತಿರುವುದನ್ನು ಅನೇಕ ಒಳನೋಟಗಳ ಮೂಲಕ ಇಂಡಿಯನ್ ಎಕ್ಸ್ ಪ್ರೆಸ್ ನ ಪ್ರತಾಪ ಭಾನು ಮೆಹತಾ ಅವರು ಈ ಲೇಖನದ ಮೂಲಕ ವಿವರಿಸಿದ್ದಾರೆ.‌ ಇಂಗ್ಲಿಷ್ ಮೂಲದ ಈ ಲೇಖನವನ್ನು ಶ್ರೀನಿವಾಸ ಕಾರ್ಕಳ ಕನ್ನಡಕ್ಕೆ ಅನುವಾದಿಸಿದ್ದಾರೆ.

ಭಾರತದ ರಾಜಕೀಯ ವ್ಯವಸ್ಥೆಯು ಸಂಪೂರ್ಣವಾಗಿ ನಿರಂಕುಶ ಪ್ರಭುತ್ವದತ್ತ ಸರಿಯುತ್ತಿದೆ. ವಿಪಕ್ಷ ನಾಯಕರನ್ನು ಟಾರ್ಗೆಟ್ ಮಾಡುವುದು, ಇದರ ಮುಂದಿನ ಹಂತವೆಂಬಂತೆ ಸಂಸದ ಸ್ಥಾನದಿಂದ ರಾಹುಲ್ ಗಾಂಧಿಯವರ ನಾಟಕೀಯ ಅನರ್ಹತೆ, ನಾಗರಿಕ ಸಮಾಜಕ್ಕೆ ಕಿರುಕುಳ ನೀಡುವುದು, ಮಾಹಿತಿಗೆ ಸೆನ್ಸರ್ ಶಿಪ್, ಪ್ರತಿಭಟನೆಗಳನ್ನು ದಮನ ಮಾಡುವುದು, ಇವೆಲ್ಲ ನಿರಂತರ ಭಯ ಸೃಷ್ಟಿಸುವ ಏಕೈಕ ಗುರಿಯಾದ ನಿರಂಕುಶ ಪ್ರಭುತ್ವದ ಸ್ಪಷ್ಟ ಮುನ್ಸೂಚನೆ.

ಈ ಬೆಳವಣಿಗೆಗಳು ನಿಜಕ್ಕೂ ಭಯ ಹುಟ್ಟಿಸುವಂಥವು. ಆ ನಾಯಕ ಅಥವಾ ಈ ನಾಯಕ ಟಾರ್ಗೆಟ್ ಆಗಿದ್ದಾನೆ ಎಂಬ ಕಾರಣಕ್ಕಲ್ಲ. ಅವು ಯಾಕೆ ಅಪಾಯದ ಮುನ್ಸೂಚನೆ ಎಂದರೆ, ಈಗಿನ ಬಿಜೆಪಿ ಸರಕಾರ ಮಾಡುತ್ತಿರುವುದು ಅದನ್ನು ಮಾತ್ರವಲ್ಲ. ಅದಕ್ಕೆ ವಿಪಕ್ಷ ಎಂದರಾಗದು. ಯಾವುದೇ ಸನ್ನಿವೇಶದಲ್ಲಿಯೂ ಅದು ಅಧಿಕಾರದ ಸುಗಮ ಹಸ್ತಾಂತರವನ್ನು ಬಯಸುವುದಿಲ್ಲ ಅಥವಾ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಯಾಕೆಂದರೆ, ಅದರ ಈ ಕ್ರಮಗಳು ಕ್ರೂರ ಅಧಿಕಾರ ದಾಹ, ಮಾತ್ರವಲ್ಲ, ಅದನ್ನು ಪಡೆಯಲು ಯಾವುದೇ ಮಾರ್ಗದ ಬಳಕೆಯನ್ನು ಹೇಳುತ್ತದೆ. ಬಿಜೆಪಿಯು ಬಯಸುವ ಅಧಿಕಾರ ಸ್ವರೂಪವಾಗಲೀ ಅಥವಾ ಅದನ್ನು ಪಡೆಯಲು ಅವರು ಹಿಡಿಯುವ ಮಾರ್ಗಕ್ಕಾಗಲೀ ಅಡೆತಡೆಗಳೂ ಇಲ್ಲ; ಮಿತಿಗಳೂ ಇಲ್ಲ. ಇದು ನಿರಂಕುಶ ಪ್ರಭುತ್ವದ ಬಹುಮುಖ್ಯ ಲಕ್ಷಣ (ಹಾಲ್ ಮಾರ್ಕ್).

