Home ರಾಜಕೀಯ ಹಿಂದುತ್ವದ ಲಾಡು ಈಗ ಕಾಂಗ್ರೆಸ್‌, ಎನ್‌ಡಿಎ ಮಿತ್ರಪಕ್ಷಗಳಿಗೂ ಸಿಹಿ! ನಾಯ್ಡುವನ್ನು ಓವರ್‌ ಟೇಕ್‌ ಮಾಡಲಿದ್ದಾರೆಯೇ ಪವನ್‌...

ಹಿಂದುತ್ವದ ಲಾಡು ಈಗ ಕಾಂಗ್ರೆಸ್‌, ಎನ್‌ಡಿಎ ಮಿತ್ರಪಕ್ಷಗಳಿಗೂ ಸಿಹಿ! ನಾಯ್ಡುವನ್ನು ಓವರ್‌ ಟೇಕ್‌ ಮಾಡಲಿದ್ದಾರೆಯೇ ಪವನ್‌ ಕಲ್ಯಾಣ್?

0

ಪ್ರಸ್ತುತ ತಿರುಪತಿಯ ಲಾಡು ಕೇವಲ ದೇವರ ಪ್ರಸಾದವಷ್ಟೇ ಆಗಿ ಉಳಿದಿಲ್ಲ. ಅದೊಂದು ರಾಜಕೀಯ ಅಸ್ತ್ರವಾಗಿ ಬದಲಾಗಿದೆ. ಈ ರಾಜಕೀಯ ಪ್ರೇರಿತ ಲಾಡಿನಲ್ಲಿ ತಮ್ಮ ತಮ್ಮ ಪಾಲುಗಳಿಗಾಗಿ ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ನಡುವೆ ಒಂದು ಅದೃಶ್ಯ ಪೈಪೋಟಿಯೂ ನಡೆಯುತ್ತಿದೆ.

ದಕ್ಷಿಣದಲ್ಲಿ ಕರ್ನಾಟಕ ಹೊರತುಪಡಿಸಿ ಇನ್ನೆಲ್ಲೂ ಸರಿಯಾಗಿ ನೆಲೆ ಕಾಣಲು ಸಾಧ್ಯವಾಗದ ಬಿಜೆಪಿಗೆ ಸದ್ಯಕ್ಕೆ ಅದರ ಮಿತ್ರಪಕ್ಷಗಳೇ ಆಸರೆ. ಹೀಗಾಗಿ ಅದು ತನ್ನ ಮಿತ್ರಪಕ್ಷಗಳ ಮೂಲಕವೇ ರಾಜಕಾರಣ ಮಾಡುತ್ತಿದೆ. ತಮಿಳುನಾಡಿನಲ್ಲಿಯೂ ಇದುವರೆಗೆ ಅದು ತನ್ನ ರಾಜಕಾರಣವನ್ನು ಸಾಧ್ಯವಾಗಿಸಿಕೊಂಡಿದ್ದು ಎಐಡಿಎಂಕೆ ಪಕ್ಷದ ಮೂಲಕ ಆದರೆ ಈಗ ಅದರೊಂದಿಗಿ ಸಂಬಂಧ ಹಳಸಿದೆ. ಸ್ವತಃ ಎಐಡಿಎಮ್‌ಕೆ ಚಪ್ಪಾನು ಚೂರಾಗಿ ಮುಂದೇನು ಎನ್ನುವುದು ತಿಳಿಯದೆ ಕುಳಿತಿದೆ.

ಇನ್ನು ಆಂಧ್ರಕ್ಕೆ ಬರುವುದಾದರೆ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಕೂಡಾ ಬಿಜೆಪಿಗೆ ವಿಶ್ವಾಸರ್ಹ ಮಿತ್ರನಲ್ಲ. ನಾಯ್ಡುವಿನ ರಾಜಕಾರಣ ಈ ಬಾರಿ ಮಾಡು ಇಲ್ಲವೇ ಮಡಿ ಎನ್ನುವ ಹಂತಕ್ಕೆ ಬಂದಿದ್ದ ಕಾರಣ ಅವರು ಜನಸೇನಾ, ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಉಳಿದಂತೆ ಅವರೂ ಕೇಜ್ರಿವಾಲ್‌, ಮಮತಾ, ಮೋದಿ ರೀತಿಯ ನನ್ನದೇ ನಡೆಯಬೇಕೆನ್ನುವ ಮನಸ್ಥಿತಿಯ ನಾಯಕ. ಇಂತಹವರಿಗೆ ಮೈತ್ರಿ ಆಗಿಬರುವುದಿಲ್ಲ.

