ಅವರು ಬಿ.ಜೆ.ಪಿ. ಸೇರಿದ್ದೇ ಮಹಾಪರಾಧ ಎಂದು ಒಂದು ಬಣ ಬಿಂಬಿಸಿದರೆ, ದಲಿತನೋರ್ವನ ಮಹಾ ಕಾರ್ಯಗಳನ್ನು ಜನರಿಗೆ ತೋರಿಸುವ ಅಗತ್ಯ ಅಲ್ಲಿನವರು ಮಾಡುತ್ತಾರೆಯೇ..? ಆತ ಬಿ.ಜೆ.ಪಿ ಸೇರಬಾರದಿತ್ತು ಎನ್ನುವವರು ಕೂಡ ನಮ್ಮ ನಮ್ಮ ಕಾರಣಗಳನ್ನು ಕೊಡುತ್ತಾ ಸಮರ್ಥನೆ ಮಾಡಿಕೊಳ್ಳುತ್ತೇವೆ. ಇಂಥ ಕಡೆಯೇ ಅವರು ಇರಬೇಕಿತ್ತು ಎನ್ನುವವರು ಅಂಥಾ ಕಡೆಯೇ ನಡೆಯುತ್ತಿರುವ ಅದ್ವಾನಗಳಿಗೆ ಯಾಕೋ ಖಾರವಾಗಿ ಸ್ಪಂದಿಸುವುದಿಲ್ಲ. ಅವರ ಕೊನೆಯ ದಿನಗಳ ರಾಜಕೀಯ ಐಡಿಯಾಲಜಿ, ನಡೆಗಳ ಬಗ್ಗೆ ಒಮ್ಮತವಿಲ್ಲ, ಹಾಗಂತ ಅವರ ಕಾರ್ಯವೈಖರಿಯ ಬಗ್ಗೆ ತಕರಾರುಗಳೇ ಇಲ್ಲ. ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಸೌಂದರ್ಯ ತಾನೆ.
ಕನ್ನಡ ಸಾಹಿತ್ಯಕ್ಕೆ ಮತ್ತು ಕಾವ್ಯಕ್ಕೇ ಹೊಸ ಮೀಮಾಂಸೆ, ವ್ಯಾಖ್ಯೆ ಮತ್ತು ದಾರಿ ತೋರಿಸಿದ “ಭಾರತೀಯ ಕವಿ” ಸಿದ್ದಲಿಂಗಯ್ಯನವರ ಈ ಸಾಲು ದಲಿತರ ಸಾಧನೆಯ ಶಿಖರಗಳಿಗೇ ಬರೆದ ಪ್ರಮಾಣಪತ್ರದಂತಿದೆ. ದುರಂತ ಸಿದ್ದಲಿಂಗಯ್ಯನವರ ಕಡೆಯ ನಡೆಗಳನ್ನೇ ಮುಖ್ಯವಾಗಿಟ್ಟುಕೊಂಡು ಅವರ ಸಂಪೂರ್ಣ ಬದುಕು ಬರೆಹವನ್ನು ಹೀಗಳೆಯುವ ಮನಸ್ಥಿತಿಗಳು ಇಂದಿಗೂ ನಮ್ಮ ಮಧ್ಯೆ ಇವೆ. ಇಂಥವರ ಲೆಕ್ಕದಲ್ಲಿ ನಾವು ಅವರು ರೂಪಿಸುವ ಹಾಗೇ ಇರಬೇಕು, ಅದನ್ನು ಮೀರಿದರೆ ಕೋಮುವಾದಿಗಳು. ಇದಕ್ಕೆ ಅದ್ಬುತವಾದ ಚಾರಿತ್ರಿಕ ಪದವೆಂದರೆ, ಫ್ಯೂಡಲ್ ಮನಸ್ಥಿತಿ. ಮೇಲಿನ ಸಾಲಿನಂತೆಯೇ ಬದುಕಿದವರು ಶಿವರಾಮ್ ಸರ್. ಯಾಕೆಂದರೆ ಅವರದೇ ಆದ ಜನಪ್ರಿಯ ಮಾತು.. “ಗುಡಿಸಲಿನಿಂದ ಬಂದವನು ನಾನು ಗುಡಿಸಲಿನವರಿಗಾಗಿ ಕೆಲಸ ಮಾಡುತ್ತೇನೆ”. ಯಾವುದೇ ಜಾಗದಲ್ಲಿದ್ದರೂ ಅವರು ಹೇಳಿದ ಮಾತಿನಂತೆಯೇ ನಡೆದುಕೊಂಡರು.