ಜನತಂತ್ರ ವ್ಯವಸ್ಥೆಯೊಂದರಲ್ಲಿ, ನ್ಯಾಯ ಸಮ್ಮತ ಚುನಾವಣೆಯ ಮೂಲಕ ಅಧಿಕಾರದ ಸುಗಮ ಹಸ್ತಾಂತರಕ್ಕೆ ಕೆಲವು ಪೂರಕ ಪರಿಸ್ಥಿತಿ ಇರಬೇಕಾಗುತ್ತದೆ. ಎದುರಾಳಿಗಳನ್ನು ನಿರ್ದಾಕ್ಷಿಣ್ಯವಾಗಿ ಪುಡಿಗೈಯುವುದರಿಂದ ಮತ್ತು ಸ್ವಾತಂತ್ರ್ಯವನ್ನು ನಿರ್ನಾಮ ಮಾಡುವುದರಿಂದ ಈ ಪರಿಸ್ಥಿತಿ ಇಲ್ಲವಾಗುತ್ತದೆ. ಮೊದಲನೆಯದೆಂದರೆ, ವೃತ್ತಿಪರ ರಾಜಕಾರಣಿಗಳು ಪರಸ್ಪರರನ್ನು ತಮ್ಮದೇ ವೃತ್ತಿಯ ಸದಸ್ಯರನ್ನಾಗಿ ಪರಿಗಣಿಸಬೇಕು. ಯಾವುದೇ ವಿಧಾನ ಬಳಸಿ ನಿರ್ನಾಮ ಮಾಡಬೇಕಾದ ಬಹುಮುಖ್ಯ ಶತ್ರುಗಳಂತಲ್ಲ. ಸರಕಾರವು ತನ್ನ ಎದುರಾಳಿಗಳನ್ನು ನಿರ್ನಾಮ ಮಾಡ ಹೊರಡುತ್ತಲೇ, ಅದಕ್ಕೆ ಅಧಿಕಾರ ಕಳೆದುಕೊಳ್ಳುವ ಭಯ ಶುರುವಾಗುತ್ತದೆ. ಆಗ ಅದು ಜನತಂತ್ರವು ರೊಟೇಟಿಂಗ್ ಅಧಿಕಾರದ ಆಟ; ಹಸ್ತಾಂತರವು ಇಲ್ಲಿ ಸಾಮಾನ್ಯ ಎಂಬ ನಂಬಿಕೆಯಿಂದ ದೂರ ಸರಿಯುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಥವಾ ಅಮಿತ್ ಶಾ ಅಥವಾ ಅವರ ಗುಲಾಮರು ತಾವು ಎಂದಾದರೂ ವಿಪಕ್ಷದ ಸ್ಥಾನದಲ್ಲಿ ಕೂರುವುದನ್ನು ಕನಸು ಮನಸಿನಲ್ಲಿಯಾದರೂ ಯೋಚಿಸಿಯಾರೇ? ಅದೂ ತಮ್ಮ ಎದುರಾಳಿಗಳ ಮತ್ತು ಟೀಕಾಕಾರರ ವಿರುದ್ಧ ದುರಹಂಕಾರದ ಕ್ರಮವನ್ನು ಅನುಸರಿಸಿದ ಬಳಿಕ? ನಿರಂಕುಶಾಧಿಕಾರಿಗಳ ಪ್ರಮುಖ ಲಕ್ಷಣವೆಂದರೆ, ಅಧಿಕಾರದಲ್ಲಿ ನಿರ್ಭೀತಿ ಮತ್ತು ಆ ಕಾರಣವಾಗಿ ಅದನ್ನು ಕಳೆದುಕೊಳ್ಳುವ ಭಯ.

