Friday, June 14, 2024

ಸತ್ಯ | ನ್ಯಾಯ |ಧರ್ಮ

ಪಕ್ಷಗಳು ಎಷ್ಟು, ಎಲ್ಲಿಂದ ದೇಣಿಗೆ ಪಡೆದಿವೆ ಎಂಬುದನ್ನು ತಿಳಿಯುವ ಹಕ್ಕು ಸಾರ್ವಜನಿಕರಿಗೆ ಇಲ್ಲ: ಅಟಾರ್ನಿ ಜನರಲ್

ಬೆಂಗಳೂರು,ಅಕ್ಟೋಬರ್.‌30: “ಚುನಾವಣಾ ಬಾಂಡ್‌ಗಳ ನಿಧಿಯ ಮೂಲಗಳನ್ನು ತಿಳಿದುಕೊಳ್ಳಲು ನಾಗರಿಕರಿಗೆ ಯಾವುದೇ ಮೂಲಭೂತ ಹಕ್ಕಿಲ್ಲ,” ಎಂದು ಭಾರತದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅಕ್ಟೋಬರ್ 29, ಭಾನುವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ.

ಚುನಾವಣಾ ಬಾಂಡ್‌ಗಳ ಅಪಾರದರ್ಶಕತೆಯನ್ನು ಪ್ರಶ್ನಿಸಿ ಸಲ್ಲಿಸಲಾಗುವ ಅರ್ಜಿಗಳ ಕುರಿತು ಎಜಿ ತಮ್ಮ ಅಭಿಪ್ರಾಯಗಳನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ನೇತೃತ್ವದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಪೀಠದ ಮುಂದೆ ಅಕ್ಟೋಬರ್ 31ರ ವಿಚಾರಣೆಗೆ ಇಡಲಾಗಿದೆ

ಚುನಾವಣಾ ಬಾಂಡ್‌ಗಳನ್ನು ನಿಯಂತ್ರಿಸಲು ಸುಪ್ರೀಂ ಕೋರ್ಟ್ ಪ್ರಯತ್ನಿಸಿದರೆ, ಅದು ಪಾಲಿಸಿಯ ಡೊಮೈನ್‌ಗೆ ಮೂಗುತೂರಿಸಿದಂತಾಗುತ್ತದೆ ಎಂದು ವೆಂಕಟರಮಣಿ ಹೇಳಿದ್ದಾರೆ.

“ಮೊದಲನೆಯದಾಗಿ, ಸಮಂಜಸವಾದ ನಿರ್ಬಂಧಗಳಿಗೆ ಒಳಪಡದೆ ಏನನ್ನೂ ಮತ್ತು ಎಲ್ಲವನ್ನೂ ತಿಳಿದುಕೊಳ್ಳಲು ಓರ್ವ ಸಾಮಾನ್ಯನಿಗೆ ಯಾವುದೇ ಹಕ್ಕು ಇರುವುದಿಲ್ಲ. ಎರಡನೆಯದಾಗಿ, ಅಭಿವ್ಯಕ್ತಿಯ ಅಡಿಯಲ್ಲಿ ತಿಳಿದುಕೊಳ್ಳುವ ಹಕ್ಕು ನಿರ್ದಿಷ್ಟ ಉದ್ದೇಶಗಳಿಗೆ ಮಾತ್ರ ಒಳಪಡುತ್ತದೆ, ಇಲ್ಲದಿದ್ದರೆ ಅದು ಸಾಧ್ಯವಿಲ್ಲ” ಎಂದು ಎಜಿ ಹೇಳಿದ್ದಾರೆ.