ಶಿವರಾಮ್ ಅವರು ಇನ್ನಿಲ್ಲವೆಂದು ಬರೆಯುವಾಗ ನಿಜವಾಗಿಯೂ ನೋವಾಗುತ್ತದೆ. ವಾಸ್ತವವೆಂದರೆ, ಅವರು ಎಂದಿಗೂ ಇರುತ್ತಾರೆ.
ಅವರಿಗೆ ಅಂತಿಮ ನಮನಗಳನ್ನು ಸಲ್ಲಿಸುತ್ತಿರುವ ಬಹುತೇಕರ ವಾಲ್ ನೋಡಿದೆ. ಇಷ್ಟೊಂದು ವಿಷಯಗಳು ಬಹುಶಃ ಎಲ್ಲರಿಗೂ ಈಗಲೇ ಗೊತ್ತಾಗಿದ್ದು ಅನಿಸುತ್ತಿದೆ. ಇಷ್ಟೆಲ್ಲಾ ಅನುಕೂಲ ಮಾಡಿದ ಶಿವರಾಮ್ ಅವರ ಸಾಧನೆಗಳನ್ನು ಯಾಕೆ ಜನರ ಬಳಿಗೆ ತಲುಪಿಸೋ ಕೆಲಸವೇ ಆಗಲಿಲ್ಲ. ಪತ್ರಿಕೆಗಳು ಮತ್ತು ಟಿವಿ ಮಾಧ್ಯಮಗಳ ಜಾತಿ ರಾಜಕೀಯ ಅರ್ಥವಾದಾಗ ನಾವು ಈ ಪ್ರಶ್ನೆಗಳನ್ನು ಕೇಳೋದೂ ತಪ್ಪು ಅನ್ನಿ.
ನಾನಾಗ ಜಗಳೂರಿನ ಹೋಚಿ ಬೋರಯ್ಯ ಕಾಲೇಜಿನಲ್ಲಿ ಬಿ.ಎ. ಗೆ ಸೇರಿದ್ದೆ. ಒಂದಿನ ಹಳೆ ಬಸ್ ಸ್ಟಾಂಡ್ ಕಡೆಗೆ ನಾಲ್ಕೈದು ಜನ ಹುಡುಗರ ಗುಂಪು ಬಂದ್ವಿ. ಆಗ ಇಡೀ ರೋಡು ಮಾತ್ರವಲ್ಲದೆ ಕಸದ ರಾಶಿಗಳೂ ಪತ್ತೆ ಇರದ ಹಾಗೆ ಜಗಳೂರು ಪಳಪಳ ಹೊಳೀತಿತ್ತು. ಪೋಲೀಸರಂತೂ ಕಡಜೀರಿಗೆಗಳು ಅಡ್ಡಾಡಿದ ಹಾಗೆ ಅಡ್ಡಾಡ್ತಾ ಇದ್ರು. ಜಗಳೂರಿನ ಹೊಲಸಿಗೆ ಒಗ್ಗಿ ಹೋಗಿದ್ದ ನಮಗೆ ಇದೇನಿದು ಹೀಗೆ ಎಂದು ಅನಿಸಿದ್ದು ನಿಜ. ಆಗ ಗೊತ್ತಾಗಿದ್ದು