ಇಲ್ಲಿ ಸರಕಾರವು ಜನಪ್ರಿಯವೋ ಎಂಬುದು ವಿಷಯವಲ್ಲ. ಅದು ಜನಪ್ರಿಯವೇ ಆಗಿರಬಹುದು. ಪ್ಲಾಟೋ ಹೇಳಿದಂತೆ ‘ನಿರಂಕುಶಪ್ರಭುತ್ವ ಎನ್ನುವುದು ಜನತಂತ್ರದ ಮಲಮಗುವಾಗಿರಬಲ್ಲುದು’. ಬಿಜೆಪಿಯು ಮಾಡುತ್ತಿರುವ ಅಧಿಕಾರದ ತಣಿಯದ ದಾಹದ ಪ್ರದರ್ಶನ ಮತ್ತು ಪ್ರತಿಪಾದನೆ ಅವರು ಒಂದು ಸುಳಿಯಲ್ಲಿ ಸಿಕ್ಕಿಕೊಳ್ಳುವಂತೆ ಮಾಡುತ್ತದೆ; ಅಲ್ಲಿ ನ್ಯಾಯ ಸಮ್ಮತ ಮತ್ತು ಮುಕ್ತ ಸ್ಪರ್ಧೆ ಸಾಧ್ಯವೇ ಇಲ್ಲದಂತಹ ಒಂದು ಪರಿಸ್ಥಿತಿಯನ್ನು ಅವರು ಸೃಷ್ಟಿಸ ಬಯಸುತ್ತಾರೆ. ಸಂಶಯ ಪ್ರವೃತ್ತಿಯೇ ಅವರ ಸಾಂಸ್ಥಿಕ ಕಲ್ಪನಾವಿಲಾಸ. ಬೆಳಕು ಬರಬಹುದಾದ ಚೂರೇ ಚೂರು ಕಿಂಡಿಯನ್ನೂ ಮುಚ್ಚಲು ಅವರು ಯತ್ನಿಸುತ್ತಲೇ ಇರುತ್ತಾರೆ. ಸಂಶಯ ಪ್ರವೃತ್ತಿಯ ವ್ಯವಸ್ಥೆ ಅಲ್ಲವಾದರೆ ಅವರು ಯಾಕೆ ಪುಟ್ಟ ಪುಟ್ಟ ಥಿಂಕ್ ಟ್ಯಾಂಕ್ ಗಳನ್ನು ಅಥವಾ ಸಮಾಜ ಸೇವೆ ಮಾಡುವ ನಾಗರಿಕ ಸಮಾಜವನ್ನು ಟಾರ್ಗೆಟ್ ಮಾಡುತ್ತಾರೆ? ಸಂಶಯ ಪ್ರವೃತ್ತಿಯಲ್ಲವಾದರೆ  ಓರ್ವ ವಿಪಕ್ಷದ ಸಂಸದನನ್ನು ಅನರ್ಹಗೊಳಿಸಲು ರಾಜಕೀಯವಾಗಿ ಅದೇಕೆ ಷಡ್ಯಂತ್ರ ನಡೆಸುತ್ತಾರೆ?

ಇದೇ ಸಂಶಯ ಪ್ರವೃತ್ತಿಯು ಮುಂದೆ ಒಂದು ನ್ಯಾಯಸಮ್ಮತ ಚುನಾವಣಾ ಸ್ಪರ್ಧೆಯ ಸಾಧ್ಯತೆಯನ್ನೇ ಇಲ್ಲದಂತೆ ಮಾಡುತ್ತದೆ. ಸಂಶಯ ಪ್ರವೃತ್ತಿಯು ಎಲ್ಲ ತೆರನ ದಮನ ಕಾರ್ಯಾಚರಣೆಯ ಬೀಜ. ಅದನ್ನು ನಾವೀಗ ಪೂರ್ಣ ರೂಪದಲ್ಲಿ ನೋಡುತ್ತಿದ್ದೇವೆ.