ಈ ನಡುವೆ ನಾಯ್ಡುವಿಗೆ ಹಳೆಯ ಸೇಡೊಂದು ಬಾಕಿಯಿದೆ. ಅದು ಅವರ ಒಳಗೆ ಕುದಿಯುತ್ತಲೇ ಇತ್ತು. ಅದೆಂದರೆ ತನ್ನನ್ನು ಜೈಲಿಗೆ ಕಳುಹಿಸಿದ ಜಗನ್‌ ವಿರುದ್ಧ ಸೇಡು ತೀರಿಸಿಕೊಳ್ಳುವುದು. ನಾಯ್ಡು ಅಧಿಕಾರದ ಗದ್ದುಗೆ ಏರಿದ ಕೂಡಲೇ ಮಾಡಿದ್ದೆ ಜಗನ್‌ ಮೇಲಿನ ಪರೋಕ್ಷ ಹಾಗೂ ಪ್ರತ್ಯಕ್ಷ ದಾಳಿಗಳನ್ನು. ಈ ದಾಳಿಯ ಭಾಗವಾಗಿಯೇ ತಿರುಪತಿ ಲಾಡಿನಲ್ಲಿ ದನ, ಹಂದಿ ಕೊಬ್ಬು ಹಾಗೂ ಮೀನಿನ ಎಣ್ಣೆ ಬೆರೆಸಲಾಗಿದೆ ಎನ್ನುವ ಆರೋಪ ಮುನ್ನೆಲೆಗೆ ಬಂದಿದ್ದು.

ಆದರೆ ಈ ಆರೋಪದ ಭಾಗವಾಗಿ ಇದುವರೆಗೂ ಒಂದೇ ಒಂದು ಎಫ್‌ಐಆರ್‌ ದಾಖಲಾಗಿಲ್ಲ. ಯಾವುದೇ ಅಧಿಕೃತ ದಾಖಲೆ ಬಿಡುಗಡೆಯಾಗಿಲ್ಲ. ಬಿಡುಗಡೆಯಾಗಿರುವ ಒಂದು ವರದಿಗೆ ಕೂಡಾ ಅಪ್ಪ – ಅಮ್ಮ ಎರಡೂ ಇಲ್ಲ. ಈ ನಡುವೆ ಪ್ರಕರಣ ಈಗ ಸುಪ್ರೀಂ ಮೆಟ್ಟಿಲೇರಿ ಕುಳಿತಿದೆ.

***

ಭಾರತ 1990ರ ದಶಕದಲ್ಲಿ ಗ್ಲೋಬಲೈಸೇಷನ್‌ಗೆ ತೆರೆದುಕೊಳ್ಳುವ ಮೂಲಕ ತನ್ನನ್ನು ಹೊಸ ಬಗೆಯ ಅಭಿವೃದ್ಧಿಗೆ ತೆರೆದುಕೊಂಡಿತ್ತು. ಇದರ ಸಕರಾತ್ಮಕ ಹಾಗೂ ಋಣಾತ್ಮಕ ಅಂಶಗಳು ಏನೇ ಇದ್ದರೂ ಅದರಿಂದಾಗಿ ಭಾರತದಲ್ಲಿನ ಕೆಳಮಧ್ಯಮವರ್ಗ ಒಂದೇ ಬಾರಿಗೆ ದೊಡ್ಡ ಮೊತ್ತದ ಸಂಬಳದ ಕೆಲಸಗಳನ್ನು ಕಂಡಿತು. ದೇಶದಲ್ಲಿ ಮಧ್ಯಮವರ್ಗ ದೊಡ್ಡ ಮಟ್ಟದಲ್ಲಿ ಬೆಳೆದಿತ್ತು.

ಅದೇ ಸಂದರ್ಭದಲ್ಲಿ ಇದಕ್ಕೆ ಪ್ಯಾರಲಲ್‌ ಎನ್ನುವಂತೆ ಅಯೋಧ್ಯೆ ಚಳವಳಿಯ ಮೂಲಕ ಹಿಂದುತ್ವವೂ ಪ್ರವರ್ಧಮಾನಕ್ಕೆ ಬರುತ್ತಿತ್ತು. ಈ ಮಧ್ಯಮ ವರ್ಗಕ್ಕೆ ಈಗ ಹೊಟ್ಟೆ ಬಟ್ಟೆಯ ಚಿಂತೆ ಇರಲಿಲ್ಲವಾದ ಕಾರಣ ಅದು ಧರ್ಮ ಚಿಂತನೆಯಲ್ಲಿ ತೊಡಗಿಕೊಂಡಿತು. ಇದು ಬಿಜೆಪಿಯ ಬೆಳವಣಿಗೆ ಗೊಬ್ಬರವಾಯಿತು.