ಇವೊತ್ತು ಜಗಳೂರಿಗೆ ಡಿಸಿ ಬರ್ತಾರಂತೆ. ಆ ಡಿಸಿ ಶಿವರಾಮ್ ಸರ್ ಅನ್ನೋದು ಆನಂತರ ತಿಳೀತು. ಈಗಲೂ ಕಪಾಳಕ್ಕೆ ಹೊಡೆದ ಹಾಗೆ ನೆನಪಿರೋ ಮಾತು “ಹೇ ಅವ್ನು ಎಸ್ ಸಿ ಅಂತೆ, ಅವನ್ನೇನ್ ನೋಡ್ತಿರಿ ನಡಿರಿ” ಎಂದ ಬಿಳಿ ಶರ್ಟಿನ ವ್ಯಕ್ತಿಯೊಬ್ಬನ ಮಾತು. ಆಗ ಶಿವರಾಮ್ ಆಗಲಿ ಯಾರೇ ಆಗಲಿ ಡಿಸಿ ಅಂದರೆ ಡಿಸಿ ಮಾತ್ರ ನಮಗೆ. ಬಂದವರೆ ನೇರವಾಗಿ ನಲಂದಾ ಕಾಲೇಜು ಹಿಂದುಗಡೆಯಿರುವ ಗುಡಿಸಲುಗಳ ಕಡೆಗೆ ಹೋದರು. ಎಲ್ಲೆಲ್ಲಿ ಗುಡಿಸಲುಗಳಿವೆಯೋ ಅಲ್ಲೆಲ್ಲಾ ಅಡ್ಡಾಡಿ ಸ್ಥಳದಲ್ಲಿಯೇ ಒಂದು ಆಜ್ಞೆ ಹೊರಡಿಸಿದ್ದರು. “ಇನ್ನು ಎಂಟುದಿನ ಬಿಟ್ಟು ಮತ್ತೆ ಬರ್ತಿನಿ ಇಲ್ಲಿ ಗುಡಿಸಲುಗಳಿರಬಾರದು” ಎಂದು. ಆವರ ಮಾತಿನಂತೆಯೇ ಹದಿನೈದು ದಿನಬಿಟ್ಟು ಬಂದರು. ಅಲ್ಲಿ ಗುಡಿಸಲುಗಳು ಇರಲಿಲ್ಲ. ಅವರನ್ನು ಈಗ ಮಿನಿವಿಧಾನಸೌಧ ದಾಟಿದ ಮುಂದಕ್ಕಿರುವ ಅಶ್ವತ್ಥ ರೆಡ್ಡಿ ನಗರಕ್ಕೆ ವರ್ಗಾವಣೆ ಮಾಡಿ ಮನೆಗಳಿಗೆ ವ್ಯವಸ್ತೆ ಮಾಡಿದ್ದರು. ಜಗಳೂರು ತಾಲ್ಲೂಕಿನಲ್ಲಿರುವ ಬಹುತೇಕ ಗುಡಿಸಲುಗಳು ಹೆಂಚಿನ ಮನೆಗಳಾಗಿದ್ದು ಶಿವರಾಮ್ ಅವರ ಬದ್ದತೆಯಿಂದ.