ತಮ್ಮನ್ನು ಬಹುಸಂಖ್ಯಾತ ಯಜಮಾನಿಕೆಯ ರಾಷ್ಟ್ರೀಯ ಅಸ್ಮಿತೆಯ ಅನನ್ಯ ಮುಂಚೂಣಿ ಪಡೆಯನ್ನಾಗಿ ಬಿಂಬಿಸುವ ರಾಜಕೀಯ ಪಕ್ಷಗಳು ಅಧಿಕಾರ ಬಿಟ್ಟು ಕೊಡಲು ಯಾವತ್ತೂ ಇಷ್ಟಪಡುವುದಿಲ್ಲ. ಸಾಮಾನ್ಯ ರಾಜಕಾರಣದಲ್ಲಿ ಒಂದು ವಾದಕ್ಕೆ ಅನೇಕ ಮಗ್ಗುಲುಗಳಿರುತ್ತವೆ. ನಾವು ಸಹಮತ ಹೊಂದಿರದಿದ್ದಾಗಲೂ, ಬೇರೆ ಬೇರೆ ಮಗ್ಗುಲುಗಳು ಸದ್ಭಾವನೆಯಿಂದಲೇ ವರ್ತಿಸುತ್ತಿವೆ ಎಂದು ನಾವೆಲ್ಲರೂ ನಟಿಸಬಹುದು. ಆದರೆ, ಸೈದ್ಧಾಂತಿಕ ಕಾರ್ಯಯೋಜನೆಯು ಸ್ಪಷ್ಟವಾಗಿ ಕೋಮುವಾದಿ ಆಗಿದ್ದಾಗ ಮತ್ತು ರಾಷ್ಟ್ರವಾದದ ಪರಿವೇಷವನ್ನು ತೊಟ್ಟಾಗ ಪ್ರತಿಯೊಂದು ಭಿನ್ನ ಅಥವಾ ವಿರೋಧದ ಅಭಿಪ್ರಾಯವನ್ನೂ (ಡಿಸ್ಸೆಂಟ್) ದೇಶದ್ರೋಹ ಎಂದೇ ಪರಿಗಣಿಸಲಾಗುತ್ತದೆ. ಬಿಜೆಪಿಯಂತಹ ಸೈದ್ಧಾಂತಿಕ ರಾಜಕೀಯ ಪಕ್ಷಗಳು ಅಧಿಕಾರ ಚಲಾಯಿಸುವ ಸ್ಥಿತಿಯಲ್ಲಿಲ್ಲದಾಗ ಅಥವಾ ಚುನಾವಣೆಯ ದೃಷ್ಟಿಯಿಂದ ಹೆಚ್ಚು ಸುರಕ್ಷಿತ ಎಂಬ ಭಾವನೆ ಹೊಂದಿದ್ದಾಗ ಚುನಾವಣಾ ನಿಯಮಗಳನ್ನು ಅನುಸರಿಸುತ್ತವೆ. ಆದರೆ ಸರಕಾರ ಗಟ್ಟಿಯಾಗಿ ಬೇರೂರುತ್ತಲೇ, ಪರಿಸ್ಥಿತಿ ಯಾವುದೇ ಇರಲಿ, ತಾನು ರಾಷ್ಟ್ರವಾದದ ರಕ್ಷಕನ ರೀತಿಯಲ್ಲಿ ನಡೆದುಕೊಳ್ಳುವುದು ತನ್ನ ಚಾರಿತ್ರಿಕ ಜವಾಬ್ದಾರಿ ಎಂದು ಭಾವಿಸುತ್ತದೆ.

ತನ್ನದೇ ಕಲ್ಪನಾವಿಲಾಸದಲ್ಲಿ ಈ ರಾಷ್ಟ್ರವಾದವು ಕಾನೂನಿನೊಂದಿಗೆ ಮನಬಂದಂತೆ ನಡೆದುಕೊಳ್ಳುವುದರಿಂದ ಹಿಡಿದು ಬಹಿರಂಗ ಹಿಂಸಾಚಾರದ ವರೆಗೆ ಪ್ರತಿಯೊಂದನ್ನೂ ಸಮರ್ಥಿಸುತ್ತದೆ. ಅದು ಕಾನೂನು ಕೈಗೆತ್ತಿಕೊಳ್ಳುವುದು (ವಿಜಿಲಾಂಟಿಸಂ), ಹಿಂಸಾಚಾರ ಮತ್ತು ದ್ವೇಷವನ್ನು ರಾಜಕೀಯ ಮತ್ತು ಪ್ರಭುತ್ವದ ಹೆಣಿಗೆಗೆ ಸಾಂಸ್ಥೀಕರಿಸಿದೆ. ಈ ಸಂಸ್ಕೃತಿಯನ್ನು ಕಳಚಿಹಾಕುವುದು ಕಷ್ಟಕರವೇನಲ್ಲ. ಇದು ರಾಜಕೀಯ ಅಧಿಕಾರ ಹಿಡಿದಿಟ್ಟುಕೊಳ್ಳುವುದು ಅಸಾಧ್ಯವೆನಿಸಿದಾಗ ಇತರ ಆಯ್ಕೆಗಳನ್ನು ಬಳಸುವ ತಯಾರಿಯ ಭಾಗವಾಗಿದೆ. ಹಿಂಸಾಚಾರದ ಸಂರಚನೆಯನ್ನು ಸಾಂಸ್ಥೀಕರಿಸಿದ ರಾಜಕೀಯ ಪಕ್ಷಗಳು ದೊಡ್ಡ ಮಟ್ಟದಲ್ಲಿ ಹಿನ್ನಡೆ ಅನುಭವಿಸದಿದ್ದರೆ ಅಧಿಕಾರ ಬಿಟ್ಟುಕೊಡುವ ಸಾಧ್ಯತೆ ತುಂಬಾ ಕಡಿಮೆ.