ಕೊನೆಗೆ ಈಗ ಈ ಧರ್ಮ ಚಿಂತನೆ ಯಾವ ಮಟ್ಟಕ್ಕೆ ತಲುಪಿದೆಯೆಂದರೆ ಇಂದು ಹಿಂದುತ್ವ ಚಿಂತನೆ ಇಲ್ಲದೆ ಭಾರತದಲ್ಲಿ ರಾಜಕೀಯವೇ ಸಾಧ್ಯವಿಲ್ಲ ಎನ್ನುವಷ್ಟು. ಈಗ ಹಿಂದುತ್ವ ಚಿಂತನೆ ಕಾಂಗ್ರೆಸ್‌ ಪಕ್ಷವನ್ನು ಸಹ ಬಿಟ್ಟಿಲ್ಲ. ಅದು ನಿನ್ನೆ ಹಿಮಾಚಲದಲ್ಲಿ ಉತ್ತರಪ್ರದೇಶವನ್ನು ಅನುಸರಿಸಿ. ವ್ಯಾಪಾರಿಗಳು ತಮ್ಮ ಹೆಸರನ್ನು ಪ್ರದರ್ಶಿಸುವ ಬೋರ್ಡ್‌ ಹಾಕಬೇಕು ಎನ್ನುವ ಆದೇಶವನ್ನು ಹೊರಡಿಸಿದೆ. ಇದರ ಹಿಂದೆ ಇರುವುದು ಮುಸ್ಲಿಂರನ್ನು ವ್ಯಾಪಾರದಿಂದ ಪ್ರತ್ಯೇಕಿಸಿ ಅವರಿಗೆ ವ್ಯಾಪಾರ ನಿಷೇಧ ಹೇರುವುದು.

***

ಆದರೆ ಈಗ ಈ ಇಡೀ ಲಾಡು ಪ್ರಕರಣದಲ್ಲಿ ಮಿಂಚುತ್ತಿರುವುದು ನಾಯ್ಡುವಲ್ಲ ಬದಲಿಗೆ ಪವನ್‌ ಕಲ್ಯಾಣ್!‌ ಪವನ್‌ ಕಲ್ಯಾಣ್‌ ಎನ್ನುವ ಈ ಮನುಷ್ಯ ಕೂಡಾ ಬಿಜೆಪಿಗಿಂತಲೂ ವರ್ಣರಂಜಿತ ವ್ಯಕ್ತಿತ್ವದವ. ಮೊದಲಿಗೆ ಚೆಗುವೆರಾ, ಕಮ್ಯುನಿಸ್ಮ್‌ ಕುರಿತು ಕಮ್ಯೂನಿಸ್ಟರಿಗಿಂತಲೂ ಚೆನ್ನಾಗಿ ಮಾತನಾಡುತ್ತಾ ರಾಜಕೀಯ ಮಾಡುತ್ತಿದ್ದ ಪವನ್‌, ನಂತರ ಅಂಬೇಡ್ಕರೈಟ್‌ ಕೂಡಾ ಆಗಿದ್ದರು. ಆಂಧ್ರ ಮೊದಲಿನಿಂದಲೂ ದಲಿತ-ಕಮ್ಯುನಿಸ್ಟ್‌ ಚಳವಳಿಗಳ ತೊಟ್ಟಿಲು. ಅಲ್ಲಿ ಈ ಹೋರಾಟದ ದೊಡ್ಡ ಇತಿಹಾಸವೇ ಇದೆ. ಆ ಇತಿಹಾಸದ ಚುಂಗು ಹಿಡಿದು ಹೊರಟಿದ್ದ ಪವನ್‌ಗೆ ಸ್ವಲ್ಪ ದಿನದಲ್ಲೇ ಇದು ಓಟು ತಂದು ಕೊಡುವಷ್ಟು ಬಲವಾಗಿ ಉಳಿದಿಲ್ಲ ಎನ್ನುವುದು ಅರ್ಥವಾಗಿ ಅದನ್ನ ಅಲ್ಲಿಗೆ ಕೈ ಬಿಟ್ಟರು.