ಮೊದಲ ಸಲ ಬಂದಾಗಲೇ ಇನ್ನೊಂದು ಆದೇಶ ಹೊರಡಿಸಿದ್ದರು. ಜಗಳೂರಿನಲ್ಲಿರುವ ಯಾವುದೇ ಬೋರ್ಡ್ ಗಳು ಕನ್ನಡದಲ್ಲಿಯೇ ಇರಬೇಕೆಂದು. ಮತ್ತೆ ಹದಿನೈದು ದಿನಬಿಟ್ಟು ಬಂದಾಗ ಇಡೀ ಜಗಳೂರು ಕನ್ನಡಮಯವಾಗಿತ್ತು. ಕನ್ನಡ ಐಚ್ಚಿಕ ವಿಷಯದ ವಿದ್ಯಾರ್ಥಿಗಳಾದ ನಮಗೆ ಎಲ್ಲಿಲ್ಲದ ಹಿಗ್ಗೋ ಹಿಗ್ಗು. ಅವೊತ್ತೇ “ಜೈ ಶಿವರಾಮಣ್ಣ”. ಅಂತ ಜೈಕಾರ ಹಾಕಿದ್ವಿ. ನಮ್ ಕಡೆ ಸರ್ ಅನ್ನೋ ಪದಕ್ಕಿಂಥ ಜಾಸ್ತಿ ಪವರ್ ಇರೋದು ಅಣ್ಣ ಅನ್ನೋ ಪದಕ್ಕೆ. ನಮ್ ಕಡೆಗೆ ನೋಡಿ ನಕ್ಕು ಬರ್ರೋ ಇಲ್ಲಿ ಅಂತ ಕರೆದು ತಲೆಮೇಲೆ ಕೈಯಿಟ್ಟು ಏನ್ ಮಾಡ್ತಿದಿರ ಅಂದಾಗ ನಾವು ಹಿಂಗೆ ಬಿ.ಎ.ಕನ್ನಡ ಆಪ್ಶನಲ್ ಓದ್ತೀವಿ ಅಂತ ಖುಷಿಯಾಗಿ ಹೇಳಿದ್ವಿ. ಓಹ್.. ಒಳ್ಳೆದು. ನಾನು ಕನ್ನಡದಲ್ಲಿ ಮೊದಲು ಐ.ಎ.ಎಸ್ ಪಾಸ್ ಮಾಡಿದ ಮೊದಲ ಭಾರತೀಯ ಕಣ್ರೋ ನೀವು ಓದಿ ಪಾಸ್ ಮಾಡಿ ಅಂದಿದ್ದರು. ಅವೊತ್ತು ಅವರು ನಮ್ಮನ್ನು ನೋಡಿ ನಕ್ಕ ನಸುನಗು ನನ್ನ ಮನಸಲ್ಲಿ ಹಾಗೇ ಇದೆ. ಅವರ ನಸುನಗು ನಿಜವಾಗಿಯೂ ಅದ್ಬುತವಾಗಿತ್ತು. ನಮಗೆಲ್ಲಾ ಅದೆಷ್ಟು ಖುಷಿ ಅಂದ್ರೆ ಕನ್ನಡ ಓದಿ ಇಷ್ಟೆಲ್ಲಾ ದೊಡ್ಡ ಕೆಲಸ ತಗೋಬೌದ ಅಂತ ಗೊತ್ತಾಗಿದ್ದು ಅವಾಗ್ಲೆ. ಅವರು ಪೇಪರ್ ಓದ್ಬೇಕು ನೀವು ಅಂತ ಹೇಳಿದ ದಿನದಿಂದ ನಾವೂ ಡಿಸಿಯಾಗಬೇಕೆಂದು ಪೇಪರ್ ಓದೋದನ್ನು ರೂಢಿ ಮಾಡ್ಕೊಂಡಿದ್ವಿ. ಶಿವರಾಮ್ ಅವರ ಪ್ರೇರಣೆಯಿಂದ ಹೇಗೆ ಡಿಸಿ ಆಗಬೇಕು ಅಂದ್ಕೊಂಡಿದ್ವೋ,,, ಬರ್ತಾ ಬರ್ತಾ ರಾಜಕಾರಣದ ಗಮಲು ಅರ್ಥವಾದ ಹಾಗೆ ಡಿಸಿಯಾಗೋದು ಬಿಟ್ಟು ಶಾಸಕನಾಗಬೇಕು, ಮಂತ್ರಿಯಾಗಬೇಕು, ಮುಖ್ಯಮಂತ್ರಿಯಾಗಬೇಕು ಎಂಬ ಪ್ರೇರಣೆ ದೊರೆತಿದ್ದು ಮಾಯಾವತಿಯವರಿಂದ. ಕಾನ್ಶಿರಾಮ್ ಸಾಹೇಬರಿಂದ. ಅದರತ್ತ ನಡೆದು ಕೊನೆಗೆ ಈ ಜಾಗಕ್ಕೆ ಬಂದು ಕುಕ್ಕುರು ಬಡಿದದ್ದು ಬದುಕಿನ ವಿಪರ್ಯಾಸ.
