ಹೊಸದೆಹಲಿ: ಜೈಲುಗಳು ನನ್ನನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಇದೀಗ ನನ್ನ ನೈತಿಕತೆ ನೂರರಷ್ಟು ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.
ಮದ್ಯ ನೀತಿ ಪ್ರಕರಣದಲ್ಲಿ ಬಂಧಿತರಾಗಿದ್ದ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ಅವರು ಶುಕ್ರವಾರ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಭಾರೀ ಮಳೆಯಲ್ಲಿ ತಮ್ಮ ಬಿಡುಗಡೆಗಾಗಿ ಕಾಯುತ್ತಿದ್ದ ಆಪ್ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಉದ್ದೇಶಿಸಿ ಕೇಜ್ರಿವಾಲ್ ಮಾತನಾಡಿದರು. ‘ನೀವೆಲ್ಲ ಇಲ್ಲಿಗೆ ಮಳೆಯಲ್ಲಿಯೇ ಇಷ್ಟೊಂದು ಸಂಖ್ಯೆಯಲ್ಲಿ ಬಂದಿದ್ದೀರಿ. ಎಲ್ಲರಿಗೂ ಧನ್ಯವಾದಗಳು. ದೇಶಕ್ಕಾಗಿ ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ನಾನು ಅನೇಕ ಕಷ್ಟ-ನಷ್ಟಗಳನ್ನು ಎದುರಿಸಿದ್ದೇನೆ. ಆದರೆ ದೇವರು ನನ್ನೊಂದಿಗಿದ್ದಾನೆ. ಏಕೆಂದರೆ ನಾನು ಸತ್ಯದ ಹಾದಿಯಲ್ಲಿ ನಡೆಯುತ್ತಿದ್ದೇನೆ’ ಎಂದು ಹೇಳಿದರು.
ಇದೇ ವೇಳೆ ಅರವಿಂದ್ ಕೇಜ್ರಿವಾಲ್ ಈ ಸಂದರ್ಭದಲ್ಲಿ ಪರೋಕ್ಷವಾಗಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಇವರು ನನ್ನನ್ನು ಜೈಲಿಗೆ ಹಾಕಿದರು. ನನ್ನ ನೈತಿಕತೆಗೆ ಪೆಟ್ಟು ಕೊಡಲು ನೋಡಿದರು. ಆದರೆ ಜೈಲುಗಳು ನನ್ನನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ನಾನು ಜೈಲಿನಿಂದ ಹೊರಬಂದ ನಂತರ, ನನ್ನ ನೈತಿಕತೆ ಮತ್ತು ನನ್ನ ಶಕ್ತಿ ನೂರು ಪಟ್ಟು ಹೆಚ್ಚಾಗಿದೆ. ದೇವರು ತೋರಿಸಿದ ಹಾದಿಯಲ್ಲಿ ನಡೆಯುತ್ತೇನೆ. ದೇಶವನ್ನು ಒಡೆಯಲು ಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸುತ್ತೇವೆ’ ಎಂದರು.