ಬೆಂಗಳೂರಿನ ಪಬ್ ಒಂದರಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ ಆರೋಪದ ಮೇಲೆ ಕನ್ನಡದ ನಟರಾದ ದರ್ಶನ್, ಡಾಲಿ ಧನಂಜಯ, ಅಭಿಷೇಕ್ ಅಂಬರೀಶ್ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಗೆ ಬೆಂಗಳೂರು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ವರದಿಗಳ ಪ್ರಕಾರ ಕಾಟೇರ ಚಿತ್ರತಂಡ ತಮ್ಮ ಚಿತ್ರದ ಸಕ್ಸಸ್ ಪಾರ್ಟಿಯನ್ನು ರಾಜಾಜಿನಗರದಲ್ಲಿರುವ ಜೆಟ್‌ಲಾಗ್ ಪಬ್‌ನಲ್ಲಿ ಆಚರಿಸಿಕೊಂಡಿದೆ. ನಗರದಲ್ಲಿ ಪಬ್‌ಗಳಿಗೆ ಅನುಮತಿಸಲಾದ ಸಮಯವು ಮಧ್ಯರಾತ್ರಿ 1 ಗಂಟೆಯವರೆಗೆ ಇದ್ದರೂ ಪಾರ್ಟಿ ಬೆಳಗಿನವರೆಗೂ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪೊಲೀಸ್ ಇಲಾಖೆಯಿಂದ ಬಂದ ಮಾಹಿತಿಯಂತೆ, ಜನವರಿ 3 ರಂದು ಇಡೀ ರಾತ್ರಿ ಪಬ್ ನಲ್ಲಿ ಜೋರಾದ ಮ್ಯೂಸಿಕ್ ಹಾಕಲಾಗಿದ್ದು, ಕನ್ನಡ ಚಿತ್ರರಂಗದ ಪ್ರಮುಖ ನಟರು ಈ ಪಾರ್ಟಿಯ ಭಾಗವಾಗಿದ್ದರು. ಇದನ್ನು ಉಲ್ಲೇಖಿಸಿ ಸುಬ್ರಹ್ಮಣ್ಯನಗರ ಪೊಲೀಸರು ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟರಿಗೆ ನೋಟಿಸ್ ಕಳುಹಿಸಿದ್ದಾರೆ ಹಾಗೂ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಇದರ ಜೊತೆಗೆ ಜೆಟ್‌ಲಾಗ್ ಪಬ್ ಮಾಲೀಕರ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ. ಆ ರಾತ್ರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಲ್ಲಿಸುವಂತೆ ಪೊಲೀಸರು ಪಬ್ ನ ಆಡಳಿತಾಧಿಕಾರಿಗಳನ್ನು ಕೇಳಿದ್ದಾರೆ ಎಂದು ವರದಿಯಾಗಿದೆ.