ಅವರು ನಮ್ಮಮನಸಲ್ಲಿ ಶಾಶ್ವತವಾಗಿ ಉಳಿಯೋ ಕೆಲಸಗಳಲ್ಲಿ ಇದೂ ಒಂದು. ಅವರು ಜಗಳೂರಿಗೆ ಬಂದಾಗ ಹೋಟೆಲ್ ಮತ್ತಿತರ ಕಡೆ ಕೆಲಸ ಮಾಡೋ ಸಣ್ ಹುಡುಗರನ್ನು ಕೆಲಸದಿಂದ ತೆಗೆದು ಉಚಿತ ಶಿಕ್ಷಣ ಕೊಡಿಸೋ ವ್ಯವಸ್ಥೆ ಮಾಡಿದ್ದು. ಜಗಳೂರಲ್ಲಿ ಇಂಥ ಕೆಲಸ ಶುರುವಾಗಿದ್ದು ಶಿವರಾಮ್ ಅವರಿಂದಲೇ.. ವಸತಿ ಶಾಲೆಗಳನ್ನು ಆರಂಭಿಸಿ ಅಲ್ಲಿ ಉಚಿತ ಶಿಕ್ಣಣ ಮತ್ತು ಊಟದ ವ್ಯವಸ್ಥೆಗೆ ಮತ್ತೆ ಚುರುಕು ಮೂಡಿಸಿದ್ದರು. ಆಗ ಹೋಟೆಲ್ ಮಾಲೀಕರ ಮಾತುಗಳು ಕೇವಲ ಜಾತಿನಿಂದನೆಯವೇ ಆಗಿದ್ದವು. ಅನೇಕ ಪೋಷಕರ ನಿಂದನೆಗೂ ಶಿವರಾಮ್ ಸರ್ ಗುರಿಯಾಗಿದ್ದರು. ಎಂ.ಎ. ಮಾಡಲು ದಾವಣಗೆರೆಗೆ ಬಂದಾಗ ಮತ್ತೊಂದು ವಿಷಯ ತಿಳಿಯಿತು. ಪ.ಜಾ.ಮತ್ತು ಪ. ಪಂ. ದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಕೋರ್ಸ್ ಗಳನ್ನು ಕಲಿಸುವ ಕೇಂದ್ರವನ್ನೇ ಅವರು ತೆರೆದಿದ್ದರು. ಅದು ಇಂದಿಗೂ ಇದೆ.