ಚುನಾವಣಾ ಅಭ್ಯರ್ಥಿಯ ಕ್ರಿಮಿನಲ್ ಪೂರ್ವಾಪರಗಳನ್ನು ತಿಳಿದುಕೊಳ್ಳುವ ಹಕ್ಕು ನಾಗರಿಕರಿಗೆ ಇದೆ ಎಂದು ನ್ಯಾಯಾಲಯಗಳು ನೀಡಿರುವ ತೀರ್ಪನ್ನು ಚುನಾವಣಾ ಬಾಂಡ್‌ಗಳ ಮೂಲಕ ಸ್ವೀಕರಿಸುವ ಧನಸಹಾಯಕ್ಕೆ ಅನ್ವಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಚುನಾವಣಾ ಬಾಂಡ್‌ಗಳು ಯಾವುದೇ ನಾಗರಿಕನ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಮತ್ತು ಇದು ಸಂವಿಧಾನದ ಭಾಗ III ರ ಅಡಿಯಲ್ಲಿರುವ ಹಕ್ಕನ್ನು ನಿರಾಕರಿಸುತ್ತದೆ ಎಂದು ಹೇಳಲಾಗುವುದಿಲ್ಲ ಎಂದಿದ್ದಾರೆ.

ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿರುವ ಅರ್ಜಿ ಚುನಾವಣಾ ನಿಧಿಯ ಉದ್ದೇಶಕ್ಕಾಗಿ ಎಲೆಕ್ಟೋರಲ್ ಬಾಂಡ್ ಯೋಜನೆಯನ್ನು ಪರಿಚಯಿಸಿದ Finance Act, 2017 ನ್ನು ಪ್ರಶ್ನಿಸಿದೆ. ಈ ಕಾಯಿದೆಯು ರಾಜಕೀಯ ದೇಣಿಗೆಗಳಿಗಾಗಿ ಕಂಪನಿಯ ಸರಾಸರಿ ಮೂರು ವರ್ಷಗಳ ನಿವ್ವಳ ಲಾಭದ ಹಿಂದಿನ ಮಿತಿಯ 7.5% ಅನ್ನು ತೆಗೆದುಹಾಕಿದೆ.

ಸ್ಕೀಮಿನ ಪ್ರಕಾರ, ಕಂಪನಿಯು ದೇಣಿಗೆಗಳನ್ನು ನೀಡಿದ ರಾಜಕೀಯ ಪಕ್ಷಗಳನ್ನು ಹೆಸರಿಸುವ ಅಗತ್ಯವಿಲ್ಲ. ದಾನಿಗಳ ಹೆಸರನ್ನು ಸಹ ಸಾರ್ವಜನಿಕರಿಗೆ ಬಹಿರಂಗಪಡಿ ಬೇಕಾಗಿಲ್ಲ.

