13 ಕೋಟಿ ಮತಗಳನ್ನು ಅಳಿಸುವ ಮೂಲಕ ಭಾರತದ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಸಿಲುಕಿಸಲಾಗಿದೆ: ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಸಂವಿಧಾನ ನೀಡಿರುವ ಪ್ರಜೆಗಳ ಮತದಾನದ ಹಕ್ಕು ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ ಎಂದು ಪ್ರತಿಷ್ಠಿತ ಅಂತರರಾಷ್ಟ್ರೀಯ ಪತ್ರಿಕೆ ‘ದಿ ನ್ಯೂಯಾರ್ಕ್ ಟೈಮ್ಸ್’ ಆತಂಕಕಾರಿ ವರದಿ ಪ್ರಕಟಿಸಿದೆ. ನಕಲಿ ಮತಗಳು, ಮೃತಪಟ್ಟವರ ಹೆಸರುಗಳು ಮತ್ತು ವಿದೇಶಿಯರ ಗುರುತುಗಳನ್ನು ತೆಗೆದುಹಾಕುವ ನೆಪದಲ್ಲಿ ಆರಂಭಿಸಲಾದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯು ಪ್ರಜೆಗಳ ಮೂಲಭೂತ ಹಕ್ಕಿಗೇ ಮಾರಕವಾಗಿ ಪರಿಣಮಿಸಿದೆ.

ಈ ಪರಿಷ್ಕರಣೆಯ ಹೆಸರಿನಲ್ಲಿ ದೇಶಾದ್ಯಂತ ಇದುವರೆಗೆ ಬರೋಬ್ಬರಿ 13 ಕೋಟಿಗೂ ಅಧಿಕ ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ಅಳಿಸಿಹಾಕಲಾಗಿದ್ದು, ವಾಸ್ತವದಲ್ಲಿ ಇದು ವ್ಯವಸ್ಥಿತ ಮತಗಳ ಅಪಹರಣವೇ ಸರಿ ಎಂದು ವರದಿ ಹೇಳಿದೆ.

ಕಳೆದ ಏಳು ದಶಕಗಳಿಂದ ಚುನಾವಣಾ ಆಯೋಗದ ಅಧಿಕಾರಿಗಳು ನೇರವಾಗಿ ಮನೆಮನೆಗೆ ಭೇಟಿ ನೀಡಿ (ಡೋರ್-ಟು-ಡೋರ್) ಮತದಾರರ ವಿವರಗಳನ್ನು ಖುದ್ದಾಗಿ ಪರಿಶೀಲಿಸುವ ಭೌತಿಕ ವ್ಯವಸ್ಥೆ ಜಾರಿಯಲ್ಲಿತ್ತು. ಆದರೆ ಈಗಿನ ಹೊಸ ನಿಯಮಗಳ ಪ್ರಕಾರ, ತಮಗೆ ಮತದಾನದ ಹಕ್ಕಿದೆ ಎಂದು ದಾಖಲೆಗಳನ್ನು ನೀಡಿ ಸಾಬೀತುಪಡಿಸಿಕೊಳ್ಳುವ ಸಂಪೂರ್ಣ ಹೊರೆಯನ್ನು ಪ್ರಜೆಗಳ ಮೇಲೆಯೇ ಹೇರಲಾಗಿದೆ.

ದೇಶದ ಸುಮಾರು 100 ಕೋಟಿ ನಾಗರಿಕರು ಅಗತ್ಯ ದಾಖಲೆಗಳನ್ನು ಒದಗಿಸಿ ತಮ್ಮ ಮತವನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ದಾಖಲೆಗಳನ್ನು ಒದಗಿಸಲು ವಿಫಲವಾದರೆ ಅಥವಾ ಹಳೆಯ ದಾಖಲೆಗಳಲ್ಲಿ ಸಣ್ಣ ಕ್ಲೆರಿಕಲ್ ದೋಷಗಳಿದ್ದರೂ ಕಿಂಚಿತ್ತೂ ಕರುಣೆಯಿಲ್ಲದೆ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ.

ಸಾಮಾನ್ಯ ನಾಗರಿಕನ ಮತದಾನದ ಹಕ್ಕು ಈಗ ಕಂಪ್ಯೂಟರ್ ಅಲ್ಗಾರಿದಮ್‌ಗಳ ದಯಾದಾಕ್ಷಿಣ್ಯದ ಮೇಲೆ ನಿಂತಿರುವುದು ಗಂಭೀರ ಕಳವಳವನ್ನುಂಟುಮಾಡಿದೆ. “ಏನಾದರೂ ಒಂದು ಸಣ್ಣ ನೆಪ ಹುಡುಕಿ ಮತದಾರರನ್ನು ಪಟ್ಟಿಯಿಂದ ಹೊರದಬ್ಬುವುದೇ ಇಂದಿನ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿ ಕಾಣುತ್ತಿದೆ,” ಎಂದು ಭಾರತದ ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದರೊಂದಿಗೆ, ಕೇಂದ್ರದಲ್ಲಿ ಆಡಳಿತದಲ್ಲಿರುವ ಮೋದಿ ನೇತೃತ್ವದ ಹಿಂದು ರಾಷ್ಟ್ರೀಯತಾವಾದಿ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂಬ ಅನುಮಾನವಿರುವ ವರ್ಗಗಳ ಮತಗಳನ್ನು ಈ ಪ್ರಕ್ರಿಯೆಯ ಮೂಲಕ ವ್ಯವಸ್ಥಿತವಾಗಿ ಕಸಿದುಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪಗಳು ದೇಶವ್ಯಾಪಿ ಕೇಳಿಬರುತ್ತಿವೆ.

Related Articles

ಇತ್ತೀಚಿನ ಸುದ್ದಿಗಳು