ಭಾರತದಲ್ಲಿ ಮೋದಿ ಮೇನಿಯಾ ಶುರುವಾದ ನಂತರ ಆ ಮೇನಿಯಾಕ್ಕೆ ಬಲಿಯಾದವರಲ್ಲಿ ಪವನ್‌ ಕೂಡಾ ಒಬ್ಬರು. ಈ ನಡುವೆ ಆಂಧ್ರ ರಾಜಕಾರಣ ಜಗನ್‌ ಮುಷ್ಟಿಯಲ್ಲಿ ಬಿಗಿಯಾಗಿತ್ತು. ನಾಯ್ಡು, ಪವನ್‌, ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಅಲ್ಲಿ ಉಸಿರಾಡುವುದು ಕೂಡಾ ಸಾಧ್ಯವಿರಲಿಲ್ಲ. ಆದರೆ ಜಗನ್‌ ಇನ್ನೇನು ಚುನಾವಣೆ ಹತ್ತಿರದಲ್ಲಿದೆ ಎನ್ನುವಾಗ ಒಂದು ತಪ್ಪು ಎಸಗಿದರು. ಅದು ಚಂದ್ರಬಾಬು ನಾಯ್ಡುವನ್ನು ಜೈಲಿಗೆ ಹಾಕಿದ್ದು!

ನಾಯ್ಡು ಈ ಹಿನ್ನೆಡೆಯನ್ನು ತನ್ನ ಯಶಸ್ಸಿಗೆ ಮೆಟ್ಟಿಲನ್ನಾಗಿ ಮಾಡಿಕೊಂಡರು. ಜಾಮೀನು ಪಡೆದು ಹೊರಗೆ ಬಂದವರೇ ಹೋರಾಟ ಕಟ್ಟಿದರು. ದೊಡ್ಡ ಮಟ್ಟದಲ್ಲಿ ಆಂದ್ರ ಪೂರ್ತಿ ಸುತ್ತಿ ರಾಜ್ಯದ ಜನರ ಸಿಂಪತಿಯನ್ನು ತನ್ನದಾಗಿಸಿಕೊಂಡರು. ಇದರ ವಾಸನೆ ಗ್ರಹಿಸಿದ ಜನಸೇನಾ ಹಾಗೂ ಬಿಜೆಪಿ ಕೂಡಾ ನಾಯ್ಡುವಿನ ಬಾಲ ಹಿಡಿದು ಲೋಕಸಭೆ ಹಾಗೂ ವಿಧಾನಸಭೆ ಎನ್ನುವ ಎರಡೂ ಹೊಳೆಗಳನ್ನು ಯಶಸ್ವಿಯಾಗಿ ದಾಟಿಕೊಂಡರು.

ಆದರೆ ಬಿಜೆಪಿಗಾಲಿ, ಪವನ್‌ಗಾಗಲಿ ನಾಯ್ಡುವಿನ ಮೇಲೆ ವಿಶ್ವಾಸವಿಲ್ಲ. ಬಿಜೆಪಿಗೆ ತನ್ನ ಅಜೆಂಡಾ ಪಾಸ್‌ ಮಾಡಲು ನಾಯ್ಡು ಸಹಕಾರಿಯಲ್ಲ ಎನ್ನುವುದು ಮುಸ್ಲಿಂ ಮೀಸಲಾತಿ ವಿಚಾರದಲ್ಲೇ ಬಿಜೆಪಿಗೆ ಸ್ಪಷ್ಟವಾಗಿತ್ತು. ನಾಯ್ಡು ತಾನು ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಯನ್ನು ಹಿಂದೆಗೆದುಕೊ‍‍ಳ್ಳುವುದಿಲ್ಲ ಎಂದು ಬಿಜೆಪಿಯ ಮುಖದ ಮೇಲೇ ಹೇಳಿದ್ದರು

ಈಗ ಕೊನೆಗೆ ಬಿಜೆಪಿಗೆ ಉಳಿದಿರುವುದು ಪವನ್‌ ಕಲ್ಯಾಣ್‌ ಎನ್ನುವ ಹುಂಬ ರಾಜಕಾರಣಿ. ಈತನಿಗೆ ಅಧಿಕಾರ ಕೊಟ್ಟು ತನ್ನ ಬೇಳೆ ಬೇಯಿಸಿಕೊಳ್ಳುವ ಯೋಚನೆ ಬಿಜೆಪಿಯದು. ಆಂಧ್ರದ ರಾಜಕಾರಣವನ್ನು ನಾಯ್ಡು-ರೆಡ್ಡಿಗಳ ಕೈಯಿಂದ ಬಿಡಿಸಿಕೊಳ್ಳದೆ ಬಿಜೆಪಿಗೆ ತನ್ನ ಹೈಕಮಾಂಡ್‌ ರಾಜಕಾರಣ ಮುಂದವರೆಸಲು ಸಾಧ್ಯವಿಲ್ಲ. ಅದಕ್ಕೆ ಅಧಿಕಾರದ ಆಸೆಯಿರುವ ಸ್ವಂತ ಆಲೋಚನೆಗಳಿಲ್ಲದ ಹುಂಬ ನಾಯಕರು ಬೇಕು. ಪವನ್‌ ಕಲ್ಯಾಣ್‌ ಎಲ್ಲಾ ರೀತಿಯಲ್ಲೂ ಇದಕ್ಕೆ ಹೇಳಿ ಮಾಡಿಸಿದಂತಿದ್ದಾರೆ.