ಆದರೆ ಈ ನಿರಂಕುಶ ಪ್ರಭುತ್ವದ ತರ್ಕ (ಲಾಜಿಕ್) ಇನ್ನೂ ಮುಂದಕ್ಕೆ ಹೋಗುತ್ತದೆ. ಇಲ್ಲಿರುವುದು ವಿಪಕ್ಷಗಳ ದೌರ್ಬಲ್ಯ ಮಾತ್ರವಲ್ಲ. ಅನರ್ಹತೆಯ ಹೊರತಾಗಿಯೂ ಕಾಂಗ್ರೆಸ್ ನ ರಾಜಕೀಯ ಪ್ರತಿಕ್ರಿಯಾ ಕ್ರಮಗಳು, ಯಾವುದೇ ಅಪಾಯ ಎದುರುಹಾಕಿಕೊಳ್ಳುವಲ್ಲಿ ಅದರ ಸದಸ್ಯರ ಇಚ್ಛಾಶಕ್ತಿ ಮತ್ತು ಬೀದಿ ಹೋರಾಟದಲ್ಲಿ ಜನಸಂಘಟಿಸುವ ಅದರ ಸಾಮರ್ಥ್ಯ ಇವು ತುಂಬಾ ಅನುಮಾನ. ವಿಪಕ್ಷಗಳ ಒಗ್ಗಟ್ಟು ಈಗಲೂ ಒಂದು ಭ್ರಮೆ. ಸದ್ಯಕ್ಕೆ ಅದು ವಾಸ್ತವಕ್ಕಿಂತಲೂ ಹೆಚ್ಚಾಗಿ ಕೇವಲ ಪ್ರದರ್ಶನ ರೂಪದಲ್ಲಿಯೇ ಇದೆ.

ಆದರೆ, ಸಾಕಷ್ಟು ಮಂದಿ ಭಾರತೀಯರು ಈ ನಿರಂಕುಶಾಧಿಕಾರದ ಮನಸ್ಥಿತಿಯನ್ನು ಎದೆಗಿಳಿಸಿಕೊಂಡು ಪ್ರತಿರೋಧವು ಹೆಚ್ಚು ಕಷ್ಟಕರವಾಗುವಂತೆ ಮಾಡಿದ್ದಾರೆಯೇ? ಭಾರತದಲ್ಲಿ ಸಂಭಾವ್ಯ ಪ್ರತಿಭಟನೆಗೆ ಅನೇಕ ಇಶ‍್ಯೂಗಳಿವೆ. ಆದರೆ, ಭಾರತವು ಆಳಕ್ಕಿಳಿಯುತ್ತಿರುವ ಸರ್ವಾಧಿಕಾರಕ್ಕೆ ಪ್ರತಿರೋಧ ಒಡ್ಡಲು ಬಯಸುತ್ತದೆಯೇ ಎನ್ನುವುದು ತುಂಬಾ ಅನುಮಾನ. ಉದಾಹರಣೆಗೆ, ಭಾರತದ ಪ್ರತಿಷ್ಠಿತರು ಅಧಿಕಾರಸ್ಥರ ಮಾಮೂಲು ಭಯವನ್ನು ದಾಟಿ ಮುಂದೆ ಹೋಗಿದ್ದಾರೆ.