ನಮ್ಮ ಹೋಚಿ ಬೋರಯ್ಯ ಕಾಲೇಜು ದಾವಣಗೆರೆಗೆ ಬರೋ ರೋಡಲ್ಲಿ ಊರಾಚೆ ಇತ್ತು. ರಾತ್ರಿಯೆಲ್ಲಾ ಅಪರಿಚಿತರ ಗೂಡಾಗಿದ್ದು ಗಬ್ಬೆದ್ದು ನಾರುವ ಆ ಹಳೇ ಬಿಲ್ಡಿಂಗ್ ನಲ್ಲಿ ನಮ್ಮ ಸೀನಿಯರ್ ಗೆ ಕ್ಲಾಸ್ ನಡೀತಿತ್ತು. ಅಲ್ಲಿಗೆ ಭೇಟಿ ನೀಡಿದ್ದ ಶಿವರಾಮ್ ಸರ್ ಅಂಥ ಬಿಲ್ಡಿಂಗ್ ನಲ್ಲಿ ಮಕ್ಕಳು ಕಲೀಬಾರದು ಎಂದು ಈಗ ಇರುವ ಜಾಗಕ್ಕೆ ಅದನ್ನು ವರ್ಗಾಯಿಸುವ ಸುಲಭ ವ್ಯವಸ್ಥೆ ಮಾಡಿಕೊಟ್ಟರಂತೆ. ಇದನ್ನು ಆಗಿನ ಪ್ರಾಚಾರ್ಯರಾದ ಬಸವರಾಜಪ್ಪ ಅನ್ನೋರು ಭಾಷಣದಲ್ಲಿ ಹೇಳಿದ್ದರು.
ಜನಗಳ ಮಧ್ಯೆ ಕೇಳಿದ ವಿಷಯ. ಆಗ ಪತ್ರಿಕೆಗಳಲ್ಲಿ ಬಂತೋ ಬಿಡ್ತೋ ಗೊತ್ತಿಲ್ಲ. ಜಗಳೂರಲ್ಲಿ ಹೊರಕರೆ ಅಂತ ಇದೆ. ಅತ್ಯಂತ ಕಡಮೆ ಬಾಡಿಗೆ ಅಂತ ಐದು ಜನಸೇರಿ ಮುವತ್ತು ರೂಗೆ ಸಿಗುವ ರೂಂ ಬಾಡಿಗೆ ಮಾಡಿದ್ದಿ ನಾವು. ಅಲ್ಲಿಯೇ ಜಗಲೂರಜ್ಜನ ಪಾದಗಟ್ಟೆಯೂ ಇದೆ. ಪಕ್ಕದಲ್ಲಿ ಸ್ಕೂಲ್ ಇತ್ತು. ಈಗ ಇದೆಯೋ ಇಲ್ಲವೋ ಗೊತ್ತಿಲ್ಲ. ಅಲ್ಲಿಗೆ ಬಂದಿದ್ದ ಶಿವರಾಮ್ ಸರ್ ಸ್ಕೂಲಿನ ಎಲ್ಲರಿಗೂ ಪೆನ್ನು, ಪುಸ್ತಕ, ಬಟ್ಟೆ ಉಚಿತವಾಗಿ ಕೊಡಿಸಿದ್ದರಂತೆ. ತುಂಬಾ ಜನ ಇದನ್ನು ರಾತ್ರಿಹೊತ್ತು ಅಂಗಳಗಳಲ್ಲಿ ಕೂತು ಮಾತಾಡುತ್ತಿದ್ದರು. ಅವರ ಸಹಾಯ ಪಡೆದು, ಮಾತುಗಳಲ್ಲಿ ಹೊಗಳಿದವರೂ ಸಹ ಪಕ್ಕದಲ್ಲಿನ ಪಾದಗಟ್ಟೆಗೆ ಅವರು ನಮಸ್ಕಾರ ಮಾಡಲು ಅವಕಾಶ ಕೊಡದೆ ಇದ್ದದ್ದು ಈ ಜನರ ಕೊಳಕು ಮನಸ್ಥಿತಿ. ಡಿಸಿಯಾಗಿ ಏನು ಬೇಕಾದರೂ ಮಾಡಬಹುದಿದ್ದ ಅವರು ಸಾಮರಸ್ಯಕ್ಕಾಗಿಯೋ ಇನ್ನಾವುದೋ ಕಾರಣಕ್ಕಾಗಿಯೋ ಅದನ್ನು ಬೆಳೆಸ ಹೋಗಲಿಲ್ಲ.