ಈಗ ಬಿಜೆಪಿ ಬೆಂಬಲಿಗರನ್ನೂ ತನ್ನ ಬುಟ್ಟಿಗೆ ಹಾಕಿಕೊಂಡಿರುವ ಪವನ್‌ ಅತ್ತ ಎನ್‌ಟಿಆರ್‌ ರೀತಿ ವೇಷ ಧರಿಸಿ ದೇವಸ್ಥಾನಗಳನ್ನು ಸ್ವಚ್ಛ ಮಾಡುತ್ತಾ ಟಿಡಿಪಿ ಬೆಂಬಲಿಗರನ್ನೂ ತನ್ನತ್ತ ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇದರಲ್ಲಿ ಅವರು ಎಷ್ಟರಮಟ್ಟಿಗೆ ಯಶಸ್ಸು ಪಡೆಯಲಿದ್ದಾರೆ ಎನ್ನುವುದನ್ನು ಕಾಲವೇ ಹೇಳಬೇಕಿದೆ.

ಒಂದು ವೇಳೆ ಪವನ್‌ ದೊಡ್ಡ ಸಂಖ್ಯೆಯ ಬೆಂಬಲಿಗರನ್ನು ಸೆಳೆಯುವಲ್ಲಿ ಯಶಸ್ವಿಯಾದರೆ ಮುಂದೆ ತನ್ನ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿ ಅಲ್ಲಿಂದಲೇ ತನ್ನನ್ನು ಮುಖ್ಯಮಂತ್ರಿ ಎಂದು ಘೋಷಿಸಿಕೊಂಡರೂ ಆಶ್ಚರ್ಯವಿಲ್ಲ! ಏಕೆಂದರೆ ಬಿಜೆಪಿಗೂ ಇಂತಹ ನಾಯಕರೇ ಬೇಕಿರುವುದು.

***

ಇತ್ತ ಬಿಹಾರದಲ್ಲಿ ನಿತೀಶ್‌ ಕೂಡಾ ಹಿಂದುತ್ವದ ರಾಜಕರಾಣದ ರುಚಿ ನೋಡತೊಡಗಿದ್ದಾರೆ. ಅವರು ಮೊನ್ನೆ ಕೇಂದ್ರದ ಬಳಿ ಸೀತಾಮಡಿಯಿಂದ ಅಯೋಧ್ಯೆಗೆ ರೈಲು ಸಂಪರ್ಕ ಕೇಳುವ ಮೂಲಕ ಒಂದು ಮಾಸ್ಟರ್‌ ಸ್ಟ್ರೋಕ್‌ ಹೊಡೆದಿದ್ದಾರೆ. ಲೋಕಸಭೆಯಲ್ಲಿ ನಿರೀಕ್ಷೆಗೂ ಮೀರಿ ಗೆದ್ದಿದ್ದ ನಿತೀಶ್‌ ಇನ್ನು ವಿಧಾನಸಭೆಯಲ್ಲೂ ಹೀಗೇ ಗೆದ್ದರೆ ತಮ್ಮ ಗತಿಯೇನು ಎನ್ನುವ ಚಿಂತೆಯಲ್ಲಿ ಬಿಹಾರದ ಬಿಜೆಪಿಯ ನಾಯಕರಿದ್ದಾರೆ.

ಒಟ್ಟಿನಲ್ಲಿ ಈಗ ದೇಶಕ್ಕೆ ದೇಶವೇ ಹಿಂದುತ್ವದ ಹಿಂದೆ. ಭಾವನೆಗಳನ್ನು ಯಾರು ಕೆರಳಿಸಬಲ್ಲರೋ ಅವರೇ ನಾಯಕ!

You cannot copy content of this page

Exit mobile version