ಈ ತೆರನ ಭಯವು ಕೆಲವೊಮ್ಮೆ ಸಾರ್ವಜನಿಕ ಮಾತುಗಳು ಮತ್ತು ಖಾಸಗಿ ನಂಬಿಕೆಗಳ ಎಡೆಯಲ್ಲಿ (ಗ್ಯಾಪ್) ತನ್ನನ್ನು ವ್ಯಕ್ತಪಡಿಸಿಕೊಳ್ಳುತ್ತದೆ. ಆದರೆ, ಈಗ ಏನು ಆಗುತ್ತಿದೆಯೋ, ಅದು ತುಂಬಾ ಕಪಟತನದ್ದು. ಅಲ್ಲಿ ಸರಕಾರದ ಬಗ್ಗೆ ಭಯ ಅಥವಾ ಸರಕಾರಕ್ಕೆ ಮುಕ್ತ ಬೆಂಬಲದ ಸಮ್ಮಿಶ‍್ರಣವು ಎಷ್ಟು ಆಳವಾಗಿ ಅಂತರ್ಗತಗೊಂಡಿದೆ ಎಂದರೆ  ಬಹಿರಂಗವಾಗಿಯೇ ನಡೆಯುವ ಸರ್ವಾಧಿಕಾರಿ ಮತ್ತು ಕೋಮುವಾದಿ ಚಟುವಟಿಕೆಗಳ ಬಗ್ಗೆ ಖಾಸಗಿ ಅಸಮಾಧಾನ ಕೂಡಾ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಭಯಾನಕ ಹಿಂಸಾಚಾರದ ಅಥವಾ ಆಡಳಿತಾತ್ಮಕ ಅಥವಾ ಕಾನೂನು ಕಿರುಕುಳದ ಬಲಿಪಶುವಾದ, ಪ್ರಭುತ್ವದ ಅಭಿಶಾಪಕ್ಕೆ ಒಳಗಾದ ಯಾರೇ ಇರಲಿ, ಆ ಸಂತ್ರಸ್ತರನ್ನು ಕೇಳಿ . ಪ್ರಭುತ್ವ ಮಧ‍್ಯಪ್ರವೇಶಿಸುತ್ತಿದ್ದಂತೆಯೇ  ಖಾಸಗಿ ಬೆಂಬಲ ಕೂಡಾ ಕ್ಷಿಪ್ರವಾಗಿ ಮಾಯವಾಗುತ್ತದೆ. ಇದು ಒಂದೋ ತುಂಬಾ ಆಳಕ್ಕೆ ಬೇರೂರಿರುವ ಹೇಡಿತನವನ್ನು ಅಥವಾ ಸರ್ವಾಧಿಕಾರವನ್ನು ಒಪ್ಪಿಕೊಂಡಿರುವುದನ್ನು ಹೇಳುತ್ತದೆ.

ಯಶಸ್ವಿ ನಿರಂಕುಶಾಧಿಕಾರದ ಹಾಲ್ ಮಾರ್ಕ್ ಅಂದರೆ ಅದನ್ನು ಬೆಂಬಲಿಸುವವರ ಎದೆಗೆ ಒಂದು ತೆರನ ಅವಾಸ್ತವಿಕತೆಯನ್ನು ಇಳಿಸುವುದು. ಈ ಅವಾಸ್ತವಿಕತೆಯ ಭಾವನೆ ಅಂದರೆ ಪುರಾವೆಯನ್ನು ದೃಢಪಡಿಸುವುದು ಸಾಧ್ಯವೇ ಇಲ್ಲದಂತಹ ಸಂದರ್ಭದಲ್ಲಿಯೂ ಸರಕಾರಕ್ಕೆ ಅವರ ಬೆಂಬಲವೇನೂ ಕಡಿಮೆಯಾಗುವುದಿಲ್ಲ. ಜಗತ್ತಿನಲ್ಲೇ ಭಾರತದಲ್ಲಿ ಕಡಿಮೆ ನಿರುದ್ಯೋಗ ಇದೆ, ಇಲ್ಲಿನ ಸಂಸ್ಥೆಗಳು ಸರಿಯಾಗಿವೆ, ಅದು ಜಾಗತಿಕ ನಾಯಕತ್ವದಲ್ಲಿ ಬಹಳ ವೈಭವದ ಎತ್ತರವನ್ನು ಏರಿದೆ, ಅದು ಚೀನಾಕ್ಕೆ ನೆಲ ಬಿಟ್ಟುಕೊಟ್ಟಿಲ್ಲ ಮತ್ತು ಬಂಡವಾಳ ಮತ್ತು ಅಧಿಕಾರ ಕೆಲವೇ ಕೆಲವರ ಕೈಯಲ್ಲಿ ಕೇಂದ್ರೀಕೃತವಾಗಿ ಇಲ್ಲವೇ ಇಲ್ಲ ಹೀಗೆ.  ಆದರೆ, ಈ ಅವಾಸ್ತವಿಕತೆಯ ಕೇಂದ್ರದಲ್ಲಿರುವುದು ಬಹುವಾಗಿ ಈ ನಿರಂಕುಶಾಧಿಕಾರ ವ್ಯವಸ್ಥೆಯ ಲಿಂಚ್ ಪಿನ್ ಆದ ಪ್ರಧಾನ ಮಂತ್ರಿ. ಆತನ ಕೈಗಳಲ್ಲಿ ‘ದಮನ’ ಎನ್ನುವುದು ‘ಶುದ್ಧೀಕರಣ ಕ್ರಿಯೆ’ಯಾಗಿರುತ್ತದೆ, ಆತನ ‘ದುರಹಂಕಾರ’ವು ‘ಮಹತ್ತ್ವಾಕಾಂಕ್ಷೆ’ಯ ಪ್ರತೀಕವಾಗಿರುತ್ತದೆ. ಆತ ಸಂಸ್ಥೆಗಳನ್ನು ನಾಶ ಮಾಡುವುದು ಒಂದು ‘ರಾಷ್ಟ್ರಿಯ ಸೇವೆ’ಯಾಗಿರುತ್ತದೆ.