ಈ ತಿದ್ದುಪಡಿಗಳು ಚುನಾವಣಾ ದೇಣಿಗೆಯ ಅಪಾರದರ್ಶಕತೆಗೆ ಕಾರಣವಾಗಿದ್ದು, ಕಪ್ಪು ಹಣ ಮತ್ತು ಭ್ರಷ್ಟಾಚಾರವನ್ನು ಹೆಚ್ಚಿಸುತ್ತವೆ ಎಂದು ಅರ್ಜಿದಾರರು ವಾದಿಸಿದ್ದರು. ಇದು ಭಾರತದಲ್ಲಿನ ರಾಜಕೀಯ ಮತ್ತು ಚುನಾವಣಾ ಪ್ರಕ್ರಿಯೆಗೆ ದಾಖಲೆರಹಿತ ಹಣ ನೀಡಲು ಶೆಲ್ ಕಂಪನಿಗಳ ಸೃಷ್ಟಿಯಾಗಿ, ಬೇನಾಮಿ ವಹಿವಾಟುಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ಅಕ್ಟೋಬರ್ 10 ರಂದು ಪ್ರಾಥಮಿಕ ವಿಚಾರಣೆಯ ಸಂದರ್ಭದಲ್ಲಿ, ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್, 2017 ರಿಂದ ನ್ಯಾಯಾಲಯ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳದ ಕಾರಣ ಲೋಕಸಭೆಯ ಪ್ರತಿ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತ ಪಕ್ಷವು ಸ್ಕೀಮಿನ ಲಾಭವನ್ನು ಪಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಸ್ಕೀಮ್ ಹಣಕಾಸು ಮಸೂದೆಯ ಮೂಲಕ ಮೋಸದಿಂದ ಪರಿಚಯಿಸಲ್ಪಟ್ಟಿದೆಯಲ್ಲದೆ, ಯಾವುದೇ ಮೂಲವನ್ನು ತೋರಿಸದೆ ಪಡೆಯುವ ರಾಜಕೀಯ ದೇಣಿಗೆಯನ್ನು ಕಾನೂನುಬದ್ಧಗೊಳಿಸಲು ಪ್ರಯತ್ನಿಸುತ್ತದೆ ಎಂದು ಭೂಷಣ್ ಅರ್ಜಿಯಲ್ಲಿ ಹೇಳಿದ್ದಾರೆ. ಈ ಸ್ಕೀಮ್‌ ರಾಜಕೀಯ ಪಕ್ಷಗಳ ಹಣಕಾಸಿನ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಭ್ರಷ್ಟಾಚಾರವನ್ನು ಉತ್ತೇಜಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ. ಶಾಸನಾತ್ಮಕ ಕ್ರಮವನ್ನು ಸರ್ಕಾರವು ಹಣಕಾಸು ಮಸೂದೆಯಾಗಿ ಪರಿಚಯಿಸಿದಾಗ, ಅದಕ್ಕೆ ರಾಜ್ಯಸಭೆಯಿಂದ ಯಾವುದೇ ಅನುಮೋದನೆಯ ಅಗತ್ಯವಿಲ್ಲ.

ರಾಜಕೀಯ ಪಕ್ಷಗಳು ಅವುಗಳಿಂದ ಲಾಭವನ್ನು ಪಡೆದಿರುವ ಕಂಪನಿಗಳಿಂದ ಹೆಚ್ಚಾಗಿ ಹಣವನ್ನು ಪಡೆದಿವೆ. ಭ್ರಷ್ಟಾಚಾರ ಮುಕ್ತ ಸಮಾಜವು ಸಂವಿಧಾನದ 21 ನೇ ಪರಿಚ್ಛೇದದ ಒಂದು ಅಂಶವಾಗಿದ್ದು, ನ್ಯಾಯಾಲಯದ ಪ್ರಕಾರ, ಹಣಕಾಸಿನ ಮೂಲವು ಅನಾಮಧೇಯವಾಗಿರಲು ಸಾಧ್ಯವಿಲ್ಲ ಎಂದು ಪ್ರಶಾಂತ್‌ ಭೂಷಣ್ ಪೀಠಕ್ಕೆ ತಿಳಿಸಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಈ ಬಾಂಡ್‌ಗಳನ್ನು ಖರೀದಿಯ ಮೂಲವನ್ನು ಹೇಳದೆ 10,000 ರುಪಾಯಿಯಿಂದ 1 ಕೋಟಿ ರುಪಾಯಿ ವರೆಗೆ ನಗದು ಅಥವಾ ಬ್ಯಾಂಕ್ ವರ್ಗಾವಣೆಯ ಮೂಲಕ ಮಾರಾಟ ಮಾಡುತ್ತದೆ. ಮೂಲವು ಎಸ್‌ಬಿಐಗೆ ತಿಳಿದಿದ್ದರೂ, ಅದನ್ನು ಬಹಿರಂಗಪಡಿಸದಿರಲು ನಿರ್ಬಂಧವಿದೆ. ಯಾರು ಯಾವ ರಾಜಕೀಯ ಪಕ್ಷಕ್ಕೆ ಎಷ್ಟು ದೇಣಿಗೆ ನೀಡುತ್ತಾರೆ ಎಂಬ ವಿವರಗಳು ಸಾರ್ವಜನಿಕ ಡೊಮೇನ್‌ನಲ್ಲಿಲ್ಲ.

Related Articles

ಇತ್ತೀಚಿನ ಸುದ್ದಿಗಳು