ನಾವು ರಾಜಕೀಯ ಪಕ್ಷಗಳ ಐಡಿಯಾಲಜಿಗಳ ಮೂಲಕ ಯೋಚಿಸುವಂತೆ ಪ್ರೇರೇಪಿಸುತ್ತಿರುವ ವರ್ತಮಾನ ಶಿವರಾಮ್ ಅವರ ಅಗಾಧವಾದ ಕೆಲಸಗಳನ್ನು ನುಂಗಿ ನೀರು ಕುಡಿಯುವಂತೆ ಮಾಡಿದೆ. ಅವರು ಬಿ.ಜೆ.ಪಿ. ಸೇರಿದ್ದೇ ಮಾಹಾಪರಾಧ ಎಂದು ಒಂದು ಬಣ ಬಿಂಬಿಸಿದರೆ, ದಲಿತನೋರ್ವನ ಮಹಾ ಕಾರ್ಯಗಳನ್ನು ಜನರಿಗೆ ತೋರಿಸುವ ಅಗತ್ಯ ಅಲ್ಲಿನವರು ಮಾಡುತ್ತಾರೆಯೇ..? ಆತ ಬಿ.ಜೆ.ಪಿ ಸೇರಬಾರದಿತ್ತು ಎನ್ನುವವರು ಕೂಡ ನಮ್ಮ ನಮ್ಮ ಕಾರಣಗಳನ್ನು ಕೊಡುತ್ತಾ ಸಮರ್ಥನೆ ಮಾಡಿಕೊಳ್ಳುತ್ತೇವೆ. ಇಂಥ ಕಡೆಯೇ ಅವರು ಇರಬೇಕಿತ್ತು ಎನ್ನುವವರು ಅಂಥಾ ಕಡೆಯೇ ನಡೆಯುತ್ತಿರುವ ಅದ್ವಾನಗಳಿಗೆ ಯಾಕೋ ಖಾರವಾಗಿ ಸ್ಪಂದಿಸುವುದಿಲ್ಲ. ಅವರ ಕೊನೆಯ ದಿನಗಳ ರಾಜಕೀಯ ಐಡಿಯಾಲಜಿ, ನಡೆಗಳ ಬಗ್ಗೆ ಒಮ್ಮತವಿಲ್ಲ, ಹಾಗಂತ ಅವರ ಕಾರ್ಯವೈಖರಿಯ ಬಗ್ಗೆ ತಕರಾರುಗಳೇ ಇಲ್ಲ. ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಸೌಂದರ್ಯ ತಾನೆ.
ಏನೇ ಬೊಂಬಡಾ ಬಾರಿಸಿದ್ರೂ ಈ ದೇಶದಲ್ಲಿ ಎಲ್ಲಾಮೊದಲು ದಾಖಲಾಗೋದು ದಲಿತರಿಂದ ಅದರಲ್ಲೂ ಬಹುತೇಕ ಪರಿಶಿಷ್ಟ ಜಾತಿಗಳಿಂದ ಅನ್ನೋದನ್ನು ಚರಿತ್ರೆಯೇ ಹೇಳುತ್ತೆ.
ಅಂಬೇಡ್ಕರ್ ಎಂಬ ಪದ ಮೊದಲು ನನ್ನ ಕಿವಿಗೆ ಬಿದ್ದದ್ದು ಶಿವರಾಮ್ ಅವರಿಂದ. ಅಂಬೇಡ್ಕರ್ ಪುಸ್ತಕಗಳನ್ನು ಓದಿಸಿದ್ದು ಸಿ.ಕೆ.ಮಹೇಶ್ ಸರ್. ಅಂಬೇಡ್ಕರ್ ಎಂಬ ಬೀಜಾಕ್ಷರಕ್ಕೆ ಕಾರಣರಾದ ಶಿವರಾಮ್ ಸರ್ ಗೆ
ಜೈ ಭೀಮ್ ಸರ್.
ಪಿ ಆರಡಿಮಲ್ಲಯ್ಯ ಕಟ್ಟೇರ