ಸಾಂಸ್ಥಿಕವಾಗಿ ಮತ್ತು ಮಾನಸಿಕವಾಗಿ ಈಗಾಗಲೇ ನಾವು ನಿರಂಕುಶಾಧಿಕಾರವನ್ನು ಸಾಕಿಕೊಂಡಿದ್ದೇವೆ. ಸಂಶಯಗ್ರಸ್ತ ಮತ್ತು ಭಯವಿಲ್ಲದ ಸರಕಾರ ಅತಿರೇಕಕ್ಕೆ ಇಳಿಯುತ್ತದೆ. ಈ ಅತಿರೇಕದ ಮಿತಿ ಯಾವುದು? ಆ ಮಿತಿಯು ಮೇಲಕ್ಕೆ ಮೇಲಕ್ಕೆ ಪಲ್ಲಟಗೊಳ್ಳುತ್ತಿರುವಂತೆ ಕಾಣಿಸುತ್ತಿದೆ. ಕೋಮುವಾದವನ್ನು ಛೂಬಿಡಲಾಯಿತು. ಪ್ರತಿಕ್ರಿಯೆ ಇಲ್ಲ. ಅನ್ಯಾಯದಿಂದ ಕೂಡಿದ ಮಾರ್ಗಗಳ ಮೂಲಕ ವಿಪಕ್ಷಗಳನ್ನು ನಿರ್ನಾಮ ಮಾಡಲಾಗುತ್ತಿದೆ. ಪ್ರತಿಕ್ರಿಯೆ ಇಲ್ಲ. ನ್ಯಾಯಾಂಗದ ಎದೆಬಡಿತ ನಿಂತಿತು. ಪ್ರತಿಕ್ರಿಯೆ ಇಲ್ಲ. ನಿರಂಕುಶಾಧಿಕಾರದ ಲಾಜಿಕ್ ಯಾವ ಪ್ರಮಾಣದಲ್ಲಿದೆಯೆಂದರೆ, ದಮನದ ನರಭಕ್ಷಕರು ಮುಕ್ತವಾಗಿ ಓಡಾಡಿಕೊಂಡಿದ್ದಾರೆ. ನ್ಯಾಯ ಮತ್ತು ಸ್ವಾತಂತ್ರ್ಯಗಳಿಗೆ ಸಂಕೋಲೆ ಬಿಗಿಯಲಾಗಿರುವುದನ್ನು ‘ಏನೂ ಆಗಿಯೇ ಇಲ್ಲ’ ಎಂಬಂತೆ ನಾವು  ತಾತ್ಸಾರದಿಂದ ನೋಡುತ್ತಿದ್ದೇವೆ.

ಇಂಗ್ಲಿಷ್‌ : ಪ್ರತಾಪ ಭಾನು ಮೆಹತಾ

ಕನ್ನಡಕ್ಕೆ : ಶ್ರೀನಿವಾಸ ಕಾರ್ಕಳ

You cannot copy content of this page

Exit mobile version